ಮತ್ತೊಬ್ಬರ ಸಂಕಟವನ್ನು ತಮಾಷೆ ಮಾಡುವ ಮೊದಲು Public Toilet ಕಿರುಚಿತ್ರ ನೋಡಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 14, 2021 | 6:24 PM

Public Toilet: ‘ಯಾಕಣಾ..’ ಎಂದು ಹೇಳುವ ಹೆಣ್ಣುಮಗಳ ಟ್ರೋಲ್ ಅನ್ನು ನಾವೂ-ನೀವೂ ಹಂಚಿಕೊಂಡಿರಬಹುದು. ಮತ್ತೊಬ್ಬರ ಜೀವನವನ್ನು ತಮಾಷೆ ಮಾಡುವ ಮುನ್ನ Public Toilet ಕಿರುಚಿತ್ರ ನೋಡಿ.

ಮತ್ತೊಬ್ಬರ ಸಂಕಟವನ್ನು ತಮಾಷೆ ಮಾಡುವ ಮೊದಲು Public Toilet ಕಿರುಚಿತ್ರ ನೋಡಿ
PUBLIC TOILET ಕಿರುಚಿತ್ರದ ಪೋಸ್ಟರ್
Follow us on

ಬದಲಾದ ಕಾಲಮಾನದಲ್ಲಿ, ಸಾಮಾಜಿಕ ಜಾಲತಾಣಗಳ ಜೊತೆಗಿನ ಬದುಕು ಎಷ್ಟು ವಿಚಿತ್ರವಾಗಿಬಿಟ್ಟಿದೆ. ಜಾಲತಾಣದಲ್ಲಿ ಹರಿದು ಬರುವ ಪ್ರತಿಯೊಂದೂ ತಮಾಷೆಯ ವಸ್ತು. ಇಲ್ಲಿ ಮತ್ತೊಬ್ಬರ ಸಂಕಟ, ಪೇಚಾಟ ನಮಗೆ ನಗುವಿನ ಸರಕಾಗಿ ಕಣ್ಣು ಕುಕ್ಕುತ್ತದೆ. ಕ್ಷಣ ಒಂದರಲ್ಲಿ ಅದನ್ನು ಹರಿದು ಹಂಚಿ ನಾನು ಪಡೆದ ಲೈಕ್ ಎಷ್ಟು, ಕಮೆಂಟ್, ಶೇರ್​ಗಳು ಎಷ್ಟು ಎಂದು ಎಣಿಸಲು ತೊಡಗುತ್ತೇವೆ. ನಮ್ಮ ವಿಕೃತಿಯ ನಡುವೆ ಎಲ್ಲೋ ಒಂದೆಡೆ ಇನ್ಯಾರದೋ ಜೀವನ ಸೋತು ಹೋಗುತ್ತಿರುವುದು ಅರ್ಥವಾಗುವುದಿಲ್ಲ. ಅರ್ಥವಾಗುವಷ್ಟರಲ್ಲಿ ಇನ್ನೇನೋ ಆಗಿರುತ್ತದೆ. ಜಾಲತಾಣಗಳ ಸಿಕ್ಕಲ್ಲಿ ಕಳೆದುಹೋಗಿರುವ ಮನಸಿನಲ್ಲಿ ತೊಳೆದಷ್ಟೂ ಕೊಳೆ.

ಇಂತಹ ನೈಜ ಘಟನೆಯನ್ನು ಬಿಂಬಿಸುವ ಕಿರುಚಿತ್ರ ‘ಪಬ್ಲಿಕ್ ಟಾಯ್ಲೆಟ್’. ಕಳೆದ ಕೆಲವು ದಿನಗಳಿಂದ ಸ್ವತಃ ಪ್ರೇಕ್ಷಕರೇ ಎತ್ತಿ ಮೆರೆಸುತ್ತಿರುವ ಕಿರುಚಿತ್ರವಿದು. ನಾಗೇಶ್ ಹೆಬ್ಬೂರ್ ಎಂಬ ನಿರ್ದೇಶಕ ಮತ್ತು ತಂಡದ ಕನಸು.

