ಮೇ 10ಕ್ಕೆ ತಿಳಿಯಲಿದೆ ವಿಜಯ್ ರಾಘವೇಂದ್ರ ನಟನೆಯ ‘ಗ್ರೇ ಗೇಮ್ಸ್’ ರಹಸ್ಯ
‘ಗ್ರೇ ಗೇಮ್ಸ್’ ಸಿನಿಮಾದ ಟ್ರೇಲರ್ ಬಿಡುಗಡೆ ಸಂದರ್ಭದಲ್ಲಿ ಸ್ಪಂದನಾ ಹಾಗೂ ಪುನೀತ್ ರಾಜ್ಕುಮಾರ್ ಅವರನ್ನು ವಿಜಯ್ ರಾಘವೇಂದ್ರ ಸ್ಮರಿಸಿಕೊಂಡರು. ಮೇ 10ರಂದು ಈ ಸಿನಿಮಾ ತೆರೆಕಾಣಲಿದೆ. ಶ್ರೀಮುರಳಿ, ಅಶ್ವಿನಿ ಪುನೀತ್ ರಾಜ್ಕುಮಾರ್ ಮುಂತಾದವರು ಈ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ.
ನಟ ವಿಜಯ್ ರಾಘವೇಂದ್ರ (Vijay Raghavendra) ಅವರು ಬೇರೆ ಬೇರೆ ರೀತಿಯ ಕಥೆಗಳನ್ನು ಆಯ್ಕೆ ಮಾಡಿಕೊಂಡು ನಟಿಸುತ್ತಿದ್ದಾರೆ. ಅವರು ಪ್ರಮುಖ ಪಾತ್ರ ಮಾಡಿರುವ ‘ಗ್ರೇ ಗೇಮ್ಸ್’ ಸಿನಿಮಾ (Grey Games Kannada Movie) ಮೇ 10ರಂದು ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಸಾಕಷ್ಟು ಸೀಕ್ರೆಟ್ ಇದೆ. ಇತ್ತೀಚೆಗೆ ಇದರ ಟ್ರೇಲರ್ (Grey Games Trailer) ಬಿಡುಗಡೆ ಮಾಡಲಾಯಿತು. ಹಲವಾರ ಸಸ್ಪೆನ್ಸ್ ಅಂಶಗಳನ್ನು ಟ್ರೇಲರ್ನಲ್ಲಿ ತೋರಿಸಲಾಗಿದೆ. ಆ ಎಲ್ಲ ರಹಸ್ಯಗಳಿಗೆ ಮೇ 10ರಂದು ಚಿತ್ರಮಂದಿರದಲ್ಲಿ ಉತ್ತರ ಸಿಗಲಿದೆ. ಈ ಸಿನಿಮಾಗೆ ಆನಂದ್ ಮುಗದ್ ಅವರು ಬಂಡವಾಳ ಹೂಡಿದ್ದಾರೆ. ‘ಆಯನ’ ಸಿನಿಮಾದ ಖ್ಯಾತಿಯ ಗಂಗಾಧರ್ ಸಾಲಿಮಠ ಅವರು ‘ಗ್ರೇ ಗೇಮ್ಸ್’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.
ಆನಂದ್ ಆಡಿಯೋ ಮೂಲಕ ‘ಗ್ರೇ ಗೇಮ್ಸ್’ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಎಸ್.ಎ. ಚಿನ್ನೇಗೌಡ, ಶ್ರೀಮುರಳಿ, ಅಶ್ವಿನಿ ಪುನೀತ್ ರಾಜ್ಕುಮಾರ್, ವೀಣಾ ಮುಂತಾದ ಸೆಲೆಬ್ರಿಟಿಗಳು ಸೇರಿ ಟ್ರೇಲರ್ ಬಿಡುಗಡೆ ಮಾಡಿದ್ದಾರೆ. ಬಳಿಕ ಅವರು ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ವಿಶೇಷ ಏನೆಂದರೆ, ಈ ಸಿನಿಮಾದ ಮೂಲಕ ವಿಜಯ್ ರಾಘವೇಂದ್ರ ಮತ್ತು ಶ್ರೀಮುರಳಿ ಅವರ ಅಕ್ಕನ ಮಗ ಜೈ ಅವರು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಭಾವನಾ ರಾವ್, ಶೃತಿ ಪ್ರಕಾಶ್, ರವಿ ಭಟ್, ಇಶಿತಾ, ಅಪರ್ಣ ವಸ್ತಾರೆ ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.
ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ಶ್ರೀಮುರಳಿ, ‘ಈ ಸಿನಿಮಾದ ಟ್ರೇಲರ್ ಬಹಳ ಚೆನ್ನಾಗಿದೆ. ನಮ್ಮಣ್ಣ ರಾಘು ತುಂಬ ಸ್ಮಾರ್ಟ್ ಆಗಿ ಕಾಣುತ್ತಿದ್ದಾನೆ. ನಾವು ಆಡಿ ಬೆಳೆಸಿದ ಜೈ ಸಹ ಈ ಸಿನಿಮಾದಲ್ಲಿ ಅಭಿನಯಿಸಿರುವುದು ಖುಷಿಯಾಗಿದೆ. ಸಿನಿಮಾ ಯಶಸ್ವಿಯಾಗಲಿ’ ಎಂದು ವಿಶ್ ಮಾಡಿದರು. ಈ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಿದ್ದಕ್ಕೆ ಜೈ ಅವರು ಧನ್ಯವಾದ ತಿಳಿಸಿದರು.
‘ಗ್ರೇ ಗೇಮ್ಸ್’ ಸಿನಿಮಾದ ಟ್ರೇಲರ್:
ಟ್ರೇಲರ್ ಬಿಡುಗಡೆ ವೇಳೆ ಪತ್ನಿ ಸ್ಪಂದನಾ ಅವರನ್ನು ವಿಜಯ್ ರಾಘವೇಂದ್ರ ಸ್ಮರಿಸಿದರು. ‘ನಿರ್ದೇಶಕರು ಹೇಳಿದ ಕಥೆ ನನಗೆ ತುಂಬ ಇಷ್ಟವಾಯ್ತು. ನಾನು ಕೂಡ ಇವತ್ತೇ ಟ್ರೇಲರ್ ನೋಡಿದ್ದು. ಈ ಸಮಯದಲ್ಲಿ ಪುನೀತ್ ರಾಜ್ಕುಮಾರ್ ಮತ್ತು ನನ್ನ ಪತ್ನಿ ಸ್ಪಂದನಾ ಅವರನ್ನು ನಾನು ಸ್ಮರಿಸಿಕೊಳ್ಳುತ್ತೇನೆ. ನನ್ನ ಅಕ್ಕನ ಮಗ ಜೈ ಕಂಡರೆ ಸ್ಪಂದನಾಗೆ ತುಂಬಾ ಪ್ರೀತಿ. ಇಂದು ಸ್ಪಂದನಾ ಇದಿದ್ದರೆ ಅವರಿಗೆ ಸಖತ್ ಸಂತೋಷ ಆಗುತ್ತಿತ್ತು’ ಎಂದು ವಿಜಯ್ ರಾಘವೇಂದ್ರ ಹೇಳಿದರು.
ಇದನ್ನೂ ಓದಿ: ಸಿಗರೇಟ್ ಸೇದುವ ಬಗ್ಗೆ ಸ್ಪಂದನಾಗೆ ಇದ್ದ ಅಭಿಪ್ರಾಯ ಏನು? ವಿಜಯ್ ರಾಘವೇಂದ್ರ ಹೇಳಿದ್ದಿಷ್ಟು..
ನಿರ್ದೇಶಕ ಗಂಗಾಧರ್ ಸಾಲಿಮಠ ಅವರು ‘ಇದೊಂದು ಮೈಂಡ್ ಗೇಮ್ ಕುರಿತಾದ ಸಿನಿಮಾ’ ಎಂದಿದ್ದಾರೆ. ‘ಕನ್ನಡದಲ್ಲಿ ಇಂಥ ಕಥೆ ಬಹಳ ಅಪರೂಪ ಎನ್ನಬಹುದು. ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡು ಮೆಚ್ಚುಗೆ ಪಡೆದುಕೊಂಡ ಈ ಸಿನಿಮಾ ಮೇ 10ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಸಿನಿಮಾ ಚೆನ್ನಾಗಿ ಮೂಡಿಬರಲು ಕಾರಣರಾದ ಎಲ್ಲರಿಗೂ ಧನ್ಯವಾದಗಳು’ ಎಂದು ನಿರ್ದೇಶಕರ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.