ನಟಿ ರಾಗಿಣಿ ದ್ವಿವೇದಿ ಹೊಸ ಸಿನಿಮಾಗೆ ಬಿ.ಎಂ. ಗಿರಿರಾಜ್​ ನಿರ್ದೇಶನ

|

Updated on: May 06, 2024 | 10:52 PM

ರಾಗಿಣಿ ದ್ವಿವೇದಿ ಅವರು ಹಲವು ಪ್ರಾಜೆಕ್ಟ್​ಗಳಲ್ಲಿ ಬ್ಯುಸಿ ಆಗಿದ್ದಾರೆ. ಈಗ ಅವರ ಹೊಸ ಸಿನಿಮಾ ಅನೌನ್ಸ್​ ಆಗಿದೆ. ಈ ಸಿನಿಮಾಗೆ ಬಿ.ಎಂ. ಗಿರಿರಾಜ್​ ನಿರ್ದೇಶನ ಮಾಡಲಿದ್ದಾರೆ. ‘ಇದರ ಫಸ್ಟ್ ಲುಕ್ ಸಖತ್​ ಆಗಿದೆ‌. ಟೈಟಲ್​ ಹಾಗೂ ಕಥೆ ಇನ್ನೂ ಸೂಪರ್ ಆಗಿದೆ. ಶೀಘ್ರವೇ ಟೈಟಲ್​ ಅನಾವರಣ ಆಗಲಿದೆ’ ಎಂದು ರಾಗಿಣಿ ಹೇಳಿದ್ದಾರೆ. ಸಿನಿಮಾ ಬಗ್ಗೆ ಇಲ್ಲಿದೆ ಒಂದಷ್ಟು ಮಾಹಿತಿ..

ನಟಿ ರಾಗಿಣಿ ದ್ವಿವೇದಿ ಹೊಸ ಸಿನಿಮಾಗೆ ಬಿ.ಎಂ. ಗಿರಿರಾಜ್​ ನಿರ್ದೇಶನ
ರಾಗಿಣಿ ದ್ವಿವೇದಿ
Follow us on

ಗಿರೀಶ್ ವಿ. ಗೌಡ ಸಾರಥ್ಯದಲ್ಲಿ ಹಾಗೂ ರಾಮಕೃಷ್ಣ ನಿಗಾಡಿ ಅವರ ನಿರ್ಮಾಣದಲ್ಲಿ ಹೊಸ ಸಿನಿಮಾ (New Kannada Movie) ಅನೌನ್ಸ್​ ಆಗಿದೆ. ಈ ಸಿನಿಮಾಗೆ ‘ಜಟ್ಟ’, ‘ಮೈತ್ರಿ’ ಚಿತ್ರಗಳ ಖ್ಯಾತಿಯ ನಿರ್ದೇಶಕ ಬಿ.ಎಂ. ಗಿರಿರಾಜ್ (BM Giriraj) ಅವರು ನಿರ್ದೇಶನ ಮಾಡಲಿದ್ದಾರೆ. ಸದ್ಯದಲ್ಲೇ ಆರಂಭ ಆಗಲಿರುವ ಈ ಸಿನಿಮಾದ ಬಗ್ಗೆ ಮಾಹಿತಿ ಹೊರಬಿದ್ದಿದೆ. ನಟಿ ರಾಗಿಣಿ ದ್ವಿವೇದಿ (Ragini Dwivedi) ಅವರು ಈ ಸಿನಿಮಾಗೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಇತ್ತೀಚಿಗೆ ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್​ ಬಿಡುಗಡೆ ಆಯಿತು.

‘ಹರಿವು’ ಸಿನಿಮಾದಿಂದ ನನ್ನ ಸಿನಿಜರ್ನಿ ಪ್ರಾರಂಭ ಆಯಿತು ಎಂದಿರುವ ಗಿರೀಶ್ ವಿ. ಗೌಡ ಅವರು ಕಳೆದ 10 ವರ್ಷಗಳಿಂದ ರಾಗಿಣಿ ದ್ವಿವೇದಿ ಜತೆಗೆ ಸಿನಿಮಾ ನಿರ್ಮಾಣ ಮಾಡಬೇಕೆಂದು ಪ್ರಯತ್ನಿಸುತ್ತಿದ್ದರು. ಅದಕ್ಕೆ ಈಗ ಕಾಲ ಕೂಡಿ ಬಂದಿದೆ. ‘ನಿರ್ದೇಶಕ ಬಿ.ಎಂ. ಗಿರಿರಾಜ್ ಒಳ್ಳೆಯ ಕಥೆ ಸಿದ್ಧ ಮಾಡಿಕೊಂಡಿದ್ದಾರೆ. ಈ ಹಿಂದೆ ‘ಹೊಂಬಣ್ಣ’ ಸಿನಿಮಾವನ್ನು ನಿರ್ಮಿಸಿದ್ದ ರಾಮಕೃಷ್ಣ ನಿಗಾಡಿ ಅವರು ‘ಸಂಚಲನ ಮೂವೀಸ್’ ಮೂಲಕ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈಗ ಫಸ್ಟ್ ಲುಕ್ ಬಿಡುಗಡೆ ಆಗಿದೆ‌. ಈ ಸಂದರ್ಭದಲ್ಲೇ ಜಿ.ಜಿ. ಸ್ಟುಡಿಯೋಸ್ ಎಂಬ ಸಂಸ್ಥೆಯನ್ನು ಕೂಡ ಆರಂಭಿಸಿದ್ದೇವೆ‌’ ಎಂದು ಅವರು ಹೇಳಿದ್ದಾರೆ.

