ಶಿವರಾತ್ರಿಗೆ ‘ರಾಕ್ಷಸ’ ದರ್ಶನ; ಡಿಫರೆಂಟ್ ಪಾತ್ರದಲ್ಲಿ ಪ್ರಜ್ವಲ್ ದೇವರಾಜ್
2025ರಲ್ಲಿ ಹೊಸ ಹುರುಪಿನೊಂದಿಗೆ ಹೊಸ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ‘ಡೈನಾಮಿಕ್ ಪ್ರಿನ್ಸ್’ ಪ್ರಜ್ವಲ್ ದೇವರಾಜ್ ಅವರು ನಟಿಸಿರುವ ‘ರಾಕ್ಷಸ’ ಸಿನಿಮಾ ಶಿವರಾತ್ರಿ ಹಬ್ಬದ ಪ್ರಯುಕ್ತ ತೆರೆಕಾಣಲಿದೆ. ಲೋಹಿತ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಟೈಮ್ ಲೂಪ್ ಕಾನ್ಸೆಪ್ಟ್ನಲ್ಲಿ ಈ ಸಿನಿಮಾ ಸಿದ್ಧವಾಗಿದೆ ಎಂಬುದು ವಿಶೇಷ.
ನಟ ಪ್ರಜ್ವಲ್ ದೇವರಾಜ್ ಅವರು ಪ್ರತಿ ಸಿನಿಮಾದಲ್ಲೂ ಬೇರೆ ಬೇರೆ ರೀತಿಯ ಪಾತ್ರಗಳನ್ನು ಪ್ರಯತ್ನಿಸುತ್ತಿದ್ದಾರೆ. ಆ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಅವರ ಮುಂಬರುವ ಸಿನಿಮಾಗಳ ಬಗ್ಗೆ ನಿರೀಕ್ಷೆ ಇದೆ. ಆ ಪೈಕಿ ‘ರಾಕ್ಷಸ’ ಸಿನಿಮಾ ಕೂಡ ಕುತೂಹಲ ಮೂಡಿಸಿದೆ. ‘ಡೈನಾಮಿಕ್ ಪ್ರಿನ್ಸ್’ ಪ್ರಜ್ವಲ್ ದೇವರಾಜ್ ಅವರು ಈ ಸಿನಿಮಾದಲ್ಲಿ ಡಿಫರೆಂಟ್ ಗೆಟಪ್ ಧರಿಸಿದ್ದಾರೆ. ಈ ಚಿತ್ರತಂಡ ಈಗ ಹೊಸ ಅಪ್ಡೇಟ್ ನೀಡಿದೆ. ರಿಲೀಸ್ ಪ್ಲ್ಯಾನ್ ಬಗ್ಗೆ ‘ರಾಕ್ಷಸ’ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.
ಶಿವರಾತ್ರಿ ಹಬ್ಬದ ಸಮಯದಲ್ಲಿ ‘ರಾಕ್ಷಸ’ ಸಿನಿಮಾ ರಿಲೀಸ್ ಆಗಲಿದೆ. ಶಿವರಾತ್ರಿ ದಿನದಂದು ಪ್ರಜ್ವಲ್ ದೇವರಾಜ್ ಅವರ ಅಭಿಮಾನಿಗಳಿಗೆ ಥಿಯೇಟರ್ಗಳಲ್ಲಿ ಭರ್ಜರಿ ಮನರಂಜನೆ ಸಿಗಲಿದೆ. ಪ್ರಜ್ವಲ್ ಅವರು ಭಿನ್ನ ಗೆಟಪ್ ತಾಳಿರುವ ಈ ಸಿನಿಮಾದ ಪಾತ್ರವರ್ಗದಲ್ಲಿ ಶೋಭಾರಾಜ್, ವತ್ಸಲಾ ಮೋಹನ್, ಆರ್ನ ರಾಥೋಡ್, ಸಿದ್ಲಿಂಗು ಶ್ರೀಧರ್ ಮುಂತಾದ ಕಲಾವಿದರು ನಟಿಸಿದ್ದಾರೆ.
