Puneeth Rajkumar: ನವೆಂಬರ್​ 1ಕ್ಕಾಗಿ ಕಾದಿದ್ದ ಪುನೀತ್; ಮಹತ್ವದ ದಿನ ಬರೋದಕ್ಕೂ ಮುನ್ನವೇ ವಿಧಿವಶ: ಸಿಎಂ ಹೇಳಿದ್ದೇನು?

| Updated By: ಮದನ್​ ಕುಮಾರ್​

Updated on: Oct 29, 2021 | 4:26 PM

Puneeth Rajkumar Death: ‘ಪುನೀತ್ ರಾಜ್​ಕುಮಾರ್​​ ನಿಧನದಿಂದ ಕಲಾರಂಗಕ್ಕೆ ಬಹಳ ದೊಡ್ಡ ನಷ್ಟ ಆಗಿದೆ. ಚಿತ್ರರಂಗದಲ್ಲಿ ನಾಯಕತ್ವ ಗುಣ ಇರುವ ಒಬ್ಬ ನಟನನ್ನು ನಾವಿಂದು ಕಳೆದುಕೊಂಡಿದ್ದೇವೆ’ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Puneeth Rajkumar: ನವೆಂಬರ್​ 1ಕ್ಕಾಗಿ ಕಾದಿದ್ದ ಪುನೀತ್; ಮಹತ್ವದ ದಿನ ಬರೋದಕ್ಕೂ ಮುನ್ನವೇ ವಿಧಿವಶ: ಸಿಎಂ ಹೇಳಿದ್ದೇನು?
ಪುನೀತ್​ ರಾಜ್​ಕುಮಾರ್​, ಬಸವರಾಜ ಬೊಮ್ಮಾಯಿ
Follow us on

ಪುನೀತ್​ ರಾಜ್​ಕುಮಾರ್​ ಅವರ ನಿಧನದಿಂದ ಇಡೀ ರಾಜ್ಯವೇ ಶೋಕದಲ್ಲಿ ಮುಳುಗಿದೆ. ಹೃದಯಾಘಾತದಿಂದ ಅಪ್ಪು ಮೃತರಾಗಿದ್ದಾರೆ. ಕಂಠೀರವ ಸ್ಟೇಡಿಯಂನಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು. ಪುನೀತ್​ ರಾಜ್​ಕುಮಾರ್​ ಅವರನ್ನು ದಾಖಲು ಮಾಡಿದ್ದ ವಿಕ್ರಂ ಆಸ್ಪತ್ರೆಗೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿದ್ದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ್ದ ಅವರು ಪುನೀತ್​ ಜೊತೆಗಿನ ತಮ್ಮ ಒಡನಾಟವನ್ನು ಮೆಲುಕು ಹಾಕಿದರು. ಗುರುವಾರವಷ್ಟೇ (ಅ.28) ಪುನೀತ್​ ಮತ್ತು ಬಸವರಾಜ ಬೊಮ್ಮಾಯಿ ಅವರು ದೂರವಾಣಿ ಮೂಲಕ ಮಾತನಾಡಿದ್ದರು.

‘ನನಗೆ ನಿನ್ನೆ ಫೋನ್​ ಮಾಡಿ ಪುನೀತ್​ ರಾಜ್​ಕುಮಾರ್​ ಮಾತನಾಡಿದ್ದರು. ಅವರನ್ನು ಭೇಟಿ ಮಾಡಲು ಇವತ್ತು ಸಮಯ ನಿಗದಿ ಆಗಿತ್ತು. ನವೆಂಬರ್​ 1ರಂದು ಅವರ ವೆಬ್​ಸೈಟ್​ ಉದ್ಘಾಟನೆ ಮಾಡಬೇಕು ಎಂದು ಆಹ್ವಾನ ನೀಡಲು ಬರಬೇಕಿತ್ತು. ಆದರೆ ವಿಧಿ ಅವರನ್ನು ಬೇರೆ ಕಡೆಗೆ ಕರೆದುಕೊಂಡು ಹೋಗಿದೆ. ಬಹಳ ದೊಡ್ಡ ಆಘಾತ ಆಗಿದೆ’ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

