ಪುನೀತ್ ರಾಜ್ಕುಮಾರ್ (Puneeth Rajkumar) ಅವರನ್ನು ಕಳೆದುಕೊಂಡು ಮೂರು ವರ್ಷ ಕಳೆಯುತ್ತಾ ಬಂದಿದೆ. ಅವರು ನಮ್ಮೊಂದಿಗೆ ಇಲ್ಲ ಎಂಬುದನ್ನು ಈಗಲೂ ಅನೇಕರ ಬಳಿ ಅರಗಿಸಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ. ಅವರನ್ನು ನಾನಾ ರೀತಿಯಲ್ಲಿ ನೆನಪಿಸಿಕೊಳ್ಳುವ ಕೆಲಸ ಆಗುತ್ತಿದೆ. ಪಾರ್ಕ್, ರಸ್ತೆಗಳಿಗೆ ಪುನೀತ್ ಅವರ ಹೆಸರನ್ನು ಇಡಲಾಗಿದೆ. ಈ ಮೂಲಕ ಅವರ ಹೆಸರನ್ನು ಅಜರಾಮರವಾಗಿಸುವ ಕೆಲಸ ಆಗಿದೆ. ಪುನೀತ್ ನಟನೆಯ ಸಿನಿಮಾಗಳು ಈಗಲೂ ಅನೇಕರ ಫೇವರಿಟ್ ಎನಿಸಿಕೊಂಡಿವೆ. ಆಗಾಗ ಪುನೀತ್ಗೆ ಸಂಬಂಧಿಸಿದ ಹಳೆಯ ವಿಡಿಯೋಗಳು ವೈರಲ್ ಆಗುತ್ತವೆ. ಈಗ ಪುನೀತ್ ಅವರ ಆಡಿಯೋ ಕ್ಲಿಪ್ ಒಂದು ವೈರಲ್ ಆಗಿದೆ.
ಹೋಟೆಲ್ ಮಾಲೀಕ ಹಾಗೂ ಬಾಣಸಿಗ ಚಂದ್ರು ಅವರು ಇತ್ತೀಚೆಗೆ ಸಖತ್ ಫೇಮಸ್ ಆಗಿದ್ದಾರೆ. ಅವರು ಹೇಳಿದ ಬೆಳ್ಳುಳ್ಳಿ ಕಬಾಬ್ ರೆಸಿಪಿ ಸಾಕಷ್ಟು ವೈರಲ್ ಆಗಿದೆ. ಇವರು ಮೊದಲು ಮೇಕಪ್ ಆರ್ಟಿಸ್ಟ್ ಆಗಿದ್ದರು. ನಂತರ ಹೋಟೆಲ್ ಉದ್ಯಮಕ್ಕೆ ಬಂದರು. ಅವರ ಹೆಸರು ಹಾಗೂ ಅವರ ರೆಸಿಪಿಗಳು ಸಾಕಷ್ಟು ವೈರಲ್ ಆಗಿವೆ. ಚಂದ್ರು ಜೊತೆ ಸಹಾಯಕನಾಗಿರುವ ರಾಹುಲ್ ಹೆಸರು ಕೂಡ ಪ್ರಚಲಿತದಲ್ಲಿದೆ. ರಾಜ್ಕುಮಾರ್ ಕುಟುಂಬದ ಜೊತೆ ಚಂದ್ರುಗೆ ಒಳ್ಳೆಯ ಬಾಂಧವ್ಯ ಇದೆ. ಇದಕ್ಕೆ ಈಗ ವೈರಲ್ ಆಗಿರೋ ವಿಡಿಯೋ ಸಾಕ್ಷಿ.
