ಹೊಸಬರ ಪ್ರಯತ್ನಗಳಿಗೆ ನಟ ಪುನೀತ್ ರಾಜ್ಕುಮಾರ್ (Puneeth Rajkumar) ಅವರ ಸದಾ ಬೆನ್ನು ತಟ್ಟುತ್ತಾರೆ. ಟ್ರೇಲರ್, ಟೀಸರ್, ಪೋಸ್ಟರ್ ಬಿಡುಗಡೆ ಮುಂತಾದ ಕಾರ್ಯಕ್ರಮಗಳಿಗೆ ಬಂದು ಶುಭ ಹಾರೈಸುತ್ತಾರೆ. ಅದೇ ರೀತಿ ಈಗ ಅವರು ‘ಓಲ್ಡ್ ಮಾಂಕ್’ ಚಿತ್ರದ ಟ್ರೇಲರ್ (Old Monk Trailer) ಬಿಡುಗಡೆ ಕಾರ್ಯಕ್ರಮಕ್ಕೆ ಬಂದು ಶುಭಕೋರಿದ್ದಾರೆ. ಅಲ್ಲದೇ, ಈ ಟ್ರೇಲರ್ ನೋಡಿ ಮನಸಾರೆ ನಕ್ಕಿದ್ದಾರೆ. ಚಿತ್ರದ ಶೀರ್ಷಿಕೆ ‘ಓಲ್ಡ್ ಮಾಂಕ್’ ಎಂದಿದ್ದರೂ ಇದು ಅಪ್ಪಟ ಕನ್ನಡದ ಸಿನಿಮಾ. ಸದ್ಯ ಈ ಟ್ರೇಲರ್ ಮೋಡಿ ಮಾಡುತ್ತಿದೆ.
ಪುನೀತ್ ರಾಜ್ಕುಮಾರ್ ಅವರು ಗುರುವಾರ (ಆ.26) ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದರು. ಟ್ರೇಲರ್ ನೋಡಿದ ಅವರು ಮನಸಾರೆ ನಕ್ಕಿದ್ದಾರೆ. ಈ ಚಿತ್ರತಂಡದ ಕ್ರಿಯೇಟಿವಿಟಿಗೆ ಅವರು ಸಲಾಂ ಎಂದಿದ್ದಾರೆ. ಹಾಗಾದರೆ ಇದರಲ್ಲಿ ಅಂಥದ್ದೇನಿದೆ? ಟೈಟಲ್ ಕಾರ್ಡ್ನಿಂದಲೇ ಇದು ಎಲ್ಲರ ಗಮನ ಸೆಳೆದುಕೊಳ್ಳುತ್ತದೆ. ಇದರಲ್ಲಿ ಅವತಾರ್, ಕೆಜಿಎಫ್, ಆರ್ಆರ್ಆರ್, ಟೈಟಾನಿಕ್ ಸಿನಿಮಾ ಹೆಸರುಗಳ ಜೊತೆ ರಣವೀರ್ ಸಿಂಗ್, ಉಪೇಂದ್ರ, ಎ.ಆರ್. ರೆಹಮಾನ್ ಮುಂತಾದವರ ಹೆಸರುಗಳು ಕೂಡ ರಾರಾಜಿಸುತ್ತಿವೆ. ಅದು ಹೇಗೆ ಎಂಬುದನ್ನು ಟ್ರೇಲರ್ ನೋಡಿ ತಿಳಿದಾಗಲೇ ಮಜಾ.
ನಟ-ನಿರ್ದೇಶಕ ಶ್ರೀನಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುವುದರ ಜೊತೆಗೆ ನಾಯಕನಾಗಿಯೂ ನಟಿಸಿದ್ದಾರೆ. ಅವರಿಗೆ ಜೋಡಿಯಾಗಿ ಅದಿತಿ ಪ್ರಭುದೇವ ಅಭಿನಯಿಸಿದ್ದಾರೆ. ಸುಜಯ್ ಶಾಸ್ತ್ರಿ, ಎಸ್. ನಾರಾಯಣ್, ಸಿಹಿ ಕಹಿ ಚಂದ್ರು ಮುಂತಾದವರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಭರತ್ ಪರಶುರಾಮ್ ಛಾಯಾಗ್ರಹಣ, ಸೌರಭ್-ವೈಭವ್ ಸಂಗೀತ ನಿರ್ದೇಶನ, ದೀಪು ಎಸ್. ಕುಮಾರ್ ಸಂಕಲನ ಮಾಡಿದ್ದಾರೆ. ಪ್ರದೀಪ್ ಶರ್ಮಾ, ಸೃಜನ್ ಯರಬೋಲು, ಸೌರಭ್-ವೈಭವ್, ಶ್ರೀನಿ ಜೊತೆಯಾಗಿ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ಫ್ರೆಶ್ ಎನಿಸುವ ಕಾನ್ಸೆಪ್ಟ್, ಕಚಗುಳಿ ಇರುವ ಡೈಲಾಗ್ಗಳು, ಹಿರಿಯ-ಕಿರಿಯ ಕಲಾವಿದರ ಸಂಗಮ, ಚುರುಕಾದ ನಿರೂಪಣೆ ಮೂಲಕ ‘ಓಲ್ಡ್ ಮಾಂಕ್’ ಟ್ರೇಲರ್ ಎಲ್ಲರಿಗೂ ಇಷ್ಟ ಆಗುತ್ತಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಇದು ಲಕ್ಷಾಂತರ ವೀವ್ಸ್ ಪಡೆದುಕೊಂಡಿದೆ. ಈ ಹಿಂದೆ ‘ಟೋಪಿವಾಲಾ’, ‘ಬೀರ್ಬಲ್’, ‘ಶ್ರೀನಿವಾಸ ಕಲ್ಯಾಣ’ ಮುಂತಾದ ಸಿನಿಮಾಗಳ ಮೂಲಕ ಪ್ರೇಕ್ಷಕರಿಗೆ ಇಷ್ಟ ಆಗಿರುವ ಶ್ರೀನಿ ಅವರು ಈಗ ‘ಓಲ್ಡ್ ಮಾಂಕ್’ ಮೂಲಕ ಭರ್ಜರಿಯಾಗಿ ಮನರಂಜಿಸುವ ಭರವಸೆಯನ್ನು ಈ ಟ್ರೇಲರ್ ಮೂಲಕ ನೀಡಿದ್ದಾರೆ.
ಇದನ್ನೂ ಓದಿ:
ಪುನೀತ್ ನಿರ್ಮಾಣದ ‘ಮ್ಯಾನ್ ಆಫ್ ದಿ ಮ್ಯಾಚ್’ ಚಿತ್ರದಲ್ಲಿ ವಾಸುಕಿ ವೈಭವ್; ಏನಿದು ಗುಡ್ ನ್ಯೂಸ್?
ಪೋಸ್ಟರ್ ಕಾಪಿ ಎಂಬ ಆರೋಪಕ್ಕೆ ಪುನೀತ್ ನಟನೆಯ ‘ದ್ವಿತ್ವ’ ಚಿತ್ರ ತಂಡದಿಂದ ಸ್ಪಷ್ಟನೆ