ಸುದೀಪ್ ನಟಿಸಿರುವ ಯಾವ ಸಿನಿಮಾ ಪತ್ನಿ ಪ್ರಿಯಾಗೆ ಅಚ್ಚು-ಮೆಚ್ಚು?
Sudeep: ನಟ ಸುದೀಪ್ ಪತ್ನಿ ಪ್ರಿಯಾ, ತಮ್ಮ ಇಷ್ಟದ ಸುದೀಪ್ ಸಿನಿಮಾಗಳನ್ನು ಹೆಸರಿಸಿದ್ದಾರೆ. ಸುದೀಪ್ರ ಸಿನಿಮಾ ಆಯ್ಕೆಗಳ ಬಗ್ಗೆಯೂ ಪ್ರಿಯಾ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ನಟ ಸುದೀಪ್ (Sudeep) ಅದ್ಭುತ ನಟ, ನಿರ್ದೇಶಕ ಗಾಯಕ ಆಗಿರುವ ಜೊತೆಗೆ ಒಳ್ಳೆಯ ಫ್ಯಾಮಿಲಿ ಮ್ಯಾನ್ (Family Man). ಸಿನಿಮಾಗಳಿಗೆ ನೀಡುವಷ್ಟೆ ಪ್ರಾಧಾನ್ಯತೆ ಕುಟುಂಬಕ್ಕೂ ನೀಡುವ ಸುದೀಪ್ ಕುಟುಂಬಕ್ಕೆ ಇರುವ ಶಕ್ತಿ, ಕುಟುಂಬಕ್ಕೆ ನೀಡಬೇಕಾದ ಗೌರವ, ಆದರಗಳ ಬಗ್ಗೆ ಆಗಾಗ್ಗೆ ಹೇಳುತ್ತಿರುತ್ತಾರೆ. ಸುದೀಪ್ ಪತ್ನಿ ಪ್ರಿಯಾ (Priya) ಈಗ ನಿರ್ಮಾಪಕಿಯೂ ಆಗಿದ್ದು ಪ್ರೀತಿಯ ಪತಿಯ ಸಿನಿಮಾ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಹಲವು ವರ್ಷಗಳಿಂದ ಪತಿಯ ಸಿನಿಮಾ ಜರ್ನಿಯನ್ನು ಬಹುಹತ್ತಿರದಿಂದ ಗಮನಿಸುತ್ತಾ ಬಂದಿರುವ ಪ್ರಿಯಾ ಅವರಿಗೆ ಪತಿ ಸುದೀಪ್ರ ಯಾವ ಸಿನಿಮಾಗಳು ಇಷ್ಟ? ಸುದೀಪ್ ಯಾವ ರೀತಿಯ ಪಾತ್ರಗಳನ್ನು ಮಾಡಿದರೆ ನೋಡಲು ಇಷ್ಟ?
”ಸುದೀಪ್ ಅವರು ಕನ್ನಡದಲ್ಲಿ ಮಾಡಿರುವ ಸಿನಿಮಾಗಳಲ್ಲಿ ನನಗೆ ವಿಷ್ಣುವರ್ಧನ ಬಹಳ ಇಷ್ಟ. ಅವರ ನಲ್ಲ, ನಂದಿ ಸಿನಿಮಾಗಳು ಬಹಳ ಇಷ್ಟ. ಸ್ವಾತಿಮುತ್ತು ಸಿನಿಮಾದಲ್ಲಿ ಅವರ ನಟನೆ ಬಹಳ ಇಷ್ಟ. ಆದರೆ ವಿಷ್ಣುವರ್ಧನ ಸಿನಿಮಾ ಬಹಳ ಇಷ್ಟ. ಅವರ ಕಾಮಿಕ್ ಟೈಮಿಂಗ್ ಅದ್ಭುತ. ಆ ಕಾಮಿಕ್ ಟೈಮಿಂಗ್ ಅನ್ನು ಹೆಚ್ಚು ಸಿನಿಮಾಗಳಲ್ಲಿ ಯಾರೂ ಹೆಚ್ಚಾಗಿ ಬಳಸಿಕೊಂಡಿಲ್ಲ ಅನಿಸುತ್ತದೆ. ಆ ರೀತಿಯ ಸಿನಿಮಾಗಳನ್ನು ಅವರು ಹೆಚ್ಚು ಮಾಡಬೇಕು ಎಂದು ವೈಯಕ್ತಿಕವಾಗಿ ನನಗೆ ಅನ್ನಿಸುತ್ತದೆ” ಎಂದಿದ್ದಾರೆ ಪ್ರಿಯಾ.
