ಕೊರೊನಾ ವೈರಸ್ ಮಿತಿಮೀರಿ ಹರಡುತ್ತಿದೆ. ಚಿತ್ರರಂಗದ ಸಾಕಷ್ಟು ಮಂದಿ ಕೊರೊನಾದಿಂದ ಬಲಿಯಾಗುತ್ತಿದ್ದಾರೆ. ನಿತ್ಯ ಲಕ್ಷಾಂತರ ಕೊವಿಡ್ ಕೇಸ್ಗಳು ವರದಿಯಾಗುತ್ತಿರುವುದು ಸಾಕಷ್ಟು ಆತಂಕ ಸೃಷ್ಟಿಸಿದೆ. ಈಗ, ವರನಟ ಡಾಕ್ಟರ್ ರಾಜ್ಕುಮಾರ್ ಸೇರಿದಂತೆ ಅವರ ಕುಟುಂಬದವರಿಗೆ ಯೋಗಾಸನ ಹೇಳಿಕೊಡುತ್ತಿದ್ದ ಹೊನ್ನಪ್ಪ ನಾಯ್ಕರ್ ಮೃತಪಟ್ಟಿದ್ದಾರೆ. ಅವರಿಗೆ ಸುಮಾರು 90 ವರ್ಷ ವಯಸ್ಸಾಗಿತ್ತು.
ಹೊನ್ನಪ್ಪ ನಾಯ್ಕರ್ ಅವರಿಗೆ ಇತ್ತೀಚೆಗೆ ಕೊವಿಡ್ ಕಾಣಿಸಿಕೊಂಡಿತ್ತು. ಆದರೆ, ಅವರಿಗೆ ಚಿಕಿತ್ಸೆ ಫಲಕಾರಿಯಾಗಿಲ್ಲ. ಇಂದು (ಮೇ 20) ಬೆಳಗ್ಗೆ ಅವರು ನಿಧನ ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಇವರು ಪೊಲೀಸ್ ಇಲಾಖೆಯಲ್ಲಿ ಈ ಹಿಂದೆ ಕಾರ್ಯನಿರ್ವಹಿಸಿದ್ದರು ಎಂಬುದು ವಿಶೇಷ.
ಹೊನ್ನಪ್ಪ ನಾಯ್ಕರ್ ರಾಜ್ಕುಮಾರ್ ಮತ್ತು ಅವರ ಕುಟುಂಬದವರಿಗೆ ಯೋಗಾಸನವನ್ನು ಹೇಳಿಕೊಡುತ್ತಿದ್ದರು. ಅಲ್ಲದೆ ಗಣ್ಯವ್ಯಕ್ತಿಗಳಿಗೆ ಅವರು ಯೋಗಾಸನ ಹೇಳಿಕೊಡುತ್ತಿದ್ದರು. ಇವರಿಗೆ ಮೂರು ಗಂಡು ಮಕ್ಕಳಿದ್ದಾರೆ. ಹೊನ್ನಪ್ಪ ನಾಯ್ಕರ್ ಬೆಂಗಳೂರಿನ ಜೆ.ಪಿ. ನಗರದಲ್ಲಿ ವಾಸವಿದ್ದರು. ಕನಕಪುರದ ಬಳಿ ಇವರ ಯೋಗಾಶ್ರಮವಿದೆ.
ಇವರ ಅಂತ್ಯಕ್ರಿಯೆಯನ್ನು ಕನಕಪುರದ ನಾಗದೇವನಹಳ್ಳಿ ಬಳಿ ನೆರವೇರಿಸಲು ಅವರ ಕುಟುಂಬಸ್ಥರು ತೀರ್ಮಾನಿಸಿದ್ದಾರೆ. ಹೊನ್ನಪ್ಪ ನಾಯ್ಕರ್ ಅವರ ಆತ್ಮೀಯರಾದ ಎಸ್.ಎ. ಚಿನ್ನೇಗೌಡ ಅವರು ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಕೋರಿದ್ದಾರೆ.
ರಾಜ್ಕುಮಾರ್ ಅವರು ಯೋಗಾಸನದಲ್ಲಿ ಪಳಗಿದ್ದರು. ಹಾಗಂತ ಅವರು ಚಿಕ್ಕ ವಯಸ್ಸಿನಿಂದ ಯೋಗಾಸನ ಆರಂಭಿಸಿದವರಲ್ಲ. ಆದಾಗ್ಯೂ, ಯೋಗಾಸನದಲ್ಲಿ ಪಳಗಿದ್ದರು. ಇದಕ್ಕೆ ಹೊನ್ನಪ್ಪ ನಾಯ್ಕರ್ ಅವರ ಕೊಡುಗೆ ದೊಡ್ಡದಿದೆ.
ಸೆಲೆಬ್ರಿಟಿಗಳ ವಲಯದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮೆರೆಯುತ್ತಿದೆ. ಪ್ರತಿದಿನ ಒಬ್ಬರಲ್ಲ ಒಬ್ಬರು ಕೊವಿಡ್ಗೆ ಬಲಿಯಾಗುತ್ತಿದ್ದಾರೆ. ಬಾಲಿವುಡ್, ಸ್ಯಾಂಡಲ್ವುಡ್ ಹಾಗೂ ಕಾಲಿವುಡ್ನಲ್ಲಿ ಸಾಕಷ್ಟು ಜನರು ಕೊವಿಡ್ಗೆ ಬಲಿಯಾಗಿದ್ದಾರೆ.
ಇದನ್ನೂ ಓದಿ: RCB: ರಾಜ್ಕುಮಾರ್ ಹುಟ್ಟುಹಬ್ಬಕ್ಕೆ ‘ಬಭ್ರುವಾಹನ’ ಸಿನಿಮಾ ಹಾಡಿನ ಸಾಲು ಬರೆದು ಶುಭಕೋರಿದ ಆರ್ಸಿಬಿ!
Published On - 3:58 pm, Thu, 20 May 21