ಕನ್ನಡ ಮತ್ತು ಸಂಸ್ಕೃತಿ ಇಲಾಖೆ 2024ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಿದೆ. ಚಿತ್ರರಂಗ, ಸಾಹಿತ್ಯ, ಸಮಾಜ ಸೇವೆ, ಕೃಷಿ, ವಿಜ್ಞಾನ, ತಂತ್ರಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಈ ಬಾರಿ ಬರೋಬ್ಬರಿ 69 ಮಂದಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ. ಇದರಲ್ಲಿ ಇಬ್ಬರು ಚಲನಚಿತ್ರ ರಂಗದ ಸಾಧಕರನ್ನು ಸಹ ಗುರುತಿಸಲಾಗಿದೆ.
ಆಂಧ್ರ ಪ್ರದೇಶ ಮೂಲದವರಾದರೂ ಕನ್ನಡದ ನೂರಾರು ಸಿನಿಮಾಗಳಲ್ಲಿ ಹಾಗೂ ಕೆಲ ಧಾರಾವಾಹಿಗಳಲ್ಲಿ ನಟಿಸಿ ಕನ್ನಡಿಗರಿಗೆ ಬಹಳ ಹತ್ತಿರವಾಗಿರುವ ನಟಿ ಹೇಮಾ ಚೌಧರಿ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತಿದೆ. ಹೇಮಾ ಚೌಧರಿ 1976 ರಿಂದಲೂ ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಲೇ ಬಂದಿದ್ದಾರೆ. ನಾಯಕಿಯಾಗಿ ಪರಿಚಿತವಾದ ಹೇಮಾ ಚೌಧರಿ ಕನ್ನಡದ ಹಲವು ಸ್ಟಾರ್ ನಟರೊಟ್ಟಿಗೆ ನಾಯಕಿಯಾಗಿ ನಟಿಸಿದ್ದಾರೆ. ಆ ನಂತರ ಸಹೋದರಿಯಾಗಿ, ತಾಯಿಯಾಗಿ, ಅಜ್ಜಿಯ ಪಾತ್ರಗಳಲ್ಲಿಯೂ ನಟಿಸಿದ್ದಾರೆ. ಕನ್ನಡದ ಎರಡು ಧಾರಾವಾಹಿಗಳಲ್ಲಿಯೂ ಸಹ ಹೇಮಾ ಚೌಧರಿ ನಟಿಸಿದ್ದಾರೆ. ಹೇಮಾ ಚೌಧರಿ ಮೂಲತಃ ತೆಲುಗಿನವರಾದರೂ ಅತಿ ಹೆಚ್ಚು ನಟಿಸಿರುವುದು ಕನ್ನಡ ಸಿನಿಮಾಗಳಲ್ಲಿಯೇ. ಐದು ದಶಕದಿಂದಲೂ ಕನ್ನಡ ಚಿತ್ರರಂಗದೊಂದಿಗೆ ನಂಟು ಹೊಂದಿರುವ ಹೇಮಾ ಚೌಧರಿ ಕನ್ನಡದ ನಟಿಯೇ ಆಗಿಬಿಟ್ಟಿದ್ದಾರೆ.
ಇದನ್ನೂ ಓದಿ:Rajyotsava Award 2024: ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ: 69 ಜನರ ಪಟ್ಟಿ ಇಲ್ಲಿದೆ
ಬರಹಗಾರ ಎಂಎಸ್ ನರಸಿಂಹಮೂರ್ತಿ ಅವರಿಗೆ ಚಲನಚಿತ್ರ/ಕಿರುತೆರೆ ವಿಭಾಗದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಖ್ಯಾತ ಬರಹಗಾರರು, ಸಾಹಿತಿಗಳೂ ಆಗಿರುವ ಎಂಎಸ್ ನರಸಿಂಹಮೂರ್ತಿಯವರು ಹಲವಾರು ಸಿನಿಮಾ ಹಾಗೂ ಧಾರಾವಾಹಿಗಳಿಗೆ ಸಾಹಿತ್ಯ, ಸಂಭಾಷಣೆ, ಚಿತ್ರಕತೆಯನ್ನು ಒದಗಿಸಿದ್ದಾರೆ. ಈಗಲೂ ಸಹ ಕಿರುತೆರೆಯಲ್ಲಿ ನಗೆ ಭಾಷಣ, ನಗೆ ಚರ್ಚೆಗಳನ್ನು ಆಯೋಜಿಸುತ್ತಾರೆ. ಕಿರುತೆರೆ ಹಾಗೂ ಚಲನಚಿತ್ರ ರಂಗಕ್ಕೆ ಅವರ ಅದಮ್ಯ ಕೊಡುಗೆ ಗುರುತಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿದೆ.
ರಂಗಭೂಮಿ ಕ್ಷೇತ್ರದ ಆರು ಸಾಧಕರನ್ನು ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸರಸ್ವತಿ ಜುಲೈಕಾ ಬೇಗಂ, ಓಬಳೇಶ್ ಎಚ್ಬಿ, ಭಾಗ್ಯಾ ರವಿ, ಡಿ ರಾಮು, ಎಚ್ ಜನಾರ್ಧನ, ಹನುಮಾನ ದಾಸ ಪವಾರ ಅವರುಗಳನ್ನು ಆರಿಸಲಾಗಿದೆ. ಇನ್ನು ಸಂಗೀತ ಕ್ಷೇತ್ರದಿಂದ ರಾಜಗೋಪಾಲ್ ಮತ್ತು ಸದಾಶಿವ, ನೃತ್ಯ ಕ್ಷೇತ್ರದಿಂದ ವಿದುಷಿ ಲಲಿತಾ ರಾವ್, ಯಕ್ಷಗಾನ ವಿಭಾಗದಿಂದ ಸೀತಾರಾಮ ತೋಳ್ಪಾಡಿ ಮತ್ತು ಕೇಶವ್ ಹೆಗಡೆ ಅವರನ್ನು ಆರಿಸಲಾಗಿದೆ. ಬಯಲಾಟ ಕ್ಷೇತ್ರದಿಂದ ಸಿದ್ದಪ್ಪ ಕರಿಯಪ್ಪ ಕುರಿ, ನಾರಾಯಣಪ್ಪ ಶಿಳ್ಳೆಕ್ಯಾತ ಅವರುಗಳನ್ನು ಆಯ್ಕೆ ಮಾಡಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