KGF Chapter 2: ಕನ್ನಡದಲ್ಲೇ ‘ಕೆಜಿಎಫ್ ಚಾಪ್ಟರ್ 2’ ವೀಕ್ಷಿಸಿದ ರಜನಿ; ಚಿತ್ರತಂಡಕ್ಕೆ ಹೇಳಿದ್ದೇನು?

Rajinikanth | Yash | Prashanth Neel: ‘ಕೆಜಿಎಫ್ ಚಾಪ್ಟರ್ 2’ ಚಿತ್ರವನ್ನು ಕನ್ನಡದಲ್ಲೇ ವೀಕ್ಷಿಸಿದ್ದಾರೆ ಸೂಪರ್​ಸ್ಟಾರ್ ರಜನಿಕಾಂತ್. ಚಿತ್ರ ನೋಡಿ ಇಷ್ಟಪಟ್ಟಿರುವ ಅವರು, ಚಿತ್ರತಂಡಕ್ಕೆ ಕರೆಮಾಡಿ ಅಭಿನಂದನೆ ಹೇಳಿದ್ದಾರೆ.

KGF Chapter 2: ಕನ್ನಡದಲ್ಲೇ ‘ಕೆಜಿಎಫ್ ಚಾಪ್ಟರ್ 2’ ವೀಕ್ಷಿಸಿದ ರಜನಿ; ಚಿತ್ರತಂಡಕ್ಕೆ ಹೇಳಿದ್ದೇನು?
ಯಶ್, ರಜನಿಕಾಂತ್
Updated By: shivaprasad.hs

Updated on: Apr 16, 2022 | 1:53 PM

ಯಶ್ ಅಭಿನಯದ ‘ಕೆಜಿಎಫ್ ಚಾಪ್ಟರ್ 2’ಗೆ (KGF Chapter 2) ವಿಶ್ವಾದ್ಯಂತ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ದೀರ್ಘ ವೀಕೆಂಡ್ ಚಿತ್ರಕ್ಕೆ ಮತ್ತಷ್ಟು ವರದಾನವಾಗಿದ್ದು, ಭಾನುವಾರದವರೆಗೆ ಬಹುತೇಕ ಶೋಗಳು ಬುಕ್ ಆಗಿವೆ. ಈ ನಡುವೆ ಚಿತ್ರವನ್ನು ವೀಕ್ಷಿಸಿದ ದಿಗ್ಗಜರು ಚಿತ್ರತಂಡದ ಪರಿಶ್ರಮಕ್ಕೆ, ದೊಡ್ಡ ಚಿತ್ರವೊಂದನ್ನು ಕಟ್ಟಿಕೊಟ್ಟ ಬಗೆಗೆ ಮನಸೋತಿದ್ದಾರೆ. ಹಲವರು ಇದನ್ನು ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದಾರೆ. ಈ ನಡುವೆ ಚಿತ್ರತಂಡದ ಶ್ರಮಕ್ಕೆ ‘ಸೂಪರ್​ಸ್ಟಾರ್’ ಕಡೆಯಿಂದಲೇ ಶಹಬ್ಬಾಸ್​ಗಿರಿ ಸಿಕ್ಕಿದೆ. ಹೌದು, ತಲೈವಾ ಎಂದೇ ಅಭಿಮಾನಿಗಳಿಂದ ಕರೆಯಲ್ಪಡುವ ರಜನಿಕಾಂತ್ (Rajinikanth) ಚೆನ್ನೈನಲ್ಲಿ ‘ಕೆಜಿಎಫ್ ಚಾಪ್ಟರ್ 2’ ಚಿತ್ರವನ್ನು ವೀಕ್ಷಿಸಿದ್ದಾರೆ. ಅಲ್ಲದೇ ಚಿತ್ರದ ಕತೆಗೆ, ಅದ್ದೂರಿತನಕ್ಕೆ ಮಾರುಹೋಗಿದ್ದಾರೆ. ವಿಶೇಷವೆಂದರೆ ರಜನಿ ಕನ್ನಡ ಅವತರಣಿಕೆಯಲ್ಲೇ ‘ಕೆಜಿಎಫ್ 2’ ವೀಕ್ಷಿಸಿದ್ದಾರೆ. ಈ ಬಗ್ಗೆ ಹಲವರು ಟ್ವೀಟ್ ಮಾಡಿದ್ದು, ರಜನಿ ಚಿತ್ರ ನೋಡಿದ ನಂತರ ನೀಡಿದ ಪ್ರತಿಕ್ರಿಯೆಯ ಬಗ್ಗೆ ಬರೆದುಕೊಂಡಿದ್ದಾರೆ.

