ರಾಹುಲ್ ಡ್ರಾವಿಡ್ ಅವರು ಕಳೆದ ಎರಡು ದಿನಗಳಿಂದ ಟ್ರೆಂಡ್ನಲ್ಲಿದ್ದಾರೆ. ಖಾಸಗಿ ಕಂಪನಿಯ ಒಂದು ಜಾಹೀರಾತಿನಲ್ಲಿ ನಟಿಸಿದ್ದರಿಂದ ಅವರ ಬಗ್ಗೆ ಎಲ್ಲರೂ ಮಾತನಾಡುವಂತಾಗಿದೆ. ಒಂದು ಕಾಲದಲ್ಲಿ ಕ್ರಿಕೆಟ್ನಿಂದ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದ ಅವರು ಈಗ ನಟನೆ ಮೂಲಕ ಅಭಿಮಾನಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಸಿನಿಮಾಗಳಲ್ಲೂ ಡ್ರಾವಿಡ್ ನಟಿಸಬೇಕು ಎಂಬ ಬೇಡಿಕೆ ಕೇಳಿಬರುತ್ತಿದೆ. ಈ ಕುರಿತಂತೆ ಸೋಶಿಯಲ್ ಮೀಡಿಯಾದಲ್ಲಿ ಹಲವು ಬಗೆಯ ಚರ್ಚೆ ನಡೆಯುತ್ತಿದೆ.
ಅತೀ ಸಿಟ್ಟಿನ ವ್ಯಕ್ತಿಯಾಗಿ ಈ ಜಾಹೀರಾತಿನಲ್ಲಿ ರಾಹುಲ್ ದ್ರಾವಿಡ್ ನಟಿಸಿದ್ದಾರೆ. ಅವರ ಅಭಿನಯಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ಒಂದು ವೇಳೆ ರಾಹುಲ್ ದ್ರಾವಿಡ್ ಕನ್ನಡ ಸಿನಿಮಾಗಳಲ್ಲಿ ನಟಿಸಿದರೆ ಅವರಿಗೆ ಯಾವ ಸಿನಿಮಾದ ಟೈಟಲ್ ಸೂಕ್ತ ಆಗುತ್ತದೆ ಎಂಬ ಬಗ್ಗೆ ನೆಟ್ಟಿಗರು ಊಹೆ ಮಾಡುತ್ತಿದ್ದಾರೆ. ಅದಕ್ಕೆ ತಕ್ಕಂತಹ ಮೀಮ್ಗಳನ್ನು ಮಾಡಿ ಹರಿಬಿಡಲಾಗುತ್ತಿದೆ. ಸದ್ಯ ಇಂಟರ್ನೆಟ್ನಲ್ಲಿ ಅವೆಲ್ಲಾ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ಬೆಂಗಳೂರಿನ ಟ್ರಾಫಿಕ್ ಕಿರಿಕಿರಿಗೆ ಬೇಸತ್ತ ದ್ರಾವಿಡ್ ಅವರು ಎಲ್ಲರ ಜೊತೆಗೂ ಜಗಳ ಮಾಡಿಕೊಳ್ಳುವ ದೃಶ್ಯ ಈ ಜಾಹೀರಾತಿನಲ್ಲಿ ಇದೆ. ಹಾಗಾಗಿ ಅವರು ಸಂಪತ್ತಿಗೆ ಸವಾಲ್ ರೀತಿ ‘ಟ್ರಾಫಿಕ್ಗೆ ಸವಾಲ್’ ಸಿನಿಮಾದಲ್ಲಿ ನಟಿಸಬಹುದು. ನಾನು ಇಂದಿರಾ ನಗರದ ಗೂಂಡಾ ಎಂದು ದ್ರಾವಿಡ್ ಹೊಡೆದಿರುವ ಡೈಲಾಗ್ ಫೇಮಸ್ ಆಗಿದೆ. ಹಾಗಾಗಿ, ‘ಸಿಂಹಾದ್ರಿಯ ಸಿಂಹ’ ರೀತಿಯಲ್ಲೇ ‘ಇಂದಿರಾನಗರದ ಸಿಂಹ’ ಎಂದು ಸಿನಿಮಾ ಮಾಡಬಹುದು ಎನ್ನುತ್ತಿದ್ದಾರೆ ನೆಟ್ಟಿಗರು.
