ದರ್ಶನ್ ಹೊರಗೆ ಬಂದ ಮೇಲೆ ಅವರೊಟ್ಟಿಗೆ ಸಿನಿಮಾ ಮಾಡುವೆ: ಕೆ ಮಂಜು

|

Updated on: Jul 03, 2024 | 4:39 PM

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ದರ್ಶನ್ ತೂಗುದೀಪ ಬಗ್ಗೆ ನಿರ್ಮಾಪಕ ಕೆ ಮಂಜು ಮಾತನಾಡಿದ್ದಾರೆ. ದರ್ಶನ್ ಹೊರಬಂದ ಮೇಲೆ ಅವರೊಟ್ಟಿಗೆ ಸಿನಿಮಾ ಮಾಡುವುದಾಗಿ ಹೇಳಿದ್ದಾರೆ.

ದರ್ಶನ್ ಹೊರಗೆ ಬಂದ ಮೇಲೆ ಅವರೊಟ್ಟಿಗೆ ಸಿನಿಮಾ ಮಾಡುವೆ: ಕೆ ಮಂಜು
Follow us on

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ದಿನ ದೂಡುತ್ತಿರುವ ನಟ ದರ್ಶನ್ ಕುರಿತು ಚಿತ್ರರಂಗದಲ್ಲಿ ಕೆಲವರು ಬೆಂಬಲ ಸೂಚಿಸಿದ್ದಾರೆ. ಕೆಲವು ನಟ-ನಟಿಯರು ಜೈಲಿಗೆ ಬಂದು ದರ್ಶನ್ ಅವರನ್ನು ಭೇಟಿಯಾಗಿ ತೆರಳಿದ್ದಾರೆ. ಇಂದು ಮಾಧ್ಯಮಗಳೊಟ್ಟಿಗೆ ದರ್ಶನ್ ಬಗ್ಗೆ ಮಾತನಾಡಿದ ನಿರ್ಮಾಪಕ ಕೆ ಮಂಜು, ‘ದರ್ಶನ್ ಅಂಥಹಾ ಘೋರ ಅಪರಾಧ ಮಾಡುವವರಲ್ಲ, ಏನೋ ಅಚಾನಕ್ಕಾಗಿ ಅಥವಾ ಅವರ ಜೊತೆಗಿದ್ದವರು ಹಾಗೆ ಮಾಡಿರಬಹುದೇನೋ ಆದರೆ ದರ್ಶನ್ ಮನುಷ್ಯತ್ವ ಇರುವ ವ್ಯಕ್ತಿ’ ಎಂದಿದ್ದಾರೆ.

‘ತಪ್ಪು ಎಲ್ಲರೂ ಮಾಡಿದ್ದಾರೆ. ಭೂಮಿಯ ಮೇಲೆ ಯಾರು ತಪ್ಪು ಮಾಡಿಲ್ಲ. ಈಗ ದರ್ಶನ್ ಜೈಲಿನಲ್ಲಿ ಪಶ್ಚಾತಾಪ ಪಡುತ್ತಿರುತ್ತಾರೆ. ಅವರಿಂದ ಅಪರಾಧ ಆಗಿಲ್ಲ ಎಂಬುದೇ ನನ್ನ ನಂಬಿಕೆ. ಅವರಿಗೆ ಶಿಕ್ಷೆ ಆಗದೇ ಇರಲಿ ಎಂದು ನಾನು ಬೇಡಿಕೊಳ್ಳುತ್ತೇನೆ. ಒಂದೊಮ್ಮೆ ಅವರು ಜೈಲಿನಿಂದ ಹೊರಬಂದರೆ ಖಂಡಿತ ಅವರೊಟ್ಟಿಗೆ ಸಿನಿಮಾ ಮಾಡುವೆ. ಅದರಲ್ಲೂ ಒಳ್ಳೆಯ ಹೀರೋ ಸಬ್ಜೆಕ್ಟ್ ಇಟ್ಟುಕೊಂಡೇ ಅವರೊಟ್ಟಿಗೆ ಸಿನಿಮಾ ಮಾಡುತ್ತೀನಿ’ ಎಂದಿದ್ದಾರೆ.