ಜನರ ಒಳಗನ್ನು ತಟ್ಟಿ ಎಬ್ಬಿಸುವ ಉತ್ತಮ ಕಥಾವಸ್ತು, ಅದನ್ನು ಚಿತ್ರಕಥೆಯಲ್ಲಿ ಪಳಗಿಸಿಕೊಂಡ ರೀತಿ, ಸದಾ ಚಲನಶೀಲವಾಗಿರುವ ಕ್ಯಾಮರಾ ಕೈಚಳಕ, ನಾಟುವ ಹಿನ್ನೆಲೆ ಸಂಗೀತ, ನಟನೆ, ಅತಿಸೂಕ್ಷ್ಮ ವಿನ್ಯಾಸ, ಒಟ್ಟು ಕಿರುಚಿತ್ರವನ್ನು ಇಂಚಿಂಚು ಕಟ್ಟಿದ ರೀತಿ. ಇದೆಲ್ಲವೂ ಸೇರಿ ಒಬ್ಬ ಸಾಮಾನ್ಯ ಪ್ರೇಕ್ಷಕನೂ ಮತ್ತು ಸಿನಿಮಾ ಪ್ರೇಮಿಯೂ ಮೆಚ್ಚುವಂಥ ಕಲಾಕೃತಿಯಾಗಿ ಮೂಡಿಬಂದಿದೆ ‘ಪಬ್ಲಿಕ್ ಟಾಯ್ಲೆಟ್’.

ಮಾಡಿದ ತಪ್ಪಿಗೆ ಹಣವನ್ನು ಪರಿಹಾರವೆಂದು ನೀಡಿದರೆ ತಪ್ಪು ಸರಿಯಾಗುತ್ತದೆಯೇ ಎಂಬರ್ಥದ ಪ್ರಶ್ನೆಯೊಂದಿಗೆ ಆರಂಭವಾಗುವ ಕಿರುಚಿತ್ರ, ಕೊನೆಗೆ ಅದೇ ರೂಪಕವನ್ನು ನೋಡುಗನ ಮುಖದ ಮೇಲೆ ಎಸೆದು ಅರ್ಥಮಾಡಿಸುತ್ತದೆ. ಸಣ್ಣಗೆ ಸಾಗುವ ಕಥನದೊಳಗಿನ ಆಕ್ರೋಶ ಅಂಥದ್ದು. ಗೋಡೆಯ ಮೇಲಿನ ಅರೆಬೆತ್ತಲೆ ಪೋಸ್ಟರ್​ಗೆ ಮಸಿ ಬಳಿದು, ಮನದೊಳಗೆ ವಿಕೃತಿ ತುಂಬಿಕೊಂಡಿದ್ದರೆ ಹೇಗೆ ಎಂದು ಮತ್ತೆ ಮತ್ತೆ ಕೇಳುತ್ತದೆ. ನಾವು ದಿನನಿತ್ಯ ನೋಡುತ್ತಿರುವ ಸಾಮಾಜಿಕ ಜಾಲತಾಣದೊಳಗಿನ ಜೀವನವನ್ನು ಜಾಗೃತವಾಗಿರಿಸಲು ಎಚ್ಚರಿಸುತ್ತದೆ.

‘ಯಾಕಣಾ..’ ಎಂದು ಹೇಳುವ ಹೆಣ್ಣುಮಗಳ ಟ್ರೋಲ್ ಅಥವಾ ಮೀಮ್ಸ್​ನ್ನು ನಾವೂ ನೀವೂ ಹಂಚಿಕೊಂಡಿರಬಹುದು. ಅದೊಂದೇ ಅಂತಲ್ಲ. ಅಂತಹ ಹಲವು ಟ್ರೋಲ್​ಗಳ ಹರಡುವಿಕೆಗೆ ನಾವು ಕಾರಣರಾಗಿರಬಹುದು. ಮತ್ತೊಬ್ಬರ ಜೀವನ ನಮಗೆ ತಮಾಷೆಯಾಗಿ ಕಂಡಿರಬಹುದು. ಯಾವುದಕ್ಕೂ ಈ ಕಿರುಚಿತ್ರ ನೋಡಿ. ಕೊಳೆ ತೊಳೆದುಕೊಳ್ಳಿ!

