‘ಕೃಷಿ ಸ್ಟುಡಿಯೋಸ್’, ‘ಸಚಿತ್ ಫಿಲಿಂಸ್’ ಮತ್ತು ‘ಶಿವ ಸಿನಿಮಾಸ್’ ಮೂಲಕ ‘ಕಣ್ಣಾಮುಚ್ಚೆ’ ಸಿನಿಮಾ (Kanna Muchche movie) ನಿರ್ಮಾಣ ಆಗಿದೆ. ವಿತರಕ ವೆಂಕಟ್ ಗೌಡ ಅವರ ಪತ್ನಿ ಮೀನಾ ವೆಂಕಟ್ ಅವರು ಇದಕ್ಕೆ ಬಂಡವಾಳ ಹೂಡಿದ್ದಾರೆ. ಜಿ.ವಿ. ವೆಂಕಟೇಶ್ ಬಾಬು, ಲೋಕೇಶ್ ಎನ್.ಬಿ. ಅವರು ಸಹ ನಿರ್ಮಾಪಕರಾಗಿದ್ದಾರೆ. ಅನೇಕ ಸಿನಿಮಾಗಳಿಗೆ ಹಾಡು ಬರೆದಿರುವ ಲೋಕಲ್ ಲೋಕಿ (Local Loki) ಅವರು ‘ಕಣ್ಣಾಮುಚ್ಚೆ’ ಸಿನಿಮಾಗೆ ಕಥೆ, ಚಿತ್ರಕಥೆ, ಸಾಹಿತ್ಯ ಬರೆದು ಆ್ಯಕ್ಷನ್-ಕಟ್ ಹೇಳಿದ್ದಾರೆ. ಈ ಸಿನಿಮಾದ ಆರು ಹಾಡುಗಳ ಪೈಕಿ, ಮೂರು ಗೀತೆಗಳ ಲಿರಿಕಲ್ ವಿಡಿಯೋ ಬಿಡುಗಡೆ ಮಾಡಲಾಗಿದೆ. ಡ್ಯಾನ್ಸರ್ ಆಗಿರುವ ರವಿಕೃಷ್ಣ ಅವರು ಈ ಚಿತ್ರಕ್ಕೆ ಹೀರೋ. ಅವರಿಗೆ ಜೋಡಿಯಾಗಿ ಸೀರಿಯಲ್ ನಟಿ ತೇಜಸ್ವಿನಿ ಆನಂದ್ ಕುಮಾರ್ ಅಭಿನಯಿಸಿದ್ದಾರೆ.
‘ಪ್ರೀತಿಯಲ್ಲಿ ಒಂದು ಹೊಸ ಆಯಾಮ’ ಎಂಬ ಟ್ಯಾಗ್ಲೈನ್ ಮೂಲಕ ‘ಕಣ್ಣಾಮುಚ್ಚೆ’ ಚಿತ್ರ ಕುತೂಹಲ ಮೂಡಿಸಿದೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಇರುವ ಕಲಾವಿದರ ಸಂಘದ ಕಟ್ಟಡದಲ್ಲಿ ಅದ್ದೂರಿಯಾಗಿ ಸಾಂಗ್ ರಿಲೀಸ್ ಕಾರ್ಯಕ್ರಮ ಜರುಗಿತು. ನಿರ್ಮಾಪಕರ ತಾಯಿ ಈ ಹಾಡುಗಳನ್ನು ಬಿಡುಗಡೆ ಮಾಡಿದರು. ಈ ವೇಳೆ ಹಿರಿಯ ನಟ ಸ್ವಸ್ತಿಕ್ ಶಂಕರ್ ಕೂಡ ಉಪಸ್ಥಿತರಿದ್ದರು. ಈ ಸಿನಿಮಾಗೆ ರಾಜೇಶ್ ರಾಮನಾಥ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.