‘ದರ್ಶನ್ ಜೊತೆಗೆ ಈ ಹಿಂದೆ ‘ಲಂಕೇಶ್ ಪತ್ರಿಕೆ’ ಸಿನಿಮಾ ಮಾಡಿದ್ದೀನಿ. ಆ ವ್ಯಕ್ತಿ ಕೆಲಸದ ವಿಷಯದಲ್ಲಿ, ಹಣದ ವಿಷಯದಲ್ಲಿ ಬಹಳ ಕಟ್ಟುನಿಟ್ಟು, ಯಾವುದೇ ನಿರ್ಮಾಪಕರಿಗೆ ಸಮಸ್ಯೆ ಕೊಟ್ಟವರಲ್ಲ. ನಾನು ಸಿನಿಮಾ ಮಾಡಿದಾಗಲೂ ಸಹ ಇಷ್ಟು ಹಣ ಕೊಡಿ, ಇಷ್ಟು ದಿನ ಬರುವೆ, ಹೇಳಿದ ಕೆಲಸ ಮಾಡಿಕೊಡುವೆ ಎಂದು ಶಿಸ್ತಾಗಿ ಹೇಳಿದ್ದರು. ಹಾಗೆಯೇ ಕೆಲಸ ಮಾಡಿಕೊಟ್ಟರು’ ಎಂದಿದ್ದಾರೆ ಕೆ ಮಂಜು.

ಇದನ್ನೂ ಓದಿ:ಕಟ್ಟುನಿಟ್ಟಿನ ಮನುಷ್ಯ ದರ್ಶನ್ ದುಡ್ಡಿನ ವಿಷಯದಲ್ಲಿ ಕಡ್ಡಿ ಮುರಿದಂತೆ ಮಾತಾಡುತ್ತಿದ್ದರು: ಕೆ ಮಂಜು, ನಿರ್ಮಾಪಕ

ಕೆಲವು ರಾಜಕಾರಣಿಗಳ ಪ್ರಭಾವ ಇದರಲ್ಲಿದೆ ಎನ್ನಲಾಗುತ್ತಿದೆಯಲ್ಲ ಎಂಬ ಪ್ರಶ್ನೆಗೆ, ‘ಇದ್ದರೆ ಇರಬಹುದು ಆದರೆ ಕೆಲವರು ಕುಮಾರಸ್ವಾಮಿ ಅವರ ಹೆಸರು ಹೇಳುತ್ತಿದ್ದಾರೆ ಅದು ಸರಿಯಲ್ಲ. ಕುಮಾರಸ್ವಾಮಿಯವರು ಆ ರೀತಿಯ ವ್ಯಕ್ತಿಯಲ್ಲ. ಅವರಿಗೆ ಸಿನಿಮಾದವರೆಂದರೆ ಬಹಳ ಪ್ರೀತಿ, ಗೌರವ ಇದೆ. ಇಂಥಹಾ ಚಿಲ್ಲರೆ ಕೆಲಸ ಮಾಡುವ ವ್ಯಕ್ತಿ ಅವರಲ್ಲ. ಮಂಡ್ಯದಲ್ಲಿ ಕುಮಾರಸ್ವಾಮಿ ವಿರುದ್ಧ ಪ್ರಚಾರ ಮಾಡಿದ್ದಕ್ಕಾಗಿ ಕೆಲವರು ಹೀಗೆಲ್ಲ ಮಾತನಾಡುತ್ತಿದ್ದಾರೆ ಆದರೆ ಕುಮಾರಸ್ವಾಮಿ ಅವರು ಆ ರೀತಿಯ ವ್ಯಕ್ತಿಯಲ್ಲ’ ಎಂದಿದ್ದಾರೆ ಕೆ ಮಂಜು.

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ತೂಗುದೀಪ ಅವರನ್ನು ಜೂನ್ 11 ರಂದು ಪೊಲೀಸರು ಬಂಧಿಸಿದ್ದಾರೆ. ಈಗ ವಿಚಾರಣಾಧೀನ ಕೈದಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಜುಲೈ 4 ಕ್ಕೆ ಅವರ ನ್ಯಾಯಾಂಗ ಬಂಧನ ಅವಧಿ ಮುಗಿಯಲಿದ್ದು, ನಾಳೆ ಅವರ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