1966ರಲ್ಲಿ ‘ಮಂತ್ರಾಲಯ ಮಹಾತ್ಮೆ’ ಸಿನಿಮಾ ರಿಲೀಸ್ ಆಯಿತು. ಟಿವಿ ಸಿಂಗ್ ಠಾಕೂರ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈ ಚಿತ್ರದಲ್ಲಿ ರಾಜ್ಕುಮಾರ್ ಅವರು ರಾಘವೇಂದ್ರ ಸ್ವಾಮಿ ಪಾತ್ರದಲ್ಲಿ ನಟಿಸಿದ್ದರು. ರಾಜ್ಕುಮಾರ್ ಅವರ ಫೇವರಿಟ್ ಸಿನಿಮಾಗಳಲ್ಲಿ ಈ ಚಿತ್ರ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಈ ಸಿನಿಮಾವನ್ನು ರಾಜ್ಕುಮಾರ್ ಮಾಡಿದ್ದು ಹೇಗೆ ಎಂಬ ಬಗ್ಗೆ ಶಿವರಾಜ್ಕುಮಾರ್ ಅವರು ಈ ಮೊದಲು ಹೇಳಿದ್ದರು.
ರಾಜ್ಕುಮಾರ್ ಅವರು ರಾಘವೇಂದ್ರ ಸ್ವಾಮಿ ಪಾತ್ರ ಮಾಡಿದರೆ, ಜಯಂತಿ ಸರಸ್ವತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕಲ್ಪನಾ ಅವರು ತುಳಸಿಯಾಗಿ ಕಾಣಿಸಿಕೊಂಡರು. ಈ ಚಿತ್ರಕ್ಕಾಗಿ ರಾಜ್ಕುಮಾರ್ ಅವರು 43 ದಿನಗಳ ಕಾಲ ಕಟ್ಟುನಿಟ್ಟಾದ ಸಸ್ಯಾಹಾರ ಸೇವನೆ ಮಾಡಿದ್ದರು. ಚಪ್ಪಲಿ ಧರಿಸದೆ ಅವರು 18 ಕಿಲೋ ಮೀಟರ್ ನಡೆದಿದ್ದರು ಅನ್ನೋದು ವಿಶೇಷ. ಈ ಸಿನಿಮಾ ಅಂದಿನ ಕಾಲಕ್ಕೆ ಸೂಪರ್ ಹಿಟ್ ಎನಿಸಿಕೊಂಡಿತು. ಈ ಸಿನಿಮಾದಲ್ಲಿ ರಾಜ್ಕುಮಾರ್ ಅವರು ರಾಘವೇಂದ್ರ ಸ್ವಾಮಿ ಪಾತ್ರ ಮಾಡಲು ಒಂದು ಪ್ರಮುಖ ಕಾರಣ ಇತ್ತು. ಈ ಬಗ್ಗೆ ಶಿವಣ್ಣ ಮಾತನಾಡಿದ್ದರು.
‘ಮಂತ್ರಾಲಯಕ್ಕೆ ಹೋದಾಗ ಗರ್ಭಗುಡಿಯಲ್ಲಿ ಮಲಗಬಹುದಾ ಎಂದು ಅಪ್ಪಾಜಿ ಕೇಳಿದರು. ಅದೇ ರೀತಿ ಮಲಗಿದರು. ಬೆಳಿಗ್ಗೆ ಎದ್ದು ಪೂಜೆ ಮುಗಿಸಿದರು. ಆ ಬಳಿಕ ದೊರೆ ಭಗವಾನ್ ಬಳಿ ಬಂದ ರಾಜ್ಕುಮಾರ್, ನಾನು ರಾಘವೇಂದ್ರ ಸ್ವಾಮಿಗಳ ಬಗ್ಗೆ ಸಿನಿಮಾ ಮಾಡ್ತೀನಿ, ನೀವು ಮಾಡಿ ಎಂದು ಕೇಳಿದರು. ಆ ಸಿನಿಮಾನ ಅಷ್ಟು ಸುಲಭದಲ್ಲಿ ಮಾಡೋಕೆ ಆಗಲ್ಲ. ಅಪ್ಪಾಜಿ ಅಷ್ಟು ಶ್ರದ್ಧೆಯಿಂದ ಮಾಡಿದರು ’ ಎಂದಿದ್ದರು ಶಿವರಾಜ್ಕುಮಾರ್. ಆಗಿನ ಕಾಲದಲ್ಲಿ ಸಿನಿಮಾ 25 ವಾರ ಓಡಿತ್ತು. ಆ ರಾತ್ರಿ ಏನೋ ಪವಾಡ ನಡೆದಿತ್ತು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ದೊರೈ-ಭಗವಾನ್ ಈ ಸಿನಿಮಾದ ನಿರ್ಮಾಣದಲ್ಲಿ ಹಾಗೂ ನಿರ್ದೇಶನದಲ್ಲಿ ಹೆಚ್ಚಿನ ಕಾಳಜಿ ವಹಿಸಿದ್ದರು. ಇವರ ಮೇಲುಸ್ತುವಾರಿಯಲ್ಲಿ ಸಿನಿಮಾ ಮೂಡಿ ಬಂದಿತ್ತು. ಈ ಸಿನಿಮಾ ರಿಲೀಸ್ ಆಗಿ 60 ವರ್ಷಗಳೇ ಕಳೆಯುತ್ತಾ ಬಂದಿವೆ.
ಇದನ್ನೂ ಓದಿ: ನಿಮ್ಮ ಮನೆಯ ನೀರು ಅಮೃತ ಎಂದ ಅಭಿಮಾನಿ; ರಾಜ್ಕುಮಾರ್ ಮಾಡಿದ್ದೇನು?
ರಾಜ್ಕುಮಾರ್ ಅವರು ಈ ಮೊದಲು ಮಾತನಾಡಿದ್ದಾಗ ತಮ್ಮಿಷ್ಟದ ಸಿನಿಮಾ ಎಂದರೆ ಮಂತ್ರಾಲಯ ಮಹಾತ್ಮೆ ಎಂದಿದ್ದರು. ‘ನಾನು ಹಲವು ಸಿನಿಮಾ ಮಾಡಿದ್ದೇನೆ. ಯಾವ ಚಿತ್ರವನ್ನೂ ನೋಡಿ ಎಂದು ಅಭಿಮಾನಿಗಳ ಬಳಿ ಕೋರಿಲ್ಲ. ಮಂತ್ರಾಲಯ ಮಹಾತ್ಮೆ ಒಂದನ್ನು ಹೊರತುಪಡಿಸಿ. ಅದನ್ನು ಅಭಿಮಾನಿಗಳ ಬಳಿ ನೋಡಿ ಎಂದು ನಾನು ಕೋರಿದ್ದೆ’ ಎಂದಿದ್ದರು ಅವರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:01 am, Sat, 23 November 24