ಚಿತ್ರದ ಬಗ್ಗೆ ನಾಗೇಶ್ ಹೆಬ್ಬೂರ್ ಹೀಗೆ ಹೇಳುತ್ತಾರೆ..
ಚಲನಚಿತ್ರ ಮಾಡಬೇಕು ಎಂಬ ಹಸಿವಲ್ಲಿದ್ದವನಿಗೆ, ಕಿರುಚಿತ್ರದ ಮೂಲಕ ಸಾಮರ್ಥ್ಯ ಪ್ರದರ್ಶಿಸುವ ಅನಿವಾರ್ಯ ಉಂಟಾಯಿತು. ಕಥೆ, ಚಿತ್ರಕಥೆ ಸಹಿತ, ನಿರ್ದೇಶನದ ಪ್ರತೀ ಸೂಕ್ಷ್ಮಗಳನ್ನು ಕಟ್ಟಿ ಉತ್ತಮ ದೃಶ್ಯ ರೂಪಕವನ್ನು ಕೊಡಬೇಕು ಎನಿಸಿತು. ಆ ಪ್ರೀತಿ, ಉತ್ಸಾಹ, ಹಂಬಲ ಮತ್ತು ತಂಡದ ಪ್ರಯತ್ನವೇ ಈ ಚಿತ್ರ ಎನ್ನುತ್ತಾರೆ ನಾಗೇಶ್ ಹೆಬ್ಬೂರ್.

ಚಿತ್ರದ ಕಟ್ಟುವಿಕೆಯಲ್ಲಿ ತೋರಿದ ಕಾಳಜಿ, ಪ್ರತೀ ಹಂತದಲ್ಲಿ ಮಾಡಿದ ಹೋಮ್ ವರ್ಕ್, ಸೂಕ್ಷ್ಮವಾಗಿ ಬಿಡಿಸಿ ಬಿಡಿಸಿ ಬಿಡಿಸಿಟ್ಟು ಕಥೆಯನ್ನು ಕಟ್ಟಿದ ರೀತಿಯನ್ನು ಬಹು ವಿಶ್ವಾಸದಿಂದ ಹೇಳಿಕೊಳ್ಳುತ್ತಾರೆ. ಅದರ ಫಲವೇ ಈ ಚಿತ್ರ. ಜನರು ಮೆಚ್ಚಿ, ಹಂಚಿ, ಹರಸಲು ಕಾರಣ ಎಂದು ಹೇಳುತ್ತಾರೆ.

ಚಿತ್ರದ ಮೊದಲ ದೃಶ್ಯವನ್ನು ಅಷ್ಟು ಎಳೆದು ತೋರಿಸಿದ್ದು ಸರಿಯೇ? ಜನರ ವಿಕೃತಿಯನ್ನು ಪಾತ್ರಗಳ ಮೂಲಕ ವಿಜೃಂಭಿಸಿದಂತೆ ಅನಿಸುವುದಿಲ್ಲವೇ? ಎಂಬ ಪ್ರಶ್ನೆಗೆ ನಿರ್ದೇಶಕರು ಸಮರ್ಥನೆ ನೀಡಿದರು. ಹೇಳಬೇಕಾದ ವಿಷಯವನ್ನು ಬಲಗೊಳಿಸಲು, ಮನಕ್ಕೆ ನಾಟುವಂತೆ ತಿಳಿಸಲು ದೃಶ್ಯವನ್ನು ಹಂತಹಂತವಾಗಿ ಕಟ್ಟಬೇಕಿತ್ತು. ಅದೇ ಕಾರಣಕ್ಕೆ ರೂಪಕಗಳನ್ನೂ ನೀಡುತ್ತಾ, ನಿಧಾನವಾಗಿ ಕಥೆಗೆ ಆರಂಭ ಕೊಡಲಾಯಿತು ಎಂದು ತಿಳಿಸಿದರು.

