ಪುನೀತ್ ರಾಜ್ಕುಮಾರ್ ಅವರು ನಿರ್ದೇಶಕರ ನಟ ಆಗಿದ್ದರು. ಅವರ ಜೊತೆ ಕೆಲಸ ಮಾಡಬೇಕು ಎಂಬುದು ಅನೇಕ ನಿರ್ದೇಶಕರ ಕನಸಾಗಿತ್ತು. ಅಪ್ಪು ಅವರಿಗೋಸ್ಕರವೇ ಹಲವಾರು ಪ್ರತಿಭಾವಂತ ಡೈರೆಕ್ಟರ್ಗಳು ಕಥೆ ಸಿದ್ಧಪಡಿಸಿಕೊಂಡಿದ್ದರು. ಜೀವನದಲ್ಲಿ ಒಮ್ಮೆಯಾದರೂ ಪುನೀತ್ ಜೊತೆ ಕೆಲಸ ಮಾಡಬೇಕು ಎಂದುಕೊಂಡಿದ್ದ ಎಲ್ಲರ ಕನಸು ಈಗ ಭಗ್ನವಾಗಿದೆ. ಕನ್ನಡದ ಖ್ಯಾತ ನಿರ್ದೇಶಕ ಮಂಸೋರೆ ಕೂಡ ‘ಪವರ್ ಸ್ಟಾರ್’ ಜೊತೆ ಕೆಲಸ ಮಾಡಲು ಬಯಸಿದ್ದರು. ಅಷ್ಟೇ ಅಲ್ಲ, ಅದಕ್ಕಾಗಿ ಅವರು ಸೂಕ್ತ ತಯಾರಿಯನ್ನೂ ಮಾಡಿಕೊಳ್ಳುತ್ತಿದ್ದರು. ಆದರೆ ಆ ಕನಸು ನನಸಾಗುವ ಮುನ್ನವೇ ಅಪ್ಪು ಇಹಲೋಕ ತ್ಯಜಿಸಿರುವುದು ವಿಪರ್ಯಾಸ.
‘ಹರಿವು’, ‘ನಾತಿಚರಾಮಿ’, ‘ಆ್ಯಕ್ಟ್ 1978’ ಸಿನಿಮಾಗಳ ಮೂಲಕ ಗುರುತಿಸಿಕೊಂಡವರು ನಿರ್ದೇಶಕ ಮಂಸೋರೆ. ಸಂವೇದನಾಶೀಲ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಕನ್ನಡ ಚಿತ್ರರಂಗಕ್ಕೆ ಅವರು ಒಳ್ಳೆಯ ಸಿನಿಮಾಗಳನ್ನು ನೀಡಿದ್ದಾರೆ. ಪುನೀತ್ ರಾಜ್ಕುಮಾರ್ ಜೊತೆ ಸಿನಿಮಾ ಮಾಡಬೇಕು ಎಂದು ಅವರು ಹಲವು ವರ್ಷಗಳಿಂದ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆ ವಿಚಾರವನ್ನು ಈಗ ಅವರು ಭಾರದ ಮನಸ್ಸಿನಿಂದ ಹಂಚಿಕೊಂಡಿದ್ದಾರೆ.
ಪುನೀತ್ಗೆ ನಿರ್ದೇಶನ ಮಾಡಬೇಕು ಎಂದುಕೊಂಡಿದ್ದ ಸಿನಿಮಾಗೆ ಮಂಸೋರೆ ‘ಮಿಷನ್ ಕೊಲಂಬಸ್’ ಎಂದು ಶೀರ್ಷಿಕೆ ಇಟ್ಟಿದ್ದರು. ತಮ್ಮ ಸ್ನೇಹಿತರಾದ ಟಿಕೆ ದಯಾನಂದ್ ಮತ್ತು ವೀರೇಂದ್ರ ಮಲ್ಲಣ್ಣ ಜೊತೆಗೂಡಿ ಅದರ ಕಾನ್ಸೆಪ್ಟ್ ಮತ್ತು ಸ್ಕ್ರಿಪ್ಟ್ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಅಷ್ಟೇ ಅಲ್ಲದೇ, ಪುನೀತ್ ಅವರ ಲುಕ್ ಹೇಗಿರಬೇಕು ಎಂಬುದನ್ನೂ ಅವರು ಕಲ್ಪಿಸಿಕೊಂಡಿದ್ದರು. ಅದಕ್ಕೆ ತಕ್ಕಂತೆ ಕಲಾವಿದ ಸರವಣ ಕುಮಾರ್ ಅವರಿಂದ ವಿಶೇಷವಾದ ಪೋಸ್ಟರ್ ಕೂಡ ಸಿದ್ಧಪಡಿಸಲಾಗಿತ್ತು. ಆ ಪೋಸ್ಟರ್ ಅನ್ನು ಈಗ ಮಂಸೋರೆ ಹಂಚಿಕೊಂಡಿದ್ದಾರೆ.
