ದೊಡ್ಡವರಿಗಷ್ಟೇ ಅಲ್ಲ ಮಕ್ಕಳಿಗೂ ಅಪ್ಪು ಅಚ್ಚುಮೆಚ್ಚು: ಪುನೀತ್ ರಾಜ್​ಕುಮಾರ್ ಬಾಲ ನಟನಾಗಿ ಅಭಿನಯಿಸಿದ್ದ 10 ಚಿತ್ರಗಳಿವು

‘ಪ್ರಹ್ಲಾದ ಅಂದ್ರೆ ನೀನೇ ಕಣ್ಣೆದುರು ಬರ್ತೀ ಕಣಪ್ಪ’ ಎಂದು ಎಷ್ಟೋ ತಾಯಂದಿರು ಪುನೀತ್​ ರಾಜ್​ಕುಮಾರ್​ಗೆ ನಿನ್ನೆಮೊನ್ನೆಯವರೆಗೂ ಮುದ್ದಿನಿಂದ ಹೇಳುತ್ತಿದ್ದರು. ಅಷ್ಟರಮಟ್ಟಿಗೆ ಕನ್ನಡದ ಪೌರಾಣಿಕ ಚಿತ್ರ ಪರಂಪರೆಯಲ್ಲಿ ಪುನೀತ್​ರ ಪ್ರಹ್ಲಾದನ ಪಾತ್ರ ಅಚ್ಚೊತ್ತಿದೆ.

ದೊಡ್ಡವರಿಗಷ್ಟೇ ಅಲ್ಲ ಮಕ್ಕಳಿಗೂ ಅಪ್ಪು ಅಚ್ಚುಮೆಚ್ಚು: ಪುನೀತ್ ರಾಜ್​ಕುಮಾರ್ ಬಾಲ ನಟನಾಗಿ ಅಭಿನಯಿಸಿದ್ದ 10 ಚಿತ್ರಗಳಿವು
ಭಾಗ್ಯವಂತ ಸಿನಿಮಾದಲ್ಲಿ ಪುನೀತ್ ರಾಜ್​ಕುಮಾರ್
Follow us
Ghanashyam D M | ಡಿ.ಎಂ.ಘನಶ್ಯಾಮ
| Updated By: Digi Tech Desk

Updated on:Oct 29, 2021 | 5:25 PM

‘ದೊಡ್ಡವರನ್ನು ಬೇಕಾದರೆ ಸುಲಭವಾಗಿ ಮೆಚ್ಚಿಸಬಹುದು. ಆದರೆ ಮಕ್ಕಳನ್ನು ಒಪ್ಪಿಸುವುದು ಕಷ್ಟ’ ಎಂಬ ಮಾತಿದೆ. ಕನ್ನಡ ಚಿತ್ರರಂಗದಲ್ಲಿ ಈ ಸವಾಲು ನಿರ್ವಹಿಸಿ ಸೈ ಎನಿಸಿಕೊಂಡ ಕೆಲವೇ ಕೆಲ ನಟರಲ್ಲಿ ಮುಖ್ಯರಾದವರು ಪುನೀತ್ ರಾಜ್​ಕುಮಾರ್. ಆರಂಭದ ಚಿತ್ರಗಳಲ್ಲಿ ಪುನೀತ್ ರಾಜ್​ಕುಮಾರ್ ಹೆಸರನ್ನು ಮಾಸ್ಟರ್​ ಲೋಹಿತ್ ಎಂದು ತೋರಿಸುತ್ತಿದ್ದರು.

