ನಟ ರಕ್ಷಿತ್ ಶೆಟ್ಟಿ (Rakshit Shetty) ಅವರು ನಿರ್ದೇಶಕನಾಗಿ ಮಾತ್ರವಲ್ಲದೇ ನಿರ್ಮಾಪಕನಾಗಿಯೂ ಸಕ್ರಿಯರಾಗಿದ್ದಾರೆ. ಚಿತ್ರರಂಗದ ಹಲವು ವಿಭಾಗಗಳಲ್ಲಿ ಅವರು ತೊಡಗಿಕೊಂಡಿದ್ದಾರೆ. ಅವರು ನಿರ್ಮಾಣ ಮಾಡಿರುವ ‘ಸಕುಟುಂಬ ಸಮೇತ’ ಸಿನಿಮಾ ಈಗ ಬಿಡುಗಡೆಗೆ ಸಿದ್ಧವಾಗಿದೆ. ಮೇ 20ರಂದು ಈ ಚಿತ್ರ ರಿಲೀಸ್ ಆಗಲಿದೆ. ‘ಸಕುಟುಂಬ ಸಮೇತ’ ಚಿತ್ರದ ಸುದ್ದಿಗೋಷ್ಠಿ ಇತ್ತೀಚೆಗೆ ನಡೆಯಿತು. ಈ ವೇಳೆ ‘ಟಿವಿ9 ಕನ್ನಡ’ ಜೊತೆ ಮಾತನಾಡಿದ ರಕ್ಷಿತ್ ಶೆಟ್ಟಿ ಅವರು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ವಿಶೇಷ ಎಂದರೆ ಅವರು ನಟಿ ರಮ್ಯಾ (Ramya Divya Spandana) ಕುರಿತಾದ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ರಮ್ಯಾ ಮತ್ತು ರಕ್ಷಿತ್ ಶೆಟ್ಟಿ ಅವರು ಒಟ್ಟಿಗೆ ಸಿನಿಮಾ ಮಾಡಬೇಕು ಎಂಬುದು ಅಭಿಮಾನಿಗಳ ಬಯಕೆ. ಅಷ್ಟೇ ಅಲ್ಲ, ಈ ಜೋಡಿ ಮದುವೆ (Ramya Marriage) ಕೂಡ ಆಗಲಿ ಎಂದು ಕೆಲವರು ಆಸೆ ಪಡುತ್ತಿದ್ದಾರೆ. ಈ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಅನೇಕ ಕಮೆಂಟ್ಗಳು ಕಾಣಿಸಿದ್ದುಂಟು. ಆ ಬಗ್ಗೆ ಈಗ ರಕ್ಷಿತ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.
ರಮ್ಯಾ ಅವರ ಬಗ್ಗೆ ಎಲ್ಲರಂತೆ ರಕ್ಷಿತ್ ಶೆಟ್ಟಿ ಅವರಿಗೂ ಅಭಿಮಾನ ಇದೆ. ‘ನಾನು ರಮ್ಯಾ ಅವರನ್ನು ಎಂದಿಗೂ ಭೇಟಿ ಮಾಡಿಲ್ಲ. ಮದುವೆ, ಲವ್ ಇತ್ಯಾದಿ ಎಲ್ಲ ಬರೀ ಗಾಸಿಪ್. ಚಿತ್ರರಂಗಕ್ಕೆ ಬಂದಾಗಿನಿಂದಲೂ ನಿನ್ನ ಕ್ರಶ್ ಯಾರು ಅಂತ ಕೇಳಿದರೆ ನಾನು ರಮ್ಯಾ ಅಂತಾನೇ ಹೇಳ್ತಾ ಇರೋದು. ಪ್ರತಿ ಬಾರಿ ಅವರು ನನ್ನ ಕೆಲಸವನ್ನು ಪ್ರಶಂಸಿಸುತ್ತಾರೆ. ಅದು ಅವರ ಒಳ್ಳೆಯ ಗುಣ’ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.
