ರಾಜ್​ ಬಿ. ಶೆಟ್ಟಿ ಹೊಸ ಸಿನಿಮಾ ‘ರಕ್ಕಸಪುರದೋಳ್’; ನಿರ್ಮಾಪಕನಾದ ರವಿವರ್ಮ

ಸಾಹಸ ನಿರ್ದೇಶಕ ರವಿವರ್ಮ ಇದೇ ಮೊದಲ ಬಾರಿಗೆ ನಿರ್ಮಾಪಕನಾಗಿದ್ದು, ‘ರಕ್ಕಸಪುರದೋಳ್’ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ರಾಜ್​ ಬಿ. ಶೆಟ್ಟಿ, ಸ್ವಾದಿಷ್ಟ ಕೃಷ್ಣ, ಅರ್ಚನಾ ಕೊಟ್ಟಿಗೆ ಅವರು ಪ್ರಮುಖ ಪಾತ್ರಗಳನ್ನು ಮಾಡಲಿದ್ದಾರೆ. ಈ ಚಿತ್ರಕ್ಕೆ ಮುಹೂರ್ತ ಮಾಡಲಾಗಿದ್ದು, ರಕ್ಷಿತಾ ಹಾಗೂ ಪ್ರೇಮ್ ಅವರು ಬಂದು ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ರಾಜ್​ ಬಿ. ಶೆಟ್ಟಿ ಹೊಸ ಸಿನಿಮಾ ‘ರಕ್ಕಸಪುರದೋಳ್’; ನಿರ್ಮಾಪಕನಾದ ರವಿವರ್ಮ
‘ರಕ್ಕಸಪುರದೋಳ್’ ಸಿನಿಮಾದ ಮುಹೂರ್ತ ಸಮಾರಂಭ

Updated on: Aug 16, 2024 | 10:16 PM

ಖ್ಯಾತ ನಟ ರಾಜ್​ ಬಿ. ಶೆಟ್ಟಿ ಅವರ ಹೊಸ ಸಿನಿಮಾ ಸೆಟ್ಟೇರಿದೆ. ಈ ಚಿತ್ರಕ್ಕೆ ‘ರಕ್ಕಸಪುರದೋಳ್’ ಎಂದು ಶೀರ್ಷಿಕೆ ಇಡಲಾಗಿದೆ. ಸಾಹಸ ನಿರ್ದೇಶಕರಾಗಿ ದೇಶಾದ್ಯಂತ ಜನಪ್ರಿಯತೆ ಪಡೆದಿರುವ ಕೆ. ರವಿವರ್ಮ ಅವರ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಇದು ಅವರ ಪ್ರಥಮ ನಿರ್ಮಾಣದ ಸಿನಿಮಾ ಎಂಬುದು ವಿಶೇಷ. ಈ ಚಿತ್ರಕ್ಕೆ ರವಿ ಸಾರಂಗ ಅವರು ನಿರ್ದೇಶನ ಮಾಡುತ್ತಿದ್ದಾರೆ. ನಿರ್ದೇಶಕರಾಗಿ ಅವರಿಗೂ ಇದು ಮೊದಲ ಸಿನಿಮಾ. ಬೆಂಗಳೂರಿನ ನೆಟಕಲ್ಲಪ್ಪ ಸರ್ಕಲ್​ನಲ್ಲಿರುವ ವರಸಿದ್ದಿ ವಿನಾಯಕ ದೇವಸ್ಥಾನದಲ್ಲಿ ಈ ಚಿತ್ರಕ್ಕೆ ಮುಹೂರ್ತ ಮಾಡಲಾಗಿದೆ. ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಮುಹೂರ್ತ ನೆರವೇರಿದೆ.

