ಕನ್ನಡ ಚಿತ್ರರಂಗಕ್ಕೆ ಕತ್ತಲು ಆವರಿಸಿದೆ. ಎಲ್ಲರ ಮೆಚ್ಚಿನ ನಟನಾಗಿದ್ದ ಪುನೀತ್ ರಾಜ್ಕುಮಾರ್ ಅವರು ಶುಕ್ರವಾರ (ಅ.29) ಹೃದಯಾಘಾತದಿಂದ ನಿಧನರಾಗಿರುವುದು ತೀವ್ರ ನೋವಿನ ಸಂಗತಿ. ಅವರ ಅಪಾರ ಅಭಿಮಾನಿ ಬಳಗ ಕಣ್ಣೀರು ಸುರಿಸುತ್ತಿದೆ. ಅಂತಿಮ ದರ್ಶನ ಪಡೆಯಲು ಬಂದ ಅಭಿಮಾನಿಗಳು ಕರುಳು ಕಿತ್ತು ಬರುವಂತೆ ಅಳುತ್ತಿದ್ದಾರೆ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಪುನೀತ್ಗಾಗಿ ಕಂಬನಿ ಮಿಡಿಯುತ್ತಿದ್ದಾರೆ. ಅಪ್ಪು ರೀತಿಯೇ ಚಿರಂಜೀವಿ ಸರ್ಜಾ ಮತ್ತು ಸಂಚಾರಿ ವಿಜಯ್ ಅವರನ್ನು ಕೂಡ ಸ್ಯಾಂಡಲ್ವುಡ್ ಕಳೆದುಕೊಂಡಿದೆ. ಈ ಮೂವರ ಜನ್ಮದಿನಾಂಕದಲ್ಲಿ ಒಂದು ಸಾಮ್ಯತೆ ಇದೆ.
ಪುನೀತ್ ರಾಜ್ಕುಮಾರ್ ಜನಿಸಿದ್ದು ಮಾರ್ಚ್ 17ರಂದು. ಅವರ ರೀತಿಯೇ ಹೃದಯಾಘಾತದಲ್ಲಿ ನಿಧನರಾದ ಚಿರಂಜೀವಿ ಸರ್ಜಾ ಜನಿಸಿದ್ದು ಅಕ್ಟೋಬರ್ 17ರಂದು. ಇತ್ತೀಚೆಗೆ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಸಂಚಾರಿ ವಿಜಯ್ ಅವರ ಜನ್ಮ ದಿನಾಂಕ ಜುಲೈ 17. ಇವರೆಲ್ಲರಿಗೂ ಈ ಸಂಖ್ಯೆಯೇ ಕಂಟಕವಾಯ್ತೇ ಎಂದು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ಹಾಗೆಯೇ ಕನ್ನಡದ ಖ್ಯಾತ ನಟ ರಘುವೀರ್ ಜನಿಸಿದ್ದು ಕೂಡ ಮೇ 17ರಂದು. ಅವರು ಸಹ ಹೃದಯಾಘಾತದಿಂದಲೇ ಮೃತಪಟ್ಟಿದ್ದು ಎಂಬುದು ಕಾಕತಾಳೀಯ.
ಕನ್ನಡ ಚಿತ್ರರಂಗದಲ್ಲಿ ಈ ಕಲಾವಿದರು ತಮ್ಮ ಪ್ರತಿಭೆಯಿಂದ ಗುರುತಿಸಿಕೊಂಡಿದ್ದರು. ಯಾವ ಪಾತ್ರ ಕೊಟ್ಟರೂ ನಿಭಾಯಿಸಬಲ್ಲ ಸಾಮರ್ಥ್ಯ ಹೊಂದಿದ್ದರು. ತಮ್ಮ ಅಭಿನಯದಿಂದ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದರು. ಈ ಪ್ರತಿಭಾವಂತರು ರೀತಿ ಅಕಾಲಿಕ ಮರಣಕ್ಕೆ ಒಳಗಾಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಅದರಲ್ಲೂ ಫಿಟ್ನೆಸ್ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಪುನೀತ್ ರಾಜ್ಕುಮಾರ್ ಅವರು ಹೃದಯಾಘಾತದಲ್ಲಿ ನಿಧನರಾದರು ಎಂಬ ಸತ್ಯವನ್ನು ಯಾರಿಂದಲೂ ನಂಬಲಾಗುತ್ತಿಲ್ಲ. ಫಿಟ್ನೆಸ್ ವಿಚಾರದಲ್ಲಿ ಅವರು ಯುವಕರಿಗೆ ಮಾದರಿ ಆಗಿದ್ದರು. ತಮ್ಮ ಜಿಮ್ ವರ್ಕೌಟ್ ವಿಡಿಯೋಗಳನ್ನು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದರು.
ಪುನೀತ್ ನಿಧನಕ್ಕೆ ಕೋಟ್ಯಂತರ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ. ಅಕ್ಕ-ಪಕ್ಕದ ರಾಜ್ಯಗಳ ಸೆಲೆಬ್ರಿಟಿಗಳು ಆಗಮಿಸಿ ಅಂತಿಮ ದರ್ಶನ ಪಡೆದಿದ್ದಾರೆ. ನಟ, ನಿರ್ದೇಶಕ ಪ್ರಭುದೇವ, ಟಾಲಿವುಡ್ನ ಸ್ಟಾರ್ ನಟ ನಂದಮೂರಿ ಬಾಲಕೃಷ್ಣ, ಬಹುಭಾಷಾ ನಟ ಶರತ್ ಕುಮಾರ್ ಸೇರಿದಂತೆ ಅನೇಕರು ಪುನೀತ್ಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಶನಿವಾರ (ಅ.30) ಕಂಠೀರವ ಸ್ಡುಡಿಯೋ ಆವರಣದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಸೋಶಿಯಲ್ ಮೀಡಿಯಾ ಮೂಲಕ ಇಡೀ ಭಾರತೀಯ ಚಿತ್ರರಂಗವೇ ಅಪ್ಪುಗೆ ಶ್ರದ್ಧಾಂಜಲಿ ಅರ್ಪಿಸುತ್ತಿದೆ.
ಇದನ್ನೂ ಓದಿ:
ಪುನೀತ್ಗೆ ಪಾಕಿಸ್ತಾನದ ಅಭಿಮಾನಿಯ ಗಾನ ನಮನ; ಕನ್ನಡದಲ್ಲಿ ಹಾಡು ಹೇಳುವ ಮೂಲಕ ಶ್ರದ್ಧಾಂಜಲಿ
Puneeth Rajkumar: ಪುನೀತ್ ಹೃದಯಾಘಾತದ ವೈರಲ್ ವಿಡಿಯೋ ಅಸಲಿಯೋ ನಕಲಿಯೋ? ಇಲ್ಲಿದೆ ಫ್ಯಾಕ್ಟ್ ಚೆಕ್