ಮಾಸಿದ ಗಡ್ಡ ಮತ್ತು ಕೂದಲಿನ ಗೆಟಪ್ನೊಂದಿಗೆ, ಕೊಲಂಬಸ್ ಪಾತ್ರದಲ್ಲಿ ಪುನೀತ್ ಅವರನ್ನು ಕಲ್ಪಿಸಿಕೊಳ್ಳಲಾಗಿತ್ತು. ಪೋಸ್ಟರ್ ಹಿನ್ನೆಲೆಯಲ್ಲಿ ಹಡಗು ಗಮನ ಸೆಳೆಯುತ್ತಿದೆ. ಒಂದು ವೇಳೆ ಈ ಸಿನಿಮಾ ಸೆಟ್ಟೇರಿದ್ದರೆ ಕನ್ನಡ ಚಿತ್ರರಂಗ ಮಾತ್ರವಲ್ಲದೇ ಇಡೀ ದೇಶವೇ ತಿರುಗಿ ನೋಡುವಂತಹ ಸಿನಿಮಾ ಆಗುತ್ತಿತ್ತು ಎಂಬುದರಲ್ಲಿ ಅನುಮಾನವೇ ಬೇಡ. ಆದರೆ ಅಂಥ ಕನಸು ಕೈಗೂಡುವ ಮುನ್ನವೇ ಸಾವಿನ ಊರಿಗೆ ಪುನೀತ್ ಪ್ರಯಾಣ ಬೆಳೆಸಿರುವುದು ದುರಂತ.
ಕೊನೆಯುಸಿರು ಎಳೆಯುವುದಕ್ಕೂ ಮುನ್ನ ಪುನೀತ್ ಅವರು ಹಲವು ಪ್ರಾಜೆಕ್ಟ್ಗಳಲ್ಲಿ ತೊಡಗಿಕೊಂಡಿದ್ದರು. ಆ ಪೈಕಿ ‘ಜೇಮ್ಸ್’ ಮತ್ತು ‘ದ್ವಿತ್ವ’ ಚಿತ್ರಗಳ ಮೇಲೆ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದರು. ‘ಜೇಮ್ಸ್’ ಚಿತ್ರಕ್ಕೆ ಬಹುತೇಕ ಶೂಟಿಂಗ್ ಮುಗಿದಿದ್ದು, ಡಬ್ಬಿಂಗ್ ಮತ್ತು ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಉಳಿದುಕೊಂಡಿತ್ತು. ಆದರೂ ಆ ಸಿನಿಮಾವನ್ನು ಬಿಡುಗಡೆ ಮಾಡುವುದಾಗಿ ನಿರ್ದೇಶಕ ಚೇತನ್ ಕುಮಾರ್ ಭರಸವೆ ನೀಡಿದ್ದಾರೆ.
ಇದನ್ನೂ ಓದಿ:
Puneeth Rajkumar Funeral: ಅಪ್ಪನ ಸಮಾಧಿಗೆ ಪುನೀತ್ ಪುತ್ರಿಯರಿಂದ ಪೂಜೆ; ಕಂಠೀರವ ಸ್ಟುಡಿಯೋದಲ್ಲಿ ಕಣ್ಣೀರ ವಿದಾಯ