ನಟಿ ರಾಧಿಕಾ ಪಂಡಿತ್ ಹಾಗೂ ನಟ ಯಶ್ ದಾಂಪತ್ಯಕ್ಕೆ ಈಗ ಐದು ವರ್ಷ. ಕಿರುತೆರೆಯಲ್ಲಿ ಒಟ್ಟಾಗಿ ನಟಿಸಿ, ನಂತರ ಹಿರಿತೆರೆಗೆ ಬಂದು ಮಿಂಚಿದ ಈ ಜೋಡಿ ಪರಸ್ಪರ ಪ್ರೀತಿಸಿ ಮದುವೆ ಆದರು. ಇವರು ದಾಂಪತ್ಯಕ್ಕೆ ಕಾಲಿಟ್ಟು ಐದು ವರ್ಷ ಕಳೆದಿದೆ. ಈ ವಿಶೇಷ ದಿನದ ಬಗ್ಗೆ ರಾಧಿಕಾ ಪೋಸ್ಟ್ ಒಂದನ್ನು ಮಾಡಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಸಖತ್ ಖುಷಿಪಟ್ಟಿದ್ದಾರೆ. ಅಲ್ಲದೆ ಅವರಿಗೆ ಶುಭಾಶಯ ತಿಳಿಸುತ್ತಿದ್ದಾರೆ.
ರಾಧಿಕಾ ಪಂಡಿತ್ ಹಾಗೂ ಯಶ್ ಕಿರುತೆರೆಯಲ್ಲಿ ಒಟ್ಟಿಗೆ ಕೆಲಸ ಮಾಡಿದವರು. ‘ಮೊಗ್ಗಿನ ಮನಸು’ ಸಿನಿಮಾ ಮೂಲಕ ಹಿರಿತೆರೆಗೆ ಒಟ್ಟಿಗೆ ಕಾಲಿಟ್ಟರು. ಮೊದಲ ಸಿನಿಮಾದಲ್ಲೇ ಯಶಸ್ಸು ಸಿಕ್ಕಿತು. ಇಬ್ಬರ ನಡುವೆ ಪ್ರೀತಿ ಮೊಳೆತಿತ್ತು. ಆದರೆ, ಎಲ್ಲಿಯೂ ಆ ಬಗ್ಗೆ ಹೇಳಿಕೊಂಡಿರಲಿಲ್ಲ. ನಂತರ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಅವರು ಈ ವಿಚಾರವನ್ನು ಅಧಿಕೃತ ಮಾಡಿದ್ದರು. ಈ ಜೋಡಿ ಡಿಸೆಂಬರ್ 9, 2016 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು. ಈಗ ಇವರ ಕುಟುಂಬಕ್ಕೆ ಮತ್ತಿಬ್ಬರು ಸೇರ್ಪಡೆ ಆಗಿದ್ದಾರೆ. ಆಯ್ರಾ ಹಾಗೂ ಯಥರ್ವ್ ಜತೆ ಯಶ್ ಮತ್ತು ರಾಧಿಕಾ ಹಾಯಾಗಿ ಜೀವನ ನಡೆಸುತ್ತಿದ್ದಾರೆ.
ರಾಧಿಕಾ ಪಂಡಿತ್ ಇಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಮಾಡಿದ್ದಾರೆ. ಯಶ್ ಜತೆ ಅವರು ಕುಳಿತಿದ್ದಾರೆ. ಈ ಪೋಸ್ಟ್ಗೆ ಅವರು ಪ್ರೀತಿಯಿಂದ ಸಾಲುಗಳನ್ನು ಕೂಡ ಬರೆದು ಹಾಕಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ಖುಷಿಪಟ್ಟಿದ್ದಾರೆ.
ರಾಧಿಕಾ ಪಂಡಿತ್ ನಟನೆಯಿಂದ ದೂರ ಉಳಿದಿದ್ದಾರೆ. ಆಗೊಂದು ಈಗೊಂದು ಪೋಸ್ಟ್ ಹಾಕುವ ಮೂಲಕ ಅಭಿಮಾನಿಗಳ ಜತೆ ರಾಧಿಕಾ ಪಂಡಿತ್ ಸಂಪರ್ಕದಲ್ಲಿದ್ದಾರೆ. ಇನ್ನು, ರಾಧಿಕಾ ಕೊನೆಯದಾಗಿ ಕಾಣಿಸಿಕೊಂಡಿದ್ದು 2019ರಲ್ಲಿ ತೆರೆಗೆ ಬಂದ ‘ಆದಿ ಲಕ್ಷ್ಮಿ ಪುರಾಣ’ ಚಿತ್ರದಲ್ಲಿ. ಈ ಸಿನಿಮಾ ತೆರೆಗೆ ಬಂದ ನಂತರದಲ್ಲಿ ಅವರು ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಇನ್ನು, ಯಶ್ ‘ಕೆಜಿಎಫ್ 2’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದಲ್ಲಿ ಸಂಜಯ್ ದತ್ ಅಧೀರನಾಗಿ ಕಾಣಿಸಿಕೊಂಡಿದ್ದಾರೆ. ಏಪ್ರಿಲ್ ತಿಂಗಳಲ್ಲಿ ಈ ಸಿನಿಮಾ ತೆರೆಗೆ ಬರುತ್ತಿದೆ.
ಇದನ್ನೂ ಓದಿ: ಯಶ್-ರಾಧಿಕಾ ಪಂಡಿತ್ ಪುತ್ರಿ ಆಯ್ರಾ ಹುಟ್ಟುಹಬ್ಬ; 3ನೇ ವರ್ಷದ ಜನ್ಮದಿನ ಆಚರಿಸಿಕೊಂಡ ಸ್ಟಾರ್ ಕಿಡ್
ಯಶ್ -ರಾಧಿಕಾ ಪಂಡಿತ್ ಮುದ್ದು ಮಕ್ಕಳ ಕ್ಯೂಟ್ ಫೋಟೋಗಳಿಗೆ ಸಿಕ್ಕಾಪಟ್ಟೆ ಲೈಕ್ಸ್