‘ತುಂಬಾ ಹಿಂದಿನಿಂದಲೂ ಥಿಯೇಟರ್ಗೆ ಜನ ಬರ್ತಿಲ್ಲ; ದರ್ಶನ್ ಫ್ಯಾನ್ಸ್ ಸಿನಿಮಾ ನೋಡಲ್ಲ ಎಂಬ ಹೇಳಿಕೆ ಬಗ್ಗೆ ರಾಜ್ ಬಿ ಶೆಟ್ಟಿ ಮಾತು
ದರ್ಶನ್ ತೂಗುದೀಪ ಅವರನ್ನು ಕಾಣಲು ಕೆಲವು ನಟರು, ಆತ್ಮೀಯರು, ಕುಟುಂಬದವರು ಪರಪ್ಪನ ಅಗ್ರಹಾರ ಜೈಲಿಗೆ ಹೋಗುತ್ತಿದ್ದಾರೆ. ದರ್ಶನ್ ಅವರನ್ನು ಭೇಟಿ ಮಾಡಲು ನಾನು ಹೋಗಲ್ಲ ಎಂದು ರಾಜ್ ಬಿ ಶೆಟ್ಟಿ ಹೇಳಿದ್ದರು. ಈ ಬೆನ್ನಲ್ಲೇ ಅವರು ‘ದರ್ಶನ್ ಫ್ಯಾನ್ಸ್ ಸಿನಿಮಾ ನೋಡಲ್ಲ’ ಎಂಬ ಹೇಳಿಕೆ ಬಗ್ಗೆ ಮಾತನಾಡಿದ್ದಾರೆ.
ದರ್ಶನ್ ಬಂಧನದ ಬಳಿಕ ಅವರ ಅಭಿಮಾನಿಗಳ ಪೈಕಿ ಕೆಲವರು ‘ಡಿ ಬಾಸ್ ರಿಲೀಸ್ ಆಗೋವರೆಗೆ ಬೇರೆ ಯಾವ ಹೀರೋಗಳ ಸಿನಿಮಾನೂ ನೋಡಲ್ಲ’ ಎಂದು ಹೇಳಿಕೆ ನೀಡಿದ್ದರು. ಹೀಗಿರುವಾಗಲೇ ಕೆಲವು ಸಿನಿಮಾಗಳನ್ನು ಜನರು ನೋಡಿಲ್ಲ. ಇದಕ್ಕೆ ದರ್ಶನ್ ಫ್ಯಾನ್ಸ್ ಸಿನಿಮಾ ನೋಡದೇ ಇರುವುದೇ ಕಾರಣ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ನಿರ್ದೇಶಕ, ನಟ ರಾಜ್ ಬಿ ಶೆಟ್ಟಿ ಮಾತನಾಡಿದ್ದಾರೆ. ಅವರ ನಟನೆಯ ‘ರೂಪಾಂತರ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಇದೇ ಖುಷಿಯಲ್ಲಿ ಟಿವಿ9 ಕನ್ನಡದ ಡಿಜಿಟಲ್ ಬಗ್ಗೆ ಮಾತನಾಡಿದ್ದಾರೆ.