PUBLIC TOILET ಚಿತ್ರತಂಡ

ನಟ ಸಂಪತ್ ಮೈತ್ರೇಯ ಕಾಳಜಿ
ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಭಾಗವಹಿಸದ ನನಗೆ ಹೀಗೊಂದು ಟ್ರಾಲ್ ಆಗಿತ್ತು. ಅದರ ಹಿಂದೆ ಇಂಥದ್ದೊಂದು ನೆರಳಿತ್ತು ಎಂಬ ಬಗ್ಗೆ ಗೊತ್ತಿರಲಿಲ್ಲ. ನಾಗೇಶ್ ಹೆಬ್ಬೂರ್ ಈ ಪಾತ್ರ ಮಾಡಬೇಕು ಎಂದಾಗ ಒಂದು ಭಯವೂ ನನ್ನೊಳಗೆ ಸುಳಿಯಿತು. ಮೊದಲೇ ಟ್ರಾಲ್ ಆಗಿ ಸಮಸ್ಯೆಗೊಳಗಾಗಿದ್ದ ಆಕೆಯ ಕಥೆಯನ್ನು ಚಿತ್ರೀಕರಿಸಿದರೆ ಮತ್ತೆ ಅವಳಿಗೆ ಸಮಸ್ಯೆ ಆಗದೇ ಎಂಬ ಪ್ರಶ್ನೆ ಮೂಡಿತು. ಆ ರೀತಿ ಯಾವುದೇ ತಪ್ಪು ನಮ್ಮಿಂದಾಗದಂತೆ, ಬದಲಾಗಿ ಸಮಾಜಕ್ಕೆ ಉತ್ತಮ ಸಂದೇಶ ಕೊಡುವಂತೆ ಚಿತ್ರ ತಯಾರಾಗುವ ಬಗ್ಗೆ ನಾಗೇಶ್ ಹೆಬ್ಬೂರ್ ವಿಶ್ವಾಸ ನೀಡಿದರು. ಅದರಂತೆ ನಾನು ಕೂಡ ಕಿರುಚಿತ್ರದ ಭಾಗವಾದೆ. ಸಾಮಾಜಿಕ ಸಮಸ್ಯೆಯ ವಿರುದ್ಧ, ಬಡವರ ಪರವಾದ ಪಾತ್ರಗಳನ್ನು ನಿರ್ವಹಿಸುವ ಅವಕಾಶ ಒದಗಿದಾಗ ಎಂದೂ ಹಿಂಜರಿಯುವುದಿಲ್ಲ ಎಂದು ನಟ ಸಂಪತ್ ಮೈತ್ರೇಯ ತಿಳಿಸುತ್ತಾರೆ.

ಚಿತ್ರ ನೋಡಿದ ಬಹುತೇಕ ಎಲ್ಲರೂ, ಈ ಟ್ರೋಲ್ ಅಥವಾ ಮೀಮ್​ನ್ನು ನಾನೂ ಹಂಚಿ ನಕ್ಕಿದ್ದೆ ಎಂದು ಬೇಸರ ವ್ಯಕ್ತಪಡಿಸಿರುವ ಬಗ್ಗೆ ಸಂಪತ್ ಹೇಳುತ್ತಾರೆ. ಆ ನಿಟ್ಟಿನಲ್ಲಿ ಕಿರುಚಿತ್ರ ನೋಡುಗರ ಮನವನ್ನು ಒಳ್ಳೆಯ ರೀತಿಯಲ್ಲಿ ಆವರಿಸಿದೆ ಎಂಬ ನಂಬಿಕೆ ಇಡೀ ಚಿತ್ರತಂಡಕ್ಕಿದೆ.

