ನಿರ್ದೇಶಕ ಸಂತೋಷ್ ಆನಂದ್ ರಾಮ್ ಮತ್ತು ನಟ ಪುನೀತ್ ರಾಜ್ಕುಮಾರ್ ಕಾಂಬಿನೇಷನ್ನ ಯುವರತ್ನ ಸಿನಿಮಾ ಏ.1ರಂದು ತೆರೆಕಾಣುತ್ತಿದೆ. ಇದಕ್ಕೂ ಮುನ್ನ ಯುವರತ್ನ ತಂಡ ‘ಯುವ ಸಂಭ್ರಮ’ ಹೆಸರಲ್ಲಿ ರಾಜ್ಯಾದ್ಯಂತ ಸಂಚಾರ ಮಾಡಿ ಪ್ರಚಾರ ನಡೆಸಿತ್ತು. ಈ ವೇಳೆ ಮಾಸ್ಕ್ ಹಾಕದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕೊವಿಡ್ ನಿಯಮವನ್ನು ಉಲ್ಲಂಘನೆ ಮಾಡಿತ್ತು. ಈ ವಿಚಾರ ಈಗ ಹೈಕೋರ್ಟ್ ಮೆಟ್ಟಿಲೇರಿದೆ.
ಗಣ್ಯರಿಂದ ಕೊವಿಡ್ ಮಾರ್ಗಸೂಚಿ ಉಲ್ಲಂಘನೆ ಮಾಡಿದ ಕುರಿತು ದಂಡ ವಿಧಿಸುವ ಬಗ್ಗೆ ಹೈಕೋರ್ಟ್ಗೆ ಅಧಿಸೂಚನೆ ಸಲ್ಲಿಕೆ ಮಾಡಲಾಗಿದೆ. ಈ ವೇಳೆ ‘ಯುವರತ್ನ’ ಚಿತ್ರತಂಡದಿಂದ ಹಾಗೂ ಬಿಜೆಪಿ, ರಾಯಚೂರು ಸಮಾವೇಶದಲ್ಲಿ ಕೊವಿಡ್ ನಿಯಮ ಉಲ್ಲಂಘನೆ ಆಗಿರುವ ಬಗ್ಗೆ ವಕೀಲ ಜಿ.ಆರ್.ಮೋಹನ್ ಹೈಕೋರ್ಟ್ಗೆ ಜ್ಞಾಪನಾ ಪತ್ರ ಸಲ್ಲಿಕೆ ಮಾಡಿದ್ದಾರೆ. ಜತೆಗೆ, ದಂಡ ಸ್ವೀಕರಿಸುವ ಅಧಿಕಾರಿಗಳ ಪಟ್ಟಿಯನ್ನು ಕೂಡ ಹೈಕೋರ್ಟ್ಗೆ ಸಲ್ಲಿಕೆ ಮಾಡಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಈ ಬಗ್ಗೆ ಸರ್ಕಾರ ಕೈಗೊಂಡ ಕ್ರಮದ ವಿವರಗಳನ್ನು ಏಪ್ರಿಲ್ 8ರೊಳಗೆ ನೀಡಲು ಸೂಚನೆ ಕೊಟ್ಟಿದೆ.
ಮಾಸ್ಕ್, ಸಾಮಾಜಿಕ ಅಂತರ ಪಾಲಿಸದವರಿಗೆ ನಗರ ಪಾಲಿಕೆ ವ್ಯಾಪ್ತಿಯಲ್ಲಿ 250 ರೂಪಾಯಿ ದಂಡ ಹಾಗೂ ಇತರೆ ಪ್ರದೇಶಗಳಲ್ಲಿ 100 ರೂಪಾಯಿ ದಂಡ ವಿಧಿಸಲಾಗುತ್ತಿದೆ. ಮಾರ್ಗಸೂಚಿ ಪಾಲಿಸದ ಪಾರ್ಟಿ ಹಾಲ್ಗಳಿಗೆ 5,000 ರೂಪಾಯಿ ದಂಡ, ಎಸಿ ಪಾರ್ಟಿಹಾಲ್, ಹೋಟೆಲ್ಗಳಿಗೆ 10,000 ರೂ. ದಂಡ, ಸಮಾವೇಶ ಮತ್ತು ಸಭೆಗಳ ಆಯೋಜಕರಿಗೆ 10,000 ರೂಪಾಯಿ ದಂಡ ವಿಧಿಸಲಾಗುತ್ತಿದೆ.
ಎಚ್ಚರಿಕೆ ನೀಡಿದ್ದ ಸುಧಾಕರ್
‘ರಾಜ್ಯದಲ್ಲಿ ದಿನೇದಿನೆ ಕೊವಿಡ್ ಪ್ರಕರಣಗಳು ಹೆಚ್ಚಳ ಆಗುತ್ತಿವೆ. ಆದರೂ ಕೆಲವು ಸೆಲೆಬ್ರಿಟಿಗಳು ಸಾವಿರಾರು ಸಂಖ್ಯೆಗಳಲ್ಲಿ ಅಭಿಮಾನಿಗಳನ್ನು ಗುಂಪು ಸೇರಿಸುತ್ತಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಚಲನಚಿತ್ರ ತಾರೆಯರಿಗೆ ನಾನು ಮನವಿ ಮಾಡುತ್ತೇನೆ’ ಎಂದು ಸುಧಾಕರ್ ಇಂದು ಹೇಳಿದ್ದರು. ’ಸಾವಿರಾರು ಜನರನ್ನು ಸೇರಿಸದಿರಿ. ನೀವೂ ಮಾಸ್ಕ್ ಧರಿಸಿ, ನಿಮ್ಮ ಅಭಿಮಾನಿಗಳಿಗೂ ಮಾಸ್ಕ್ ಧರಿಸುವಂತೆ ಹೇಳಬೇಕು. ಎಲ್ಲರೂ ಕೋವಿಡ್-19 ನಿಯಮಗಳನ್ನು ಪಾಲಿಸಬೇಕು. ಚಲನಚಿತ್ರ ತಾರೆಯರಿಗೆ ಇದು ನನ್ನ ಕಳಕಳಿಯ ಮನವಿ’ ಎಂದು ಹೇಳಿರುವ ಸುಧಾಕರ್, ಯಾವುದೇ ಸ್ಟಾರ್ ನಟರ ಹೆಸರನ್ನೂ ಪ್ರಸ್ತಾಪಿಸಿರಲಿಲ್ಲ.
ಇದನ್ನೂ ಓದಿ: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಯುವರತ್ನ ಚಿತ್ರದ ಪ್ರಚಾರ: ಮಂಡ್ಯದಲ್ಲಿ ಅಪ್ಪುಗೆ ಗ್ರ್ಯಾಂಡ್ ವೆಲಕಮ್
ಪ್ರಚಾರಕ್ಕಾಗಿ ಜನರ ಗುಂಪು ಸೇರಿಸುತ್ತಿರುವ ಸ್ಟಾರ್ಗಳಿಗೆ ಕೋವಿಡ್-19 ನಿಯಮಾವಳಿ ನೆನಪಿಸಿದ ಸುಧಾಕರ್!
Published On - 7:29 pm, Wed, 24 March 21