ಪ್ರಜ್ವಲ್ ದೇವರಾಜ್ ಹೊಸ ಚಿತ್ರಕ್ಕೆ ಚಾಲನೆ, ತೆಲುಗಿನ ಜನಪ್ರಿಯ ನಟ ಕನ್ನಡಕ್ಕೆ ಎಂಟ್ರಿ

|

Updated on: Nov 01, 2023 | 9:11 PM

Prajwal Devaraj: ಬೆಂಗಳೂರಿನ ಗಡಿಯಲ್ಲಿ ಚಿರತೆ ಕಾಣಿಸಿಕೊಂಡು ಕಳೆದ ಕೆಲ ದಿನಗಳಿಂದ ಆತಂಕ ಉಂಟು ಮಾಡಿತ್ತು. ಇಂದು ಆ ಚಿರತೆ ಅಸುನೀಗಿದೆ. ಅದೇ ದಿನ 'ಚೀತಾ' ಹೆಸರಿನ ಕನ್ನಡ ಸಿನಿಮಾದ ಮುಹೂರ್ತವೂ ನಡೆದಿದೆ.

ಪ್ರಜ್ವಲ್ ದೇವರಾಜ್ ಹೊಸ ಚಿತ್ರಕ್ಕೆ ಚಾಲನೆ, ತೆಲುಗಿನ ಜನಪ್ರಿಯ ನಟ ಕನ್ನಡಕ್ಕೆ ಎಂಟ್ರಿ
Follow us on

ಕೆಲವು ದಿನಗಳ ಹಿಂದಷ್ಟೆ ಬೆಂಗಳೂರಿನ ಗಡಿಯಲ್ಲಿ ಕಾಣಿಸಿಕೊಂಡಿದ್ದ ಚಿರತೆ ಆತಂಕ ಸೃಷ್ಟಿಸಿತ್ತು, ಚಿರತೆಯನ್ನು ಹಿಡಿಯುವ ಪ್ರಯತ್ನದಲ್ಲಿ ಚಿರತೆ ಮೃತಪಟ್ಟಿದೆ. ಈ ಆತಂಕದ ನಡುವೆ ಬೆಂಗಳೂರಿನಲ್ಲಿಯೇ ‘ಚೀತಾ’ (Cheetha) ಹೆಸರಿನ ಸಿನಿಮಾ ಸೆಟ್ಟೇರಿದೆ. ನಿಜ ಚಿರತೆ ಆತಂಕ ಮೂಡಿಸಿದ್ದರೆ, ಸಿನಿಮಾ ‘ಚೀತಾ’ ಸಿನಿ ಪ್ರಿಯರ ಕುತೂಹಲಕ್ಕೆ ಕಾರಣವಾಗಿದೆ. ಪ್ರಜ್ವಲ್ ದೇವರಾಜ್ (Prajwal Devaraj) ಪ್ರಧಾನ ಪಾತ್ರದಲ್ಲಿ ನಟಿಸುತ್ತಿರುವ ‘ಚೀತಾ’ ಸಿನಿಮಾದ ಮುಹೂರ್ತ ಸಮಾರಂಭ ಇಂದು (ನವೆಂಬರ್ 1) ಅದ್ಧೂರಿಯಾಗಿ ನೆರವೇರಿತು.

ರಾಜಲಕ್ಷ್ಮಿ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರತಿಭಾ ನರೇಶ್ ‘ಚೀತಾ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ನೃತ್ಯ ನಿರ್ದೇಶಕರಾಗಿ ಹಲವು ವರ್ಷಗಳಿಂದ ಕೆಲಸ ಮಾಡಿರುವ ರಾಜ ಕಲೈಕುಮಾರ್ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ ‘ಚೀತಾ’ ಸಿನಿಮಾದ ಮುಹೂರ್ತ ಕನ್ನಡ ರಾಜ್ಯೋತ್ಸವದ ಶುಭದಿನದಂದು ಹೆಚ್ ಎಂ ಟಿ ಶಾಲೆ ಆಟದ ಮೈದಾನದಲ್ಲಿ ನೆರವೇರಿತು. ನಾಯಕ ನಟ ಪ್ರಜ್ವಲ್ ದೇವರಾಜ್ ಕನ್ನಡ ಭಾವುಟ ಹಾರಿಸುವುದರ ಮೂಲಕ ಸಿನಿಮಾಕ್ಕೆ ಚಾಲನೆ ನೀಡಿದರು.

