AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕೊರಗಜ್ಜ’ ಚಿತ್ರದ ಫಸ್ಟ್​ಲುಕ್​ ಬಿಡುಗಡೆಗೆ ದೈವದಿಂದಲೇ ಸಿಕ್ತು ಅನುಮತಿ

ಹಲವು ಕಾರಣಗಳಿಂದ ‘ಕೊರಗಜ್ಜ’ ಸಿನಿಮಾ ಸುದ್ದಿ ಆಗುತ್ತಿದೆ. ಈ ಬಹುನಿರೀಕ್ಷಿತ ಸಿನಿಮಾದ ಫಸ್ಟ್​ಲುಕ್ ಪೋಸ್ಟರ್​ ಅನಾವರಣ ಮಾಡುವ ಸಮಯ ಹತ್ತಿರ ಆಗಿದೆ. ಅದಕ್ಕೂ ಮುನ್ನ ದೈವಗಳಿಂದ ಅನುಮತಿ ಪಡೆದುಕೊಂಡು ಬರಲಾಗಿದೆ. ಆ ಬಗ್ಗೆ ಚಿತ್ರತಂಡದವರು ಮಾಹಿತಿ ಹಂಚಿಕೊಂಡಿದ್ದಾರೆ. ವಿಶೇಷ ಕೋಲಸೇವೆ ನೀಡಿದ ಬಳಿಕ ಅನುಮತಿ ಪಡೆಯಲಾಗಿದೆ.

‘ಕೊರಗಜ್ಜ’ ಚಿತ್ರದ ಫಸ್ಟ್​ಲುಕ್​ ಬಿಡುಗಡೆಗೆ ದೈವದಿಂದಲೇ ಸಿಕ್ತು ಅನುಮತಿ
ದೈವಗಳಿಂದ ಅನುಮತಿ ಪಡೆದುಕೊಂಡ ‘ಕೊರಗಜ್ಜ’ ಚಿತ್ರತಂಡ
ಮದನ್​ ಕುಮಾರ್​
|

Updated on: May 05, 2024 | 12:42 PM

Share

‘ಕಾಂತಾರ’ ಸಿನಿಮಾದ ಯಶಸ್ಸಿನ ಬಳಿಕ ತುಳುನಾಡಿನ ದೈವಗಳ ಕುರಿತು ಜನರಿಗೆ ಹೆಚ್ಚು ಪರಿಚಯ ಆಗಿದೆ. ದೈವದ ಕುರಿತು ಸಿನಿಮಾಗಳು ಕೂಡ ಬರುತ್ತಿವೆ. ತ್ರಿವಿಕ್ರಮ ಸಪಲ್ಯ ಅವರು ನಿರ್ಮಾಣ ಮಾಡುತ್ತಿರುವ ‘ಕೊರಗಜ್ಜ’ ಸಿನಿಮಾ (Koragajja Movie) ಹೆಚ್ಚು ಕೌತುಕ ಮೂಡಿಸಿದೆ. ‘ಸಕ್ಸಸ್ ಫಿಲಂಸ್’ ಹಾಗೂ ‘ತ್ರಿವಿಕ್ರಮ ಸಿನಿಮಾಸ್’ ಬ್ಯಾನರ್ ಮೂಲಕ ಮೂಡಿಬರುತ್ತಿರುವ ಈ ಸಿನಿಮಾಗೆ ಸುಧೀರ್ ಅತ್ತಾವರ್ ಅವರು ನಿರ್ದೇಶನ ಮಾಡಿದ್ದಾರೆ. ಈ ಬಹುನಿರೀಕ್ಷಿತ ಸಿನಿಮಾ ತಂಡದಿಂದ ಅಪ್​ಡೇಟ್​ ಸಿಕ್ಕಿದೆ. ಕೊರಗಜ್ಜ’ (Koragajja) ಸಿನಿಮಾದ ಮೋಷನ್ ಪೋಸ್ಟರ್‌ ಹಾಗೂ ಫಸ್ಟ್ ಲುಕ್ ಸಿದ್ಧವಾಗಿದೆ.

