ಪ್ರಜ್ವಲ್ ದೇವರಾಜ್ ನಟನೆಯ ‘ಕರಾವಳಿ’ ಸಿನಿಮಾ ಒಂದಷ್ಟು ಕಾರಣಗಳಿಂದ ನಿರೀಕ್ಷೆ ಮೂಡಿಸಿದೆ. ಈ ಸಿನಿಮಾದ ಕೆಲಸಗಳು ಬಿರುಸಿನಿಂದ ಸಾಗುತ್ತಿವೆ. 2025ರ ಹೊಸ ವರ್ಷದ ಸಲುವಾಗಿ ‘ಕರಾವಳಿ’ ಚಿತ್ರತಂಡದಿಂದ ಹೊಸ ಟೀಸರ್ ಬಿಡುಗಡೆ ಮಾಡಲಾಗಿದೆ. ‘ಡೈನಾಮಿಕ್ ಪ್ರಿನ್ಸ್’ ಪ್ರಜ್ವಲ್ ದೇವರಾಜ್ ಅವರು ಈ ಸಿನಿಮಾದಲ್ಲಿ ಬೇರೆ ಬೇರೆ ಗೆಟಪ್ಗಳ ಮೂಲಕ ಕಾಣಿಸಿಕೊಳ್ಳಲಿದ್ದಾರೆ. ಈಗ ಬಿಡುಗಡೆ ಆಗಿರುವ ಟೀಸರ್ನಿಂದ ಸಿನಿಮಾ ಮೇಲಿನ ಕೌತುಕ ಜಾಸ್ತಿ ಆಗಿದೆ. ‘ಕರಾವಳಿ’ ಟೀಸರ್ನಲ್ಲಿ ನಾಯಕಿ, ನಾಯಕಿ, ವಿಲನ್ ಅಥವಾ ಯಾವುದೇ ಒಂದು ಪಾತ್ರ ಹೈಲೈಟ್ ಆಗಿಲ್ಲ. ಬದಲಿಗೆ, ಒಂದು ಕುರ್ಚಿಯೇ ಕೇಂದ್ರ ಸ್ಥಾನ ಪಡೆದುಕೊಂಡಿದೆ.
ಹೌದು, ‘ಕರಾವಳಿ’ ಟೀಸರ್ನಲ್ಲಿ ಪ್ರತಿಷ್ಠೆಯ ಒಂದು ಕುರ್ಚಿ ಹೈಲೆಟ್ ಆಗಿದೆ. ‘ಅದು ಬರೀ ಕುರ್ಚಿಯಲ್ಲ.. ಪ್ರತಿಷ್ಠೆಯ ಪಿಚಾಚಿ’ ಎಂಬ ಡೈಲಾಗ್ ಮೂಲಕ ಟೀಸರ್ ಆರಂಭ ಆಗುತ್ತದೆ. ಹಾಗಾದರೆ ಆ ಖುರ್ಚಿಯ ಹಿಂದೆ ಇರುವ ಕಥೆ ಏನು ಎಂಬ ಕೌತುಕ ಮೂಡಿಸುವ ರೀತಿಯಲ್ಲಿ ಟೀಸರ್ ಸಿದ್ಧವಾಗಿದೆ. ‘ಕರಾವಳಿ’ ಚಿತ್ರಕ್ಕೆ ಈಗಾಗಲೇ ಶೇಕಡ 80ರಷ್ಟು ಶೂಟಿಂಗ್ ಮುಕ್ತಾಯ ಆಗಿದೆ. ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ಗೆ ಜೋಡಿಯಾಗಿ ಸಂಪದಾ ನಟಿಸಿದ್ದಾರೆ.
