ನನ್ನ ಸಿನಿಮಾಗಳು ಮನುಷ್ಯನ ಹಾಗೂ ಹಿಂಸೆಯ ಅಧ್ಯಯನ: ರಾಜ್ ಬಿ ಶೆಟ್ಟಿ

|

Updated on: Sep 15, 2023 | 6:39 PM

Raj B Shetty: ಸಿನಿಮಾಗಳಲ್ಲಿ ಹಿಂಸೆಯ ವೈಭವೀಕರಣದ ಬಗ್ಗೆ ಹಲವು ವರ್ಷಗಳಿಂದಲೂ ಚರ್ಚೆ ನಡೆಯುತ್ತಲೇ ಇದೆ. ಇದೀಗ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ, ತಾವು ಸಿನಿಮಾಗಳಲ್ಲಿನ ಹಿಂಸೆಯನ್ನು ಯಾವ ದೃಷ್ಟಿಕೋನದಿಂದ ನೋಡುವುದಾಗಿ ಹೇಳಿದ್ದಾರೆ.

ನನ್ನ ಸಿನಿಮಾಗಳು ಮನುಷ್ಯನ ಹಾಗೂ ಹಿಂಸೆಯ ಅಧ್ಯಯನ: ರಾಜ್ ಬಿ ಶೆಟ್ಟಿ
ರಾಜ್ ಬಿ ಶೆಟ್ಟಿ
Follow us on

ಸಿನಿಮಾಗಳಲ್ಲಿ ಹಿಂಸೆಯ (Violence) ವೈಭವೀಕರಣ ಸರಿಯೇ? ಎಂಬುದು ಕಳೆದ ಹಲವು ವರ್ಷಗಳಿಂದಲೂ ನಡೆದುಕೊಂಡು ಬಂದಿರುವ ಚರ್ಚೆ. ನಾಯಕ ನಟರಾದವರು ರೌಡಿಗಳ ಪಾತ್ರದಲ್ಲಿ ಕೊಲ್ಲುವುದು, ರಕ್ತ ಮೆತ್ತಿಕೊಳ್ಳುವುದು, ಲಾಂಗ್ ಮಚ್ಚುಗಳನ್ನು ಗ್ಲೋರಿಫೈ ಮಾಡುವುದು ನಡೆಯುತ್ತಲೇ ಬಂದಿದೆ. ಇದು ಸಮಾಜದ ಮೇಲೆ ಪ್ರಭಾವ ಬೀರಿ ಯುವಜನತೆ ತಪ್ಪು ದಾರಿ ಹಿಡಿಯುತ್ತಿದೆ ಎಂದು ಹಿರಿಯರು ಆಕ್ಷೇಪ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಇದೀಗ ನಟ, ರಾಜ್ ಬಿ ಶೆಟ್ಟಿ (Raj B Shetty), ಸಿನಿಮಾಗಳಲ್ಲಿ ತೋರಿಸಲಾಗುವ ಹಿಂಸೆಯ ಬಗ್ಗೆ ಮಾತನಾಡಿದ್ದಾರೆ.

ಟಿವಿ9 ಆಯೋಜಿಸಿದ್ದ ಶೃಂಗಸಭೆಯಲ್ಲಿ ಭಾಗವಹಿಸಿ ಮಾತನಾಡಿದ ರಾಜ್ ಬಿ ಶೆಟ್ಟಿ, ‘ಹಿಂಸೆ ತಪ್ಪು ಎಂದು ತೋರಿಸಬೇಕಾದರೆ ಹಿಂಸೆಯನ್ನು ತೋರಿಸಲೇ ಬೇಕಾಗುತ್ತದೆ. ಯುದ್ಧವನ್ನು ತೋರಿಸಿದ ಸಿನಿಮಾಗಳೆಲ್ಲವೂ ಯುದ್ಧ ವಿರೋಧಿ ಸಿನಿಮಾಗಳೇ. ಯುದ್ಧದಿಂದ ದೇಶ ಸೈನಿಕನನ್ನು, ಮಕ್ಕಳು ಅಪ್ಪನನ್ನು ಕಳೆದುಕೊಳ್ಳುತ್ತವೆ ಎಂಬುದನ್ನು ತೋರಿಸಬೇಕೆಂದರೆ ನಾವು ಯುದ್ಧವನ್ನು ತೋರಿಸಲೇ ಬೇಕಾಗುತ್ತದೆ. ಅದನ್ನು ಹಿಂಸೆಯನ್ನಾಗಿ ನೋಡಿದರೆ ಆ ಸಂದೇಶ ತಲುಪುವುದಿಲ್ಲ” ಎಂದಿದ್ದಾರೆ ರಾಜ್ ಬಿ ಶೆಟ್ಟಿ.

