‘ಸ್ವಾತಿ ಮುತ್ತಿನ ಮಳೆ ಹನಿಯೇ’ ಟ್ರೈಲರ್: ಸಾವಿನ ಕತೆಯಲ್ಲಿ ಪ್ರೇಮದ ಒರತೆ
Raj B Shetty: ರಾಜ್ ಬಿ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾದ ಟ್ರೈಲರ್ ಇಂದು (ನವೆಂಬರ್ 17) ಬಿಡುಗಡೆ ಆಗಿದೆ. ಸಿನಿಮಾ ನವೆಂಬರ್ 24ಕ್ಕೆ ತೆರೆಗೆ ಬರಲಿದೆ.

ರಾಜ್ ಬಿ ಶೆಟ್ಟಿ (Raj B Shetty) ಕತೆ ಬರೆದು ನಿರ್ದೇಶನ ಮಾಡಿರುವ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದ ಟ್ರೈಲರ್ ಇಂದು (ನವೆಂಬರ್ 17) ಬಿಡುಗಡೆ ಆಗಿದೆ. ಸಿನಿಮಾ ತಂಡದ ನಡುವೆ ಅಸಮಾಧಾನಗಳು ತಲೆದೂರಿತ್ತಾದರೂ ಅವೆಲ್ಲವನ್ನೂ ಬದಿಗೊತ್ತಿ ಸಿನಿಮಾವನ್ನು ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದ್ದು, ಇದೀಗ ಟ್ರೈಲರ್ ಅನ್ನು ಬಿಡುಗಡೆ ಮಾಡಲಾಗಿದೆ. ಒಂದು ಸುಂದರ, ಸರಳವಾದ ಆದರೆ ಕಾಡುವ ಕತೆಯೊಂದನ್ನು ಪ್ರೇಕ್ಷಕರಿಗಾಗಿ ರಾಜ್ ಬಿ ಶೆಟ್ಟಿ ಕಟ್ಟಿಕೊಟ್ಟಿರುವ ಸುಳಿವನ್ನು ಸಿನಿಮಾದ ಟ್ರೈಲರ್ ನೀಡುತ್ತಿದೆ.
‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಾವು ಹಾಗೂ ಪ್ರೇಮದ ಕುರಿತಾದ ಕತೆ ಒಳಗೊಂಡಿದೆ ಎಂಬುದನ್ನು ಈ ಹಿಂದೆಯೇ ರಾಜ್ ಬಿ ಶೆಟ್ಟಿ ಹೇಳಿದ್ದರು. ಆದರೆ ಸಾಯುವ ವ್ಯಕ್ತಿಯ ಮೇಲೆ ಪ್ರೀತಿಯಾದರೆ? ಹಾಗೆ ಸಾಯಲು ರೆಡಿಯಾಗಿ ನಿಂತವರ ಮೇಲೆ ಪ್ರೀತಿ ಆಗಬಹುದೆ? ಅದು ಪ್ರೀತಿಯೇ ಅಥವಾ ಕರುಣೆಯೇ? ಹೀಗೆ ಹಲವು ಪ್ರಶ್ನೆಗಳನ್ನು ಸಿನಿಮಾದ ಟ್ರೈಲರ್ ಹುಟ್ಟಿಸುತ್ತಿದೆ. ಕೇವಲ ಟ್ರೈಲರ್ ಇಷ್ಟು ಪ್ರಶ್ನೆಗಳನ್ನು ಹುಟ್ಟಿಸುತ್ತಿದೆಯಾದರೆ ಸಿನಿಮಾ ಇನ್ನೂ ಹಲವು ಭಾವಗಳನ್ನು ಹುಟ್ಟಿಸಬಹುದು ಎಂಬುದರಲ್ಲಿ ಅನುಮಾನವಿಲ್ಲ.
ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಅನಿಕೇತ್ ಹೆಸರಿನ ಪಾತ್ರದಲ್ಲಿ ನಟಿಸಿದ್ದಾರೆ. ಕೆಲವು ತಿಂಗಳಿಗೆ ಸಾಯಲಿರುವ ವ್ಯಕ್ತಿಯ ಪಾತ್ರವದು. ಸಿನಿಮಾದ ನಾಯಕಿಯದ್ದು ಸಾವು ನಿಶ್ಚಯವಾದವರಿಗೆ ಧೈರ್ಯ ತುಂಬುವ, ಅವರನ್ನು ಸಾವಿಗೆ ಅಣಿ ಮಾಡುವ ಕೌನ್ಸಲರ್ ಪಾತ್ರ. ಈ ಇಬ್ಬರ ನಡುವೆ ಆತ್ಮೀಯತೆ ಉಂಟಾಗಿದೆ, ಆ ಆತ್ಮೀಯತೆ ಉತ್ಕಟವಾಗಿದೆ. ಅಂದಹಾಗೆ ಸಿನಿಮಾದ ನಾಯಕಿಗೆ ಈಗಾಗಲೇ ಮದುವೆಯಾಗಿದೆ. ಆದರೂ ಸಾಯಲು ಸಿದ್ಧವಾದ ವ್ಯಕ್ತಿಯೊಬ್ಬನನ್ನು ಅತಿಯಾಗಿ ಹಚ್ಚಿಕೊಂಡಿದ್ದಾರೆ. ಇವರ ‘ಸಂಬಂಧ’ದ ಭವಿಷ್ಯವೇನು ಎಂಬುದನ್ನು ಸಿನಿಮಾ ನೋಡಿಯೇ ತಿಳಿದುಕೊಳ್ಳಬೇಕಿದೆ.
