AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೋಸ್ಟರ್​ ಕಾಪಿ ಎಂಬ ಆರೋಪಕ್ಕೆ ಪುನೀತ್​ ನಟನೆಯ ‘ದ್ವಿತ್ವ’ ಚಿತ್ರ ತಂಡದಿಂದ ಸ್ಪಷ್ಟನೆ

ಜು.1ರಂದು ಅನಾವರಣಗೊಂಡ ಈ ಸಿನಿಮಾದ ಶೀರ್ಷಿಕೆ ಪೋಸ್ಟರ್​  ಕಾಪಿ ಎಂದು ಹೇಳಲಾಗಿತ್ತು. ಇದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ನಡೆಯುತ್ತಿರುವಾಗಲೇ ಚಿತ್ರತಂಡದಿಂದ ಈ ಬಗ್ಗೆ ಸ್ಪಷ್ಟನೆ ಸಿಕ್ಕಿದೆ.

ಪೋಸ್ಟರ್​ ಕಾಪಿ ಎಂಬ ಆರೋಪಕ್ಕೆ ಪುನೀತ್​ ನಟನೆಯ ‘ದ್ವಿತ್ವ’ ಚಿತ್ರ ತಂಡದಿಂದ ಸ್ಪಷ್ಟನೆ
ಪುನೀತ್ ರಾಜ್​ಕುಮಾರ್​​-ಪವನ್​ ಕುಮಾರ್​ ಚಿತ್ರಕ್ಕೆ ‘ದ್ವಿತ್ವ’ ಶೀರ್ಷಿಕೆ
TV9 Web
| Updated By: ರಾಜೇಶ್ ದುಗ್ಗುಮನೆ|

Updated on:Jul 02, 2021 | 7:20 PM

Share

ಪುನೀತ್ ರಾಜ್​ಕುಮಾರ್ ಮತ್ತು ಪವನ್ ಕುಮಾರ್ ಕಾಂಬಿನೇಷನ್​ಲ್ಲಿ ಮೂಡಿಬರಲಿರುವ ‘ದ್ವಿತ್ವ’ ಚಿತ್ರದ ಪೋಸ್ಟರ್​ ಸಾಕಷ್ಟು ವಿವಾದ ಸೃಷ್ಟಿಸಿದೆ. ಜು.1ರಂದು ಅನಾವರಣಗೊಂಡ ಈ ಸಿನಿಮಾದ ಶೀರ್ಷಿಕೆ ಪೋಸ್ಟರ್​  ಕಾಪಿ ಎಂದು ಹೇಳಲಾಗಿತ್ತು. ಇದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ನಡೆಯುತ್ತಿರುವಾಗಲೇ ಚಿತ್ರತಂಡದಿಂದ ಈ ಬಗ್ಗೆ ಸ್ಪಷ್ಟನೆ ಸಿಕ್ಕಿದೆ. ಗ್ರಾಫಿಕ್​ ಡಿಸೈನರ್​ ಆದರ್ಶ್ ಅವರು ಪೋಸ್ಟರ್​ ಹೇಗೆ ಡಿಸೈನ್​ ಮಾಡಲಾಗಿದೆ ಎಂಬ ಬಗ್ಗೆ ಪತ್ರದಲ್ಲಿ ಹೇಳಿದ್ದಾರೆ. ಆ ಪತ್ರದ ವಿವರಣೆ ಇಲ್ಲಿದೆ.

‘ದಿನಾಂಕ 01-07-2021 ರಂದು ಬಿಡುಗಡೆಗೊಳಿಸಿರುವ ಹೊಂಬಾಳೆ ಫಿಲಿಂಸ್ ನಿರ್ಮಾಣದ ಹಾಗೂ ಪವನ್ ಕುಮಾರ್ ನಿರ್ದೇಶನದ ‘ದ್ವಿತ್ವ’ ಚಿತ್ರದ ಟೈಟಲ್ ಲಾಂಚ್ ಪೋಸ್ಟರ್‌ ವಿವಾದದ ಕುರಿತು ಸ್ಪಷ್ಟಿಕರಣ ನೀಡುವ ಸಲುವಾಗಿ ಈ ಬಹಿರಂಗ ಪತ್ರ ಬರೆಯುತ್ತಿದ್ದೇನೆ.

