‘ಪುನೀತ್ ಜಿಮ್​ಗೆ ತೆರಳಿರಲಿಲ್ಲ’; ಮೃತಪಡುವುದಕ್ಕೂ ಮೊದಲು ನಡೆದಿದ್ದೇನು? ಕಣ್ಣೀರಿಡುತ್ತಲೇ ವಿವರಿಸಿದ ಅಪ್ಪು ಅಂಗರಕ್ಷಕ

| Updated By: ರಾಜೇಶ್ ದುಗ್ಗುಮನೆ

Updated on: Oct 30, 2021 | 1:23 PM

ಪುನೀತ್​ ರಾಜ್​ಕುಮಾರ್​ ಅವರು ಜಿಮ್​ಗೆ ತೆರಳಿದ್ದರು ಎಂದು ಎಲ್ಲ ಕಡೆಗಳಲ್ಲೂ ವರದಿ ಆಗಿದೆ. ಹೃದಯಾಘಾತ ಆಗುವುದಕ್ಕೂ ಮೊದಲು ಅವರು ಎರಡು ಗಂಟೆ ಜಿಮ್​ ಮಾಡಿದರು ಎಂದು ಹೇಳಲಾಗಿತ್ತು. ಆದರೆ, ಪುನೀತ್​ ಜಿಮ್​ಗೆ ತೆರಳಿಯೇ ಇಲ್ಲ ಎಂದಿದ್ದಾರೆ ಛಲಪತಿ.

‘ಪುನೀತ್ ಜಿಮ್​ಗೆ ತೆರಳಿರಲಿಲ್ಲ’; ಮೃತಪಡುವುದಕ್ಕೂ ಮೊದಲು ನಡೆದಿದ್ದೇನು? ಕಣ್ಣೀರಿಡುತ್ತಲೇ ವಿವರಿಸಿದ ಅಪ್ಪು ಅಂಗರಕ್ಷಕ
ಪುನೀತ್​ ರಾಜ್​ಕುಮಾರ್​ ಮತ್ತು ಅವರ ಬಾಡಿಗಾರ್ಡ್​
Follow us on

ಪುನೀತ್​ ರಾಜ್​ಕುಮಾರ್​ ಅವರು ಮೃತಪಟ್ಟಿರುವ ವಿಚಾರವನ್ನು ಯಾರಿಂದಲೂ ಅರಗಿಸಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ. ಅವರಿಗೆ ಕೋಟ್ಯಂತರ ಅಭಿಮಾನಿಗಳು ಇದ್ದರು. ಈಗ ಪುನೀತ್​ ಅವರ ಅಂತಿಮ ದರ್ಶನ ಪಡೆಯಲು ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಜನರು ನೆರೆದಿದ್ದಾರೆ. ಇಂದು (ಅಕ್ಟೋಬರ್​ 30) ಸಂಜೆ ಅವರ ಅಂತ್ಯಕ್ರಿಯೆ ಕಂಠೀರವ ಸ್ಟುಡಿಯೋ ಆವರಣದಲ್ಲಿ ನಡೆಯಲಿದೆ. ಅಂತಿಮ ದರ್ಶನದ ವೇಳೆ ಅಂಗರಕ್ಷಕ ಛಲಪತಿ ಅವರು ಟಿವಿ9 ಕನ್ನಡದ ಜತೆಗೆ ಮಾತನಾಡಿದ್ದಾರೆ.