‘ರಾಕ್ಷಸ’ ಚಿತ್ರದ ಶೇಕಡ 80ರಷ್ಟು ಚಿತ್ರೀಕರಣ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಮಾಡಲಾಗಿದೆ. ಇನ್ನುಳಿದ ದೃಶ್ಯಗಳ ಚಿತ್ರೀಕರಣವನ್ನು ರಾಮೇಶ್ವರಂ, ಗೋವಾ ಹಾಗೂ ಬೆಂಗಳೂರಿನಲ್ಲಿ ನಡೆಸಲಾಗಿದೆ. ‘ಶಾನ್ವಿ ಎಂಟರ್‌ಟೇನ್ಮೆಂಟ್’ ಮೂಲಕ ದೀಪು ಬಿ.ಎಸ್. ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ನವೀನ್ ಮತ್ತು ಮಾನಸಾ ಕೆ. ಕೂಡ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ.
ಇದನ್ನೂ ಓದಿ: ಪ್ರಜ್ವಲ್ ದೇವರಾಜ್ ‘ಕರಾವಳಿ’ಯಲ್ಲಿ ದೊಡ್ಡವರಾದ ರಮೇಶ್ ಇಂದಿರಾ
‘ರಾಕ್ಷಸ’ ಎಂಬ ಶೀರ್ಷಿಕೆ ಕೇಳಿದ ತಕ್ಷಣ ಇದೊಂದು ಹಾರರ್ ಸಿನಿಮಾ ಎಂಬ ಕಲ್ಪನೆ ಮೂಡುವುದು ಸಹಜ. ಆದರೆ ಚಿತ್ರತಂಡದ ಪ್ರಕಾರ, ಈ ಸಿನಿಮಾದಲ್ಲಿ ಎಮೋಷನಲ್ ಕಹಾನಿ ಇದೆ. ಅದರ ಜೊತೆಗೆ ಟೈಮ್ ಲೂಪ್ ಪರಿಕಲ್ಪನೆಯ ಸ್ಪರ್ಶ ಕೂಡ ನೀಡಲಾಗಿದೆ. ಈ ಸಿನಿಮಾಗೆ ನಿರ್ದೇಶಕ ಲೋಹಿತ್ ಅವರು ಆ್ಯಕ್ಷನ್-ಕಟ್ ಹೇಳಿದ್ದಾರೆ. ‘ಮಮ್ಮಿ’, ‘ದೇವಕಿ’ ಸಿನಿಮಾಗಳ ಮೂಲಕ ಗಮನ ಸೆಳೆದಿರುವ ಅವರು ಈಗ ‘ರಾಕ್ಷಸ’ ಮೂಲಕ ಹೊಸ ಕಥೆ ಹೇಳಲು ಸಜ್ಜಾಗಿದ್ದಾರೆ.
ಇದನ್ನೂ ಓದಿ: ‘ಪಿನಾಕ’ ಸಿನಿಮಾಗೆ ಪವರ್ಫುಲ್ ಡೈಲಾಗ್ ಬರೆದ ರಘು ನಿಡುವಳ್ಳಿಗೆ ಗಣೇಶ್ ಮೆಚ್ಚುಗೆ
ಈತನಕ 36ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಪ್ರಜ್ವಲ್ ದೇವರಾಜ್ ಅವರು ಆ ಎಲ್ಲ ಸಿನಿಮಾಗಳಿಗಿಂತ ಡಿಫರೆಂಟ್ ಆಗಿ ‘ರಾಕ್ಷಸ’ ಸಿನಿಮಾದಲ್ಲಿ ಕಾಣಿಸಿಕೊಂಡಿರುವುದರಿಂದ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಜೇಬಿನ್ ಪಿ. ಜೋಕಬ್ ಅವರು ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ವಿನೋದ್ ಅವರ ಸಾಹಸ ನಿರ್ದೇಶನ, ವರುಣ್ ಉನ್ನಿ ಅವರ ಸಂಗೀತ ನಿರ್ದೇಶನ, ಅವಿನಾಶ್ ಬಸುತ್ಕರ್ ಅವರ ಹಿನ್ನಲೆ ಸಂಗೀತ ಹಾಗೂ ರವಿಚಂದ್ರನ್ ಸಿ. ಅವರ ಸಂಕಲನ ಈ ಚಿತ್ರಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.