‘ದ್ವಿತ್ವ’ ಟೈಟಲ್ ಲಾಂಚ್ ಮಾಡಲು ಬಳಸಲಾಗಿರುವ ಪೋಸ್ಟರ್‌ ಕೃತಿಚೌರ್ಯ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಿರುವುದನ್ನು ಗಮನಿಸಿದ್ದೇನೆ. ನಮ್ಮ ಪೋಸ್ಟರ್‌ಗೆ ಹೋಲಿಕೆಯಾಗುವ ಆ ಚಿತ್ರ ಗೂಗಲ್ ತಾಣದಲ್ಲಿಯಾಗಲಿ ಅಥವಾ ಇನ್ನಾವುದೇ ಉಚಿತ ಚಿತ್ರ ಜಾಲತಾಣದಿಂದ ಉಚಿತವಾಗಿ ಪಡೆದಿರುವುದಲ್ಲ, ಬದಲಾಗಿ ಆ ಪ್ರೀಮಿಯಮ್ ಸ್ಟಾಕ್ ಚಿತ್ರವನ್ನು ‘ ಷಟರ್ ಸ್ಟಾಕ್’ ಎಂಬ ಪ್ರೀಮಿಯಮ್ ಇಮೇಜ್ ಪ್ರೊವೈಡರ್ ಸಂಸ್ಥೆಯ ಬಳಿ ಖರೀದಿಸಲಾಗಿದೆ ಎಂಬ ವಿಚಾರ ತಿಳಿಯಪಡಿಸುತ್ತಿದ್ದೇವೆ.

ಸಾಮಾನ್ಯವಾಗಿ ಪೋಸ್ಟರ್ ಡಿಸೈನರ್ಸ್ ಯಾವಾಗಲೂ ಪೋಸ್ಟರ್ ಡಿಸೈನಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮ ಅವಶ್ಯಕತೆಗೆ ಅನುಗುಣವಾಗಿ ಪ್ರೀಮಿಯಮ್ ಸ್ಟಾಕ್ ವೆಬ್ ಸೈಟುಗಳ ಮೇಲೆ ಅವಲಂಭಿತವಾಗಿರುತ್ತೇವೆ ಎಂದು ತಿಳಿಸಲು ಇಚ್ಚಿಸುತ್ತಿದ್ದೇನೆ. ದ್ವಿತ್ವ ಪೋಸ್ಟರ್‌ ವಿಚಾರಕ್ಕೆ ಬರುವುದಾದರೆ, ಈ ಚಲನಚಿತ್ರಕ್ಕೆ ಪೋಸ್ಟರ್ ಡಿಸೈನರ್ ಆಗಿ ನನ್ನನ್ನ ಸಿನೆಮಾ ತಂಡದವರು ಆಯ್ಕೆ

ಮಾಡಿಕೊಂಡಾಗ ನಾವೆಲ್ಲರೂ ಲಾಕ್ ಡೌನ್ ನಲ್ಲಿದ್ದೆವು. ಆದಕಾರಣ ಚಿತ್ರದಲ್ಲಿ ಬರುವ ಪುನೀತ್ ರಾಜ್ ಕುಮಾರ್ ಅವರ ಪಾತ್ರದ ವಿಶೇಷತೆಗೆ ಅನುಗುಣವಾಗಿ ಅವರ ಫೋಟೋ ಶೂಟ್ ಮಾಡಲು ಸಾಧ್ಯವಾಗಲಿಲ್ಲ. ಆಗ ನಿರ್ದೇಶಕರಾದ ಪವನ್ ಕುಮಾರ್ ಅವರ ಸಲಹೆಯ ಮೇರೆಗೆ ಚಿತ್ರದ ಪರಿಕಲ್ಪನೆಗೆ ಧಕ್ಕೆ ಬಾರದಂತೆ ಅಮೂರ್ತವಾದ (abstract poster) ಪೋಸ್ಟರ್ ಡಿಸೈನ್

ತಯಾರಿಸಬೇಕಾಗಿ ಬಂತು. ಆಗ ನಮ್ಮ ಸಂಸ್ಥೆಯಿಂದ ಖರೀದಿ ಮಾಡಲಾಗಿದ್ದ ಆಕರ ಚಿತ್ರವನ್ನು ತೋರಿಸಿದೆವು ಅದು ನಿರ್ದೇಶಕರಿಗೆ ಒಪ್ಪಿತವಾಗಿ ಅದೇ ಡಿಸೈನ್ ಆಧಾರವಾಗಿಟ್ಟುಕೊಂಡು ಪುನೀತ್ ರಾಜ್ ಕುಮಾರ್ ಅವರ ಮುಖಚಿತ್ರದ ಜೊತೆಗೆ ಪೋಸ್ಟರ್ ಡಿಸೈನ್ ಮಾಡಲು ಸೂಚಿಸಿದರು. ಅದರಂತೆ ಪೋಸ್ಟರ್ ಡಿಸೈನ್ ಮಾಡಲಾಗಿದೆ.