ದೈವದ ವಿಚಾರ ತುಂಬ ಸೂಕ್ಷ್ಮವಾದದ್ದು. ಕೊರಗಜ್ಜ ದೈವದ ಕಳೆ, ಕಾರ್ಣಿಕ ಹಾಗೂ ಪಾವಿತ್ರ್ಯತೆಗೆ ಧಕ್ಕೆ ಬಾರದ ರೀತಿಯಲ್ಲಿ ಫಸ್ಟ್​ಲುಕ್​ ವಿನ್ಯಾಸಗೊಳಿಸಲಾಗಿದೆ ಎಂದು ಚಿತ್ರತಂಡ ಹೇಳಿದೆ. ಮೊದಲಿಗೆ ಕೊರಗಜ್ಜ, ಗುಳಿಗ ಮತ್ತು ಕಲ್ಲುರ್ಟಿ ದೈವಗಳಿಗೆ ನಿರ್ದೇಶಕ ಸುಧೀರ್ ಅತ್ತಾವರ್ ವಿಶೇಷ ಕೋಲಸೇವೆ ನೀಡಿದ್ದಾರೆ. ಆ ವೇಳೆ ಶ್ರೀ ದೈವಗಳ ಸಮ್ಮುಖದಲ್ಲಿ ದೈವದ ಒಪ್ಪಿಗೆ ಪಡೆಯುವ ಸಲುವಾಗಿ ಅದನ್ನು ಪ್ರದರ್ಶಿಸಿದರು. ಫಸ್ಟ್​ಲುಕ್​ನ ಸಾರ್ವಜನಿಕ ಪ್ರದರ್ಶನಕ್ಕೆ ಇಡಲು ಶ್ರೀದೈವಗಳಿಂದ ಅನುಮತಿಯನ್ನು ಭಕ್ತಿಯಿಂದ ಬೇಡಿಕೊಂಡು ಒಪ್ಪಿಗೆ ಪಡೆಯಲಾಯಿತು ಎಂದು ಚಿತ್ರತಂಡ ತಿಳಿಸಿದೆ.

ಬಾಕಿ ಎಲ್ಲ ಸಿನಿಮಾಗಳ ರೀತಿ ಎಲ್ಲೆಂದರಲ್ಲಿ ‘ಕೊರಗಜ್ಜ’ ಸಿನಿಮಾದ ಫಸ್ಟ್ ಲುಕ್ ಹಾಗೂ ಮೋಷನ್ ಪೋಸ್ಟರ್​ ಅನ್ನು ದೈವಕ್ಕೆ ಅಪಚಾರ ಆಗುವ ರೀತಿಯಲ್ಲಿ ಸಾರ್ವಜನಿಕರು ದುರುಪಯೋಗಪಡಿಸಬಾರದು ಎಂದು ದೈವಗಳು ಸೂಚನೆ ನೀಡಿದವು. ಮೋಷನ್ ಪೋಸ್ಟರ್​ ಅನ್ನು ವಿಶೇಷವಾಗಿ ವಿನ್ಯಾಸ ಆಗಿದ್ದರೂ ಕೂಡ ದೈವಗಳು ಒಪ್ಪಿಗೆ ನೀಡದಿದ್ದರೆ ಅದನ್ನು ಬಿಡುಗಡೆ ಮಾಡುವುದು ಅಸಾಧ್ಯ ಆಗಬಹುದಿತ್ತು. ಈ ರಿಸ್ಕ್​ ಅನ್ನು ನಿರ್ದೇಶಕರು ಮತ್ತು ನಿರ್ಮಾಪಕರು ತೆಗೆದುಕೊಂಡಿದ್ದರು.

ಇದನ್ನೂ ಓದಿ: ಕುತ್ತಾರು ಕೊರಗಜ್ಜನ ಸನ್ನಿಧಾನದಲ್ಲಿ ದರ್ಶನ್​ಗೆ ಸನ್ಮಾನ; ಅಭಿಮಾನಿಗಳಿಗೆ ಸಂಭ್ರಮ

‘ಕೊರಗಜ್ಜ’ ಚಿತ್ರತಂಡವು ಎಲ್ಲ ಹಂತದಲ್ಲೂ ಕೊರಗಜ್ಜ ಹಾಗೂ ಶ್ರೀದೈವಗಳ ಆಶಿರ್ವಾದ ಪಡೆದುಕೊಂಡೇ ಹೆಜ್ಜೆ ಇಡುತ್ತಿದೆ. ಈ ಅಪರೂಪದ ಕಾರ್ಯಕ್ರಮದಲ್ಲಿ ಮಾಜಿ ಸಚಿವೆ ಮೋಟಮ್ಮ, ನಾಯಕ ನಟ ಭರತ್ ಸೂರ್ಯ, ಜನಪ್ರಿಯ ಹಿರಿಯ ನಟಿ ಭವ್ಯ, ಅದಿತಿ, ಎಡಿಟರ್​ ವಿದ್ಯಾಧರ್ ಶೆಟ್ಟಿ, ಸಿಂಗರ್​ ರಮೇಶ್​ ಚಂದ್ರ, ಶ್ಲಾಘ್ಯ ಕಮಲಿನಿ ಮತ್ತು ಚಿತ್ರತಂಡದ ಅನೇಕರು ಭಾಗಿ ಆಗಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.