ಪುನೀತ್​ ರಾಜ್​ಕುಮಾರ್​ ಅವರು ಜಿಮ್​ಗೆ ತೆರಳಿದ್ದರು ಎಂದು ಎಲ್ಲ ಕಡೆಗಳಲ್ಲೂ ವರದಿ ಆಗಿದೆ. ಹೃದಯಾಘಾತ ಆಗುವುದಕ್ಕೂ ಮೊದಲು ಅವರು ಎರಡು ಗಂಟೆ ಜಿಮ್​ ಮಾಡಿದರು ಎಂದು ಹೇಳಲಾಗಿತ್ತು. ಆದರೆ, ಪುನೀತ್​ ಜಿಮ್​ಗೆ ತೆರಳಿಯೇ ಇಲ್ಲ ಎಂದಿದ್ದಾರೆ ಛಲಪತಿ. ‘ನಿನ್ನೆ ಅವರು ವರ್ಕೌಟ್​ಗೆ ಹೋಗಿರಲಿಲ್ಲ. ಅಕ್ಕ (ಪುನೀತ್​ ಪತ್ನಿ ಅಶ್ವಿನಿ) ಮತ್ತು ಪುನೀತ್​ ಹೊರಹೋಗುತ್ತಿದ್ದೇವೆ ಎಂದರು. ನಾನು ಕಾರು ಹತ್ತಿಸಿ ನಾನೂ ಹತ್ತೋಕೆ ಹೋದೆ. ನೀವು ಇಲ್ಲೇ ಇರಿ ನಾವು ಬರುತ್ತೇವೆ ಎಂದು ಬಾಸ್​ ಹೇಳಿದರು. ಹಾಗಾಗಿ ನಾನು ಮನೆಯಲ್ಲೇ ಇದ್ದೆ. ನಂತರ ಅವರು ಬರಲೇ ಇಲ್ಲ’ ಎಂದು ಕಣ್ಣೀರು ಹಾಕಿದರು ಛಲಪತಿ.

‘ವಿಕ್ರಮ್​ ಆಸ್ಪತ್ರೆಗೆ ಬನ್ನಿ ಎಂದು ಕರೆ ಬಂತು. ನಾನು ಪುನೀತ್​ ಕುಟುಂಬದವರಲ್ಲಿ ಯಾರಿಗೋ ತೊಂದರೆ ಆಗಿದೆ ಎಂದು ಭಾವಿಸಿದೆ. ಆದರೆ, ನಮ್ಮ ಬಾಸ್​ಗೆ ತೊಂದರೆ ಆಗಿದೆ ಎಂದು ಆ ನಂತರ ಗೊತ್ತಾಯಿತು. ಸುಸ್ತಾಗಿದೆ ಅಂತ ಮೊದಲೇ ಹೇಳಿದ್ದರೆ ನಾನು ಅವರ ಜತೆಯೇ ಹೋಗುತ್ತಿದ್ದೆ. ಅವರಿಗೆ ಇಸಿಜಿ ಮಾಡಿದ್ರು. ಅಲ್ಲಿಯೇ ಬಿದ್ದು ಬಿಟ್ಟಿದ್ದರು. ಅವರು ಹೋಗಿ 10 ನಿಮಿಷ ಆಗಿದೆ ಎಂದರು’ ಎನ್ನುತ್ತಲೇ ಕಣ್ಣೀರಿಟ್ಟರು ಅವರು.

‘ಅವರು ನೋಡಿಕೊಳ್ಳುತ್ತಿದ್ದ ರೀತಿಯನ್ನು ಶಬ್ದಗಳಲ್ಲಿ ಹೇಳಲು ಆಗುವುದಿಲ್ಲ. ನಾನು ಇರೋವರೆಗೂ ನನ್ನ ಜತೆಯೇ ನೀನು ಇರಬೇಕು ಎಂದು ಹೇಳಿದ್ದರು. ಬರ್ತೀನಿ ಇರಿ ಎಂದು ಹೇಳಿ ಹೋದವರು ಬಂದೇ ಇಲ್ಲ’ ಎಂದು ಛಲಪತಿ  ಬೇಸರ ಹೊರ ಹಾಕಿದರು.

ಇದನ್ನೂ ಓದಿ: ಪುನೀತ್​ಗೆ ಪಾಕಿಸ್ತಾನದ ಅಭಿಮಾನಿಯ ಗಾನ ನಮನ; ಕನ್ನಡದಲ್ಲಿ ಹಾಡು ಹೇಳುವ ಮೂಲಕ ಶ್ರದ್ಧಾಂಜಲಿ

ಪುನೀತ್​ಗೆ ಪಾಕಿಸ್ತಾನದ ಅಭಿಮಾನಿಯ ಗಾನ ನಮನ; ಕನ್ನಡದಲ್ಲಿ ಹಾಡು ಹೇಳುವ ಮೂಲಕ ಶ್ರದ್ಧಾಂಜಲಿ

Published On - 1:23 pm, Sat, 30 October 21