ಅವನೇನು ದೊಡ್ಡ ಪುಡಾಂಗಾ?!; ತಲೆಗೆ ಹುಳಬಿಟ್ಟ ಡಿ ಬಾಸ್..!, ಏನಿದು ಪುಡಾಂಗ್?
Pudang meaning: ಅತ್ತ ತೆಲುಗಿನಲ್ಲಿ ಪುಡಿಂಗಿ ಎಂಬ ಟೈಟಲ್ನಲ್ಲಿ ಸಿನಿಮಾ ಕೂಡ ಬಂದಿದೆ. ಹೀಗಾಗಿ ಮುಂದೊಂದು ದಿನ ಕನ್ನಡದಲ್ಲಿ ಪುಡಾಂಗ್ ಟೈಟಲ್ ರಿಜಿಸ್ಟರ್ ಆದರೂ ಅಚ್ಚರಿಪಡಬೇಕಿಲ್ಲ.
ರಗಡ್ ಡೈಲಾಗ್ಗಳಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿಕ್ಕಾಪಟ್ಟೆ ಫೇಮಸ್…ಅಭಿಮಾನಿಗಳಿಗೆ ಡಿ ಬಾಸ್ ಉದುರಿಸಿದ್ದೇ ಅಣಿಮುತ್ತು…ಅದು ಸಿನಿಮಾದಲ್ಲಾಗರಲಿ ಅಥವಾ ಇನ್ನಿತರೆ ಹೇಳಿಕೆಗಳಾಗಿರಲಿ…ಇದೀಗ ಅಭಿಮಾನಿಗಳ ದಾಸ ಹೇಳಿದ ಡೈಲಾಗ್ವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಹೀಗೆ ವೈರಲ್ ಆಗಲು ಮುಖ್ಯ ಕಾರಣ ಆ ಪದದ ಅರ್ಥವೇನು ಎಂಬುದು ಅನೇಕರಿಗೆ ಗೊತ್ತಿಲ್ಲದಿರುವುದು.
ಹೌದು, ಉಮಾಪತಿ-ಇಂದ್ರಜಿತ್-ದರ್ಶನ್ ಗಲಾಟೆಯಲ್ಲಿ ಅನವಶ್ಯಕವಾಗಿ ಕೇಳಿ ಬಂದಿದ್ದು ನಿರ್ದೇಶಕ ಜೋಗಿ ಪ್ರೇಮ್ ಹೆಸರು. ಅರುಣಾ ಕಮಾರಿ ಮೋಸದ ವಿಚಾರದಿಂದ ಆರಂಭವಾದ ಪ್ರಕರಣ ಬಳಿಕ ರಾಬರ್ಟ್ ನಿರ್ಮಾಪಕ ಉಮಾಪತಿ ಸುತ್ತ ಸುತ್ತಲಾರಂಭಿಸಿತ್ತು. ಈ ವೇಳೆ ನಿರ್ದೇಶಕ ಇಂದ್ರಜಿತ್ ಎಂಟ್ರಿ ಕೊಟ್ಟು ದರ್ಶನ್ ಮೇಲೆ ಹಲ್ಲೆಯ ಆರೋಪ ಹೊರಿಸಿದ್ದರು. ಇದರ ಬೆನ್ನಲ್ಲೇ ಉಮಾಪತಿ ಪುನೀತ್ ರಾಜ್ಕುಮಾರ್ ಮತ್ತು ರಾಘವೇಂದ್ರ ರಾಜ್ಕುಮಾರ್ ಆಸ್ತಿ ವಿಚಾರ ಪ್ರಸ್ತಾಪಿಸಿ, ಅದನ್ನು ಕೊಂಡೊಕೊಳ್ಳಲು ದರ್ಶನ್ ಬಯಸಿದ್ದರು ಎಂದಿದ್ದರು. ಅಲ್ಲಿಯತನಕ ಒಂದೇ ರೂಟ್ನಲ್ಲಿ ಹೋಗುತ್ತಿದ್ದ ಪ್ರಕರಣಕ್ಕೆ ಮತ್ತಷ್ಟು ರೆಕ್ಕೆ ಪುಕ್ಕೆಗಳು ಹುಟ್ಟಿಕೊಂಡವು. ಇತ್ತ ಯಾವಾಗ ದೊಡ್ಮನೆ ವಿಚಾರ ಪ್ರಸ್ತಾಪವಾಯ್ತೊ ಡಿ ಬಾಸ್ ಕೂಡ ರೊಚ್ಚಿಗೆದ್ದರು. ಅಲ್ಲದೆ ಈ ಬಗ್ಗೆ ಸ್ಪಷ್ಟನೆಯನ್ನು ನೀಡಿದರು. ಆದರೆ ಈ ವೇಳೆ ನಿರ್ದೇಶಕ ಪ್ರೇಮ್ ಹೆಸರು ಕೂಡ ಪ್ರಸ್ತಾಪವಾಯಿತು.
