Dr Rajkumar: ‘ನಿನದೇ ನೆನಪು ದಿನವೂ ಮನದಲ್ಲಿ..’: ಡಾ. ರಾಜ್​ ಜನ್ಮದಿನಕ್ಕೆ ಪುನೀತ್​ ವಿಶ್​ ಮಾಡಿದ್ದ ವಿಡಿಯೋ ವೈರಲ್​

Dr. Rajkumar Birth Anniversary: ಆಯಾ ಸಂದರ್ಭಕ್ಕೆ ತಕ್ಕಂತೆ ಪುನೀತ್​ ರಾಜ್​ಕುಮಾರ್​ ಅವರ ಹಳೆಯ ವಿಡಿಯೋಗಳು ವೈರಲ್​ ಆಗುತ್ತಿವೆ. ಈಗ ಡಾ. ರಾಜ್​ಕುಮಾರ್​ ಹುಟ್ಟುಹಬ್ಬಕ್ಕೆ ಸಂಬಂಧಿಸಿದ ಒಂದು ವಿಡಿಯೋ ಮತ್ತೆ ವೈರಲ್​ ಆಗಿದೆ.

Dr Rajkumar: ‘ನಿನದೇ ನೆನಪು ದಿನವೂ ಮನದಲ್ಲಿ..’: ಡಾ. ರಾಜ್​ ಜನ್ಮದಿನಕ್ಕೆ ಪುನೀತ್​ ವಿಶ್​ ಮಾಡಿದ್ದ ವಿಡಿಯೋ ವೈರಲ್​
ಪುನೀತ್​ ರಾಜ್​ಕುಮಾರ್​, ಡಾ. ರಾಜ್​ಕುಮಾರ್​
Follow us
| Updated By: ಮದನ್​ ಕುಮಾರ್​

Updated on:Apr 24, 2022 | 8:38 AM

ಕರುನಾಡಿನ ಹೆಮ್ಮೆಯ ನಟ ಡಾ. ರಾಜ್​ಕುಮಾರ್​ ಅವರ ಜನ್ಮದಿನದ (Dr Rajkumar Birthday) ಪ್ರಯುಕ್ತ ಅಭಿಮಾನಿಗಳು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಕನ್ನಡ ಚಿತ್ರರಂಗ ಇರುವವರೆಗೂ ಡಾ. ರಾಜ್​ ((Dr Rajkumar) ಹೆಸರನ್ನು ಮರೆಯಲು ಸಾಧ್ಯವಿಲ್ಲ. ಎಷ್ಟೇ ವರ್ಷಗಳು ಉರುಳಿದರೂ ಅವರ ಮೇಲೆ ಜನರು ಇಟ್ಟಿರುವ ಅಭಿಮಾನ ಶಾಶ್ವತ. ಇಂದು (ಏ.24) ಅಣ್ಣಾವ್ರ ಹುಟ್ಟುಹಬ್ಬಕ್ಕೆ ಕೋಟ್ಯಂತರ ಜನರು ವಿಶ್​ ಮಾಡುತ್ತಿದ್ದಾರೆ. ಅದರ ನಡುವೆ ಪುನೀತ್​ ರಾಜ್​ಕುಮಾರ್​ ಅವರ ಒಂದು ವಿಡಿಯೋ ಕೂಡ ವೈರಲ್​ ಆಗುತ್ತಿದೆ. ಎರಡು ವರ್ಷಗಳ ಹಿಂದೆ ಮೇರುನಟನ ಜನ್ಮದಿನಕ್ಕೆ ಪುನೀತ್​ ರಾಜ್​ಕುಮಾರ್​ ಅವರು ವಿಶೇಷವಾಗಿ ವಿಶ್​ ಮಾಡಿದ್ದರು. ಹಾಡಿನ ಮೂಲಕ ಅಪ್ಪಾಜಿಗೆ ಪ್ರೀತಿಯ ಶುಭಾಶಯಗಳನ್ನು ತಿಳಿಸಿದ್ದರು. ಈಗ ಅದೇ ವಿಡಿಯೋ ಅಭಿಮಾನಿಗಳ ವಲಯದಲ್ಲಿ ಸಖತ್ ವೈರಲ್​ ಆಗುತ್ತಿದೆ. ಅಣ್ಣಾವ್ರ ರೀತಿ ಪುನೀತ್​ ರಾಜ್​ಕುಮಾರ್​ (Puneeth Rajkumar) ಕೂಡ ಇಂದು ನಮ್ಮೊಂದಿಗೆ ಇಲ್ಲ ಎಂಬುದು ನೋವಿನ ಸಂಗತಿ.​ ಆ ನೋವಿನ ನಡುವೆಯೂ ಜೀವನ ಸಾಗಲೇ ಬೇಕಿದೆ. ಹಳೆಯ ನೆನಪುಗಳಿಗೆ ಮರುಜೀವ ತುಂಬುವ ರೀತಿಯಲ್ಲಿ ಫ್ಯಾನ್ಸ್​ ಈ ವಿಡಿಯೋವನ್ನು ಶೇರ್​ ಮಾಡಿಕೊಳ್ಳುತ್ತಿದ್ದಾರೆ. ಆ ಮೂಲಕ ಡಾ. ರಾಜ್​ಕುಮಾರ್​ ಮತ್ತು ಪುನೀತ್ ರಾಜ್​ಕುಮಾರ್​ ಇಬ್ಬರನ್ನೂ ಸ್ಮರಿಸಿಕೊಳ್ಳುವ ಕಾರ್ಯ ಆಗುತ್ತಿದೆ.