ಅಪ್ಪು ಎಂದು ಕನ್ನಡ ಸಿನಿಮಾ ಪ್ರೇಮಿಗಳು ಪ್ರೀತಿಯಿಂದ ನೆನೆಯುವ ಪುನೀತ್ ರಾಜ್​ಕುಮಾರ್ ಎಂದರೆ ಮಕ್ಕಳಿಗೆ ಅಚ್ಚುಮೆಚ್ಚು. ಗುಲಾಬ್ ಜಾಮೂನ್ ಜಾಹೀರಾತಿನಲ್ಲಿ ಪುನೀತ್ ರಾಜ್​ಕುಮಾರ್​ ಬಂದರೆ ಸಾಕು ಗಲಾಟೆ ಮಾಡುತ್ತಿದ್ದ ಮಕ್ಕಳು, ಬಾಯ್ಬಿಟ್ಟುಕೊಂಡು ಪುನೀತ್​ರನ್ನು ನೋಡುತ್ತಾ ನಿಂತುಬಿಡುತ್ತಿದ್ದವು. ಪುನೀತ್ ಅಭಿನಯದ ‘ನೀನೇ ರಾಜಕುಮಾರ’ ಹಾಡು ಮಕ್ಕಳ ಮೆಚ್ಚಿನ ಗೀತೆಗಳಲ್ಲಿ ಒಂದು. ಶಾಲೆ ವಾರ್ಷಿಕೋತ್ಸವ ಸಮಾರಂಭಗಳಲ್ಲಿ ಸಾಕಷ್ಟು ಮಕ್ಕಳು ಈ ಹಾಡು ಹಾಡುತ್ತಿದ್ದವು.

ಪ್ರೇಮದ ಕಾಣಿಕೆ (1976) ಪುನೀತ್ ಅಭಿನಯದ ಮೊದಲ ಚಿತ್ರ. ಆದರೆ ಪುನೀತ್ ಹೆಸರು ಮನೆಮಾತಾಗುವಂತೆ ಮಾಡಿದ್ದು, ಬಾಲನಟನಾಗಿ ಪುನೀತ್ ಭರವಸೆ ಹುಟ್ಟಿಸಿದ ಚಿತ್ರ ಭಾಗ್ಯವಂತ (1981). ಅಪ್ಪ-ಅಮ್ಮನನ್ನು ಕಳೆದುಕೊಂಡ ಅನಾಥ ಮಗುವಿನ ಪಾತ್ರಕ್ಕೆ ಜೀವ ತುಂಬುವ ಪುನೀತ್​ ಎಲ್ಲರಿಂದಲೂ ನತದೃಷ್ಟ ಎನಿಸಿಕೊಳ್ಳುತ್ತಾರೆ. ಆದರೆ ರೈಲೊಂದನ್ನು ಅಪಾಯದಿಂದ ಪಾರು ಮಾಡಿ ಅದರ ಚಾಲಕನಿಂದ (ತೂಗುದೀಪ್ ಶ್ರೀನಿವಾಸ್) ಭಾಗ್ಯವಂತ ಎಂದು ಹೊಗಳಿಸಿಕೊಳ್ಳುತ್ತಾರೆ. ಇಂದಿಗೂ ಜನಪ್ರಿಯವಾಗಿರುವ ‘ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ’, ‘ಗುರುವಾರ ಬಂತಮ್ಮ’ ಹಾಡುಗಳು ಇದೇ ಚಿತ್ರದ್ದು.

