ರಕ್ಷಿತ್ ಶೆಟ್ಟಿ (Rakshit Shetty) ಅವರ ಅಭಿರುಚಿ ಏನು ಎಂಬುದು ಎಲ್ಲರಿಗೂ ಗೊತ್ತಾಗಿದೆ. ನಟನೆ ಮಾತ್ರವಲ್ಲದೆ, ನಿರ್ಮಾಪಕನಾಗಿಯೂ ಅವರು ಯಶಸ್ಸು ಕಂಡಿದ್ದಾರೆ. ಭಿನ್ನ ಸಿನಿಮಾಗಳು ಅವರ ನಿರ್ಮಾಣ ಸಂಸ್ಥೆಯಿಂದ ಹೊರ ಬರುತ್ತಿದೆ. ‘777 ಚಾರ್ಲಿ’ (777 Charlie) ಸಿನಿಮಾದಿಂದ ಸಾಕಷ್ಟು ಲಾಭ ಕಂಡಿರುವ ರಕ್ಷಿತ್ ಈ ಹಣವನ್ನು ಮತ್ತೆ ಸಿನಿಮಾ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ರಕ್ಷಿತ್ ಶೆಟ್ಟಿ ‘ಪರಂವಃ ಸ್ಟುಡಿಯೋಸ್’ ಮೂಲಕ ಎರಡು ಹೊಸ ಸಿನಿಮಾ ನಿರ್ಮಾಣ ಮಾಡುವ ಘೋಷಣೆ ಮಾಡಿದ್ದಾರೆ. ‘ಬ್ಯಾಚುಲರ್ ಪಾರ್ಟಿ’ ಹಾಗೂ ‘ಇಬ್ಬನಿ ತಬ್ಬಿದ ಇಳೆಯಲಿ’ ಹೆಸರಿನ ಎರಡು ಸಿನಿಮಾ ಅನೌನ್ಸ್ ಮಾಡಿದ್ದಾರೆ ಅವರು. ಗಣೇಶ ಹಬ್ಬದಂದು ಅಭಿಮಾನಿಗಳಿಗೆ ಈ ಸಿಹಿ ಸುದ್ದಿ ಸಿಕ್ಕಿದೆ.
ರಕ್ಷಿತ್ ಹಾಗೂ ರಿಷಬ್ ಮಧ್ಯೆ ಒಳ್ಳೆಯ ಫ್ರೆಂಡ್ಶಿಪ್ ಇದೆ. ಇಬ್ಬರೂ ಒಟ್ಟಾಗಿ ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ‘ಬ್ಯಾಚುಲರ್ ಪಾರ್ಟಿ’ ಸಿನಿಮಾದಲ್ಲಿ ಇವರಿಗೆ ಮತ್ತೆ ಒಟ್ಟಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ರಕ್ಷಿತ್ ಬಂಡವಾಳ ಹೂಡುತ್ತಿರುವ ಈ ಸಿನಿಮಾದಲ್ಲಿ ರಿಷಬ್, ದಿಗಂತ್ ಮಂಚಾಲೆ ಹಾಗೂ ಅಚ್ಯುತ್ ಕುಮಾರ್ ನಟಿಸುತ್ತಿದ್ದಾರೆ. ಇದೊಂದು ಅಡ್ವೆಂಚರ್ ಕಾಮಿಡಿ ಸಿನಿಮಾ ಎಂಬುದನ್ನು ಸಿನಿಮಾ ತಂಡ ಘೋಷಿಸಿದೆ. ರಕ್ಷಿತ್ ಜತೆ ಕೆಲಸ ಮಾಡಿದ್ದ ಅಭಿಜಿತ್ ಮಹೇಶ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನ. ಈ ಚಿತ್ರದ ಬಗ್ಗೆ ಪ್ರೇಕ್ಷಕರಿಗೆ ಸಾಕಷ್ಟು ನಿರೀಕ್ಷೆ ಇದೆ.
ಇದನ್ನೂ ಓದಿ: ಹೊಸ ಸಿನಿಮಾ ನಿರ್ಮಾಣಕ್ಕೆ ಮುಂದಾದ ರಕ್ಷಿತ್ ಶೆಟ್ಟಿ; ‘ಮಿಥ್ಯ’ ಚಿತ್ರಕ್ಕಿದೆ ಭಿನ್ನ ಕಥೆ
‘ಇಬ್ಬನಿ ತಬ್ಬಿದ ಇಳೆಯಲಿ’ ಸಿನಿಮಾ ಕೂಡ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಚಿತ್ರಕ್ಕೆ ಚಂದ್ರಜಿತ್ ಬೆಳ್ಳಿಯಪ್ಪ ಅವರು ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರ ನಿರ್ದೇಶನದ ಮೊದಲ ಸಿನಿಮಾ. ವಿಹಾನ್ ಹಾಗೂ ಅಂಕಿತಾ ಅಮರ್ ಅವರು ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಫಸ್ಟ್ ಪೋಸ್ಟರ್ ಸಾಕಷ್ಟು ಕುತೂಹಲ ಮೂಡಿಸಿದೆ.
ರಕ್ಷಿತ್ ಶೆಟ್ಟಿ ಅವರು ನಟನೆ, ನಿರ್ದೇಶನದಲ್ಲಿ ಭೇಷ್ ಎನಿಸಿಕೊಂಡಿದ್ದಾರೆ. ಇದರ ಜತೆಗೆ ನಿರ್ಮಾಣದಲ್ಲೂ ಸಾಕಷ್ಟು ಯಶಸ್ಸು ಕಂಡಿದ್ದಾರೆ. ಹೊಸ ತಂಡಗಳಿಗೆ ಅವರು ಈ ಮೊದಲಿನಿಂದಲೂ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಈಗ ಅವರು ಮತ್ತೆ ಎರಡು ಹೊಸ ತಂಡಕ್ಕೆ ಬೆಂಬಲ ನೀಡಿದ್ದಾರೆ. ರಕ್ಷಿತ್ಗೆ ಫ್ಯಾನ್ಸ್ ಕಡೆಯಿಂದ ಶುಭಾಶಯ ಬರುತ್ತಿದೆ. ರಕ್ಷಿತ್ ಜತೆಗೆ ಜಿ.ಎಸ್.ಗುಪ್ತಾ ಕೂಡ ಹಣ ಹೂಡುತ್ತಿದ್ದಾರೆ.