ಸಾಲಗಾರರಿಂದ ಬೆದರಿಕೆ: ಸಿಸಿಬಿ ಪೊಲೀಸರಿಗೆ ನಿರ್ಮಾಪಕ ಪುಷ್ಕರ್ ದೂರು

‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’, ‘ಕಿರಿಕ್ ಪಾರ್ಟಿ’, ‘ಅವನೇ ಶ್ರೀಮನ್ನಾರಾಯಣ’ ಸಿನಿಮಾಗಳ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ, ತಮಗೆ ಸಾಲಗಾರರು ಕಿರುಕುಳ ನೀಡುತ್ತಿದ್ದು, ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

ಸಾಲಗಾರರಿಂದ ಬೆದರಿಕೆ: ಸಿಸಿಬಿ ಪೊಲೀಸರಿಗೆ ನಿರ್ಮಾಪಕ ಪುಷ್ಕರ್ ದೂರು
Follow us
ಮಂಜುನಾಥ ಸಿ.
|

Updated on: Jun 30, 2024 | 1:30 PM

‘ಅವನೇ ಶ್ರೀಮನ್ನಾರಾಯಣ’, ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’, ‘ಕಿರಿಕ್ ಪಾರ್ಟಿ’, ‘ಅವತಾರ ಪುರುಷ’ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಇನ್ನೂ ಕೆಲವು ಸಿನಿಮಾಗಳನ್ನು ನಿರ್ಮಾಣ ಮಾಡಿರುವ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಸಿಸಿಬಿ ಪೊಲೀಸರ ಬಳಿ ದೂರು ದಾಖಲಿಸಿದ್ದಾರೆ. ಸಾಲಗಾರರು ತಮಗೆ ಕಿರುಕುಳ ಕೊಡುತ್ತಿದ್ದು, ಬೆದರಿಕೆ ಹಾಕಿದ್ದಾರೆ ಎಂದು ಪುಷ್ಕರ್ ಮಲ್ಲಿಕಾರ್ಜುನ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸಾಲ ನೀಡಿರುವ ಕೆಲವರು ಮನೆ ಬಳಿ ಗೂಂಡಾಗಳನ್ನು ಕಳಿಸಿ ಗಲಾಟೆ ಮಾಡಿಸಿದ್ದಾರೆ ಎಂದು ಪುಷ್ಕರ್ ಆರೋಪ ಮಾಡಿದ್ದಾರೆ. ಅವರುಗಳ ಮೇಲೆ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಆರಂಭದಲ್ಲಿ ಸತತ ಯಶಸ್ಸು ಕಂಡ ಪುಷ್ಕರ್ ಮಲ್ಲಿಕಾರ್ಜುನ ಇತ್ತೀಚೆಗೆ ಸತತವಾಗಿ ಸೋಲುತ್ತಿದ್ದಾರೆ. ಇತ್ತೀಚೆಗೆ ಅವರ ಸಿನಿಮಾಗಳು ಸದ್ದು ಮಾಡಲು ವಿಫಲವಾಗಿವೆ. ಸಿನಿಮಾಗಳಿಂದ ನಷ್ಟ ಉಂಟಾಗಿ ಪುಷ್ಕರ್ ಮಲ್ಲಿಕಾರ್ಜುನ, ಸಿನಿಮಾ ಮಾಡಲು ಮಾಡಿದ್ದ ಸಾಲ ಮರುಪಾವತಿ ಸರಿಯಾಗಿ ಮಾಡಲಾಗಿಲ್ಲವಾದ್ದರಿಂದ ಸಾಲ ನೀಡಿರುವವರು ಪುಷ್ಕರ್​ಗೆ ಸಮಸ್ಯೆ ನೀಡಲು ಆರಂಭಿಸಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ದರ್ಶನ್​ ಅಭಿಮಾನಿಗಳಿಗೆ ಕಿವಿಮಾತು ಹೇಳಿದ ಹಿರಿಯ ನಿರ್ಮಾಪಕ ಸಾ.ರಾ. ಗೋವಿಂದು