2017ರ ಬಳಿಕ ಕಾರಣಾಂತಗಳಿಂದ ಚಿತ್ರರಂಗದಿಂದ ಕೊಂಚ ದೂರ ಸರಿದಿದ್ದ ರಾಜೇಶ್ ರಾಮನಾಥ್ ಅವರು ಈಗ ಮತ್ತೆ ಕಮ್ಬ್ಯಾಕ್ ಮಾಡಿದ್ದಾರೆ. ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡುವುದರ ಜೊತೆ ಒಂದು ಹಾಡಿಗೆ ಧ್ವನಿ ನೀಡಿದ್ದಾರೆ. ‘ಎ2 ಮ್ಯೂಸಿಕ್’ ಮೂಲಕ ಹಾಡುಗಳು ಬಿಡುಗಡೆ ಆಗಿವೆ. ನಿರ್ದೇಶಕ ಲೋಕಲ್ ಲೋಕಿ ಅವರಿಗೆ ಇದು ಎರಡನೇ ಸಿನಿಮಾ. ಮೊಬೈಲ್ ಅಂಗಡಿ ಹುಡುಗನ ಪ್ರೇಮ್ ಕಹಾನಿಯನ್ನು ಅವರು ಈ ಸಿನಿಮಾದ ಮೂಲಕ ಹೇಳಲಿದ್ದಾರೆ.
ಇದನ್ನೂ ಓದಿ: ರಜನಿಕಾಂತ್ ಗೆಳೆಯ ರಾಜ್ ಬಹದ್ದೂರ್ ಕಡೆಯಿಂದ ‘ಗಾರುಡಿಗ’ ಚಿತ್ರಕ್ಕೆ ಸಿಕ್ತು ಶುಭ ಹಾರೈಕೆ
ಉಗ್ರಂ ರವಿ, ಕೃಷ್ಣ, ನಾಗೇಂದ್ರ ಅರಸ್, ಪ್ರಶಾಂತ್ ಸಿದ್ದಿ, ಮಮತಾ, ಜಯಸೂರ್ಯ ಸೇರಿದಂತೆ ಅನೇಕ ಕಲಾವಿದರು ಪಾತ್ರವರ್ಗದಲ್ಲಿ ಇದ್ದಾರೆ. ಜಗನ್ ಬಾಬು ಅವರ ಛಾಯಾಗ್ರಹಣ, ಇ.ಎಸ್. ಈಶ್ವರ್ ಅವರ ಸಂಕಲನ ಈ ಸಿನಿಮಾಗಿದೆ. ಈ ಚಿತ್ರದಲ್ಲಿ ಮಧ್ಯಮ ವರ್ಗದ ಪ್ರೇಮಿಗಳ ಕಥೆ ಇದ್ದರೂ ದೃಶ್ಯಗಳು ಶ್ರೀಮಂತವಾಗಿ ಮೂಡಿಬಂದಿವೆ ಎಂದು ನಿರ್ಮಾಪಕರು ಹೇಳಿದ್ದಾರೆ.
ಬೆಂಗಳೂರು, ಹೆಸರುಘಟ್ಟ, ರಾಮನಗರ ಮುಂತಾದ ಕಡೆಗಳಲ್ಲಿ 45 ದಿನಗಳ ಕಾಲ ಶೂಟಿಂಗ್ ಮಾಡಲಾಗಿದೆ. ಸೆನ್ಸಾರ್ ಮಂಡಳಿಯಿಂದ ‘ಕಣ್ಣಾಮುಚ್ಚೆ’ ಸಿನಿಮಾಗೆ ಈಗಾಗಲೇ ‘ಯು/ಎ’ ಪ್ರಮಾಣಪತ್ರ ಸಿಕ್ಕಿದೆ. 2024ರ ಫೆಬ್ರವರಿ ವೇಳೆಗೆ ಚಿತ್ರ ಬಿಡುಗಡೆ ಆಗುವ ನಿರೀಕ್ಷೆ ಇದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.