ಬಾಕ್ಸಾಫೀಸ್ ವಿಶ್ಲೇಶಕ ಹಾಗೂ ಸಿನಿಮಾ ವಿಮರ್ಶಕರಾದ ರಮೇಶ್ ಬಾಲಾ ಈ ಬಗ್ಗೆ ಟ್ವೀಟ್ ಮಾಡಿದ್ದು, ಚಿತ್ರ ವೀಕ್ಷಿಸಿದ ರಜನಿ ನಿರ್ಮಾಪಕ ವಿಜಯ್ ಕಿರಗಂದೂರು ಅವರಿಗೆ ಕರೆ ಮಾಡಿದ್ದಾಗಿ ಮಾಹಿತಿ ನೀಡಿದ್ದಾರೆ. ಅಭೂತಪೂರ್ವ ಪರಿಕಲ್ಪನೆಯನ್ನು ತೆರೆಗೆ ತಂದಿದ್ದಕ್ಕೆ ಹಾಗೂ ಅದನ್ನು ಸಾಧ್ಯವಾಗಿಸಿದ ಚಿತ್ರತಂಡಕ್ಕೆ ರಜಿನಿ ಶಹಬ್ಬಾಸ್​ಗಿರಿ ನೀಡಿದ್ದು, ಚಿತ್ರತಂಡದ ಶ್ರಮವನ್ನು ಶ್ಲಾಘಿಸಿದ್ದಾರೆ ಎಂದು ರಮೇಶ್ ತಿಳಿಸಿದ್ದಾರೆ. ಮತ್ತೋರ್ವ ವಿಶ್ಲೇಷಕ ಮನೋಬಲ ವಿಜಯಬಾಲನ್ ಕೂಡ ಈ ಬಗ್ಗೆ ಬರೆದುಕೊಂಡಿದ್ದಾರೆ. ‘ಕೆಜಿಎಫ್’ ಚಿತ್ರತಂಡದ ಅಧಿಕೃತ ಟ್ವಿಟರ್ ಖಾತೆಯಲ್ಲಿಯೂ ರಿಟ್ವೀಟ್ ಮೂಲಕ ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ.

ಈ ಕುರಿತ ಟ್ವೀಟ್​ಗಳು ಇಲ್ಲಿವೆ:

ರಜನಿ ಚಿತ್ರ ವೀಕ್ಷಿಸಿದ ಸುದ್ದಿ ತಿಳಿದ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ವಿಧವಿಧ ಅನಿಸಿಕೆ ಹಂಚಿಕೊಳ್ಳುತ್ತಿದ್ದಾರೆ. ರಜನಿ ಜತೆ ಪ್ರಶಾಂತ್ ನೀಲ್ ಹಾಗೂ ಹೊಂಬಾಳೆ ಫಿಲ್ಮ್ಸ್ ಚಿತ್ರ ಮಾಡಬೇಕು ಎಂಬ ಕೋರಿಕೆಯನ್ನೂ ಹಲವರು ಮುಂದಿಟ್ಟಿದ್ದಾರೆ. ಒಂದುವೇಳೆ ರಜನಿ ಜತೆ ‘ಕೆಜಿಎಫ್ 2’ ಚಿತ್ರತಂಡ ಕೈಜೋಡಿಸಿದರೆ ಅದು ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಮೈಲಿಗಲ್ಲು ಸೃಷ್ಟಿಸಲಿದೆ ಎಂದೂ ಹಲವರು ಬರೆದಿದ್ದಾರೆ. ರಜನಿ ಚಿತ್ರ ವೀಕ್ಷಿಸಿ, ಬೆಂಬಲ ನೀಡಿದ್ದರ ಬಗ್ಗೆ ಬಹಳಷ್ಟು ಜನರು ಮೆಚ್ಚುಗೆಯ ಮಾತನ್ನಾಡಿದ್ದಾರೆ.

ಬಾಕ್ಸಾಫೀಸ್​​ನಲ್ಲಿ ‘ಕೆಜಿಎಫ್ ಚಾಪ್ಟರ್ 2’ ದಾಖಲೆ:

‘ಕೆಜಿಎಫ್ ಚಾಪ್ಟರ್ 2’ ಚಿತ್ರವನ್ನು ಜನರು ಇಷ್ಟಪಟ್ಟಿದ್ದು, ಚಿತ್ರವು ಬಾಕ್ಸಾಫೀಸ್​ನಲ್ಲಿ ದಾಖಲೆ ಮಟ್ಟದಲ್ಲಿ ಕಲೆಕ್ಷನ್ ಮಾಡುತ್ತಿದೆ. ಹಿಂದಿಯೊಂದರಲ್ಲೇ ಮೊದಲ ದಿನ  53.95 ಕೋಟಿ ರೂಪಾಯಿ ಗಳಿಸಿದ್ದ ಚಿತ್ರವು ಎರಡನೇ ದಿನ 46.79 ಕೋಟಿ ರೂ ಕಲೆಕ್ಷನ್​ ಮಾಡಿದೆ. ಈ ಮೂಲಕ ಒಟ್ಟಾರೆ 100.74 ಕೋಟಿ ರೂ ಗಳನ್ನು ಹಿಂದಿ ಅವತರಣಿಕೆಯಿಂದಲೇ ಗಳಿಕೆ ಮಾಡಲಾಗಿದೆ. ಬಾಕ್ಸಾಫೀಸ್ ವಿಶ್ಲೇಶಕ ರಮೇಶ್ ಬಾಲ ಪ್ರಕಾರ ವಿಶ್ವಾದ್ಯಂತ ಚಿತ್ರವು ಮೊದಲ ದಿನ 165 ಕೋಟಿ ರೂಗಳನ್ನು ಬಾಚಿಕೊಂಡಿದೆ.

ಇದನ್ನೂ ಓದಿ: ಹಿಂದಿಯಲ್ಲಿ 2 ದಿನಕ್ಕೆ 100 ಕೋಟಿ ರೂ. ಕಲೆಕ್ಷನ್​ ಮಾಡಿದ ‘ಕೆಜಿಎಫ್​ 2’ ಚಿತ್ರ; ಇಲ್ಲಿದೆ ಪಕ್ಕಾ ಲೆಕ್ಕ

‘ಕೆಜಿಎಫ್​ 2’ ಚಿತ್ರದ ಮುಂದುವರಿದ ಭಾಗವೇ ‘ಸಲಾರ್​’? ‘ಕೆಜಿಎಫ್​ 3’ ಪ್ರಶ್ನೆಗೆ ಉತ್ತರ ಹುಡುಕಿದ ಫ್ಯಾನ್ಸ್​