
ನಟ ಕಮಲ್ ಹಾಸನ್ (Kamal Haasan) ಅವರು ‘ಥಗ್ ಲೈಫ್’ ಸಿನಿಮಾದ ಪ್ರಚಾರದ ವೇಳೆ ಅನಗತ್ಯವಾಗಿ ಭಾಷೆಯ ವಿಷಯ ಮಾತನಾಡಿದರು. ‘ತಮಿಳಿನಿಂದ ಕನ್ನಡ (Kannada) ಹುಟ್ಟಿದ್ದು’ ಎಂದು ಕಮಲ್ ಹಾಸನ್ ಹೇಳಿದ್ದನ್ನು ಅನೇಕ ಸೆಲೆಬ್ರಿಟಿಗಳು ವಿರೋಧಿಸಿದ್ದಾರೆ. ಹಂಸಲೇಖ, ಸಾಧುಕೋಕಿಲ, ಸಾ.ರಾ. ಗೋವಿಂದು, ಜಯಮಾಲಾ, ಸುಮಲತಾ ಅಂಬರೀಷ್ ಮುಂತಾದ ಸೆಲೆಬ್ರಿಟಿಗಳು ಈ ಕುರಿತು ಮಾತನಾಡಿದ್ದಾರೆ. ಈಗ ನಟಿ ರಚಿತಾ ರಾಮ್ ಕೂಡ ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ಎಲ್ಲಾದರೂ ಇರು ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು..’ ಹಾಡಿನ ಮೂಲಕ ರಚಿತಾ ರಾಮ್ (Rachita Ram) ಅವರು ಮಾತು ಆರಂಭಿಸಿದ್ದಾರೆ.
‘ನಾನು ಯಾಕೆ ಈ ಹಾಡು ಹೇಳುತ್ತಿದ್ದೇನೆ ಎಂಬುದು ನಿಮ್ಮೆಲ್ಲರಿಗೂ ಗೊತ್ತಾಗಿದೆ. ಕನ್ನಡ, ಕರ್ನಾಟಕ ಅಂತ ಬಂದರೆ ಪ್ರತಿಯೊಬ್ಬ ಕನ್ನಡಿಗನಿಗೂ ಇದು ಒಂದು ಎಮೋಷನ್. ನಮ್ಮ ಕನ್ನಡ ಭಾಷೆಯ ಬಗ್ಗೆ ಯಾರಾದರೂ ಟೀಕೆ ಮಾಡುತ್ತಿದ್ದಾರೆ ಎಂದರೆ ನಾವು ಸುಮ್ಮನೆ ಕೂರೋಕೆ ಆಗಲ್ಲ. ನಾವು ಕನ್ನಡದವರು ಎಷ್ಟು ವಿಶಾಲ ಹೃದಯದವರು ಎಂದರೆ ಎಲ್ಲ ಭಾಷೆಯ ಸಿನಿಮಾ ನೋಡುತ್ತೇವೆ, ಪ್ರತಿ ಭಾಷೆಯ ಸಿನಿಮಾ ಹಾಡುಗಳನ್ನು ಕೇಳುತ್ತೇವೆ. ಕಲಾವಿದರಿಗೆ ಬೆಂಬಲ ಕೊಡುತ್ತೇವೆ. ಆದರೆ ನಮ್ಮ ಭಾಷೆ ಬಗ್ಗೆ ಯಾರಾದರೂ ಮಾತನಾಡುತ್ತಿದ್ದಾರೆ ಎಂದಾಗ ನಾವು ಯಾಕೆ ಧ್ವನಿ ಎತ್ತಬಾರದು’ ಎಂದಿದ್ದಾರೆ ರಚಿತಾ ರಾಮ್.