ರಕ್ಷಿತ್ ಶೆಟ್ಟಿ ಮತ್ತು ರಮ್ಯಾ ಅವರು ಜೊತೆಯಾಗಿ ಸಿನಿಮಾ ಮಾಡಲಿ ಎಂಬ ಫ್ಯಾನ್ಸ್ ಬಯಕೆಗೆ ರಕ್ಷಿತ್ ಈಗ ಪ್ರತಿಕ್ರಿಯೆ ನೀಡಿದ್ದಾರೆ. ‘ನಾನು ‘ಉಳಿದವರು ಕಂಡಂತೆ’ ಸಿನಿಮಾಗೆ ರಮ್ಯಾ ಅವರನ್ನು ಅಪ್ರೋಚ್ ಮಾಡಿದ್ದೆ. ಕಥೆ ಕೇಳಿದ ಬಳಿಕ ಅರ್ಥ ಆಗಿಲ್ಲ ಅಂತ ಅವರು ಹೇಳಿದ್ದರು. ಅದು ಬಿಡಿ, ಸಿನಿಮಾ ರಿಲೀಸ್ ಆದಮೇಲೆ ಸುಮಾರು ಜನರಿಗೆ ಅರ್ಥ ಆಗಲಿಲ್ಲ. ಸದ್ಯಕ್ಕೆ ರಮ್ಯಾ ಜೊತೆ ಕೆಲಸ ಮಾಡುವ ಸಾಧ್ಯತೆ ಕಡಿಮೆ. ನಾನು ಬರೆಯುತ್ತಿರುವ ಸ್ಕ್ರಿಪ್ಟ್ನಲ್ಲಿ ಆ ಥರ ಇಲ್ಲ. ಆದರೆ ಖಂಡಿತವಾಗಿ ಅವರ ಜೊತೆ ಕೆಲಸ ಮಾಡಲು ನಾನು ಇಷ್ಟಪಡುತ್ತೇನೆ’ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.
ಚಿತ್ರರಂಗದಲ್ಲಿ ಸಖತ್ ಬೇಡಿಕೆ ಇರುವಾಗಲೇ ರಮ್ಯಾ ಅವರು ರಾಜಕೀಯದ ಕಡೆಗೆ ಕಾಲಿಟ್ಟರು. ಸಂಸದೆ ಆಗಿಯೂ ಕೆಲಸ ಮಾಡಿದರು. ನಂತರ ಅವರು ರಾಜಕೀಯಕ್ಕೆ ಗುಡ್ ಬೈ ಹೇಳಿದರು. ಇಷ್ಟೆಲ್ಲ ಆದರೂ ಅವರು ಚಿತ್ರರಂಗದ ನಂಟು ಕಡಿದುಕೊಂಡಿಲ್ಲ. ನಟನೆಯಿಂದ ದೂರ ಉಳಿದಿದ್ದರೂ ಕೂಡ ಅನೇಕ ಸಿನಿಮಾಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಾ ಅವರು ಗಮನ ಸೆಳೆಯುತ್ತಿದ್ದಾರೆ.
ರಮ್ಯಾ ಅವರು ಆದಷ್ಟು ಬೇಗ ನಟನೆಗೆ ಮರಳಬೇಕು ಎಂದು ಫ್ಯಾನ್ಸ್ ಆಸೆ ಪಡುತ್ತಿದ್ದಾರೆ. ಶೀಘ್ರದಲ್ಲೇ ರಮ್ಯಾ ಈ ಬಗ್ಗೆ ಒಂದು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ನಿರೀಕ್ಷೆ ಇದೆ. ಅವರು ಕಮ್ಬ್ಯಾಕ್ ಮಾಡಲಿರುವ ಪ್ರಾಜೆಕ್ಟ್ ಯಾವ ರೀತಿ ಇರಲಿದೆ ಎಂದು ತಿಳಿದುಕೊಳ್ಳಲು ಅವರ ಅಭಿಮಾನಿ ಬಳಗ ತುದಿಗಾಲಿನಲ್ಲಿ ನಿಂತು ಕಾಯುತ್ತಿದೆ. ಖಾಸಗಿ ಮಾಧ್ಯಮವೊಂದು ರಕ್ಷಿತ್ ಶೆಟ್ಟಿ ಜೊತೆ ನಡೆಸಿದ ಸಂದರ್ಶನದ ತುಣುಕನ್ನು ರಮ್ಯಾ ಅವರು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು. ರಕ್ಷಿತ್ ಶೆಟ್ಟಿ ಜೊತೆ ಸಿನಿಮಾ ಮಾಡಲು ತಮಗೂ ಆಸಕ್ತಿ ಇದೆ ಎಂಬುದನ್ನು ಅವರು ಈ ಮೂಲಕ ಸೂಚಿಸಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.