‘ಕರಾವಳಿ’ ಸಿನಿಮಾದಲ್ಲಿ ಇರುವುದು ಕಂಬಳ ಕುರಿತ ಕಥೆ. ಈ ಮೊದಲು ಬಿಡುಗಡೆ ಆಗಿದ್ದ ಟೀಸರ್ನಲ್ಲಿ ಒಂದು ಮಗು ಜನಿಸುತ್ತದೆ, ಅದೇ ಸಮಯದಲ್ಲಿ ಕೊಟ್ಟಿಗೆಯಲ್ಲಿ ಒಂದು ಕರುವಿನ ಜನನ ಕೂಡ ಆಗುತ್ತದೆ. ಈಗ ಬಂದಿರುವ ಹೊಸ ಟೀಸರ್ ಆ ಕಥೆಯ ಮುಂದುವರಿದ ಭಾಗದಂತಿದೆ. ಆ ಮಗು ಹುಟ್ಟಿದಾಗಿನಿಂದ ಪ್ರತಿಷ್ಠೆಯ ಕುರ್ಚಿಯನ್ನು ನೋಡುತ್ತ ಬೆಳೆಯುತ್ತದೆ. ಕುರ್ಚಿಯ ಮೇಲೆ ಕಣ್ಣಿಟ್ಟವರಿಗೆ ಏನಾಗುತ್ತದೆ ಎಂಬುದನ್ನು ಸಹ ಟೀಸರ್ನಲ್ಲಿ ಹೇಳಲಾಗಿದೆ.
ಟೀಸರ್ನಲ್ಲಿ ಮಿತ್ರ, ರಮೇಶ್ ಇಂದಿರ, ಎಂ.ಕೆ. ಮಠ, ಪ್ರಜ್ವಲ್ ದೇವರಾಜ್ ಅವರ ಪಾತ್ರಗಳು ಕುತೂಹಲ ಹುಟ್ಟಿಸಿವೆ. ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಅವರ 3 ರೀತಿಯ ಲುಕ್ ಬಹಿರಂಗವಾಗಿದೆ. ಯಕ್ಷಗಾನ, ಕಂಬಳ, ಮಹಿಷಾಸುರ ಹೀಗೆ 3 ಬೇರೆ ಬೇರೆ ಗೆಟಪ್ನಲ್ಲಿ ಅವರ ಪೋಸ್ಟರ್ಗಳು ಬಂದಿವೆ. ಈ ಎಲ್ಲ ಕಾರಣಗಳಿಂದಾಗಿ ಅವರ ಅಭಿಮಾನಿಗಳಿಗೆ ಈ ಸಿನಿಮಾ ಮೇಲೆ ನಿರೀಕ್ಷೆ ಜಾಸ್ತಿ ಇದೆ.
ಇದನ್ನೂ ಓದಿ: ‘ಕುಡ್ಲ ನಮ್ದು ಊರುʼ ಸಿನಿಮಾದಲ್ಲಿ ಕರಾವಳಿಯ ಪ್ರತಿಭೆಗಳ ಸಂಗಮ
ಸಚಿನ್ ಬಸ್ರೂರು ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಅಭಿಮನ್ಯು ಸದಾನಂದನ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಚಿತ್ರದ ಶೀರ್ಷಿಕೆಯೇ ಸೂಚಿಸುವಂತೆ ಕರಾವಳಿ ಸುತ್ತಮುತ್ತನೇ ಚಿತ್ರೀಕರಣ ಮಾಡಲಾಗಿದೆ. ಗುರುದತ್ ಗಾಣಿಗ ಅವರ ನಿರ್ದೇಶನದ ಜತೆಗೆ ‘ಗುರುದತ್ ಗಾಣಿಗ ಫಿಲ್ಮ್ಸ್’ ಹಾಗೂ ‘ವಿಕೆ ಫಿಲ್ಮ್ಸ್’ ಸಹಯೋಗದಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ. ಮನುಷ್ಯ ಮತ್ತು ಪ್ರಾಣಿ ನಡುವಿನ ಸಂಘರ್ಷದ ಕಥೆ ಈ ಚಿತ್ರದಲ್ಲಿ ಇರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:13 pm, Mon, 30 December 24