ಕೇವಲ 99 ರೂಪಾಯಿಗೆ ‘ರಾಮನ ಅವತಾರ’ ಸಿನಿಮಾ ನೋಡುವ ಆಫರ್
ಸಿನಿಮಾ ಟಿಕೆಟ್ ಬೆಲೆ ಮುಗಿಲು ಮುಟ್ಟಿದೆ ಎನ್ನುವ ಕಾರಣಕ್ಕೆ ಪ್ರೇಕ್ಷಕರು ಥಿಯೇಟರ್ ಕಡೆಗೆ ಬರುವುದನ್ನು ಕಡಿಮೆ ಮಾಡಿದ್ದಾರೆ ಎಂಬ ಮಾತಿದೆ. ಹಾಗಾಗಿ ಕೆಲವು ಚಿತ್ರತಂಡಗಳು ಟಿಕೆಟ್ ಬೆಲೆ ತಗ್ಗಿಸುವ ಮೂಲಕ ಜನರಿಗೆ ಆಫರ್ ನೀಡಿದ್ದುಂಟು. ಈಗ ಕನ್ನಡದ ‘ರಾಮನ ಅವತಾರ’ ಸಿನಿಮಾ ಕೂಡ ಇದೇ ಹಾದಿ ಅನುಸರಿಸಿದೆ. ಈ ಚಿತ್ರಕ್ಕೆ ರಿಷಿ ಹೀರೋ.
ನಟ ರಿಷಿ (Rishi) ಅಭಿನಯದ ‘ರಾಮನ ಅವತಾರ’ (Ramana Avatara) ಸಿನಿಮಾ ಬಿಡುಗಡೆ ಆಗುತ್ತಿದೆ. ಈ ಚಿತ್ರತಂಡದಿಂದ ಒಂದು ಗುಡ್ ನ್ಯೂಸ್ ಸಿಕ್ಕಿದೆ. ಮೇ 10ರಂದು ಈ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಮೇ 9ರಂದು ಪೇಯ್ಡ್ ಪ್ರೀಮಿಯರ್ ಏರ್ಪಡಿಸಲಾಗಿದೆ. ಪೇಯ್ಡ್ ಪ್ರೀಮಿಯರ್ ಶೋಗಳ ಟಿಕೆಟ್ ದರ 99 ರೂಪಾಯಿಗೆ ನಿಗದಿ ಮಾಡಲಾಗಿದೆ. ಅಲ್ಲದೇ, ಮೇ 10ರಂದು ಕೂಡ ಟಿಕೆಟ್ ಬೆಲೆ ಕೇವಲ 99 ರೂಪಾಯಿ ಇರಲಿದೆ ಎಂದು ಚಿತ್ರತಂಡ ತಿಳಿಸಿದೆ. ಆ ಮೂಲಕ ಸಿನಿಪ್ರಿಯರನ್ನು ಸೆಳೆಯುವ ಪ್ರಯತ್ನ ಮಾಡಲಾಗಿದೆ.
‘ಕವಲುದಾರಿ’ ರೀತಿಯ ಗಂಭೀರ ಸಿನಿಮಾವನ್ನು ಮಾಡಿ ರಿಷಿ ಸೈ ಎನಿಸಿಕೊಂಡರು. ‘ಆಪರೇಷನ್ ಅಲಮೇಲಮ್ಮ’ ರೀತಿಯ ಕಾಮಿಡಿ ಸಿನಿಮಾಗಳಲ್ಲೂ ಅಭಿನಯಿಸಿ ಜನಮನ ಗೆದ್ದರು. ಈಗ ಅವರು ‘ರಾಮನ ಅವತಾರ’ ಸಿನಿಮಾದ ಮೂಲಕ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ. ಸಿನಿಮಾದ ಪ್ರಚಾರ ಕಾರ್ಯವನ್ನು ಬಿರುಸಿನಿಂದ ಮಾಡಲಾಗುತ್ತಿದೆ. ಡಿಫರೆಂಟ್ ಆದಂತಹ ಪ್ರಮೋಷನ್ ವಿಡಿಯೋಗಳ ಮೂಲಕ ಗಮನ ಸೆಳೆಯಲಾಗುತ್ತಿದೆ. ಅದರ ಜೊತೆಗೆ ಟಿಕೆಟ್ ಬೆಲೆ ಕಡಿಮೆ ಮಾಡುವ ಮೂಲಕ ಪ್ರೇಕ್ಷಕರಿಗೆ ಗುಡ್ ನ್ಯೂಸ್ ನೀಡಲಾಗಿದೆ.