ಪುನೀತ್​ ರಾಜ್​ಕುಮಾರ್​ ನಿಧನ; ಕ್ಷಣಕ್ಷಣದ ಮಾಹಿತಿಗೆ ಇಲ್ಲಿ ಕ್ಲಿಕ್​ ಮಾಡಿ

Puneeth-Rajkumar

ಪ್ರೇಮದ ಕಾಣಿಕೆ ಮತ್ತು ಬೆಟ್ಟದ ಹೂವು ಚಿತ್ರದಲ್ಲಿ ಪುನೀತ್ ರಾಜ್​ಕುಮಾರ್

ಸಿರಿತನ ಮತ್ತು ಬಡತನದ ಪರಿಕಲ್ಪನೆಗಳನ್ನು ಮಕ್ಕಳ ಕಣ್ಣಲ್ಲಿ ಪರಿಶೀಲಿಸುವ ಅಪರೂಪದ ಸಿನಿಮಾ ‘ಎರಡು ನಕ್ಷತ್ರಗಳು’. ಪುನೀತ್ ದ್ವಿಪಾತ್ರದಲ್ಲಿ ಅಭಿನಯಿಸಿದ ಮೊದಲು ಸಿನಿಮಾ ಇದು. ಮಹಾರಾಜನ ಮಗ ಮತ್ತು ಬಡ ಕುಡುಕನ ಮಗನ ವಯಸ್ಸು ಒಂದೇ. ಅವರ ಉಡುಪು ಅದಲುಬದಲಾಗಿ ಎರಡೂ ಪಾತ್ರಗಳು ಅನುಭವಿಸುವ ಕಷ್ಟಪರಂಪರೆಗಳನ್ನು ಒಂದೊಂದಾಗಿ ತೆರೆದಿಡುತ್ತಾ ಸಾಗುವ ಸಿನಿಮಾ ಇದು. ಈ ಚಿತ್ರದ ‘ನನ್ನ ಉಡುಪು ನನ್ನದು, ನಿನ್ನ ಉಡುಪು ನಿನ್ನದು’ ಹಾಡನ್ನು ಇಂದಿಗೂ ಮಕ್ಕಳು ಖುಷಿಯಾಗಿ ಹಾಡಿಕೊಳ್ಳುತ್ತವೆ. ಈ ಚಿತ್ರದ ಅಭಿನಯಕ್ಕಾಗಿ ಪುನೀತ್ ಅವರಿಗೆ ಅತ್ಯುತ್ತಮ ಬಾಲನಟ ಪುರಸ್ಕಾರ ಸಂದಿತ್ತು.

ಬಡ ಹುಡುಗನ ಕಲಿಕೆಯ ಆಸಕ್ತಿ ಕಟ್ಟಿಕೊಡುವ ಅಪರೂಪದ ಚಿತ್ರ ‘ಬೆಟ್ಟದ ಹೂವು’ (1985). ‘ತಾಯಿ ಶಾರದೆ ಲೋಕ ಪೂಜಿತೆ’ ಹಾಡು ಇದೇ ಚಿತ್ರದದ್ದು. ಈ ಚಿತ್ರದ ಮನೋಜ್ಞ ಅಭಿನಯಕ್ಕಾಗಿ ಪುನೀತ್ ಅವರಿಗೆ ‘ಅತ್ಯುತ್ತಮ ಬಾಲನಟ’ ಪುರಸ್ಕಾರವೂ ಸಂದಿತ್ತು. ಈ ಚಿತ್ರದ ‘ಬಿಸಿಲೇ ಇರಲಿ, ಮಳೆಯೇ ಬರಲಿ’ ಹಾಡಿನಲ್ಲಿ ಪುನೀತ್ ಅದೆಷ್ಟು ಸಹಜವಾಗಿ ಅಭಿನಯಿಸಿದ್ದರೆಂದರೆ ‘ಪಾತ್ರದಲ್ಲಿ ಈ ಮಟ್ಟಿಗೆ ತನ್ಮಯತೆ ಸಾಧಿಸುವ ಈ ಹುಡುಗ ಮುಂದೆ ದೊಡ್ಡ ನಟನಾಗುತ್ತಾನೆ’ ಎಂದು ಹಲವು ಗಣ್ಯರು ಅಭಿಪ್ರಾಯಪಟ್ಟಿದ್ದರು.

ಇದನ್ನೂ ಓದಿ: Puneeth Rajkumar: ಪುನೀತ್​ ರಾಜ್​ಕುಮಾರ್​ ಹೃದಯಾಘಾತದಿಂದ ನಿಧನ; ಕರ್ನಾಟಕದ ಪಾಲಿಗೆ ಕರಾಳ ಶುಕ್ರವಾರ