ರಾಜ್​ಕುಮಾರ್​ ನಟನೆಯ ಸಿನಿಮಾಗಳು ಎವರ್​ಗ್ರೀನ್​. ಅವರ ಸಿನಿಮಾದ ಹಾಡುಗಳು ಕೂಡ ಇಂದಿಗೂ ಕೇಳುಗರ ಫೇವರಿಟ್​ ಪಟ್ಟಿಯಲ್ಲಿವೆ. ಆ ಪೈಕಿ ‘ಕ್ರಾಂತಿವೀರ’ ಚಿತ್ರದ ‘ಯಾರು ಏನು ಮಾಡುವರು..’ ಹಾಗೂ ‘ರಾಜ ನನ್ನ ರಾಜ’ ಚಿತ್ರದ ‘ನಿನದೇ ನೆನಪು ದಿನವೂ ಮನದಲ್ಲಿ..’ ಗೀತೆಯನ್ನು ಆಯ್ಕೆ ಮಾಡಿಕೊಂಡು ಪುನೀತ್​ ರಾಜ್​ಕುಮಾರ್​ ಅವರು ಹೊಸದಾಗಿ ಹಾಡಿದ್ದರು. ಸಂಗೀತ ನಿರ್ದೇಶಕ ಚರಣ್​ ರಾಜ್​ ಅವರು ಈ ಹಾಡುಗಳಿಗೆ ಹೊಸ ಮೆರುಗು ನೀಡಿದ್ದರು. ಈ ಮೂಲ ಹಾಡುಗಳು ಬಿ.ಪಿ. ಶ್ರೀನಿವಾಸ್​ ಅವರ ಕಂಠದಲ್ಲಿ ಮೂಡಿಬಂದಿದ್ದವು.