ಶೂಟಿಂಗ್ ವೇಳೆ PUBLIC TOILET ನಿರ್ದೇಶಕ ನಾಗೇಶ್ ಹೆಬ್ಬೂರ್ ಮತ್ತು ನಟರು

ನಟಿ ಶ್ವೇತಾ ಶ್ರೀನಿವಾಸ್ ಮಾತಾಡುತ್ತಾರೆ..
ಕಿರುಚಿತ್ರದ ಕಥಾವಸ್ತುವಿನ ಬಗ್ಗೆ ನಿರ್ದೇಶಕರು ತಿಳಿಸಿದಾಗ, ಪಾತ್ರ ಮಾಡಬೇಕೋ ಬೇಡವೋ ಎಂಬ ಬಗ್ಗೆ ಗೊಂದಲ ಉಂಟಾಯಿತು. ಟ್ರೋಲ್ಗೆ ಒಳಗಾದ ಮಹಿಳೆ ಇದೇ ಕಾಲದವಳು. ಆಕೆ ಇನ್ನೂ ಇದ್ದಾಳೆ. ಹಾಗಿರುವಾಗ, ಹೇಳಬೇಕಾದ ವಿಚಾರವನ್ನು ಜನರಿಗೆ ಸರಿಯಾದ ವಿಧಾನದಲ್ಲಿ ತಲುಪಿಸುವುದು ಒಂದು ಸವಾಲಾಗಿತ್ತು. ಧನಾತ್ಮಕವಾಗಿ ಜನರನ್ನು ತಲುಪಬೇಕಾದ ದೊಡ್ಡ ಜವಾಬ್ದಾರಿಯೂ ನಮ್ಮ ಮೇಲಿತ್ತು. ಚಿತ್ರಕಥೆಯನ್ನು ಓದಿ, ನಿರ್ದೇಶಕರು ಚಿತ್ರದ ಬಗ್ಗೆ ಭರವಸೆ ನೀಡಿದ ಬಳಿಕ ಪಾತ್ರ ನಿರ್ವಹಿಸಲು ಒಪ್ಪಿಕೊಂಡೆ ಎಂದು ನಟಿ ಶ್ವೇತಾ ಶ್ರೀನಿವಾಸ್ ಹೇಳಿದರು.

ಮಿಗಿಲಾಗಿ ನಿರ್ದೇಶಕ ನಾಗೇಶ್ ಹೆಬ್ಬೂರ್ ಹಾಗೂ ನಟ ಸಂಪತ್ ಮೈತ್ರೇಯ ನನ್ನ ಹಲವು ವರ್ಷಗಳ ಗೆಳೆಯರು. ಅವರೊಂದಿಗೆ ತಂಡದಲ್ಲಿ ಕೆಲಸ ಮಾಡುವುದು ಉತ್ಸಾಹ ಮೂಡಿಸಿತು ಎಂದು ತಿಳಿಸಿದರು. ಚಿತ್ರದಲ್ಲಿ ಕೆಳಮಧ್ಯಮ ವರ್ಗದ ಗೃಹಿಣಿ ಪಾತ್ರದಲ್ಲಿ ನಾನು ನಟಿಸಿದ್ದೆ. ಕಥೆ ಹಾಗೂ ಕಿರುಚಿತ್ರ ನೈಜತೆಯಿಂದ ಕೂಡಿರಬೇಕಾಗಿತ್ತು. ಹಾಗಾಗಿ, ಬಹುತೇಕ ಎಲ್ಲಾ ಪಾತ್ರಗಳನ್ನೂ ಮೇಕಪ್ ಇಲ್ಲದೆ ನಿರ್ವಹಿಸಲಾಗಿದೆ. ನನ್ನ ಪಾತ್ರಕ್ಕೂ ಮೇಕಪ್ ಮಾಡಿಕೊಂಡಿಲ್ಲ. ಮೇಕಪ್ ಇಲ್ಲದೆ ಒಂದು ಪಾತ್ರವನ್ನು ತೆರೆ ಮೇಲೆ ತಂದ ಅಭಿಷೇಕ್ ಕಾಸರಗೋಡು ಕ್ಯಾಮರಾ ಕೈಚಳಕಕ್ಕೆ ನಾವು ಧನ್ಯವಾದ ಹೇಳಲೇಬೇಕು ಎಂದು ಚಿತ್ರೀಕರಣ ನಡೆಸಿದ ದಿನಗಳನ್ನು ನೆನಪಿಸಿಕೊಂಡರು.

ಇದನ್ನೂ ಓದಿ: ಸ್ಯಾಂಡಲ್ ವುಡ್ ನಿಂದ ಬಾಲಿವುಡ್ ವರೆಗೂ ರಶ್ಮಿಕಾ ಹವಾ.. ಬಿಟೌನ್ ನಲ್ಲೂ ಕ್ರೇಜ್ ಹುಟ್ಟಿಸಿದ ಕನ್ನಡತಿ