Puneeth-Rajkumar

ಭಕ್ತ ಪ್ರಹ್ಲಾದ ಚಿತ್ರದಲ್ಲಿ ಪುನೀತ್ ರಾಜ್​ಕುಮಾರ್

ಡಾ.ರಾಜ್​ಕುಮಾರ್​ ಅಭಿನಯದ ಭಕ್ತ ಪ್ರಹ್ಲಾದ (1983) ಕನ್ನಡದ ಸೂಪರ್​ ಹಿಟ್ ಚಿತ್ರಗಳಲ್ಲಿ ಒಂದು. ಅಂದಿನ ಕಾಲಕ್ಕೆ ಅದು ಬಹುನಿರೀಕ್ಷಿತ ಚಿತ್ರವೂ ಹೌದು. ತೆಲುಗಿಗೆ ‘ನರಸಿಂಹಾವತಾರಮ್’ ಎಂದು ಡಬ್ ಆದ ಜನಪ್ರಿಯ ಚಿತ್ರವಿದು. ಈ ಚಿತ್ರದ ಪೋಸ್ಟರ್​ಗಳಲ್ಲಿ ರಾಜ್​ಕುಮಾರ್​ರ ಸಿಟ್ಟಿನ ಮುಖ ರಾರಾಜಿಸುತ್ತಿತ್ತಾದರೂ ಚಿತ್ರದ ಕೇಂದ್ರ ಬಿಂದು, ಕಥಾ ನಾಯಕ ಹೆಸರೇ ಹೇಳುವಂತೆ ಪ್ರಹ್ಲಾದ. ಈ ಚಿತ್ರದಲ್ಲಿ ಪ್ರಹ್ಲಾದನ ಪಾತ್ರಕ್ಕೆ ಜೀವ ತುಂಬಿದ್ದವರು ಪುನೀತ್ ರಾಜ್​ಕುಮಾರ್.

ಪುನೀತ್ ಕಂಠ ಮಾಧುರ್ಯದಲ್ಲಿ ಹೊರಬಂದ ‘ಗೋವಿಂದ ಗೋವಿಂದ’ ಹಾಡನ್ನು ಕನ್ನಡಿಗರು ಆಸ್ಥೆಯಿಂದ ಮೆಚ್ಚಿಕೊಂಡಿದ್ದರು. ಸಂಭಾಷಣೆಯ ಧಾಟಿಯಲ್ಲಿ ಮೂಡಿ ಬಂದ ‘ಎಲ ಎಲವೋ’ ಹಾಡಿಗೂ ರಾಜ್​ಕುಮಾರ್ ಜೊತೆಗೂಡಿ ಪುನೀತ್ ಜೀವ ತುಂಬಿದ್ದರು. ‘ಪ್ರಹ್ಲಾದ ಅಂದ್ರೆ ನೀನೇ ಕಣ್ಣೆದುರು ಬರ್ತೀ ಕಣಪ್ಪ’ ಎಂದು ಎಷ್ಟೋ ತಾಯಂದಿರು ಪುನೀತ್​ ರಾಜ್​ಕುಮಾರ್​ಗೆ ನಿನ್ನೆಮೊನ್ನೆಯವರೆಗೂ ಮುದ್ದಿನಿಂದ ಹೇಳುತ್ತಿದ್ದರು. ಅಷ್ಟರಮಟ್ಟಿಗೆ ಕನ್ನಡದ ಪೌರಾಣಿಕ ಚಿತ್ರ ಪರಂಪರೆಯಲ್ಲಿ ಪುನೀತ್​ರ ಪ್ರಹ್ಲಾದನ ಪಾತ್ರ ಅಚ್ಚೊತ್ತಿದೆ.

ಚಲಿಸುವ ಮೋಡಗಳು, ಶಿವ ಮೆಚ್ಚಿದ ಕಣ್ಣಪ್ಪ, ಪರಶುರಾಮ್, ಯಾರಿವನು ಮತ್ತು ವಸಂತಗೀತ ಸಿನಿಮಾಗಳಲ್ಲಿಯೂ ಪುನೀತ್​ ರಾಜ್​ಕುಮಾರ್ ಬಾಲನಟನಾಗಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: Puneeth Rajkumar Eye Donation: ಅಪ್ಪನ ಹಾದಿಯಲ್ಲೇ ಸಾಗಿದ ಯುವ ನಟ ಪುನೀತ್​ ರಾಜ್​ ಕುಮಾರ್​ರಿಂದ ನೇತ್ರ ದಾನ ಇದನ್ನೂ ಓದಿ: Puneeth Rajkumar: ‘ದೇವರು ಇವರೆಲ್ಲರಿಗೂ ಒಳ್ಳೆಯದು ಮಾಡಲಿ’; ಇದು ವೇದಿಕೆ ಮೇಲೆ ಪುನೀತ್​ ಕೊನೆಯ ಮಾತು

Published On - 3:36 pm, Fri, 29 October 21