ಉಪೇಂದ್ರ ನಟನೆಯ ‘ಯುಐ’ ಸಿನಿಮಾ ಇಂದು ಬಿಡುಗಡೆ ಆಗಿದೆ. ಸಿನಿಮಾದ ಬಿಡುಗಡೆಗೆ ಮುನ್ನ, ಖ್ಯಾತ ಬಾಲಿವುಡ್ ನಟ ಆಮಿರ್ ಖಾನ್ ಮತ್ತು ತೆಲುಗಿನ ಸ್ಟಾರ್ ನಟ ಅಕ್ಕಿನೇನಿ ನಾಗಾರ್ಜುನ ಅವರುಗಳು ಪ್ರಚಾರ ಮಾಡಿದ್ದರು. ಆಮಿರ್ ಖಾನ್ ಅಂತೂ ಸಿನಿಮಾದ ಟ್ರೈಲರ್ ಬಗ್ಗೆ ವಿಶೇಷ ವಿಡಿಯೋ ಮಾಡಿ ಹಾಕಿ, ಉಪೇಂದ್ರ ಅವರ ಪ್ರತಿಭೆಯನ್ನು ಕೊಂಡಾಡಿದ್ದರು. ನಾಗಾರ್ಜುನ ಸಹ ತಮ್ಮ ಬಿಗ್ಬಾಸ್ ಶೋಗೆ ಉಪೇಂದ್ರ ಅವರನ್ನು ಅತಿಥಿಯಾಗಿ ಕರೆಸಿ ‘ಯುಐ’ ಸಿನಿಮಾದ ಪ್ರಚಾರ ಮಾಡಿಸಿದ್ದರು. ಇದೀಗ ನಟರಾದ ಯಶ್ ಮತ್ತು ರಜನೀಕಾಂತ್ ಅವರೇ ‘ಯುಐ’ ಸಿನಿಮಾದ ಪರ ನಿಂತಿದ್ದಾರೆ.
ರಜನೀಕಾಂತ್ ಅವರು ಉಪೇಂದ್ರ ಅವರಿಗಾಗಿ ಒಂದು ಹೆಜ್ಜೆ ಮುಂದಿಟ್ಟು ಬಂದಿದ್ದು, ಚೆನ್ನೈನಲ್ಲಿ ನಾಳೆ (ಡಿಸೆಂಬರ್ 21) ‘ಯುಐ’ ಸಿನಿಮಾದ ತಮಿಳು ಆವೃತ್ತಿಯನ್ನು ನೋಡಲಿದ್ದಾರೆ. ಆ ಮೂಲಕ ಉಪೇಂದ್ರ ಅವರಿಗೆ ಬೆಂಬಲ ನೀಡಲಿದ್ದಾರೆ. ರಜನೀಕಾಂತ್ ಅವರು ತಮಿಳಿನ ಸ್ಟಾರ್ ನಟರ ಸಿನಿಮಾಗಳಿಗೆ ಪ್ರಚಾರ ಮಾಡುವುದು, ಬೆಂಬಲ ನೀಡುವುದು ಬಹಳ ಕಡಿಮೆ. ಆದರೆ ಇದೀಗ ಉಪೇಂದ್ರ ಅವರಿಗಾಗಿ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಲು ರಜನೀಕಾಂತ್ ಮುಂದಾಗಿದ್ದಾರೆ.
ಇನ್ನು ನಟ ಯಶ್ ಅವರು ಸಹ ಉಪೇಂದ್ರ ಅವರ ‘ಯುಐ’ ಸಿನಿಮಾವನ್ನು ಮುಂಬೈನಲ್ಲಿ ವೀಕ್ಷಿಸಲಿದ್ದಾರೆ. ನಟ ಯಶ್, ‘ಟಾಕ್ಸಿಕ್’ ಸಿನಿಮಾದ ಚಿತ್ರೀಕರಣಕ್ಕಾಗಿ ಮುಂಬೈನಲ್ಲಿ ವಾಸ್ತವ್ಯ ಹೂಡಿದ್ದಾರೆ. ಸತತವಾಗಿ ‘ಟಾಕ್ಸಿಕ್’ ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ. ಚಿತ್ರೀಕರಣದ ನಡುವೆ ಬಿಡುವು ಪಡೆದುಕೊಂಡು ಮುಂಬೈನ ಚಿತ್ರಮಂದಿರವೊಂದರಲ್ಲಿ ‘ಯುಐ’ ಸಿನಿಮಾದ ಹಿಂದಿ ಆವೃತ್ತಿಯನ್ನು ನಟ ಯಶ್ ವೀಕ್ಷಿಸಲಿದ್ದಾರೆ.
ಇದನ್ನೂ ಓದಿ:ರಜನೀಕಾಂತ್ರನ್ನು ಮಹಾಭಾರತದ ಪಾತ್ರಕ್ಕೆ ಹೋಲಿಸಿದ ಉಪೇಂದ್ರ
ಉಪೇಂದ್ರ ಅವರು ತಮಿಳಿನ ಸಿನಿಮಾ ‘ಕೂಲಿ’ಯಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾದ ನಾಯಕ ರಜನೀಕಾಂತ್, ಅದೇ ಸಿನಿಮಾದಲ್ಲಿ ಬಾಲಿವುಡ್ ನಟ ಆಮಿರ್ ಖಾನ್, ತೆಲುಗಿನ ನಟ ನಾಗಾರ್ಜುನ ಅವರುಗಳು ಸಹ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಉಪೇಂದ್ರ ಅವರಿಗೆ ವಿಶೇಷ ಪಾತ್ರವಿದೆ. ಇದೇ ಕಾರಣಕ್ಕೆ ನಟರಾದ ರಜನೀಕಾಂತ್, ಆಮಿರ್ ಖಾನ್ ಮತ್ತು ನಾಗಾರ್ಜುನ ಅರುಗಳು ‘ಕೂಲಿ’ ಸಿನಿಮಾದ ತಮ್ಮ ಸಹನಟ ಉಪೇಂದ್ರ ಅವರ ಹೊಸ ಸಿನಿಮಾಕ್ಕೆ ಬೆಂಬಲ ಸೂಚಿಸಿ ಪ್ರಚಾರ ಮಾಡಿಕೊಟ್ಟಿದ್ದಾರೆ.
ಉಪೇಂದ್ರ ನಟಿಸಿ ನಿರ್ದೇಶನ ಮಾಡಿರುವ ‘ಯುಐ’ ಸಿನಿಮಾ ಇಂದು ಬಿಡುಗಡೆ ಆಗಿದೆ. ಸಿನಿಮಾದ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾಕ್ಕೆ ಲಹರಿ ವೇಲು ಮತ್ತು ಕೆಪಿ ಶ್ರೀಕಾಂತ್ ಬಂಡವಾಳ ಹೂಡಿದ್ದಾರೆ. ಸಿನಿಮಾಕ್ಕೆ ಎಪಿ ಅರ್ಜುನ್ ಅವರ ಸಂಗೀತ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