ಪುನೀತ್ ರಾಜ್ಕುಮಾರ್ (Puneeth Rajkumar) ಹೀರೋ ಆಗಿ ಎಂಟ್ರಿ ಕೊಟ್ಟಿದ್ದು ‘ಅಪ್ಪು’ ಸಿನಿಮಾ (Appu Movie) ಮೂಲಕ. ಈ ಚಿತ್ರ ಸ್ಯಾಂಡಲ್ವುಡ್ನಲ್ಲಿ ಸಂಚಲನ ಸೃಷ್ಟಿ ಮಾಡಿತ್ತು. ಮೊದಲ ಸಿನಿಮಾದಲ್ಲೇ ಗೆದ್ದು ಬೀಗಿದ್ದರು ಪುನೀತ್. ಈ ಚಿತ್ರ ತೆರೆಗೆ ಬಂದಿದ್ದು 2002ರ ಏಪ್ರಿಲ್ 26ರಂದು. ಈ ಸಿನಿಮಾ ತೆರೆಗೆ ಬಂದು ಇಂದಿಗೆ 20 ವರ್ಷಗಳು ಕಳೆದಿವೆ. ಈ ಸಂಭ್ರವನ್ನು ಆಚರಿಸಿಕೊಳ್ಳಲು ಪುನೀತ್ ನಮ್ಮ ಜತೆ ಇಲ್ಲ ಅನ್ನೋದು ನಿಜಕ್ಕೂ ಬೇಸರದ ಸಂಗತಿ. ಈ ವಿಶೇಷ ದಿನವನ್ನು ನೆನಪು ಮಾಡಿಕೊಂಡಿದ್ದಾರೆ ರಕ್ಷಿತಾ ಪ್ರೇಮ್ (Rakshitha Prem).
ಪುನೀತ್ ರಾಜ್ಕುಮಾರ್ 6 ತಿಂಗಳ ಮಗುವಾಗಿದ್ದಾಗಲೇ ಬೆಳ್ಳಿ ಪರದೆಮೇಲೆ ಕಾಣಿಸಿಕೊಂಡರು. ‘ಪ್ರೇಮದ ಕಾಣಿಕೆ’ ಸಿನಿಮಾದಲ್ಲಿ ಅವರು ನಟಿಸಿದರು. ‘ಸನಾದಿ ಅಪ್ಪಣ್ಣ’, ‘ಬೆಟ್ಟದ ಹೂವು’ ಮೊದಲಾದ ಸಿನಿಮಾಗಳಲ್ಲಿ ಪುನೀತ್ ಬಾಲನಟನಾಗಿ ಬಣ್ಣ ಹಚ್ಚಿದರು. 1989ರಲ್ಲಿ ತೆರೆಗೆ ಬಂದ ‘ಪರಶುರಾಮ’ ಚಿತ್ರ ತೆರೆಗೆ ಬಂದ ನಂತರ ನಟನೆಯಿಂದ ದೂರ ಉಳಿದರು. 2002ರಲ್ಲಿ ಹೀರೋ ಆಗಿ ಬಣ್ಣದ ಲೋಕಕ್ಕೆ ಕಾಲಿಟ್ಟರು ಅಪ್ಪು.
ಮೊದಲ ಸಿನಿಮಾಗೆ ಕಾಲೇಜು ಕಥೆಯನ್ನು ಆಯ್ಕೆ ಮಾಡಿಕೊಂಡರೆ ಗೆಲುವು ಸಿಗುತ್ತದೆ ಎಂಬ ನಂಬಿಕೆ ಇದೆ. ಇದು ಪುನೀತ್ ವಿಚಾರದಲ್ಲೂ ಕೆಲಸ ಮಾಡಿತ್ತು. ‘ಅಪ್ಪು’ ಸಿನಿಮಾದಲ್ಲಿ ಡ್ಯಾಶಿಂಗ್ ಕಾಲೇಜು ಹುಡುಗನಾಗಿ ಕಾಣಿಸಿಕೊಂಡಿದ್ದರು ಪುನೀತ್. ಪುರಿ ಜಗನ್ನಾಥ್ ನಿರ್ದೇಶನದ ಈ ಸಿನಿಮಾಗೆ ರಕ್ಷಿತಾ ನಾಯಕಿ. ಪಾರ್ವತಮ್ಮ ರಾಜಕುಮಾರ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಈ ಸಿನಿಮಾ ಅಪ್ಪು ಕರಿಯರ್ಅನ್ನೇ ಬದಲಿಸಿತ್ತು.