ಸಿಸಿಬಿ ಪೊಲೀಸರಿಗೆ ಈ ಬಗ್ಗೆ ದೂರು ನೀಡಿರುವ ಪುಷ್ಕರ್ ದೂರಿನಲ್ಲಿ ಉಲ್ಲೇಖಿಸಿರುವಂತೆ, ತಮ್ಮ ಸಂಬಂಧಿ ಆದರ್ಶ್ ಎಂಬುವರ ಬಳಿ ಕಾಲಾಂತರದಲ್ಲಿ ಐದು ಕೋಟಿ ರೂಪಾಯಿ ಸಾಲ ಪಡೆದಿದ್ದರಂತೆ. ಅದಕ್ಕೆ ಪ್ರತಿಯಾಗಿ ಪ್ರತಿ ತಿಂಗಳು 5% ಬಡ್ಡಿ ಪಾವತಿ ಮಾಡುತ್ತಿದ್ದರಂತೆ. ಐದು ಕೋಟಿ ಸಾಲಕ್ಕೆ ಪ್ರತಿಯಾಗಿ ಹತ್ತು ಚೆಕ್ಕುಗಳನ್ನು ಸಹ ನೀಡಿದ್ದರಂತೆ. ಪುಷ್ಕರ್ ಹೇಳಿರುವಂತೆ ಅವರು ಐದು ಕೋಟಿ ಸಾಲಕ್ಕೆ ಬಡ್ಡಿ ಎಲ್ಲ ಸೇರಿಸಿ ಈಗಾಗಲೇ 11 ಕೋಟಿ ಹಣ ನೀಡಿದ್ದಾರಂತೆ. ಆದರೆ ಸಾಲ ಕೊಟ್ಟಿರುವ ಆದರ್ಶ್, ಪುಷ್ಕರ್ ಕೊಟ್ಟಿರುವ ಹಣವನ್ನು ಚಕ್ರಬಡ್ಡಿ, ಬಡ್ಡಿಗೆ ಲೆಕ್ಕ ಹಾಕಿ ಈಗ ಇನ್ನೂ 13 ಕೋಟಿ ನೀಡುವಂತೆ ಕೇಳಿದ್ದಾರಂತೆ.

ವಾದ ವಿವಾದಗಳು ನಡೆದಾಗ ಸಾಲ ನೀಡಿರುವ ಆದರ್ಶ್, ಹರ್ಷ ಸಿ, ಹರ್ಷ ಡಿ.ಬಿ. ಹಾಗೂ ಅವರ ಕೆಲವು ಸಹಚರರು ತಮ್ಮ ವಾಸದ ಮನೆ, ಕಚೇರಿಗಳಿಗೆ ಹುಡುಗರನ್ನು ಕಳುಹಿಸಿ ಗಲಾಟೆ ಮಾಡಿಸಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ ಎಂದು ನಿರ್ಮಾಪಕ ಪುಷ್ಕರ್ ಆರೋಪಿಸಿದ್ದಾರೆ. ಸಿಸಿಬಿಯ ಕಿಶೋರ್ ಕುಮಾರ್ ಅವರಿಗೆ ಪುಷ್ಕರ್ ದೂರು ನೀಡಿದ್ದು, ಕರ್ನಾಟಕ ಮನಿ ಲೆಂಡರ್ಸ್ ಕಾಯಿದೆ, ಕರ್ನಾಟಕ ಪ್ರಹಿಬಿಷನ್ ಆಫ್ ಚಾರ್ಜಿಂಗ್ ಎಕ್ಸಾರ್ಬಿಟೇಶನ್ ಇಂಟರೆಸ್ಟ್ ಆ್ಯಕ್ಟ್, ವಂಚನೆ, ಬೆದರಿಕೆ ಆರೋಪದಡಿ ಎಫ್ಐಆರ್ ದಾಖಲಿಸಿಕೊಂಡು ವಿಚಾರಣೆ ನಡೆಸಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