‘ರಾಧಿಕಾ ಪಂಡಿತ್ ಅಂದು ಆ ಪಾತ್ರ ಒಪ್ಪಿರಲಿಲ್ಲ’: ಯಾವ ಸಿನಿಮಾ? ಯಾವ ಪಾತ್ರ?

|

Updated on: Aug 02, 2023 | 10:39 PM

Radhika Pandit: ಹಲವು ನೆನಪುಳಿವ ಪಾತ್ರಗಳಲ್ಲಿ ನಟಿಸಿರುವ ನಟಿ ರಾಧಿಕಾ ಪಂಡಿತ್, ಒಂದು ನಿರ್ದಿಷ್ಟ ಸಿನಿಮಾದ ಪಾತ್ರವನ್ನು ಒಪ್ಪಿಕೊಳ್ಳುವ ಮುನ್ನ ಬಹಳ ಗೊಂದಲಕ್ಕೆ ಬಿದ್ದಿದ್ದರಂತೆ.

ರಾಧಿಕಾ ಪಂಡಿತ್ ಅಂದು ಆ ಪಾತ್ರ ಒಪ್ಪಿರಲಿಲ್ಲ: ಯಾವ ಸಿನಿಮಾ? ಯಾವ ಪಾತ್ರ?
ರಾಧಿಕಾ
Follow us on

ಪತಿ, ಯಶ್ (Yash) ಪ್ಯಾನ್ ಇಂಡಿಯಾ ಸ್ಟಾರ್ ಆದ ಬಳಿಕ ತಾವು ಚಿತ್ರರಂಗದಿಂದ ದೂರಾಗಿದ್ದಾರೆ ನಟಿ ರಾಧಿಕಾ ಪಂಡಿತ್ (Radhika Pandit). ಕನ್ನಡ ಸಿನಿಮಾ ಪ್ರೇಕ್ಷಕರ ನೆನಪಿನಲ್ಲಿ ಉಳಿವ ಹಲವು ಒಳ್ಳೆಯ ಸಿನಿಮಾಗಳಲ್ಲಿ ಅತ್ಯುತ್ತಮ ನಟನೆ ನೀಡಿದ ರಾಧಿಕಾ ಪಂಡಿತ್ ಸಿನಿಮಾ ರಂಗದಲ್ಲಿ ಸಕ್ರಿಯವಾಗಿ ಕಳೆದ ಹತ್ತು ವರ್ಷಗಳಲ್ಲಿ ಹಲವು ನೆನಪುಳಿವ ಪಾತ್ರಗಳಲ್ಲಿ ನಟಿಸಿದ್ದಾರೆ. ಹಲವು ನಿರ್ದೇಶಕರ ನೆಚ್ಚಿನ ನಟಿಯಾಗಿದ್ದ ರಾಧಿಕಾ, ಪತಿಯಷ್ಟೆ ಅಭಿನಯ ಪ್ರತಿಭೆ ಉಳ್ಳವರಾಗಿದ್ದರು. ಅವರ ಅಭಿನಯಕ್ಕೆ ಬಂದಿರುವ ಪ್ರಶಸ್ತಿಗಳು ಇದಕ್ಕೆ ಸಾಕ್ಷಿ.

ರಾಧಿಕಾ ಪಂಡಿತ್​ರನ್ನು ನಾಯಕಿಯಾಗಿ ಪರಿಚಯಿಸಿದ್ದು ಮಾತ್ರವೇ ಅಲ್ಲದೆ ಅವರಿಗಾಗಿ ಎರಡು ಅದ್ಭುತ ಸಿನಿಮಾಗಳನ್ನು ನಿರ್ದೇಶಿಸಿದ ಕನ್ನಡ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕ ಶಶಾಂಕ್, ರಾಧಿಕಾ ಪಂಡಿತ್ ಪಾತ್ರವೊಂದನ್ನು ಒಪ್ಪುವ ಮುನ್ನ ಅನುಭವಿಸಿದ್ದ ಗೊಂದಲದ ಬಗ್ಗೆ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದ ಸಕ್ಸಸ್ ಮೀಟ್ ಕಾರ್ಯಕ್ರಮದಲ್ಲಿ ನೆನಪು ಮಾಡಿಕೊಂಡರು.

‘ಮೊಗ್ಗಿನ ಮನಸ್ಸು’ ಸಿನಿಮಾದ ಮೂಲಕ ರಾಧಿಕಾ ಪಂಡಿತ್ ನಾಯಕಿಯಾಗಿ ಪರಿಚಿತವಾದರು. ಆ ಸಿನಿಮಾ ಸೂಪರ್ ಡೂಪರ್ ಹಿಟ್ ಆಯಿತು. ರಾಧಿಕಾ ಪಂಡಿತ್ ಸ್ಟಾರ್ ಆಗಿಬಿಟ್ಟರು. ಆ ಒಂದೇ ಸಿನಿಮಾ ಮೂಲಕ ದೊಡ್ಡ ಅಭಿಮಾನಿ ವರ್ಗವನ್ನು ಪಡೆದುಕೊಂಡರು. ಆದರೆ ಅದಾದ ಒಂದು ವರ್ಷದಲ್ಲಿಯೇ ಶಶಾಂಕ್, ‘ಕೃಷ್ಣನ್ ಲವ್ ಸ್ಟೋರಿ’ ಸಿನಿಮಾ ಕತೆಯನ್ನು ರಾಧಿಕಾ ಪಂಡಿತ್​ಗೆ ಹೇಳಿದ್ದರು. ‘ಮೊಗ್ಗಿನ ಮನಸ್ಸು’ ಸಿನಿಮಾದ ‘ಒಳ್ಳೆ ಹುಡುಗಿ’ ಪಾತ್ರದಿಂದ ಹೆಸರು ಮಾಡಿದ್ದ ರಾಧಿಕಾ, ‘ಕೃಷ್ಣನ್ ಲವ್ ಸ್ಟೋರಿ’ಯ ತೀರ ಪ್ರಾಕ್ಟಿಲ್, ತುಸು ನೆಗೆಟಿವ್ ಶೇಡ್ ಇದ್ದ ಪಾತ್ರವನ್ನು ಒಪ್ಪಿಕೊಳ್ಳಲು ಹಿಂದೇಟು ಹಾಕಿದ್ದರಂತೆ.