ಈ ಚಿತ್ರದಲ್ಲಿ ರಕ್ಷಿತಾ ನಟನೆ ಗಮನ ಸೆಳೆದಿತ್ತು. ಪುನೀತ್ ಜತೆ ಒಳ್ಳೆಯ ಗೆಳೆತನ ಬೆಳೆಯಲು ಈ ಸಿನಿಮಾ ರಕ್ಷಿತಾಗೆ ಸಹಕಾರಿಯಾಗಿತ್ತು. ಈಗ ಅಪ್ಪು ಇಲ್ಲ. ಇದೇ ನೋವಿನಲ್ಲಿ ಅವರು ಈ ಚಿತ್ರ 20 ವರ್ಷ ತುಂಬಿದ್ದನ್ನು ನೆನಪಿಸಿಕೊಂಡಿದ್ದಾರೆ. ಅಲ್ಲದೆ ಭಾವನಾತ್ಮಕ ಪತ್ರ ಬರೆದುಕೊಂಡಿದ್ದಾರೆ.
‘ಅಪ್ಪು ರಿಲೀಸ್ ಆಗಿ 20 ವರ್ಷ ಕಳೆದಿದೆ. ಎಂತಹ ಅದ್ಭುತ ಸಿನಿಮಾ, ಎಂತಹ ಅದ್ಭುತ ಅನುಭವ. ನಾನು ಪಾರ್ವತಮ್ಮ ರಾಜ್ಕುಮಾರ್ ಅಮ್ಮ ಅವರನ್ನು ಭೇಟಿ ಮಾಡಿದೆ. ಅವರು ನನಗೆ ಸ್ಫೂರ್ತಿ. ಅವರಿಲ್ಲ ಎಂದಿದ್ದರೆ ನಾನು ಈ ಸ್ಥಾನದಲ್ಲಿ ಇರುತ್ತಿರಲಿಲ್ಲ. ಅಪ್ಪು ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅದರಲ್ಲೂ ಅವರ ನಗುವನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದೇನೆ’ ಎಂದಿದ್ದಾರೆ ರಕ್ಷಿತಾ.
‘ಪುನೀತ್ ಅವರೇ ಅಪ್ಪು ಚಿತ್ರಕ್ಕೆ 20 ವರ್ಷ ಆಗಿದೆ, ಶುಭಾಶಯಗಳು. ನಾನು ಅವರನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಈ ಸಿನಿಮಾ ನನ್ನ ಹೃದಯಕ್ಕೆ ಹತ್ತಿರವಾಗಿದೆ’ ಎಂದಿದ್ದಾರೆ ರಕ್ಷಿತಾ. ಈ ವಿಶೇಷ ದಿನವನ್ನು ನೆನಪಿಸಿದ, ಶುಭಾಶಯ ತಿಳಿಸಿದ ಎಲ್ಲರಿಗೂ ಅವರು ಧನ್ಯವಾದ ತಿಳಿಸಿದ್ದಾರೆ.
ಇದನ್ನೂ ಓದಿ: ಡಾ.ರಾಜ್ ಜನ್ಮದಿನ ಹಿನ್ನೆಲೆ; ಬಡಮಕ್ಕಳಿಗೆ ಪುಸ್ತಕಗಳನ್ನು ವಿತರಿಸಿದ ಅಶ್ವಿನಿ ಪುನೀತ್