‘ಇತ್ತೀಚಿನ ದಿನಗಳಲ್ಲಿ ಅನೇಕ ಸಿನಿಮಾಗಳು ನಿರ್ಮಾಣ ಆಗುತ್ತಿವೆ. ಆದರೆ ರಿಲೀಸ್​ ಸಮಯದಲ್ಲಿ ಪ್ರಮೋಶನ್ ಹೇಗೆ ಮಾಡಬೇಕು ಎಂಬುದು ತಿಳಿಯದೆ ಕೆಲವು ಚಿತ್ರಗಳು ಸೋತಿವೆ.‌ ನಮ್ಮ‌ ಸಂಸ್ಥೆಯು ಮುಂಬೈನ ಸಂಸ್ಥೆಯೊಂದರ ಜೊತೆಗೆ ಸೇರಿ ಆಸಕ್ತಿ ಇರುವ ಸಿನಿಮಾ ನಿರ್ಮಾಪಕರಿಗೆ ಚಿತ್ರದ ಪ್ರಮೋಷನ್ ಬಗ್ಗೆ ತಿಳಿಸುವ ಕೆಲಸ ಮಾಡಲಿದೆ. ಮೇ 24ರಂದು ರಾಗಿಣಿ ಅವರ ಹುಟ್ಟುಹಬ್ಬ. ಹಾಗಾಗಿ ವಿಶೇಷ ಕವರ್ ಪೇಜ್ ಬಿಡುಗಡೆ ಮಾಡಿದ್ದೇವೆ’ ಎಂದು ಗಿರೀಶ್​ ಹೇಳಿದ್ದಾರೆ.

ನಿರ್ದೇಶಕ ಬಿ.ಎಂ. ಗಿರಿರಾಜ್​ ಅವರು ಕಥೆ ಬಗ್ಗೆ ಮಾತನಾಡಿದ್ದಾರೆ. ‘ಕೌಂಡಿನ್ಯ ಅವರು ನನ್ನ ಇಷ್ಟದ ಲೇಖಕರು. ಅವರ ಕಥೆಗಳಿಂದ ಪ್ರೇರಿತನಾಗಿ ನಾನು ಈ ಸಿನಿಮಾ ಕಥೆ ಸಿದ್ಧಮಾಡಿದ್ದೇನೆ. ರಾಗಿಣಿ ದ್ವಿವೇದಿ ಅವರ ಜೊತೆ ನನಗೆ ಇದು ಮೊದಲ ಸಿನಿಮಾ’ ಎಂದು ಅವರು ಹೇಳಿದ್ದಾರೆ. ಭಾಸ್ಕರ್ ಗುರೂಜಿ, ಅರುಣ್ ಗುರೂಜಿ, ಮೋಕ್ಷಗುಂಡಂ ಗುರೂಜಿ, ಪಿ.ಆರ್.ಓ. ಸುಧೀಂದ್ರ ವೆಂಕಟೇಶ್ ಈ ನೂತನ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ.

ಇದನ್ನೂ ಓದಿ: ಅಭಿಮಾನಿಗಳ ಕಣ್ಣು ಕುಕ್ಕುವಂತಿವೆ ರಾಗಿಣಿ ದ್ವಿವೇದಿ ಫೋಟೋಸ್​

‘ಈ ಸಿನಿಮಾದ ಫಸ್ಟ್ ಲುಕ್ ಸಖತಾಗಿದೆ‌. ಅದಕ್ಕಿಂತಲೂ ಸಿನಿಮಾ ಟೈಟಲ್​ ಮತ್ತು ಕಥೆ ಇನ್ನೂ ಚೆನ್ನಾಗಿದೆ. ಶೀಘ್ರದಲ್ಲೇ ಶೀರ್ಷಿಕೆ ಅನಾವರಣ ಆಗಲಿದೆ’ ಎಂದು ರಾಗಿಣಿ ದ್ವಿವೇದಿ ಹೇಳಿದ್ದಾರೆ. ಇದಲ್ಲದೇ ಇನ್ನೂ ಹಲವು ಪ್ರಾಜೆಕ್ಟ್​ಗಳಲ್ಲಿ ರಾಗಿಣಿ ಬ್ಯುಸಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.