ಅದು 2021ರ ಅಕ್ಟೋಬರ್ 29ನೇ ತಾರೀಕು. ಶಿವರಾಜ್ಕುಮಾರ್ ನಟನೆಯ ‘ಭಜರಂಗಿ 2’ ಸಿನಿಮಾ ರಿಲೀಸ್ ಆಗಿತ್ತು. ಎ. ಹರ್ಷ ನಿರ್ದೇಶನ ಮಾಡಿದ್ದ ಈ ಸಿನಿಮಾ ಬಗ್ಗೆ ಸಖತ್ ನಿರೀಕ್ಷೆ ಇತ್ತು. ಚಿತ್ರಕ್ಕೆ ಗೆಲುವು ಸಿಗಲಿ ಎಂದು ಎಲ್ಲರೂ ಹಾರೈಸಿದರು. ಪುನೀತ್ ರಾಜ್ಕುಮಾರ್ ಕೂಡ ಟ್ವೀಟ್ ಮಾಡುವ ಮೂಲಕ ಚಿತ್ರಕ್ಕೆ ಆಲ್ ದಿ ಬೆಸ್ಟ್ ಹೇಳಿದರು. ಇದೇ ಅವರ ಕೊನೆಯ ಟ್ವೀಟ್ ಆಗುತ್ತದೆ ಎಂದು ಯಾರೆಂದರೆ ಯಾರೂ ಊಹಿಸಿರಲಿಲ್ಲ. ಟ್ವೀಟ್ ಮಾಡಿದ ಕೆಲವೇ ಗಂಟೆಗಳಲ್ಲಿ ನಡೆದಿದ್ದು ಮಾತ್ರ ದುರಂತ. ಅವರಿಗೆ ಹೃದಯಾಘಾತ ಆಯಿತು. ಸೂರ್ಯ ನೆತ್ತಿಯ ಮೇಲೆ ಬರುವ ಮೊದಲೇ ಪುನೀತ್ ರಾಜ್ಕುಮಾರ್ (Puneeth Rajkumar) ಇನ್ನಿಲ್ಲ ಎನ್ನುವ ಸುದ್ದಿ ಎಲ್ಲ ಕಡೆಗಳಲ್ಲೂ ಹರಿದಾಡಿತು. ಇದು ಅಪ್ಪು ಅಭಿಮಾನಿಗಳನ್ನು ಆತಂಕಕ್ಕೆ ಈಡು ಮಾಡಿತು. ಇದು ಸುಳ್ಳಾಗಲಿ ಎಂದು ಫ್ಯಾನ್ಸ್ ಕೊರಿಕೊಂಡರು. ಆದರೆ, ಈ ಸುದ್ದಿ ನಿಜವಾಯಿತು. ಪುನೀತ್ ಕೊನೆಯುಸಿರು ಎಳೆದರು. ಅವರಿಲ್ಲದೆ ಎರಡು ವರ್ಷ ಕಳೆದಿದೆ.
ಅಕ್ಟೋಬರ್ 28ನೇ ತಾರಿಕು ಗುರುಕಿರಣ್ ಅವರ ಜನ್ಮದಿನ. ಈ ಪಾರ್ಟಿಗೆ ಪುನೀತ್ ಕೂಡ ಹಾಜರಿ ಹಾಕಿದ್ದರು. ನಂತರ ಅವರು ಮರಳಿ ಮನೆ ಸೇರಿದರು. ಮುಂಜಾನೆ ಅವರು ವರ್ಕೌಟ್ ಮಾಡಿದರು ಎಂದು ಕೆಲವರು ಹೇಳುತ್ತಾರೆ. ಇನ್ನೂ ಕೆಲವರು ಅವರು ವರ್ಕೌಟ್ ಮಾಡಿಲ್ಲ ಎನ್ನುತ್ತಾರೆ. ಆದರೆ, ಆ ಬಗ್ಗೆ ಯಾರೂ ಸ್ಪಷ್ಟ ಮಾಹಿತಿ ನೀಡಿಲ್ಲ. ಬೆಳಗ್ಗೆಯೇ ಪುನೀತ್ ಅವರಿಗೆ ಹೃದಯಾಘಾತ ಸಂಭವಿಸಿತು. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಯಾವುದೇ ಪ್ರಯೋಜನ ಆಗಿಲ್ಲ. ಈ ಕಹಿ ಘಟನೆ ನಡೆದು ಎರಡು ವರ್ಷ ಕಳೆದಿದೆ. ಪುನೀತ್ ಅಭಿಮಾನಿಗಳಿಗೆ ಕುಟುಂಬದವರಿಗೆ ಈ ನೋವು ಎಂದಿಗೂ ಮರೆಯಾಗುವಂಥದ್ದಲ್ಲ.
ಪುನೀತ್ ರಾಜ್ಕುಮಾರ್ ಅವರನ್ನು ಸ್ಮರಿಸಿಕೊಳ್ಳುವ ಕೆಲಸ ಆಗುತ್ತಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗಿದೆ. ಬಿಳಿ ಬಣ್ಣದ ಮಾರ್ಬಲ್ ಬಳಕೆ ಮಾಡಿ ಈ ಸ್ಮಾರಕ ಸಿದ್ಧಗೊಂಡಿದೆ. ಇದರ ಫೋಟೋ ಹಾಗೂ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ: ಪ್ರತಿವರ್ಷ ಹುಟ್ಟುಹಬ್ಬಕ್ಕೆ ಪುನೀತ್ ರಾಜ್ಕುಮಾರ್ ಕೊಡುತ್ತಿದ್ದ ಉಡುಗೊರೆಗಳೇನು? ನೆನಪಿಸಿಕೊಂಡ ರಾಘಣ್ಣ
ಪುನೀತ್ ರಾಜ್ಕುಮಾರ್ ಸ್ಮಾರಕಕ್ಕೆ ಅಶ್ವಿನಿ, ರಾಘವೇಂದ್ರ ರಾಜ್ಕುಮಾರ್ ಸೇರಿದಂತೆ ರಾಜ್ಕುಮಾರ್ ಕುಟುಂಬದ ಎಲ್ಲರೂ ಆಗಮಿಸಿ ಪೂಜೆ ಸಲ್ಲಿಕೆ ಮಾಡಲಿದ್ದಾರೆ. ಅಭಿಮಾನಿಗಳು ಕೂಡ ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದೆ. ಹಲವು ಸಾಮಾಜಿಕ ಕೆಲಸಗಳನ್ನು ಮಾಡಲಾಗುತ್ತಿದೆ. ಪುನೀತ್ ಹೆಸರಲ್ಲಿ ರಕ್ತದಾನ ಹಾಗೂ ಅನ್ನದಾನ ಕಾರ್ಯಕ್ರಮಗಳು ನಡೆಯಲಿವೆ. ಪುನೀತ್ ನಿರ್ಮಾಣದ ‘ಗಂಧದಗುಡಿ’ ಸಾಕ್ಷ್ಯಚಿತ್ರ ಇಂದು ಸಂಜೆ 5 ಗಂಟೆಗೆ ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