‘ರಾಮನ ಅವತಾರ’ ಚಿತ್ರದಲ್ಲಿ ರಿಷಿ ಅವರಿಗೆ ಜೋಡಿಯಾಗಿ ಪ್ರಣೀತಾ ಸುಭಾಷ್ ಮತ್ತು ಶುಭ್ರ ಅಯ್ಯಪ್ಪ ಅಭಿನಯಿಸಿದ್ದಾರೆ. ಅರುಣ್ ಸಾಗರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವಿಕಾಸ್ ಪಂಪಾಪತಿ ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದೆ. ಇದು ಅವರ ನಿರ್ದೇಶನದ ಮೊದಲ ಸಿನಿಮಾ. ಈ ಚಿತ್ರದಲ್ಲಿ ನಿರ್ದೇಶಕರು ಆಧುನಿಕ ರಾಮನ ಕಹಾನಿಯನ್ನು ಹೇಳಲಿದ್ದಾರೆ. ಟ್ರೇಲರ್ ನೋಡಿದರೆ ರಾಮಾಯಣ ನೆನಪಿಸುವ ಕೆಲವು ದೃಶ್ಯಗಳು ಕಾಣುತ್ತವೆ. ರಾಮ ಹೇಗೆ ಜೆಂಟಲ್ ಮ್ಯಾನ್ ಆಗುತ್ತಾನೆ? ರಾವಣನ ರೀತಿಯಲ್ಲಿ ಎದುರಾಗುವ ಸಮಸ್ಯೆಗಳನ್ನು ಹೇಗೆ ಪರಿಹರಿಸುತ್ತಾನೆ ಎಂಬುದು ಈ ಸಿನಿಮಾದಲ್ಲಿ ಇರಲಿದೆ.
ಇದನ್ನೂ ಓದಿ: ಮೇ 10ಕ್ಕೆ ತಿಳಿಯಲಿದೆ ವಿಜಯ್ ರಾಘವೇಂದ್ರ ನಟನೆಯ ‘ಗ್ರೇ ಗೇಮ್ಸ್’ ರಹಸ್ಯ
ಅಮರೇಜ್ ಸೂರ್ಯವಂಶಿ ಅವರು ಈ ಸಿನಿಮಾಗೆ ನಿರ್ಮಾಣ ಮಾಡಿದ್ದಾರೆ. ‘ಸ್ಟಾರ್ ಫ್ಯಾಬ್ ಪ್ರೊಡಕ್ಷನ್’ ಅಡಿಯಲ್ಲಿ ‘ಆಪರೇಷನ್ ಅಲಮೇಲಮ್ಮ’ ಸಿನಿಮಾವನ್ನು ಕೂಡ ಅವರೇ ನಿರ್ಮಾಣ ಮಾಡಿದ್ದರು. ವಿಷ್ಣುಪ್ರಸಾದ್ ಮತ್ತು ಸಮೀರ್ ದೇಶಪಾಂಡೆ ಅವರು ‘ರಾಮನ ಅವತಾರ’ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ಉಡುಪಿ ಮತ್ತು ಬೆಂಗಳೂರು ಸುತ್ತಮುತ್ತ ಶೂಟಿಂಗ್ ಮಾಡಲಾಗಿದೆ. ಜೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ಅಮರನಾಥ್ ಸಂಕಲನ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.