ಪುನೀತ್ ರಾಜ್ಕುಮಾರ್ ಅವರಿಗೆ ಆಹಾರದ ಬಗ್ಗೆ ವಿಶೇಷ ಪ್ರೀತಿ. ಅವರು ಒಮ್ಮೆ ಸೌದೆ ಒಲೆಯಲ್ಲಿ ಮಟನ್ ಸಾರು ಮಾಡೋದು ಹೇಗೆ ಎಂದು ಚಂದ್ರುಗೆ ಕರೆ ಮಾಡಿ ಕೇಳಿದ್ದರು. ಅವರು ಕಾಲ್ ಮಾಡಿದ್ದು ಕಾಶ್ಮೀರದಿಂದ ಎನ್ನಲಾಗಿದೆ. ಈ ಮೊದಲು ಕೂಡ ಈ ಆಡಿಯೋ ವೈರಲ್ ಆಗಿತ್ತು. ಆದರೆ, ಆಗ ಚಂದ್ರು ಯಾರು ಎಂಬುದು ಜನರಿಗೆ ಅಷ್ಟಾಗಿ ತಿಳಿದಿರಲಿಲ್ಲ. ಈಗ ಚಂದ್ರು ಕೂಡ ಫೇಮಸ್ ಆದ ಬಳಿಕ ಅವರ ಹಾಗೂ ಪುನೀತ್ ಮಧ್ಯೆ ನಡೆದ ಮಾತುಕತೆಯ ಆಡಿಯೋ ಕ್ಲಿಪ್ ವೈರಲ್ ಆಗಿದೆ.
ಇದನ್ನೂ ಓದಿ: ಚಂದ್ರು ಮಾಡಿದ ಅಡುಗೆ ಸವಿದು ಒನ್ ಮೋರ್ ಅಂತಿದ್ರು ಪುನೀತ್ ರಾಜ್ಕುಮಾರ್
‘ನನಗೆ ನಾಳೆಗೆ ರೆಸಿಪಿ ಬೇಕು. ನಾನು 10 ಕೇಜಿ ಮಟನ್ ಸಾರು ಮಾಡಬೇಕು. ಅದಕ್ಕೆ ಏನೇನು ಬೇಕು ಎಂದು ಹೇಳಿ’ ಎಂಬುದಾಗಿ ಪುನೀತ್ ರಾಜ್ಕುಮಾರ್ ಅವರು ಚಂದ್ರುಗೆ ಫೋನ್ ಮಾಡಿ ಕೇಳಿದ್ದರು. ‘ನಾನು ಬೆಳಿಗ್ಗೆ ವಿಡಿಯೋ ಮಾಡಿ ಕಳಿಸುತ್ತೇನೆ. ಅದನ್ನು ನೋಡಿದ್ರೆ ಸುಲಭವಾಗುತ್ತದೆ’ ಎಂದಿದ್ದರು ಚಂದ್ರು. ಈ ವಿಡಿಯೋ ಈ ವೈರಲ್ ಆಗುತ್ತಿದೆ. ಎಲ್ಲರೂ ಪುನೀತ್ ರಾಜ್ಕುಮಾರ್ ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ.
ಖ್ಯಾತ ನಟಿ ಮಾಲಾಶ್ರೀ ಅವರಿಗೆ ಚಂದ್ರು ಮೇಕಪ್ಮ್ಯಾನ್ ಆಗಿದ್ದರು. ಮಾಲಾಶ್ರೀ ಜೊತೆಗೆ ಬರೋಬ್ಬರಿ 72 ಸಿನಿಮಾಗಳಲ್ಲಿ ಚಂದ್ರು ಅವರ ಮೇಕಪ್ಮ್ಯಾನ್ ಆಗಿ ಕೆಲಸ ಮಾಡಿದ್ದರು ಎನ್ನಲಾಗಿದೆ. ಆ ಬಳಿಕ ಅವರು ರಸ್ತೆ ಬದಿಯಲ್ಲಿ ಹೋಟೆಲ್ ಆರಂಭ ಮಾಡಿದರು. ರಾಜ್ಕುಮಾರ್ ಅವರು ಕೂಡ ಚಂದ್ರು ಅವರ ಕೈರುಚಿ ಸವಿದು ಭೇಷ್ ಎಂದಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:21 am, Wed, 14 February 24