ತಮ್ಮ ಸಿನಿಮಾಗಳಲ್ಲಿ ಹಿಂಸೆಯವನ್ನು ಪ್ರಸೆಂಟ್ ಮಾಡುವ ರೀತಿಯ ಬಗ್ಗೆ ಮಾತನಾಡಿರುವ ರಾಜ್ ಬಿ ಶೆಟ್ಟಿ, ”ನನ್ನ ಸಿನಿಮಾಗಳು ಹಿಂಸೆಯ ಅಧ್ಯಯನ. ಮನುಷ್ಯ ಯಾಕಿಷ್ಟು ಹಿಂಸಾತ್ಮಕ? ನಾವು ಯಾಕೆ ಮನುಷ್ಯರಾಗಿ ಒಬ್ಬರನ್ನು ಇಷ್ಟು ದ್ವೇಷಿಸುತ್ತೀವಿ? ನಾವೇ ಏಕೆ ಗೆಲ್ಲಬೇಕು, ಇನ್ನೊಬ್ಬರಿಗಿಂತಲೂ ಮೇಲಿರಬೇಕು? ನಾವೇ ಟಾಪ್​ನಲ್ಲಿ ಇರಬೇಕು ? ನಮ್ಮನ್ನು ಎಲ್ಲರೂ ಕೊಂಡಾಡಬೇಕು ಎಂಬ ಕೋರಿಕೆ ಯಾಕೆ? ಇದೆಲ್ಲದರ ಅಧ್ಯಯಯನವೇ ನನ್ನ ಸಿನಿಮಾ” ಎಂದಿದ್ದಾರೆ.

ಇದನ್ನೂ ಓದಿ:ಮೈಸೂರು ಘಟನೆ ಬಗ್ಗೆ ರಾಜ್ ಬಿ ಶೆಟ್ಟಿ ಪ್ರತಿಕ್ರಿಯೆ: ಅಲ್ಲಿ ನಡೆದಿದ್ದು ಬೇರೆ, ಆದರೆ ಆತ ಮಾಡಿದ್ದು ಅಕ್ಷಮ್ಯ