‘ಪುನೀತ್​ ನಿಧನದಿಂದ ಕಲಾರಂಗಕ್ಕೆ ಬಹಳ ದೊಡ್ಡ ನಷ್ಟ ಆಗಿದೆ. ಚಿತ್ರರಂಗದಲ್ಲಿ ನಾಯಕತ್ವ ಗುಣ ಇರುವ ಒಬ್ಬ ನಟನನ್ನು ನಾವಿಂದು ಕಳೆದುಕೊಂಡಿದ್ದೇವೆ. ಡಾ. ರಾಜ್​ಕುಮಾರ್​ ಅವರ ಸಂಸ್ಕಾರದಲ್ಲಿ ಪುನೀತ್​ ಬೆಳೆದಿದ್ದರು. ಅವರ ನಡೆ, ನುಡಿ ಎಲ್ಲವೂ ರಾಜ್​ಕುಮಾರ್​ ರೀತಿಯೇ ಅತ್ಯಂತ ವಿನಯಪೂರ್ವಕವಾಗಿತ್ತು. ಎಲ್ಲರಿಗೂ ಅವರ ವ್ಯಕ್ತಿತ್ವ ಮಾದರಿ ಆಗಿತ್ತು. ನಾನು ಎರಡು ತಿಂಗಳ ಹಿಂದೆ ಅವರು ಕರೆದು ಒಂದು ಸಭೆಗೆ ಹೋಗಿ ಎಜುಕೇಷನ್​ ಆ್ಯಪ್​ ಉದ್ಘಾಟನೆ ಮಾಡಿದ್ದೆ. ಅದಾದ ಬಳಿಕವೂ ಭೇಟಿ ಆಗಿದ್ದೆ. ಅವರು ಕುಟುಂಬದ ಜೊತೆ ನನಗೆ ಬಹಳ ವರ್ಷದಿಂದಲೂ ಒಡನಾಟ ಇದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಪ್ರಸ್ತುತ ಹಲವು ಸಿನಿಮಾ ಕೆಲಸಗಳಲ್ಲಿ ಅಪ್ಪು ತೊಡಗಿಕೊಂಡಿದ್ದರು. ಪವನ್​ ಕುಮಾರ್​ ನಿರ್ದೇಶನದ ‘ದ್ವಿತ್ವ’, ಚೇತನ್​ಕುಮಾರ್​ ನಿರ್ದೇಶನದ ‘ಜೇಮ್ಸ್​’ ಮುಂತಾದ ಸಿನಿಮಾಗಳು ಅವರ ಕೈಯಲ್ಲಿದ್ದವು. ಆದರೆ ಎಲ್ಲವನ್ನೂ ಬಿಟ್ಟು ಪುನೀತ್ ಇಹಲೋಕ ತ್ಯಜಿಸಿದ್ದಾರೆ. ಶಿವರಾಜ್​ಕುಮಾರ್​ಗೆ ನಿರ್ದೇಶನ ಮಾಡಬೇಕು ಎಂದು ಕೂಡ ಪುನೀತ್​ ಆಸೆ ಇಟ್ಟುಕೊಂಡಿದ್ದರು. ಆದರೆ ಅದು ಕೂಡ ನೆರವೇರಲೇ ಇಲ್ಲ.

ಇದನ್ನೂ ಓದಿ:

Puneeth Rajkumar: ಶಿವಣ್ಣನ ಎದುರು ಪುನೀತ್​ ಹೇಳಿಕೊಂಡಿದ್ದ ಆಸೆ ಈಡೇರಲೇ ಇಲ್ಲ; ಅಭಿಮಾನಿಗಳ ಹೃದಯ ನುಚ್ಚುನೂರು

Puneeth Rajkumar Obituary: ಹೃದಯ ಬಡಿತ ನಿಲ್ಲಿಸುವುದಕ್ಕೂ ಮುನ್ನ ಕೋಟ್ಯಂತರ ಜನರ ಹೃದಯ ಗೆದ್ದಿದ್ದ ಪುನೀತ್

Published On - 4:23 pm, Fri, 29 October 21