ನಿರ್ದೇಶಕ ಪವನ್ ಕುಮಾರ್ ಹಾಗೂ ಚಿತ್ರ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲಿಂಗ್ ಸಂಸ್ಥೆಯವರಿಗೆ ನಾವು ಷಟರ್ ಸ್ಟಾಕ್ ಸಂಸ್ಥೆಯ ಬಳಿ ಖರೀದಿಸಿರುವ ಸ್ಟಾಕ್ ಇಮೇಜ್ ಕುರಿತಾಗಿ ಈ ಮೊದಲು ತಿಳಿದಿರುವುದಿಲ್ಲ ಎಂಬುದನ್ನು ಹೇಳಬಯಸುತ್ತೇನೆ. ನಾವು ಬಿಡುಗಡೆಗೊಳಿಸಿರುವ ಪೋಸ್ಟರ್ ಡಿಸೈನ್ ಬಗ್ಗೆ ಮಾತ್ರ ಅವರಿಗೆ ತಿಳಿದಿರುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾದ ನಂತರವಷ್ಟೇ ಅವರಿಗೆ ನಾವು ಖರೀದಿಸಿರುವ ಆಕರ ಚಿತ್ರದ ಬಗ್ಗೆ ತಿಳಿಸಿದೆವು. ಮೂಲ ಚಿತ್ರ ನಮ್ಮ ಕ್ರಿಯೇಟೀವ್ ಕ್ರಿಟ್ ಸಂಸ್ಥೆಯಿಂದ ಸೃಷ್ಟಿಸಿರುವ ಚಿತ್ರ ಅಲ್ಲದಿದ್ದರೂ ಅದರ ಮೇಲಿನ ಎಲ್ಲಾ ಲೀಗಲ್ ಹಕ್ಕುಗಳು ನಮ್ಮವೇ ಆಗಿರುತ್ತವೆ. ಅದಕ್ಕೆ ಸಂಬಂಧಿಸಿದ ದಾಖಲೆಗಳೂ ನಮ್ಮ ಬಳಿ ಇವೆ. ಹಾಗಾಗಿ ನಾವು ಖರೀದಿಸಿರುವ ಆಕರ ಚಿತ್ರ ಯಾರದ್ದೇ ಬೌದ್ಧಿಕ ಆಸ್ತಿಯಾಗಿರುವುದಿಲ್ಲ. ಒಂದು ಡಿಸೈನ್ ಏಜೆನ್ಸಿಯಾಗಿ ನಮ್ಮ ಡಿಸೈನ್ ಗಳಿಗೆ ಅವಶ್ಯಕತೆಯಿರುವ ಮತ್ತು ಹೊಂದುವಂತಹ ಆಕರ ಚಿತ್ರಗಳನ್ನ ಖರೀದಿ ಮಾಡುವುದು ಮತ್ತು ಅವುಗಳನ್ನ ನಮ್ಮ ಅವಶ್ಯಕತೆಗೆ ತಕ್ಕಂತೆ ಬಳಸಿಕೊಳ್ಳುವುದು ನಮ್ಮ ವಿವೇಚನೆಗೆ ಬಿಟ್ಟ ವಿಚಾರ ಎಂದು ಹೇಳಲು ಇಚ್ಚಿಸುತ್ತೇನೆ.

ನನ್ನ ಈ ಸ್ಪಷ್ಟಿಕರಣದಿಂದ ಎಲ್ಲ ಅನುಮಾನಗಳಿಗೂ ಉತ್ತರ ಸಿಕ್ಕಿದೆ ಎಂದು ಭಾವಿಸಿ ಸಂಬಂಧಿಸಿದ ನಿರ್ದೇಶಕರನ್ನು ಮತ್ತು ನಿರ್ಮಾಣ ಸಂಸ್ಥೆಯನ್ನು ಈ ವಿಚಾರವಾಗಿ ವಿವಾದಕ್ಕೆ ಸಿಲುಕಿಸಬಾರದೆಂದು ವಿನಂತಿಸಿಕೊಳ್ಳುತ್ತಿದ್ದೇನೆ. ದ್ವಿತ್ವ ಚಿತ್ರದ ಟೈಟಲ್ ಪೋಸ್ಟರ್ ಗೆ ನೀವು ತೋರಿಸಿದ ಅಗಾಧ ಪ್ರೀತಿ ತುಂಬಿದ ಪ್ರತಿಕ್ರಿಯೆಗೆ ನಮ್ಮ ಅನಂತ ಅನಂತ ಧನ್ಯವಾದಗಳು’ ಎಂದು ಪತ್ರದಲ್ಲಿ ಬರೆಯಲಾಗಿದೆ.

ಇದನ್ನೂ ಓದಿ:Dvitva: ಪುನೀತ್ ರಾಜ್​ಕುಮಾರ್​​-ಪವನ್​ ಕುಮಾರ್​ ಚಿತ್ರಕ್ಕೆ ‘ದ್ವಿತ್ವ’ ಶೀರ್ಷಿಕೆ; ಬಿಗ್​ ನ್ಯೂಸ್​ ನೀಡಿದ ಹೊಂಬಾಳೆ

ಯಾವುದು ಕಾಪಿ? ಯಾವುದು ಅಸಲಿ? ‘ದ್ವಿತ್ವ’ ಚಿತ್ರದ ಪೋಸ್ಟರ್​ ಮೇಲೆ ಹೊಸ ಅನುಮಾನ

Published On - 7:19 pm, Fri, 2 July 21