ಇದನ್ನೂ ಓದಿ:Radhika Pandit: ಹೊಸ ಫೋಟೋ ಹಂಚಿಕೊಂಡು ಅಭಿಮಾನಿಗಳಿಗೆ ಜೀವನದ ಬಗ್ಗೆ ಪಾಠ ಹೇಳಿದ ನಟಿ ರಾಧಿಕಾ ಪಂಡಿತ್

”ಮೊಗ್ಗಿನ ಮನಸ್ಸು’ ನಲ್ಲಿ ಒಳ್ಳೆಯ ಹುಡುಗಿಯಾಗಿ ನೋಡಿದ್ದಾರೆ. ಈ ಸಿನಿಮಾದಲ್ಲಿ ನೋಡಿದರೆ ಪ್ರೀತಿಸಿದ ಹುಡುಗನಿಗೆ ಕೈ ಕೊಡುವ, ಹಣದ ಆಸೆಗೆ ಬೇರೊಬ್ಬ ಹುಡುಗನನ್ನು ಪ್ರೀತಿಸುವ, ಹುಚ್ಚಿಯಂತೆ ಆಡುವ ಯುವತಿಯ ಪಾತ್ರ. ಇದನ್ನು ಮಾಡಿದರೆ ಜನ ಒಪ್ಪಿಕೊಳ್ಳುತ್ತಾರಾ? ಹುಡುಗರು ನನ್ನನ್ನು ಬೈಯ್ಯಲ್ವಾ? ವಿಲನ್ ರೀತಿ ನೋಡಲ್ವ?” ಎಂದು ರಾಧಿಕಾ ಪಂಡಿತ್ ಪ್ರಶ್ನೆ ಮಾಡಿದ್ದರಂತೆ.

ಆದರೆ ರಾಧಿಕಾರನ್ನು ಕನ್ವಿನ್ಸ್ ಮಾಡಿದ ನಿರ್ದೇಶಕ ಶಶಾಂಕ್, ”ಇದು ಅಭಿನಯಕ್ಕೆ ಸ್ಕೋಪ್ ಇರುವ ಸಿನಿಮಾ. ನಿಮ್ಮ ಅಭಿನಯ ಪ್ರತಿಭೆಯನ್ನು ತೋರಿಸಬಹುದಾದ ಪಾತ್ರ. ಈ ಸಿನಿಮಾವನ್ನು ಒಪ್ಪಿಕೊಳ್ಳಿ, ಈ ಸಿನಿಮಾದಲ್ಲಿ ನಿನ್ನ ಪಾತ್ರವೇ ಹೈಲೆಟ್ ಆಗುತ್ತದೆ ನಂಬಿಕೆ ಇಡಿ” ಎಂದು ಹೇಳಿ ಒಪ್ಪಿಸಿದರಂತೆ. ಅಂತೆಯೇ ರಾಧಿಕಾ, ತಮ್ಮ ವೃತ್ತಿ ಜೀವನದ ಅದ್ಭುತ ಅಭಿನಯವನ್ನು ‘ಕೃಷ್ಣನ್ ಲವ್ ಸ್ಟೋರಿ’ ಸಿನಿಮಾದಲ್ಲಿ ನೀಡಿದರು. ಅದಕ್ಕಾಗಿ ಹಲವು ಪ್ರಶಸ್ತಿಗಳನ್ನು ಸಹ ಪಡೆದುಕೊಂಡಿದ್ದು ಈಗ ಇತಿಹಾಸ.

‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದಲ್ಲಿ ಮಿಲನಾ ನಾಗರಾಜ್​ ಅವರೂ ಸಹ ಮುತ್ತುಲಕ್ಷ್ಮಿ ಪಾತ್ರವನ್ನು ಒಪ್ಪಿರಲಿಲ್ಲವಂತೆ, ಕೊನೆಗೆ ಶಶಾಂಕ್ ಅವರು ರಾಧಿಕಾ ಪಂಡಿತ್​ರ ಉದಾಹರಣೆ ನೀಡಿ ಮಿಲನಾರನ್ನು ನಟಿಸುವಂತೆ ಒಪ್ಪಿಸಿದ್ದಾಗಿಯೂ ಸಿನಿಮಾದ ಸಕ್ಸಸ್ ಮೀಟ್​ನಲ್ಲಿ ಹೇಳಿಕೊಂಡರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