“ನನಗೆ ಉಮಾಪತಿಯ ಅವರನ್ನು ಪರಿಚಯ ಮಾಡಿಕೊಟ್ಟಿದ್ದು ಪ್ರೇಮ್. ಈ ಹಿಂದೆ ನಾವು ಸಿನಿಮಾ ಮಾಡುವ ಬಗ್ಗೆ ಚರ್ಚಿಸಿದ್ದೆವು. ನಾ ಅದಾಗಲೇ ಯಾವುದೇ ನಿರ್ದೇಶಕರಿಗೆ 70 ದಿನಗಳಿಗಿಂತ ಹೆಚ್ಚು ಡೇಟ್ಸ್ ಕೊಡಲ್ಲ ಎಂದು ಪ್ರೆಸ್ ಮೀಟ್ನಲ್ಲಿ ಹೇಳಿದ್ದೆ. ಆದರೆ ಪ್ರೇಮ್ ಸಿನಿಮಾಗಾಗಿ ನಾನು 100 ದಿನಗಳ ಕಾಲ ಡೇಟ್ಸ್ ಕೊಡೋದಾಗಿ ಸುದ್ದಿಯೊಂದು ಹರಿದಾಡಿತ್ತು” ಎಂದು ದರ್ಶನ್ ಹೇಳಿದ್ದರು. ಅಷ್ಟೇ ಅಲ್ಲದೆ ಪ್ರೇಮ್ಗೆ ಮಾತ್ರ 100 ದಿನಗಳ ಕಾಲ ಡೇಟ್ಸ್ ಕೊಡಲು ಅವನೇನು ದೊಡ್ಡ ಪುಡಾಂಗಾ ಎಂದು ಕೇಳಿದ್ದರು. ಡಿ ಬಾಸ್ ಅವರ ಈ ಹೇಳಿಕೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಅತ್ತ ಪುಡಾಂಗ್ ಪದದ ಅರ್ಥವೇನು ಎಂದು ಹಲವರು ತಲೆ ಕೆಡಿಸಿಕೊಂಡರು. ಅತ್ತ ಜೋಗಿ ಪ್ರೇಮ್ ಕೂಡ ದರ್ಶನ್ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಂತೆ ಪುಡಾಂಗ್ ಪದದ ಅರ್ಥಕ್ಕೆ ಹುಡುಕಾಟ ಶುರುವಾಗಿತ್ತು.
ಅಷ್ಟಕ್ಕೂ ಪುಡಾಂಗ್ ಎಂದರೆ ಅರ್ಥವೇನು ಎಂದು ನೋಡುವುದಾದರೆ…ಅದೇನು ಅಂಥ ಪುಡಾಂಗ್ ಪದವಲ್ಲ. ಹೌದು, ಪುಡಾಂಗ್ ಎಂದರೆ ಯಾವುದೇ ಕೆಟ್ಟ ಪದವೂ ಅಲ್ಲ. ಬದಲಾಗಿ ಪಕ್ಕಾ ಸ್ಲ್ಯಾಂಗ್ ವರ್ಡ್ ಅಷ್ಟೇ. ಅಂದರೆ ಸಾಮಾನ್ಯವಾಗಿ ಚಾಲ್ತಿಯಲ್ಲಿರುವ ಪಂಟರ್, ದೊಡ್ಡ ಜನ, ದೊಡ್ಡವ, ದಾದಾ ರೀತಿಯಲ್ಲೇ ಬಳಸುವ ಪದವಷ್ಟೇ. ಪಕ್ಕಾ ಲೋಕಲ್ ಭಾಷೆಯಲ್ಲಿ ಯುವಕರು ಅವ ದೊಡ್ಡ ಪುಡಾಂಗ್ (ಅವ ದೊಡ್ಡ ಜನ, ದೊಡ್ಡ ಪಂಟರ್) ಎಂದು ಬಳಸುತ್ತಾರೆ. ಇದೇ ಪದವನ್ನೇ ಡಿ ಬಾಸ್ ಉದುರಿಸಿದ್ದರು. ಈ ಪದವು ತೆಲುಗಿನ ಪುಡಿಂಗಿ, ಪುಡಂಗ ಎಂಬ ಪದದ ಮತ್ತೊಂದು ವರ್ಷನ್ ಎನ್ನಲಾಗಿದೆ. ಈ ಹಿಂದೆ ತಮಿಳಿನ ಮಚ್ಚಾ, ಮಚ್ಚಿ ಕನ್ನಡಕ್ಕೆ ಬಂದಂತೆ ಪುಡಂಗ, ಪುಡಾಂಗ್ ಎಂಬ ಪದವನ್ನು ಕೆಲವರು ಬಳಸುತ್ತಾರೆ. ಇದನ್ನೇ ದರ್ಶನ್ ಪ್ರೇಮ್ ಅವರೇನು ದೊಡ್ಡ ಜನನಾ (ಪುಡಂಗಾ) ಎಂದು ಕೇಳಿದ್ದಾರೆ. ಡಿ ಬಾಸ್ ಬಾಯಿಯಿಂದ ಹೊರಬಿದ್ದ ಕಾರಣ ಪುಡಾಂಗ್ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅತ್ತ ತೆಲುಗಿನಲ್ಲಿ ಪುಡಿಂಗಿ ಎಂಬ ಟೈಟಲ್ನಲ್ಲಿ ಸಿನಿಮಾ ಕೂಡ ಬಂದಿದೆ. ಹೀಗಾಗಿ ಮುಂದೊಂದು ದಿನ ಕನ್ನಡದಲ್ಲಿ ಪುಡಾಂಗ್ ಟೈಟಲ್ ರಿಜಿಸ್ಟರ್ ಆದರೂ ಅಚ್ಚರಿಪಡಬೇಕಿಲ್ಲ.