ಇದನ್ನೂ ಓದಿ:ನನ್ನ ಸಿನಿಮಾಗಳು ಮನುಷ್ಯನ ಹಾಗೂ ಹಿಂಸೆಯ ಅಧ್ಯಯನ: ರಾಜ್ ಬಿ ಶೆಟ್ಟಿ
ಹಸಿರಿನ ಮಡಿಲಲ್ಲಿ ಸಾವಿಗೆ ಸಿದ್ಧವಾದವರ ಕತೆ ನಡೆಯುತ್ತಿದೆ. ಕಣ್ಣಿಗೆ ತಂಪೆನಿಸುವ ಜಾಗಗಳಲ್ಲಿ ಸಿನಿಮಾವನ್ನು ರಾಜ್ ಬಿ ಶೆಟ್ಟಿ ಚಿತ್ರೀಕರಣ ಮಾಡಿದ್ದಾರೆ, ಟ್ರೈಲರ್ನಲ್ಲಿ ಸಿನಿಮಾದ ಸುಂದರತೆಯ ಇಣುಕು ನೋಟಗಳು ಸಿಗುತ್ತವೆ. ಹಿನ್ನೆಲೆ ಸಂಗೀತದ ಮಧುರತೆಯ ಸಣ್ಣ ಝಲಕ್ಗಳು ಸಹ ಟ್ರೈಲರ್ನಲ್ಲಿದೆ. ರಾಜ್ ಬಿ ಶೆಟ್ಟಿಯ ಈ ಹಿಂದಿನ ಸಿನಿಮಾಗಳಲ್ಲಿ ಕೆಲಸ ಮಾಡಿರುವ ತಂಡದ ಬಹುತೇಕ ಸದಸ್ಯರು ತೆರೆಯ ಮೇಲೆ, ತೆರೆಯ ಹಿಂದೆ ಈ ಸಿನಿಮಾಕ್ಕೆ ಕೆಲಸ ಮಾಡಿದ್ದಾರೆ.
ರಾಜ್ ಬಿ ಶೆಟ್ಟಿ ಕತೆ ಬರೆದು, ನಿರ್ದೇಶನ ಮಾಡಿ, ಮುಖ್ಯ ಪಾತ್ರದಲ್ಲೂ ನಟಿಸಿರುವ ಈ ಸಿನಿಮಾದಲ್ಲಿ ಸಿರಿ ನಾಯಕಿ. ರಾಜ್ ಬಿ ಶೆಟ್ಟಿಯ ನಟನೆಗೆ ಸೆಡ್ಡು ಹೊಡೆಯುವಂತೆ ಸಿರಿ ನಟಿಸಿದ್ದಾರೆಂಬುದು ಟ್ರೈಲರ್ನಲ್ಲಿಯೇ ತಿಳಿದು ಬರುತ್ತಿದೆ. ಸಿನಿಮಾದಲ್ಲಿ ಗೋಪಾಲ್ ದೇಶಪಾಂಡೆ ಸಹ ಇದ್ದಾರೆ. ರಾಜ್ ಬಿ ಶೆಟ್ಟಿಯವರ ಈ ಹಿಂದಿನ ಸಿನಿಮಾಗಳಿಗೆ ಕೆಲಸ ಮಾಡಿರುವ ಸಿನಿಮಾಟೊಗ್ರಾಫರ್ ಪ್ರವೀಣ್ ಶ್ರಿಯಾನ್ ಹಾಗೂ ಸಂಗೀತ ನಿರ್ದೇಶಕ ಮಿದುನ್ ಮುಕುಂದನ್ ಈ ಸಿನಿಮಾಕ್ಕೂ ಕೆಲಸ ಮಾಡಿದ್ದಾರೆ. ಸಿನಿಮಾ ನಿರ್ಮಾಣ ಮಾಡಿರುವುದು ನಟಿ ರಮ್ಯಾ. ಇದು ಅವರ ಮೊದಲ ನಿರ್ಮಾಣದ ಸಿನಿಮಾ ಆಗಿದ್ದು, ನವೆಂಬರ್ 24ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:42 pm, Fri, 17 November 23