ಇದನ್ನೂ ಓದಿ:‘ಚಿತ್ರರಂಗವನ್ನು ಬೆಳೆಸಲಾಗಲಿಲ್ಲ ಎಂದರೆ ಅದನ್ನು ಕಾಪಾಡಿಕೊಂಡು ಹೋಗಿ’; ಸಂಚಿತ್ಗೆ ಸುದೀಪ್ ಕಿವಿಮಾತು
ಮುಂದುವರೆದು, ”ಸುದೀಪ್ ಅವರ ಪ್ರತಿಭೆಯನ್ನು ಪೂರ್ಣ ಪ್ರಮಾಣದಲ್ಲಿ ಯಾರೂ ಈವರೆಗೆ ಬಳಸಿಕೊಂಡಿಲ್ಲ ಅನಿಸುತ್ತದೆ. ಪ್ರತಿ ಬಾರಿಯೂ ಸಿನಿಮಾ ನೋಡುವಾಗ ಈ ಸೀನ್ನ ಸುದೀಪ್ ಹೀಗೆ ಮಾಡಬಹುದು ಎಂದು ನಾನು ನಿರೀಕ್ಷಿಸುತ್ತೇನೆ. ಆದರೆ ಅವರು ತಮ್ಮ ನಟನೆಯಿಂದ ನನಗೆ ಸರ್ಪ್ರೈಸ್ ಮಾಡಿಬಿಡುತ್ತಾರೆ. 22 ವರ್ಷಗಳಿಂದ ಅವರ ನಟನೆ ನೋಡುತ್ತಿದ್ದೇನೆ, ಇವತ್ತಿಗೂ ಅವರ ನಟನೆಯಲ್ಲಿ ಹೊಸತನವಿದೆ. ಪ್ರತಿ ದೃಶ್ಯವನ್ನು ಹೊಸದಾಗಿ ಅಪ್ರೋಚ್ ಮಾಡ್ತಾರೆ. ಇಷ್ಟು ವರ್ಷದ ಜರ್ನಿಯಲ್ಲಿ, ಹೀರೋ, ವಿಲನ್, ವಯಸ್ಸಾದ ವ್ಯಕ್ತಿಯ ಪಾತ್ರವನ್ನೂ ಮಾಡಿ ಆಯ್ತು, ಯುವಕನ ಪಾತ್ರವನ್ನೂ ಮಾಡಿ ಆಯ್ತು. ಇನ್ನೂ ಯಾವ ರೀತಿಯ ಪಾತ್ರ ಮಾಡಬೇಕು ಎಂಬುದು ಗೊತ್ತಿಲ್ಲ, ಅವರಿಗಾಗಿ ಇನ್ನೂ ಒಳ್ಳೆಯ ಚಿತ್ರಕತೆಯನ್ನು ಹುಡುಕಬೇಕು” ಎಂದಿದ್ದಾರೆ ಪ್ರಿಯಾ.
ಸುದೀಪ್ರ ಪುತ್ರಿ ಸಾನ್ವಿ ಸಹ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಗಾಯಕಿಯಾಗಿ. ಸುದೀಪ್ರ ಸಹೋದರಿಯ ಪುತ್ರ ಸಂಚಿತ್ ಜಿಮ್ಮಿ ಹೆಸರಿನ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಡುತ್ತಿದ್ದು ಆ ಸಿನಿಮಾದಲ್ಲಿ ಹಾಡೊಂದನ್ನು ಸುದೀಪ್ರ ಪುತ್ರಿ ಸಾನ್ವಿ ಹಾಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಪ್ರಿಯಾ, ”ಮಗಳು ಚೆನ್ನಾಗಿ ಹಾಡುತ್ತಾಳೆ ಎಂಬುದು ನನಗೆ ಮೊದಲಿನಿಂದಲೂ ಗೊತ್ತಿತ್ತು. ಆಕೆ ಗಾಯನದ ಬಗ್ಗೆ ನಮಗೆ ಬೇರೆಯದ್ದೇ ಯೋಚನೆ ಇತ್ತು. ಆದರೆ ಸಂಚಿತ್ಗೆ ಈ ಐಡಿಯಾ ಬಂದು ಒಂದು ಇಂಗ್ಲೀಷ್ ಹಾಡನ್ನು ಸಾನ್ವಿ ಕೈಯಲ್ಲಿ ಹಾಡಿಸಿದ್ದಾನೆ” ಎಂದಿದ್ದಾರೆ.
ಸಂಚಿತ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಬಗ್ಗೆ ಮಾತನಾಡಿದ ಪ್ರಿಯಾ, ”ಸಂಚಿತ್ ಅನ್ನು ಸಣ್ಣ ಬಾಲಕನಿದ್ದಾಗಿನಿಂದಲೂ ನೋಡುತ್ತಾ ಬಂದಿದ್ದೇವೆ. ಮಗ ಚಿತ್ರರಂಗಕ್ಕೆ ಬರುತ್ತಿರುವಾಗ ಪೋಷಕರಾಗಿ ನಾವು ಹಿಂದೆ ನಿಂತು ಬೆಂಬಲ ಕೊಡಬೇಕು ಅದೇ ಕಾರ್ಯವನ್ನು ನಾವು ಮಾಡುತ್ತಿದ್ದೇವೆ. ಈ ಮುಂಚೆಯೂ ನಾವು ಅವರ ಪದಾರ್ಪಣೆ ಬಗ್ಗೆ ಹಲವು ಬಾರಿ ಮಾತನಾಡಿದ್ದೆವು. ಆದರೆ ಇಂದು ಅವನು ವೇದಿಕೆ ಮೇಲೆ ಬಂದು ನಿಂತಾಗ ಸಹಜವಾಗಿ ಭಾವುಕರಾದೆವು. ಅವನ್ನು ಶಿವಣ್ಣ ಹಾಗೂ ರವಿಚಂದ್ರನ್ ಅವರು ಕರೆದುಕೊಂಡು ಬಂದಿದ್ದು ಬಹಳ ವಿಶೇಷವಾಗಿತ್ತು. ಈ ಹಿಂದೆ ಮಾಣಿಕ್ಯ ಸಿನಿಮಾದಲ್ಲಿ ಸುದೀಪ್ರ ಡ್ಯೂಪ್ ಆಗಿದ್ದ ಸಂಚಿತ್, ಆಗಲೇ ನಾವು ಅವನಿಗೆ ನಟನಾಗುವ ಸಲಹೆ ನೀಡಿದ್ದೆವು. ಆದರೆ ಅವನ ಗಮನ ಹೆಚ್ಚಿಗೆ ನಿರ್ದೇಶನದ ಕಡೆಗೆ ಇತ್ತು” ಎಂದಿದ್ದಾರೆ ಪ್ರಿಯಾ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