
ಪೋಸ್ಟರ್ಗಳ ಮೂಲಕ ‘ಕರಾವಳಿ’ ಸಿನಿಮಾ ನಿರೀಕ್ಷೆ ಮೂಡಿಸಿದೆ. ಪ್ರಜ್ವಲ್ ದೇವರಾಜ್ (Prajwal Devaraj) ಅವರು ಈ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಈ ಚಿತ್ರದ ಶೂಟಿಂಗ್ ಮುಗಿದಿದೆ. ಬಿಡುಗಡೆ ಮಾಡಲು ಎಲ್ಲ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಗುರುದತ್ ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರಲಿದೆ. ಇತ್ತೀಚೆಗೆ ‘ಕರಾವಳಿ’ (Karavali Movie) ಸಿನಿಮಾದ ಸುದ್ದಿಗೋಷ್ಠಿ ಮಾಡಲಾಯಿತು. ಈ ವೇಳೆ ಸಿನಿಮಾ ಬಗ್ಗೆ ಚಿತ್ರತಂಡ ಒಂದಷ್ಟು ಅಪ್ಡೇಟ್ ನೀಡಿತು.
ಈಗಾಗಲೇ ‘ಕರಾವಳಿ’ ಸಿನಿಮಾದ ಒಂದಷ್ಟು ಪಾತ್ರಗಳ ಝಲಕ್ ಅನ್ನು ಪೋಸ್ಟರ್ ಮೂಲಕ ತೋರಿಸಲಾಗಿದೆ. ಅಲ್ಲದೇ, ಟೀಸರ್ ಕೂಡ ಸದ್ದು ಮಾಡಿದೆ. ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಚಿತ್ರಮಂದಿರಕ್ಕೆ ಎಂಟ್ರಿ ಕೊಡುವ ಸಮಯ ಹತ್ತಿರ ಆಗುತ್ತಿದೆ. ಸಿನಿಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿವೆ.
ಶೀರ್ಷಿಕೆಯೇ ಸೂಚಿಸುವಂತೆ ಇದು ಕರಾವಳಿ ಭಾಗದ ಸಂಸ್ಕೃತಿ, ಸೊಗಡು ಇರುವ ಸಿನಿಮಾ ಆಗಿರಲಿದೆ. ಬೆಂಗಳೂರಿನ ದೊಡ್ಡಾಲದ ಮರದ ಬಳಿ ಸೆಟ್ ಹಾಕಿ ಕೊನೆಯ ದಿನದ ಶೂಟಿಂಗ್ ಮಾಡಲಾಯಿತು. ಯಕ್ಷಗಾನ ರಂಗಸ್ಥಳ, ಕರಾವಳಿ ಶೈಲಿ ಊಟ ಕೊನೆಯ ದಿನದ ಚಿತ್ರೀಕರಣದ ಹೈಲೆಟ್ ಆಗಿತ್ತು. 2 ಬಾರಿ ರಾಷ್ಟ್ರ ಪ್ರಶಸ್ತಿ ಗೆದ್ದಿರುವ ವಿಕ್ರಮ್ ಮೋರ್ ಅವರು ಈ ಸಿನಿಮಾಕ್ಕೆ ಸಾಹಸ ಸಂಯೋಜನೆ ಮಾಡಿದ್ದಾರೆ. ಪ್ರಜ್ವಲ್ ದೇವರಾಜ್ ಅವರು ಮಹಿಷಾಸುರನ ಗೆಟಪ್ನಲ್ಲಿ ಫೈಟ್ ಮಾಡಿದ್ದಾರೆ.
‘ಕರಾವಳಿ’ ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ಪ್ರಜ್ವಲ್ ದೇವರಾಜ್ ಮಾತನಾಡಿದರು. ‘ಈ ರೀತಿಯ ಪಾತ್ರದಲ್ಲಿ ನಾನೆಂದೂ ಕಾಣಿಸಿಕೊಂಡಿರಲಿಲ್ಲ. ಬಹಳ ಶ್ರಮ ಹಾಕಿದ್ದೇವೆ. ಭಯಪಟ್ಟು ಮಾಡಿರುವ ಪಾತ್ರವಿದು. ಈ ಸಿನಿಮಾದಲ್ಲಿ ನಟಿಸಿದ್ದಕ್ಕೆ ತುಂಬ ಖುಷಿ ಇದೆ’ ಎಂದು ಅವರು ಹೇಳಿದರು. ರಾಜ್ ಬಿ. ಶೆಟ್ಟಿ, ಮಿತ್ರ, ರಮೇಶ್ ಇಂದಿರ, ಶ್ರೀಧರ್, ಸಂಪದಾ ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.
ಇದನ್ನೂ ಓದಿ: ಪ್ರಜ್ವಲ್ ದೇವರಾಜ್ ‘ಕರಾವಳಿ’ಯಲ್ಲಿ ದೊಡ್ಡವರಾದ ರಮೇಶ್ ಇಂದಿರಾ
ರಾಜ್ ಬಿ. ಶೆಟ್ಟಿ ಅವರು ಈ ಚಿತ್ರದಲ್ಲಿ ಮಾವೀರ ಎಂಬ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅವರ ಫಸ್ಟ್ ಲುಕ್ ಪೋಸ್ಟರ್ ಗಮನ ಸೆಳೆದಿದೆ. ರಾಜ್ ಬಿ. ಶೆಟ್ಟಿ ಅವರು ಪಾತ್ರವರ್ಗಕ್ಕೆ ಸೇರ್ಪಡೆ ಆಗಿದ್ದರಿಂದ ಸಿನಿಮಾ ಮೇಲಿನ ನಿರೀಕ್ಷೆ ಡಬಲ್ ಆಗಿದೆ. ‘ವಿಕೆ ಫಿಲ್ಮಂ’ ಮತ್ತು ‘ಗಾಣಿಗ ಫಿಲ್ಮ್ಸ್’ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಸಚಿನ್ ಬಸ್ರೂರು ಸಂಗೀತ, ಅಭಿಮನ್ಯೂ ಸದಾನಂದನ್ ಛಾಯಾಗ್ರಹಣ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.