ತಮ್ಮ ಮೊದಲ ಸಿನಿಮಾದ ಬಗ್ಗೆ ಇದೇ ಸಂದರ್ಭದಲ್ಲಿ ಮಾತನಾಡಿದ ರಾಜ್ ಬಿ ಶೆಟ್ಟಿ, ”ಒಂದು ಮೊಟ್ಟೆಯ ಕತೆ’ ಸಿನಿಮಾ ಮಾಡುವಾಗ ನಮ್ಮ ಬಳಿ ಬಹಳ ಕಡಿಮೆ ಬಜೆಟ್ ಇತ್ತು. ಸಿನಿಮಾ ಹಿಟ್ ಆಗುತ್ತದೆಯೋ ಇಲ್ಲವೋ ಎಂಬ ಬಗ್ಗೆಯೂ ಅನುಮಾನವಿತ್ತು, ಹಾಗಾಗಿ ಉಡುಪಿ, ಮಂಗಳೂರಿನಲ್ಲಿ ಬಿಡುಗಡೆ ಮಾಡಿದರೂ ರಿಕವರಿ ಆಗಬಹುದಾದ ಮೊತ್ತವನ್ನಷ್ಟೆ ಹಾಕಿ ಸಿನಿಮಾ ಮಾಡಿದೆವು. ಆಗ ನಮ್ಮ ಬಳಿ ಹೆಚ್ಚಿಗಿದ್ದಿದ್ದು ಖಾಲಿ ಹಾಳೆ ಪೆನ್ನು ಅಷ್ಟೆ. ಅದನ್ನೇ ಬಳಸಿ ಕಂಟೆಂಟ್​ಗೆ ಹೆಚ್ಚು ಆದ್ಯತೆ ಕೊಟ್ಟು ಕೆಲಸ ಮಾಡಿದೆವು. ಹೊಸ ನಟರನ್ನು ತಂದು ತರಬೇತಿ ನೀಡಿ ನಟಿಸುವಂತೆ ಮಾಡಿದೆವು. ಆದರೆ ಕತೆ ಬರೆಯುವಾಗ ಮಾತ್ರ ಕರ್ನಾಟಕದ ಎಲ್ಲ ಭಾಗದ ಜನರಿಗೂ ಕನೆಕ್ಟ್ ಆಗುವಂತೆ ಕತೆ ಬರೆದಿದ್ದೆವು” ಎಂದು ನೆನಪು ಮಾಡಿಕೊಂಡರು.

”ಕಾಮಿಡಿ ಸಿನಿಮಾ ಮಾಡಿದ ಬಳಿಕ ಬೇರೆ ಹೊಸದಾಗಿ ಏನನ್ನಾದರೂ ಮಾಡುವ ಯೋಚನೆ ಬಂತು. ಆಗ ಮಂಗಳೂರನ್ನು ಮೂಲವಾಗಿರಿಸಿಕೊಂಡು ಅದರಲ್ಲಿನ ಇಬ್ಬರು ರೌಡಿಗಳ ಕತೆ ಮಾಡಿದೆವು, ಹೇಗೆ ಅವರಿಬ್ಬರೂ ಮೇಲೆ ಬಂದರು. ಆ ನಂತರ ಅವರಿಬ್ಬರ ಅವನತಿಗೆ ಅದೇ ರೌಡಿಸಂ ಹೇಗೆ ಕಾರಣವಾಯ್ತು ಎಂಬುದನ್ನು ಭಿನ್ನವಾಗಿ ತೋರಿಸುವ ಪ್ರಯತ್ನ ಮಾಡಿದೆವು. ಜನ ಅದನ್ನು ಮೆಚ್ಚಿಕೊಂಡರು” ಎಂದಿದ್ದಾರೆ ರಾಜ್ ಬಿ ಶೆಟ್ಟಿ.

ರಾಜ್ ಬಿ ಶೆಟ್ಟಿ ನಿರ್ದೇಶಿಸಿರುವ ಎರಡು ಸಿನಿಮಾಗಳು ಈವರೆಗೆ ಬಿಡುಗಡೆ ಆಗಿವೆ. ‘ಒಂದು ಮೊಟ್ಟೆಯ ಕತೆ’ ಮತ್ತು ‘ಗರಡು ಗಮನ ವೃಷಭ ವಾಹನ’. ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ನಿರ್ದೇಶನ ಮಾಡಿದ್ದಾರೆ ಆದರೆ ಆ ಸಿನಿಮಾ ಇನ್ನೂ ಬಿಡುಗಡೆ ಆಗಿಲ್ಲ. ಇತ್ತೀಚೆಗೆ ಬಿಡುಗಡೆ ಆದ ‘ಟೋಬಿ’ ಸಿನಿಮಾಕ್ಕೆ ರಾಜ್ ಬಿ ಶೆಟ್ಟಿ ಚಿತ್ರಕತೆ ಬರೆದಿದ್ದಾರೆ. ಆದರೆ ಸಿನಿಮಾದ ನಿರ್ದೇಶನ ಮಾಡಿರುವುದು ಅವರದ್ದೇ ತಂಡದ ಬಾಸಿಲ್. ‘ಟೋಬಿ’ ಸಿನಿಮಾ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