”ಕಳೆದ 23 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಡ್ಯಾನ್ಸರ್ ಆಗಿ, ಡ್ಯಾನ್ಸ್ ಮಾಸ್ಟರ್ ಆಗಿ ಕಾರ್ಯ ನಿರ್ವಹಿಸಿದ್ದೇನೆ. ಸಿನಿಮಾಗಳ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದೇನೆ. ಇದು ನನ್ನ ನಿರ್ದೇಶನದ ಮೊದಲ ಸಿನಿಮಾ. ಪ್ರಜ್ವಲ್ ದೇವರಾಜ್​ ಅವರಿಗೆ ಇದು 39ನೇ ಸಿನಿಮಾ. ಒಂದು ಮಾರ್ಕೆಟ್ ನಲ್ಲಿ ನಡೆಯುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಮಾರ್ಕೆಟ್ ನಲ್ಲಿನ ವ್ಯಾಪಾರ, ವಹಿವಾಟು ಹಾಗೂ ಅಲ್ಲಿ ಕೆಲಸ ಮಾಡುವವರು ಎಲ್ಲರೂ ಬಹಳ ವೇಗದವರು. ನಮ್ಮ ಸಿನಿಮಾದ ನಾಯಕ ಸಹ ಚಿರತೆ ರೀತಿ ಬಹಳ ವೇಗದವನು. ಹಾಗಾಗಿ ಸಿನಿಮಾಕ್ಕೆ “ಚೀತಾ” ಎಂದು ಹೆಸರಿಟ್ಟಿದ್ದೇವೆ. ಕಲಾ ನಿರ್ದೇಶಕ ಶಿವು ಅವರು ಅದ್ದೂರಿಯಾಗಿ ಮಾರ್ಕೆಟ್ ಸೆಟ್ ನಿರ್ಮಾಣ ಮಾಡುತ್ತಿದ್ದಾರೆ. ಇಡೀ ಸಿನಿಮಾದ ಚಿತ್ರೀಕರಣ ಬಹುತೇಕ ಆ ಮಾರ್ಕೆಟ್​ನಲ್ಲಿಯೇ ನಡೆಯಲಿದೆ. ಶೃತಿ ಹರಿಹರನ್, ಗುರುರಾಜ್ ಜಗ್ಗೇಶ್, ಶಿವರಾಜ ಕೆ.ಆರ್ ಪೇಟೆ, ಗೋವಿಂದೇ ಗೌಡ, ಅಭಯ್ ಪುನೀತ್ ಮುಂತಾದವರು ನಮ್ಮ ಚಿತ್ರದಲ್ಲಿ ನಟಿಸುತ್ತಿದ್ದಾರೆ. ನವೆಂಬರ್ 6 ರಿಂದ ಶೂಟಿಂಗ್ ಆರಂಭವಾಗಲಿದೆ ಎಂದರು.

ಇದನ್ನೂ ಓದಿ:ಪ್ರಜ್ವಲ್ ದೇವರಾಜ್-ಯಶ ಶಿವಕುಮಾರ್ ಅವರ ಗಣ ಸಿನಿಮಾದ ರೊಮ್ಯಾಂಟಿಕ್ ಚಿತ್ರಗಳು

ಕಲೈ‌ ಅವರು ನೃತ್ಯ ನಿರ್ದೇಶಕರಾಗಿದ್ದಾಗ ಅವರು ನೃತ್ಯ ಸಂಯೋಜಿನೆ ಮಾಡಿದ ಮೊದಲ ಹಾಡಿಗೂ ನಾನೇ ನಾಯಕ ಆಗಿದ್ದೆ. ಈಗ ಅವರು ನಿರ್ದೇಶನ ಮಾಡುತ್ತಿರುವ ಮೊದಲ ಸಿನಿಮಾಕ್ಕೂ ನಾನೇ ನಾಯಕ. ಕಲೈ ಅವರು ಬಹಳ ಉತ್ತಮ ಕಥೆ ರೆಡಿ ಮಾಡಿಕೊಂಡಿದ್ದಾರೆ. ಮಾರ್ಕೆಟ್ ನಲ್ಲೇ ಹುಟ್ಟಿ, ಅಲ್ಲೇ ಬೆಳೆಯುವ ಹುಡುಗನ ಪಾತ್ರ ನನ್ನದು ಎಂದು ನಾಯಕ ಪ್ರಜ್ವಲ್ ದೇವರಾಜ್ ತಿಳಿಸಿದರು.

ನಾನು ಚಿತ್ರದಲ್ಲಿ ಪ್ರಜ್ವಲ್ ಅವರ ಸ್ನೇಹಿತನ ಪಾತ್ರ ನಿರ್ವಹಿಸುತ್ತಿರುವುದಾಗಿ ಗುರುರಾಜ್ ಜಗ್ಗೇಶ್ ಹೇಳಿದರು. ಶೃತಿ ಹರಿಹರನ್, ಶಿವರಾಜ್ ಕೆ.ಆರ್ ಪೇಟೆ, ಗೋವಿಂದೇ ಗೌಡ ಮುಂತಾದ ಕಲಾವಿದರು ಚಿತ್ರದ ಬಗ್ಗೆ ಮಾತನಾಡಿದರು. ನಿರ್ಮಾಪಕಿ ಪ್ರತಿಭಾ ನರೇಶ್ ಎಲ್ಲರಿಗೂ ಧನ್ಯವಾದ ತಿಳಿಸಿದರು. ಸಿನಿಮಾಕ್ಕೆ ಕೆಲಸ ಮಾಡುತ್ತಿರುವ ಎಲ್ಲ ತಂತ್ರಜ್ಞರ ಫೋಟೊಶೂಟ್ ಮಾಡಿಸುವ ಮೂಲಕ ಅವರಿಗೆ ಧನ್ಯವಾದಗಳನ್ನು ಹೇಳಿರುವುದು ವಿಶೇಷ.

ತೆಲುಗಿನ ಜನಪ್ರಿಯ ಹಾಸ್ಯ ನಟ, ಪೋಷಕ ನಟ ಸುನಿಲ್ ಈ ಸಿನಿಮಾ ಮೂಲಕ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಹಾಸ್ಯ ನಟನಾಗಿ ವೃತ್ತಿ ಆರಂಭಿಸಿ ಈಗ ಖಡಕ್ ವಿಲನ್ ಪಾತ್ರಗಳಲ್ಲಿ ಸಹ ಸುನಿಲ್ ಕಾಣಿಸಿಕೊಳ್ಳುತ್ತಿದ್ದಾರೆ. ‘ಪುಷ್ಪ’ ಸಿನಿಮಾದಲ್ಲಿನ ಅವರ ಪಾತ್ರ ಬಹುವಾಗಿ ಗಮನ ಸೆಳೆದಿದೆ. ಈ ಸಿನಿಮಾದಲ್ಲಿ ಅವರು ಹಾಸ್ಯನಟರಾಗಿ ಇರುತ್ತಾರೆಯೇ ಅಥವಾ ವಿಲನ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆಯೇ ಎಂಬುದು ಕುತೂಹಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