
ಅಪ್ಪ ಎಂದರೆ ಎಲ್ಲರಿಗೂ ಹೆಮ್ಮೆ. ಇಂದು (ಜೂ.20) ವಿಶ್ವ ಅಪ್ಪಂದಿರ ದಿನ ಆಚರಿಸಲಾಗುತ್ತಿದೆ. ಮಕ್ಕಳನ್ನು ಬೆಳೆಸುವ ಕಾಯಕದಲ್ಲಿ ಅಪ್ಪನ ಕೊಡುಗೆ ಅಪಾರ. ತಂದೆಗೆ ಕೃತಜ್ಞತೆ ಸಲ್ಲಿಸಲು ಇಂದು ಎಲ್ಲರೂ ಸೋಶಿಯಲ್ ಮೀಡಿಯಾದಲ್ಲಿ ವಿವಿಧ ಪೋಸ್ಟ್ಗಳನ್ನು ಹಾಕುತ್ತಿದ್ದಾರೆ. ಸೆಲೆಬ್ರಿಟಿಗಳು ಕೂಡ ಈ ವಿಶೇಷ ದಿನದಂದು ಅಪ್ಪನಿಗೆ ಧನ್ಯವಾದ ತಿಳಿಸುತ್ತಿದ್ದಾರೆ. ತಮ್ಮ ಅಭಿಮಾನಿಗಳೆಲ್ಲರಿಗೂ ಅಪ್ಪಂದಿರ ದಿನದ ಶುಭಾಶಯಗಳನ್ನು ತಿಳಿಸಲಾಗುತ್ತಿದೆ. ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಕೂಡ ಒಂದು ವಿಶೇಷ ಹಾಡಿನ ಮೂಲಕ ವಿಶ್ ಮಾಡಿದ್ದಾರೆ.
ಭಾರತೀಯ ಚಿತ್ರರಂಗದ ಮೇರು ನಟ ಡಾ. ರಾಜ್ಕುಮಾರ್ ಅವರ ಸುಪುತ್ರ ಪುನೀತ್ ರಾಜ್ಕುಮಾರ್ ಅವರ ಮೇಲೆ ತಂದೆಯ ಪ್ರಭಾವ ಅಪಾರ. ಯಾಕೆಂದರೆ, ಚಿಕ್ಕ ವಯಸ್ಸಿನಿಂದಲೇ ಸಿನಿಮಾಗಳಲ್ಲಿ ನಟಿಸುತ್ತಿದ್ದ ಪುನೀತ್ಗೆ ತಂದೆಯೇ ಮೊದಲ ಗುರು. ಆಗ ಪುನೀತ್ ಹೆಸರು ಮಾಸ್ಟರ್ ಲೋಹಿತ್ ಎಂದಾಗಿತ್ತು. ಹಲವಾರು ಸಿನಿಮಾಗಳಲ್ಲಿ ಅವರು ಅಪ್ಪಾಜಿ ಜೊತೆ ನಟಿಸುವ ಅವಕಾಶ ಪಡೆದುಕೊಂಡಿದ್ದರು. ಆ ಮೂಲಕ ಚಿಕ್ಕವಯಸ್ಸಿನಲ್ಲಿಯೇ ಅವರಿಗೆ ಸಿನಿಮಾ ಬಗ್ಗೆ ಅಪಾರ ಅನುಭವ ದಕ್ಕಿತ್ತು.
ಪುನೀತ್ ರಾಜ್ಕುಮಾರ್ ಬಾಲನಟನಾಗಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದ ‘ಭಾಗ್ಯವಂತ’ ಸಿನಿಮಾದಲ್ಲಿ ಡಾ. ರಾಜ್ಕುಮಾರ್ ಅವರು ಅತಿಥಿ ಪಾತ್ರ ಮಾಡಿದ್ದರು. ಆ ಚಿತ್ರದ ‘ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ, ಚಂದ್ರ ಮೇಲೆ ಬಂದ..’ ಹಾಡು ಸೂಪರ್ ಹಿಟ್ ಆಗಿತ್ತು. ಕೇಳುಗರ ಫೇವರೀಟ್ ಲಿಸ್ಟ್ನಲ್ಲಿ ಇಂದಿಗೂ ಆ ಗೀತೆ ಸ್ಥಾನ ಪಡೆದುಕೊಂಡಿದೆ. ಅದೇ ಹಾಡನ್ನು ಮತ್ತೆ ಹಂಚಿಕೊಳ್ಳುವ ಮೂಲಕ ಅಪ್ಪಂದಿರ ದಿನಕ್ಕೆ ಪುನೀತ್ ರಾಜ್ಕುಮಾರ್ ಅವರು ಶುಭಕೋರಿದ್ದಾರೆ.
ಇದನ್ನೂ ಓದಿ:
ಡಾ. ರಾಜ್ಕುಮಾರ್ ಸಹಾಯವನ್ನು ನಾನು ಯಾವತ್ತೂ ಮರೆಯುವುದಿಲ್ಲ: ಹಿರಿಯ ಹಾಸ್ಯ ನಟ ಎಂ ಎಸ್ ಉಮೇಶ್