‘ತೀರ್ಥರೂಪ ತಂದೆಯವರಿಗೆ’: ಇದು ‘ಹೊಂದಿಸಿ ಬರೆಯಿರಿ’ ನಿರ್ದೇಶಕನ ಹೊಸ ಚಿತ್ರ
ಕನ್ನಡ ಮತ್ತು ತೆಲುಗಿನಲ್ಲಿ ‘ತೀರ್ಥರೂಪ ತಂದೆಯವರಿಗೆ’ ಸಿನಿಮಾ ಸಿದ್ಧವಾಗಲಿದೆ. ತೆಲುಗಿನಲ್ಲಿ ‘ಪ್ರಿಯಮೈನ ನಾನ್ನಕು’ ಎಂದು ಟೈಟಲ್ ಇಡಲಾಗಿದೆ. ನಿಹಾರ್ ಮುಖೇಶ್ ಅವರು ಈ ಸಿನಿಮಾಗೆ ಹೀರೋ ಆಗಿದ್ದಾರೆ. ವರಮಹಾಲಕ್ಷ್ಮೀ ಹಬ್ಬದ ಶುಭದಿನದಂದು ಈ ಚಿತ್ರಕ್ಕೆ ಮುಹೂರ್ತ ಮಾಡಲಾಗಿದೆ. ಚಿತ್ರತಂಡದ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ..
2023ರಲ್ಲಿ ಗಮನ ಸೆಳೆದ ಕನ್ನಡ ಸಿನಿಮಾಗಳಲ್ಲಿ ‘ಹೊಂದಿಸಿ ಬರೆಯಿರಿ’ ಕೂಡ ಪ್ರಮುಖವಾಗಿದೆ. ಈ ಚಿತ್ರದ ಮೂಲಕ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ ಅವರು ಜನರ ಮೆಚ್ಚುಗೆ ಗಳಿಸಿದ್ದರು. ಆ ಸಿನಿಮಾದಲ್ಲಿ ಡಿಫರೆಂಟ್ ಆದ ಟೈಟಲ್ ಹಾಗೂ ಜನರಿಗೆ ಇಷ್ಟವಾಗುವ ಕಹಾನಿ ಇತ್ತು. ಈಗ ಅವರು ಹೊಸ ಸಿನಿಮಾದ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಈ ಬಾರಿಯೂ ಅವರು ಡಿಫರೆಂಟ್ ಆದಂತಹ ಶೀರ್ಷಿಕೆ ಆಯ್ಕೆ ಮಾಡಿಕೊಂಡಿದ್ದಾರೆ. ಅಪ್ಪಟ ಕನ್ನಡದ ಟೈಟಲ್ ಅನ್ನೇ ಅವರು ಆಯ್ದುಕೊಂಡಿದ್ದಾರೆ. ‘ತೀರ್ಥರೂಪ ತಂದೆಯವರಿಗೆ’ ಎಂಬುದು ರಾಮೇನಹಳ್ಳಿ ಜಗನ್ನಾಥ ಅವರ ಹೊಸ ಸಿನಿಮಾದ ಶೀರ್ಷಿಕೆ.
ಫ್ಯಾಮಿಲಿ ಪ್ರೇಕ್ಷಕರಿಗೆ ‘ಹೊಂದಿಸಿ ಬರೆಯಿರಿ’ ಸಿನಿಮಾ ಸಖತ್ ಇಷ್ಟ ಆಗಿತ್ತು. ಈಗ ‘ತೀರ್ಥರೂಪ ತಂದೆಯವರಿಗೆ’ ಸಿನಿಮಾ ಟೈಟಲ್ ಕೂಡ ಕೌಟುಂಬಿಕ ಪ್ರೇಕ್ಷಕರನ್ನು ಟಾರ್ಗೆಟ್ ಮಾಡಿದಂತಿದೆ. ವರಮಹಾಲಕ್ಷ್ಮೀ ಹಬ್ಬದ ದಿನ ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಈ ಸಿನಿಮಾಗೆ ಮುಹೂರ್ತ ಮಾಡಲಾಗಿದೆ. ನಿರ್ದೇಶಕರ ಪುತ್ರಿ ಈ ಚಿತ್ರಕ್ಕೆ ಕ್ಲ್ಯಾಪ್ ಮಾಡಿದರೆ, ನವೀನ್ ಶಂಕರ್ ಮತ್ತು ಅರ್ಚನಾ ಜೋಯಿಸ್ ಅವರು ಕ್ಯಾಮೆರಾ ಚಾಲನೆ ಮಾಡಿ ಶುಭ ಕೋರಿದರು.
‘ತೀರ್ಥರೂಪ ತಂದೆಯವರಿಗೆ’ ಚಿತ್ರವು ‘ಜೈ ಚಾಮುಂಡೇಶ್ವರಿ ಪ್ರೊಡಕ್ಷನ್ಸ್’ ಮೂಲಕ ನಿರ್ಮಾಣ ಆಗುತ್ತಿದೆ. ರಾಮೇನಹಳ್ಳಿ ಜಗನ್ನಾಥ ಅವರೇ ಕಥೆ ಬರೆದಿದ್ದಾರೆ. ‘ಹೊಂದಿಸಿ ಬರೆಯಿರಿ’ ಚಿತ್ರ ನಿರ್ಮಾಣ ಮಾಡಿದ್ದ ‘ಸಂಡೇ ಸಿನಿಮಾಸ್’ ಈ ಚಿತ್ರವನ್ನು ಪ್ರೆಸೆಂಟ್ ಮಾಡುತ್ತಿದೆ. ‘ಬ್ಲಿಂಕ್’ ಸಿನಿಮಾ ಖ್ಯಾತಿಯ ರವಿಚಂದ್ರ ಎ.ಜೆ. ಅವರು ‘ತೀರ್ಥರೂಪ ತಂದೆಯವರಿಗೆ’ ಸಿನಿಮಾಗೆ ಎಕ್ಸಿಕ್ಯುಟಿವ್ ಪ್ರೊಡ್ಯೂಸರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ: ಅತ್ಯುತ್ತಮ ನಟ-ನಟಿ ‘ರಾಷ್ಟ್ರ ಪ್ರಶಸ್ತಿ’ ಪಡೆದ ಕನ್ನಡದ ಪ್ರತಿಭಾವಂತ ಕಲಾವಿದರು ಇವರು..
ದೀಪಕ್ ಯರಗೇರಾ ಅವರು ‘ತೀರ್ಥರೂಪ ತಂದೆಯವರಿಗೆ’ ಛಾಯಾಗ್ರಹಣ ಮಾಡುತ್ತಿದ್ದಾರೆ. ಪ್ರಶಾಂತ್ ರಾಜಪ್ಪ ಅವರು ಸಂಭಾಷಣೆ ಬರೆದಿದ್ದಾರೆ. ಶೀಘ್ರದಲ್ಲೇ ಈ ಸಿನಿಮಾದ ಶೂಟಿಂಗ್ ಆರಂಭ ಆಗಲಿದೆ. ತೆಲುಗಿನ ಸೀರಿಯಲ್ ಮೂಲಕ ಕಿರುತೆರೆ ಪ್ರೇಕ್ಷಕರ ಮನಗೆದ್ದ ನಿಹಾರ್ ಮುಖೇಶ್ ಅವರು ‘ತೀರ್ಥರೂಪ ತಂದೆಯವರಿಗೆ’ ಸಿನಿಮಾ ಮೂಲಕ ಹೀರೋ ಆಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಅವರು ನಟಿಸಿರುವ ‘ಗೀತಾ ಶಂಕರಂ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.