‘ರಕ್ಕಸಪುರದೋಳ್’ ಸಿನಿಮಾದ ಮುಹೂರ್ತ ಸಮಾರಂಭಕ್ಕೆ ಆಗಮಿಸಿದ ನಟಿ ರಕ್ಷಿತಾ ಹಾಗೂ ನಿರ್ದೇಶಕ ಪ್ರೇಮ್ ಅವರು ಮೊದಲ ಸನ್ನಿವೇಶಕ್ಕೆ ಚಾಲನೆ ನೀಡಿದ್ದೂ ಅಲ್ಲದೇ, ಶೀರ್ಷಿಕೆ ಅನಾವರಣ ಮಾಡಿ ಶುಭ ಹಾರೈಸಿದರು. ‘ಕೆ.ವಿ.ಎನ್. ಪ್ರೊಡಕ್ಷನ್ಸ್​’ ಸಂಸ್ಥೆಯ ಸುಪ್ರೀತ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ಸಿನಿಮಾದಲ್ಲಿ ನಾಯಕಿಯಾಗಿ ಸ್ವಾತಿಷ್ಟ ಕೃಷ್ಣ ನಟಿಸಲಿದ್ದಾರೆ. ಬಿ. ಸುರೇಶ, ಅರ್ಚನಾ ಕೊಟ್ಟಿಗೆ, ಗೌರವ್ ಶೆಟ್ಟಿ, ಸಿದ್ದಣ್ಣ, ಅನಿರುದ್ದ್ ಭಟ್, ಸುಮಾ ಕೂಡ ಪಾತ್ರವರ್ಗದಲ್ಲಿದ್ದಾರೆ.

ಇದನ್ನೂ ಓದಿ: ಅತ್ಯುತ್ತಮ ನಟ-ನಟಿ ‘ರಾಷ್ಟ್ರ ಪ್ರಶಸ್ತಿ’ ಪಡೆದ ಕನ್ನಡದ ಪ್ರತಿಭಾವಂತ ಕಲಾವಿದರು ಇವರು..

ಪ್ರೇಮ್​ ನಿರ್ದೇಶನದ ‘ದಿ ವಿಲನ್’, ‘ಏಕ್ ಲವ್ ಯಾ’ ,‌ ‘ಕೆಡಿ’ ಮುಂತಾದ ಸಿನಿಮಾಗಳಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ ಅನುಭವ ರವಿ ಸಾರಂಗ ಅವರಿಗೆ ಇದೆ. ‘ರಕ್ಕಸಪುರದೋಳ್’ ಬಗ್ಗೆ ಮಾತನಾಡಿದ ರಾಜ್​ ಬಿ. ಶೆಟ್ಟಿ ಅವರು, ‘ಕಥೆ ಬಹಳ ಚೆನ್ನಾಗಿದೆ. ಜನರನ್ನು ಥಿಯೇಟರ್​ಗೆ ಕರೆತರಲು ಬೇಕಾಗುವಂತಹ ಕಥೆಯನ್ನು ನಿರ್ದೇಶಕ ರವಿ ಸಿದ್ಧ ಮಾಡಿಕೊಂಡಿದ್ದಾರೆ. ನಾನು ಈ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿ ಪಾತ್ರ ಮಾಡುತ್ತಿದ್ದೇನೆ. ಹಿಂದಿನ ಸಿನಿಮಾಗಳಿಗಿಂತ ಭಿನ್ನ ಪಾತ್ರವಿದು’ ಎಂದರು.

‘ನಾನು ಕಳೆದ 10 ವರ್ಷಗಳಿಂದ ಪ್ರೇಮ್ ಅವರ ಬಳಿ ಕಥೆ, ಚಿತ್ರಕಥೆ ಮತ್ತು ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ’ ಎಂದು ತಮ್ಮ ಪರಿಚಯ ಮಾಡಿಕೊಂಡರು ರವಿ ಸಾರಂಗ. ಸದ್ಯದಲ್ಲೇ ಶೂಟಿಂಗ್​ ಆರಂಭಿಸುವುದಾಗಿ ಅವರು ಹೇಳಿದ್ದಾರೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ‌ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

ವಿಲಿಯಂ ಡೇವಿಡ್ ಅವರು ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ. ಕೆ.ಎಂ. ಪ್ರಕಾಶ್ ಸಂಕಲನ ಮಾಡಲಿದ್ದಾರೆ. ಮೋಹನ್ ಬಿ. ಕೆರೆ ಅವರು ಕಲಾ ನಿರ್ದೇಶನ ಮಾಡಲಿದ್ದು, ನರಸಿಂಹ ಜಾಲಹಳ್ಳಿ ಅವರ ನಿರ್ಮಾಣ ನಿರ್ವಹಣೆ ಇರಲಿದೆ. ಈ ಸಿನಿಮಾಗೆ ಕ್ರಾಂತಿ ಕುಮಾರ್ ಸಂಭಾಷಣೆ ಬರೆಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.