ಪುನೀತ್​ ತೋರಿದ್ದ ಪ್ರೀತಿ-ಕಾಳಜಿ ನೆನೆದು ನುಡಿ ನಮನ ಸಲ್ಲಿಸಿದ ‘ಶಕ್ತಿಧಾಮ’ ಮಕ್ಕಳು

| Updated By: shivaprasad.hs

Updated on: Nov 17, 2021 | 7:24 AM

Puneeth Rajkumar: ‘ಪುನೀತ್​ ರಾಜ್​ಕುಮಾರ್​ ಅವರು ನಮಗೆ ತಂದೆ-ಅಣ್ಣನ ಸ್ಥಾನ ನೀಡಿದ್ದರು. ಹೊಸ ಕಟ್ಟಡ ನಿರ್ಮಾಣ ಆಗಿತ್ತು. ಅದರ ಉದ್ಘಾಟನೆಗೆ ಅವರು ಬರಬೇಕಿತ್ತು. ಅಷ್ಟರೊಳಗೆ ಹೀಗಾಗಿದೆ’ ಎಂದಿದ್ದಾರೆ ಶಕ್ತಿಧಾಮದ ಮಕ್ಕಳು.

ಪುನೀತ್​ ತೋರಿದ್ದ ಪ್ರೀತಿ-ಕಾಳಜಿ ನೆನೆದು ನುಡಿ ನಮನ ಸಲ್ಲಿಸಿದ ‘ಶಕ್ತಿಧಾಮ’ ಮಕ್ಕಳು
ಶಕ್ತಿಧಾಮದ ವಿದ್ಯಾರ್ಥಿನಿಯರು
Follow us on

ಪುನೀತ್​ ರಾಜ್​ಕುಮಾರ್ (Puneeth Rajkumar)​ ಅವರಿಗೆ ಚಿತ್ರರಂಗದವರು ‘ಪುನೀತ ನಮನ’ (Puneetha Namana) ಕಾರ್ಯಕ್ರಮದ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಸಿನಿಮಾ ಕ್ಷೇತ್ರ ಮತ್ತು ಸಾಮಾಜಿಕ ಕೆಲಸಗಳಲ್ಲಿ ಪುನೀತ್​ ಮಾಡಿದ ಸಾಧನೆಯನ್ನು ಎಲ್ಲರೂ ಕೊಂಡಾಡಿದ್ದಾರೆ. ಅಪ್ಪು ಅವರನ್ನು ನೆನಪಿಸಿಕೊಳ್ಳುವ ಸಲುವಾಗಿ ಚಿತ್ರರಂಗ ಮತ್ತು ರಾಜಕೀಯ ಕ್ಷೇತ್ರದ ಗಣ್ಯರು ಅನೇಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮೈಸೂರಿನ ಶಕ್ತಿಧಾಮದ (Shakti Dhama) ಮಕ್ಕಳು ಕೂಡ ಆಗಮಿಸಿ ಅಪ್ಪುಗೆ ನಮನ ಸಲ್ಲಿಸಿದ್ದರು. ಶಕ್ತಿಧಾಮದ ಮೂಲಕ ಸಾವಿರಾರು ಮಕ್ಕಳಿಗೆ ಆಶ್ರಯ ನೀಡಿದವರು ಪುನೀತ್​. ಇಂದು ‘ಪವರ್​ ಸ್ಟಾರ್​’ ಇಲ್ಲದೇ ಶಕ್ತಿಧಾಮ ಅನಾಥವಾಗಿದೆ. ಅವರನ್ನು ನೆನಪಿಸಿಕೊಂಡು ಶಕ್ತಿಧಾಮದ ಮಕ್ಕಳು ಭಾವುಕರಾಗಿದ್ದಾರೆ. ಟಿವಿ9 ಕನ್ನಡ ಜೊತೆ ಮಾತನಾಡಿರುವ ಅವರೆಲ್ಲರೂ ಪುನೀತ್​ಗೆ ನುಡಿ ನಮನ ಸಲ್ಲಿಸಿದ್ದಾರೆ.

‘ಪುನೀತ್​ ರಾಜ್​ಕುಮಾರ್​ ಅವರು ಇಲ್ಲ ಎಂಬುದನ್ನು ನಮಗೆ ನಂಬೋಕೆ ಆಗ್ತಾ ಇಲ್ಲ. ಈಗಲೂ ಅವರು ನಮ್ಮ ಜೊತೆ ಇದ್ದಾರೆ ಅಂತಲೇ ಅನಿಸುತ್ತಿದೆ. ರಾಜ್​ಕುಮಾರ್ ರೀತಿಯೇ ಪುನೀತ್​ ಅವರ ವ್ಯಕ್ತಿತ್ವ ಇತ್ತು. ಅವರಾಗಲಿ, ಶಿವಣ್ಣ ಅವರಾಗಲಿ ನಮ್ಮನ್ನು ಬೇರೆಯವರ ರೀತಿ ನೋಡಿಲ್ಲ. ಸ್ವಂತ ಮಕ್ಕಳ ರೀತಿಯೇ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಯಾವುದೋ ರೀತಿಯಲ್ಲಿ ಅವರು ನಮಗೆ ಆಶೀರ್ವಾದ ಮಾಡುತ್ತ ಇರುತ್ತಾರೆ. ಅವರ ನಗುವೇ ಸ್ಫೂರ್ತಿ’ ಎಂದಿದ್ದಾರೆ ಶಕ್ತಿಧಾಮದ ಹೆಣ್ಣು ಮಕ್ಕಳು.