‘ನಾವು ಯಾವ ಭಾಷೆ ಬಗ್ಗೆಯೂ ಕೆಟ್ಟದಾಗಿ ಮಾತನಾಡುತ್ತಿಲ್ಲ. ಎಲ್ಲ ಭಾಷೆಯನ್ನೂ ನಾವು ಗೌರವಿಸುತ್ತೇವೆ. ಕನ್ನಡದ ಬಗ್ಗೆ ಯಾರೂದರೂ ಕೆಟ್ಟದಾಗಿ ಮಾತನಾಡಿದರೆ ನಾವು ಎದ್ದು ನಿಲ್ಲಬೇಕು. ದೊಡ್ಡವರೆಲ್ಲ ಜಾಣರಲ್ಲ, ಚಿಕ್ಕವರೆಲ್ಲ ಕೋಣರಲ್ಲ ಎಂಬ ಕನ್ನಡದ ಹಾಡು ಕೂಡ ನನಗೆ ನೆನಪಿಗೆ ಬರುತ್ತಿದೆ. ಚಿಕ್ಕವರು ತಪ್ಪು ಮಾಡಿದರೆ ಕ್ಷಮೆ ಕೇಳುವ ತನಕ ಬಿಡಲ್ಲ. ಆದರೆ ದೊಡ್ಡವರು ತಪ್ಪು ಮಾಡಿದರೆ? ತಪ್ಪು ಮಾಡಿದ ಬಳಿಕ ಕ್ಷಮೆ ಕೇಳುವುದರಲ್ಲಿ ಏನು ತಪ್ಪಿದೆ?’ ಎಂದು ರಚಿತಾ ರಾಮ್ ಪ್ರಶ್ನಿಸಿದ್ದಾರೆ.
‘ಕನ್ನಡವನ್ನು ಸರಿಯಾಗಿ ಮಾತನಾಡದೇ ಇರುವವರಿಗೆ ಹೀಗಲ್ಲ ಹಾಗೆ ಅಂತ ನಾವು ತಿಳಿಸಿ ಹೇಳುತ್ತೇವೆ. ಇನ್ನು, ಕನ್ನಡ ಭಾಷೆಯ ಬಗ್ಗೆಯೇ ತಪ್ಪಾಗಿ ಮಾತನಾಡುವವರಿಗೆ ಏನಂತ ಹೇಳೋಣ? ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ಆಚರಿಸುತ್ತೇವೆ. ಈಗ ಪ್ರತಿಯೊಬ್ಬ ಕನ್ನಡಿಗರು ನಮ್ಮ ಭಾಷೆ ಮೇಲೆ ಇರುವ ಪ್ರೀತಿ, ಗೌರವವನ್ನು ತಿಳಿಸೋಣ’ ಎಂದು ರಚಿತಾ ರಾಮ್ ಹೇಳಿದ್ದಾರೆ.
ಇದನ್ನೂ ಓದಿ: ‘ತಮಿಳಿಗೆ ಲಿಪಿ ನೀಡಿದ್ದು ಕನ್ನಡ’: ಕಮಲ್ ಹಾಸನ್ಗೆ ಹಂಸಲೇಖ ಖಡಕ್ ತಿರುಗೇಟು
ಕರ್ನಾಟಕದಾದ್ಯಂತ ಕಮಲ್ ಹಾಸನ್ ಮಾತಿಗೆ ವಿರೋಧ ವ್ಯಕ್ತವಾಗುತ್ತಿದೆ. ಹಾಗಿದ್ದರೂ ಕೂಡ ಅವರು ಕ್ಷಮೆ ಕೇಳಿಲ್ಲ. ಜೂನ್ 5ರಂದು ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ ಸಿನಿಮಾ ಬಿಡುಗಡೆ ಆಗಲಿದೆ. ಕ್ಷಮೆ ಕೇಳದಿದ್ದರೆ ಆ ಸಿನಿಮಾದ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಕನ್ನಡಪರ ಸಂಘಟನೆಗಳು ಪಟ್ಟು ಹಿಡಿದಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.