ದರ್ಶನ್ ಫ್ಯಾನ್ಸ್ ಸಿನಿಮಾ ನೋಡದೇ ಇರುವುದಕ್ಕೆ ಕನ್ನಡ ಸಿನಿಮಾಗಳು ಸೋಲುತ್ತಿವೆಯೇ ಎನ್ನುವ ಬಗ್ಗೆ ಅವರು ಮಾತನಾಡಿದ್ದಾರೆ. ‘ಇಷ್ಟು ಜನ ದರ್ಶನ್ ಫ್ಯಾನ್ಸ್ ಇದ್ದಾರೆ, ಇವರಲ್ಲಿ ಯಾರು ಸಿನಿಮಾ ನೋಡಿದ್ದಾರೆ, ಯಾರು ನೋಡಿಲ್ಲ ಎಂದು ಹೇಳೋಕೆ ನಮ್ಮಲ್ಲಿ ಲೆಕ್ಕ ಇಲ್ಲ. ದರ್ಶನ್ ಅಭಿಮಾನಿಗಳೆಲ್ಲರೂ ಒಟ್ಟಾಗಿ ಕುಳಿತು ಹೇಳುತ್ತಿರುವ ಹೇಳಿಕೆ ಇದಲ್ಲ. ಯಾರೋ ಓರ್ವ ದರ್ಶನ್ ಅಭಿಮಾನಿ ಸ್ಟೇಟಸ್ ಹಾಕಿಕೊಂಡು ಇರ್ತಾನೆ. ಅದನ್ನು ಒಂದಷ್ಟು ಜನರು ಶೇರ್ ಮಾಡಿಕೊಂಡಿರಬಹುದು. ಈ ಕಾರಣದಿಂದ ಅದು ವೈರಲ್ ರೀತಿ ಕಾಣುತ್ತದೆ. ಆದರೆ, ಇದು ಎಲ್ಲಾ ದರ್ಶನ್ ಅಭಿಮಾನಿಗಳನ್ನು ಪ್ರತಿನಿಧಿಸುವುದಿಲ್ಲ’ ಎಂದಿದ್ದಾರೆ ಅವರು.
‘ತುಂಬಾ ಹಿಂದೆಯಿಂದಲೂ ಕನ್ನಡ ಸಿನಿಮಾಗಳಿಗೆ ಜನರು ಬರುತ್ತಿಲ್ಲ. ಒಳ್ಳೆಯ ಸಿನಿಮಾಗಳು ಈ ಮೊದಲು ಬಂದಿವೆ. ಆದರೆ, ಜನರು ಸಿನಿಮಾ ನೋಡುತ್ತಿಲ್ಲ. ನಾಳೆ ನಾನು ಥಿಯೇಟರ್ನ ತುಂಬಿಸುತ್ತೇನೆ ಎಂದು ಹೇಳಿಕೆ ನೀಡಬಹುದು. ಅದೇ ಸಮಯಕ್ಕೆ ಒಳ್ಳೆಯ ಸಿನಿಮಾ ಬಂದು ಜನರು ಥಿಯೇಟರ್ನತ್ತ ಹೋದರೆ ನನ್ನಿಂದಲೇ ಸಿನಿಮಾ ಥಿಯೇಟರ್ ತುಂಬಿದೆ ಎಂದು ಹೇಳೊಕೆ ಆಗಲ್ಲ’ ಎಂದಿದ್ದಾರೆ ರಾಜ್ ಬಿ ಶೆಟ್ಟಿ.
ಇದನ್ನೂ ಓದಿ: ‘ಮಲಯಾಳಂ ರೀತಿಯ ಸಿನಿಮಾ ಮಾಡೋಕೆ ಅವರಿದ್ದಾರೆ, ನಾವು ನಮ್ಮ ಕಥೆ ಹೇಳಬೇಕು’; ರಾಜ್ ಬಿ. ಶೆಟ್ಟಿ
‘ಸಿನಿಮಾ ನೋಡುವವರು ನೋಡುತ್ತಲೇ ಇರುತ್ತಾರೆ. ಅಭಿಮಾನ ಇರುವವರು ಸಿನಿಮಾ ವೀಕ್ಷಿಸುತ್ತಾರೆ. ಒಳ್ಳೆಯ ಸಿನಿಮಾಗಳಿಗೆ ಜನ ಬಂದೇ ಬರುತ್ತಾರೆ. ಸಿನಿಮಾ ಸೋತಾಗ ಇದರಿಂದಲೇ ಆಗುತ್ತಿದೆ ಎಂದು ಅನಿಸೋದು ಸಹಜ. ಒಂದೆರಡು ಜನರು ಹೇಳಿಕೆ ನೀಡಿದರೆ ಅದು ಅವರ ವೈಯಕ್ತಿಕ’ ಎಂಬುದು ರಾಜ್ ಬಿ ಶೆಟ್ಟಿ ಅಭಿಪ್ರಾಯ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:47 am, Tue, 30 July 24