‘ಪುನೀತ್​ ಅವರು ನಮಗೆ ತಂದೆ-ಅಣ್ಣನ ಸ್ಥಾನ ನೀಡಿದ್ದರು. ಹೊಸ ಕಟ್ಟಡ ನಿರ್ಮಾಣ ಆಗಿತ್ತು. ಅದರ ಉದ್ಘಾಟನೆಗೆ ಅವರು ಬರಬೇಕಿತ್ತು. ಅಷ್ಟರೊಳಗೆ ಹೀಗಾಗಿದೆ. ಈ ರೀತಿಯ ಒಂದು ಕಾರ್ಯಕ್ರಮದಲ್ಲಿ ನಾವು ಭಾಗವಹಿಸಬೇಕಾಗುತ್ತದೆ ಅಂತ ಊಹಿಸಿರಲಿಲ್ಲ. ಇದು ಅನಿರೀಕ್ಷಿತ. ನಾವು ಕಾಲೇಜಿಗೆ​ ಹೋಗಿದ್ದಾಗ ಕೂಡಲೇ ಕರೆ ಮಾಡಿ ಕರೆಸಿದರು. ನಂತರವೇ ಗೊತ್ತಾಗಿದ್ದು ನಾವು ಈ ಕಾರ್ಯಕ್ರಮಕ್ಕೆ ಬರುತ್ತೇವೆ ಅಂತ. ಅವರಿಗೆ ನಮನ ಸಲ್ಲಿಸಲು ಇಂಥದ್ದೊಂದು ವೇದಿಕೆ ಸಿಕ್ಕಿದ್ದಕ್ಕೆ ಖುಷಿ ಆಯಿತು’ ಎಂದು ಅವರು ಹೇಳಿದ್ದಾರೆ.

‘ಅವರು ಶಕ್ತಿಧಾಮಕ್ಕೆ ಬಂದಾಗೆಲ್ಲ ನಾವು ಏನೇ ಕೇಳಿದರೂ ಅದನ್ನು ನೆರವೇರಿಸುತ್ತಿದ್ದರು. ಸಿನಿಮಾಗೆ ಕರೆದುಕೊಂಡು ಹೋಗುತ್ತಿದ್ದರು. ಪಾರ್ವತಮ್ಮ ರಾಜ್​ಕುಮಾರ್​ ಅವರ ಜನ್ಮದಿನದಂದು ನಮಗೆಲ್ಲ ಬಟ್ಟೆ ನೀಡಿದ್ದರು. ಪ್ರತಿ ಬಾರಿ ಬಂದಾಗೆಲ್ಲ ನಮಗೆ ಗಿಫ್ಟ್​ ತಂದುಕೊಡುತ್ತಿದ್ದರು’ ಎಂದು ಪುನೀತ್​ ಅವರ ಒಳ್ಳೆಯತನವನ್ನು ಶಕ್ತಿಧಾಮದ ಮಕ್ಕಳು ನೆನಪಿಸಿಕೊಂಡಿದ್ದಾರೆ.

ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್​ ಮುಂತಾದ ರಾಜಕೀಯ ಗಣ್ಯರು ಆಗಮಿಸಿದ್ದರು. ಕನ್ನಡ ಚಿತ್ರರಂಗದ ಬಹುತೇಕ ಎಲ್ಲ ಸೆಲೆಬ್ರಿಟಿಗಳು ಭಾಗಿ ಆಗಿದ್ದರು. ತಮಿಳು ನಟರಾದ ವಿಶಾಲ್​, ಶರತ್​ ಕುಮಾರ್​ ಮುಂತಾದವರು ಪುನೀತ್​ಗೆ ನುಡಿ ನಮನ ಸಲ್ಲಿಸಿದರು.

ಇದನ್ನೂ ಓದಿ:

‘ಶಿವಣ್ಣ ಮತ್ತು ನಾನು ಮುಖ ನೋಡಿಕೊಂಡ್ರೆ ನಾಚಿಕೆ ಆಗತ್ತೆ​’: ನೋವಿನಲ್ಲಿ ಕಣ್ಣೀರು ಹಾಕಿದ ರಾಘಣ್ಣ

ಪುನೀತ ನಮನ: ಕಣ್ಣೀರು ತರಿಸಿತು ಸುದೀಪ್​ ಧ್ವನಿಯಲ್ಲಿ ಮೂಡಿಬಂದ ಪುನೀತ್​ ವಿಡಿಯೋ