Kannada movie titles that best suits for our Jammy ??#RahulDravid
Via WA pic.twitter.com/1WXy4xbVN2
— Raj (@raajcar) April 11, 2021
ಟ್ರಾಫಿಕ್ನ ಕಿರಿಕಿರಿಗೆ ಬೇಸತ್ತು ದ್ರಾವಿಡ್ ಉಗ್ರ ಅವತಾರ ತಾಳಿದ್ದಾರೆ. ಉಗ್ರ ನರಸಿಂಹನ ರೀತಿಯಲ್ಲಿ ಕೋಪ ತೋರಿಸಿದ್ದಾರೆ. ಹಾಗಾಗಿ ಅವರು ‘ಉಗ್ರಂ’ ಸಿನಿಮಾದಲ್ಲಿ ನಟಿಸಬೇಕು. ರೌಡಿಯ ರೀತಿಯಲ್ಲಿ ಬ್ಯಾಟ್ ಹಿಡಿದುಕೊಂಡು ಪಕ್ಕದ ಕಾರಿನ ಮಿರರ್ ಒಡೆದು ಹಾಕಿದ್ದಾರೆ. ಆದ್ದರಿಂದ ಅವರ ಸಿನಿಮಾಗೆ ‘ರೌಡಿ ಅಳಿಯ’ ಸಿನಿಮಾ ಟೈಟಲ್ ಸೂಕ್ತವಾಗುತ್ತದೆ. ಮಧ್ಯ ದಾರಿಯಲ್ಲಿ ನಿಂತು ಕೂಗಾಡಿರುವುದರಿಂದ ಅವರು ‘ದಾರಿ ತಪ್ಪಿದ ಮಗ’ ಕೂಡ ಆಗಬಹುದು ಎನ್ನುವಂತಹ ಮೀಮ್ಗಳು ಹರಿದಾಡುತ್ತಿವೆ.
ಇಷ್ಟು ದಿನ ಸೈಲೆಂಟ್ ಆಗಿದ್ದುಕೊಂಡು ಹೀಗೆ ಏಕಾಏಕಿ ವೈಲೆಂಟ್ ಆಗುವಂತಹ ದ್ರಾವಿಡ್ ಥರದ ವ್ಯಕ್ತಿ ಸಿಗುವುದು ಕೋಟಿಯಲ್ಲಿ ಒಬ್ಬರು ಮಾತ್ರ. ಹಾಗಾಗಿ ಅವರ ಸಿನಿಮಾಗೆ ‘ಕೋಟಿಗೊಬ್ಬ’ ಅಂತ ಹೆಸರು ಇಟ್ಟರೂ ನಡೆಯುತ್ತದೆ. ಜಾಹೀರಾತಿನಲ್ಲಿ ಅವರು ತೋರಿಸಿರುವ ಕೋಪ ನಿಜಕ್ಕೂ ಜ್ವಾಲಾಮುಖಿ ರೀತಿ ಇದೆ. ಆದ್ದರಿಂದ ದ್ರಾವಿಡ್ ಸಿನಿಮಾಗೆ ‘ಜ್ವಾಲಾಮುಖಿ’ ಎಂಬ ಶೀರ್ಷಿಕೆ ಸೂಕ್ತವಾಗುತ್ತದೆ.
Never seen this side of Rahul bhai ?? pic.twitter.com/4W93p0Gk7m
— Virat Kohli (@imVkohli) April 9, 2021
ಎಲ್ಲಕ್ಕಿಂತ ಹೆಚ್ಚಾಗಿ ಅವರು ರಿಯಲ್ ಲೈಫ್ನಲ್ಲಿ ಬಂಗಾರದಂತಹ ವ್ಯಕ್ತಿತ್ವ ಉಳ್ಳವರು. ಹಾಗಾಗಿ ‘ಬಂಗಾರದ ಮನುಷ್ಯ’ ಚಿತ್ರದ ಪೋಸ್ಟರ್ಗೆ ದ್ರಾವಿಡ್ ಮುಖವನ್ನು ಎಡಿಟ್ ಮಾಡಿ ನೆಟ್ಟಿಗರು ಹರಿಬಿಡುತ್ತಿದ್ದಾರೆ.
ಇದನ್ನೂ ಓದಿ: Rahul Dravid: ರಾಹುಲ್ ದ್ರಾವಿಡ್ಗೆ ಚಿತ್ರರಂಗದಿಂದ ಬಂತು ಬೇಡಿಕೆ! ಒಂದೇ ದಿನದಲ್ಲಿ ಇದೆಂಥಾ ಮ್ಯಾಜಿಕ್
(Rahul Dravid Viral Ad video makes netizens to suggest Kannada movie titles that suits to him)