ಅನೇಕ ಸಿನಿಮಾ ತಂಡಗಳು ಯುಗಾದಿ (Ugadi) ಹಬ್ಬದ ಪ್ರಯುಕ್ತ ಹೊಸ ಹೊಸ ಪೋಸ್ಟರ್ಗಳನ್ನು ಬಿಡುಗಡೆ ಮಾಡುತ್ತಿವೆ. ‘ಡೈನಾಮಿಕ್ ಪ್ರಿನ್ಸ್’ ಪ್ರಜ್ವಲ್ ದೇವರಾಜ್ ಕೂಡ ನೂತನ ಅವತಾರದಲ್ಲಿ ಝಲಕ್ ನೀಡಿದ್ದಾರೆ. ‘ಕರಾವಳಿ’ ಸಿನಿಮಾದ ಹೊಸ ಪೋಸ್ಟರ್ನಲ್ಲಿ ಅವರನ್ನು ನೋಡಿದರೆ ಗುರುತು ಹಿಡಿಯಲು ಸಾಧ್ಯವಿಲ್ಲ. ಇದೇ ಮೊದಲ ಬಾರಿ ಪ್ರಜ್ವಲ್ ದೇವರಾಜ್ ಅವರು ಯಕ್ಷಗಾನದ ವೇಷ ಧರಿಸಿದ್ದಾರೆ. ‘ಕರಾವಳಿ’ ಸಿನಿಮಾ (Karavali Movie) ಚಿತ್ರೀಕರಣ ಪ್ರಗತಿಯಲ್ಲಿದೆ. ಗುರುದತ್ ಗಾಣಿಗ ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಬಿರುಸಿನ ಚಿತ್ರೀಕರಣದ ನಡುವೆ ಪ್ರಜ್ವಲ್ ದೇವರಾಜ್ (Prajwal Devaraj) ಅವರ ಹೊಸ ಲುಕ್ ಅನಾವರಣ ಮಾಡುವ ಮೂಲಕ ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚು ಮಾಡಲಾಗಿದೆ. ಮಂಗಳೂರಿನ ಸುತ್ತಮುತ್ತ ಈ ಚಿತ್ರದ ಶೂಟಿಂಗ್ ನಡೆಯುತ್ತಿದೆ.
‘ಕರಾವಳಿ’ ಚಿತ್ರತಂಡದಿಂದ ಈ ಮೊದಲು ಬಿಡುಗಡೆ ಆಗಿದ್ದ ಪೋಸ್ಟರ್ಗಳು ಕೂಡ ಇದೇ ರೀತಿ ಕೌತುಕ ಮೂಡಿಸಿತ್ತು. ಟೀಸರ್ ಸಹ ಗಮನ ಸೆಳೆದಿತ್ತು. ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಅವರು ಡಿಫರೆಂಟ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಂಬಳದ ಜೊತೆಯಲ್ಲಿ ಯಕ್ಷಗಾನ ಸಹ ‘ಕರಾವಳಿ’ ಸಿನಿಮಾದ ಹೈಲೈಟ್ಗಳಲ್ಲಿ ಒಂದಾಗಿರಲಿದೆ ಎಂಬುದು ಈ ಪೋಸ್ಟರ್ ನೋಡಿದರೆ ತಿಳಿಯುತ್ತದೆ.
ಪ್ರಜ್ವಲ್ ದೇವರಾಜ್ ಅವರ ಈ ಲುಕ್ ಹಿಂದೆ ವೃತ್ತಿಪರ ಯಕ್ಷಗಾನ ಕಲಾವಿದರೇ ಇದ್ದಾರೆ. ಯಕ್ಷಗಾನ ಭಾಗವತರಾದ ಪಲ್ಲವ ಗಾಣಿಗ ಅವರು ಈ ಲುಕ್ ವಿನ್ಯಾಸ ಮಾಡಿದ್ದಾರೆ. ಈ ಗೆಟಪ್ನಲ್ಲಿ ಪ್ರಜ್ವಲ್ ಅವರು ಸಿದ್ಧವಾಗಲು ಅರ್ಥ ದಿನ ಸಮಯ ಹಿಡಿಯಿತು ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಮನುಷ್ಯ ಮತ್ತು ಪ್ರಾಣಿಗಳ ಮಧ್ಯದ ಸಂಘರ್ಷದ ಕಥೆಯನ್ನು ಈ ಸಿನಿಮಾ ಹೊಂದಿರಲಿದೆ.
ಇದನ್ನೂ ಓದಿ: ಹೊಸ ವರ್ಷಕ್ಕೆ ‘ಕರಾವಳಿ’ ನೂತನ ಪೋಸ್ಟರ್; ಕೋಣ ಏರಿ ಬಂದ ಪ್ರಜ್ವಲ್ ದೇವರಾಜ್
ಗ್ರಾಮೀಣ ಹಿನ್ನೆಲೆಯಲ್ಲಿ ‘ಕರಾವಳಿ’ ಸಿನಿಮಾದ ಕಥೆ ಸಾಗಲಿದೆ. ಅಭಿಮನ್ಯು ಸದಾನಂದ್ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ಸಚಿನ್ ಬಸ್ರೂರು ಸಂಗೀತ ನೀಡುತ್ತಿದ್ದಾರೆ. ಮಿತ್ರ, ಜಿ.ಜಿ. ನಿರಂಜನ್, ಟಿವಿ ಶ್ರೀಧರ್ ಮುಂತಾದವರು ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಗುರುದತ್ ಗಾಣಿಗ ಅವರು ನಿರ್ದೇಶನದ ಜೊತೆಗೆ ನಿರ್ಮಾಣ ಕೂಡ ಮಾಡುತ್ತಿದ್ದಾರೆ. ‘ಗಾಣಿಗ ಫಿಲ್ಮ್ಸ್’ ಹಾಗೂ ‘ವಿಕೆ ಫಿಲ್ಮ್’ ಜೊತೆಯಾಗಿ ನಿರ್ಮಾಣ ಮಾಡುತ್ತಿವೆ. ಈಗ ಶೇಕಡ 40ರಷ್ಟು ಶೂಟಿಂಗ್ ಮುಕ್ತಾಯ ಆಗಿದೆ. ಯುಗಾದಿ ಹಬ್ಬದ ನಂತರ 2ನೇ ಹಂತದ ಚಿತ್ರೀಕರಣ ನಡೆಯಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.