ನಟನೆ ಮಾತ್ರವಲ್ಲದೇ ಗಾಯನದಲ್ಲಿಯೂ ರಾಜ್​ಕುಮಾರ್​ ಅವರ ಪ್ರತಿಭೆ ಅಪಾರ. ನಾಯಕ ನಟನಾಗಿದ್ದು, ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ಹೆಮ್ಮೆಯ ಕನ್ನಡಿಗ ಅವರು. ಇನ್ನು, ಪುನೀತ್​ ರಾಜ್​ಕುಮಾರ್​ ಕೂಡ ಹಾಡುಗಳ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದರು. ಅನೇಕ ಸಿನಿಮಾ ಗೀತೆಗಳು ಅವರ ಕಂಠದಲ್ಲಿ ಮೂಡಿಬಂದಿದ್ದವು. ವಿಶೇಷವಾದ ಹಾಡುಗಳನ್ನು ಪುನೀತ್​ ಅವರಿಂದಲೇ ಹಾಡಿಸಬೇಕು ಎಂದು ಅನೇಕ ಸಿನಿಮಾ ತಂಡಗಳು ಬಯಸುತ್ತಿದ್ದವು. ಸಂಗೀತ ಮತ್ತು ಸಾಹಿತ್ಯ ಇಷ್ಟವಾದರೆ ಖಂಡಿತವಾಗಿಯೂ ಪುನೀತ್​ ಧ್ವನಿ ನೀಡಲು ಒಪ್ಪಿಕೊಳ್ಳುತ್ತಿದ್ದರು. ಆ ಮೂಲಕ ಅವರ ಜೊತೆ ಕೆಲಸ ಮಾಡಿದ ಖುಷಿ ಹೊಸ ತಂಡಗಳಿಗೆ ಸಿಗುತ್ತಿತ್ತು. ಇಂದು ಅವರು ಭೌತಿಕವಾಗಿ ಇಲ್ಲ ಎಂಬ ನೋವು ಕಾಡುತ್ತಿದ್ದೆ.

ಡಾ. ರಾಜ್​ಕುಮಾರ್​ ಜನ್ಮದಿನದ ಪ್ರಯುಕ್ತ ಕಂಠೀರವ ಸ್ಟುಡಿಯೋ ಆವರಣದಲ್ಲಿ ಇರುವ ಅವರ ಸಮಾಧಿಗೆ ಕುಟುಂಬದವರು ಪೂಜೆ ಸಲ್ಲಿಸಿದ್ದಾರೆ. ಸಮಾಧಿಯನ್ನು ಹೂವುಗಳಿಂದ ವಿಶೇಷವಾಗಿ ಅಲಂಕರಿಸಲಾಗಿದೆ. ಅಭಿಮಾನಿಗಳು ಕೂಡ ಅಪಾರ ಸಂಖ್ಯೆಯಲ್ಲಿ ಬಂದು ಅಣ್ಣಾವ್ರಿಗೆ ನಮಿಸುತ್ತಿದ್ದಾರೆ. ರಾಜ್ಯದ ಹಲವು ಕಡೆಗಳಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅನ್ನ ಸಂತರ್ಪಣೆ, ಉಚಿತ ಆರೋಗ್ಯ ತಪಾಸಣೆ, ರಕ್ತದಾನ, ನೇತ್ರದಾನ ನೋಂದಣಿ ಮುಂತಾದ ಕೆಲಸಗಳು ಅಭಿಮಾನಿಗಳಿಂದ ನಡೆಯುತ್ತಿದೆ.

ಇದನ್ನೂ ಓದಿ:

3ನೇ ಕ್ಲಾಸ್​ ಓದಿದ ಡಾ. ರಾಜ್​ಕುಮಾರ್​ ಇಂಗ್ಲಿಷ್​ ಕಲಿತಿದ್ದು ಹೇಗೆ? ಇಲ್ಲಿದೆ ಅದರ ಸೀಕ್ರೆಟ್​

ಯಾವ ಸ್ಥಿತಿಯಲ್ಲಿದೆ ನೋಡಿ ಡಾ. ರಾಜ್​ ಬೆಳೆದ ಮನೆ; ಇದರ ಬಗ್ಗೆ ಪುನೀತ್​ ಕಂಡಿದ್ದರು ಕನಸು

Published On - 8:09 am, Sun, 24 April 22