‘ಕೆಜಿಎಫ್ 2‘ (KGF 2) ಸಿನಿಮಾ ಬಳಿಕ ಪ್ಯಾನ್ ಇಂಡಿಯಾ (Pan India) ಲೆವೆಲ್ನಲ್ಲಿ ಬಿಡುಗಡೆ ಆಗಿ, ‘ಕೆಜಿಎಫ್’ಗೆ ಮಾತ್ರವಲ್ಲ ಶ್ರಮವಹಿಸಿ ಕೆಲಸ ಮಾಡಿದರೆ, ಕತೆಯಲ್ಲಿ ಗುಣಮಟ್ಟ ಇದ್ದರೆ ಎಲ್ಲ ಸಿನಿಮಾಗಳನ್ನು ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಗೆಲ್ಲುವಂತೆ ಮಾಡಬಹುದು ಎಂದು ತೋರಿಸಿಕೊಟ್ಟ ಸಿನಿಮಾ ರಕ್ಷಿತ್ ಶೆಟ್ಟಿ ನಟನೆಯ ‘777 ಚಾರ್ಲಿ’. ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಿದ ಜೊತೆಗೆ ರಾಷ್ಟ್ರಪ್ರಶಸ್ತಿಯನ್ನು ಸಹ ಪಡೆದುಕೊಂಡಿತು ಈ ಸಿನಿಮಾ. ಇದೀಗ ಇನ್ನೋವೇಟಿವ್ ಇಂಟರ್ನ್ಯಾಷನಲ್ ಫಿಲಂ ಫೆಸ್ಟ್ನಲ್ಲಿಯೂ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಆದರೆ ರಕ್ಷಿತ್ ಶೆಟ್ಟಿ ಮಾತ್ರ ‘777 ಚಾರ್ಲಿ 2’ ಸಿನಿಮಾದಲ್ಲಿ ತಾವು ನಟಿಸುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.
ಇನ್ನೋವೇಟಿವ್ ಇಂಟರ್ನ್ಯಾಷನಲ್ ಫಿಲಂ ಫೆಸ್ಟ್ನಲ್ಲಿ ಭಾಗವಹಿಸಿ ‘777 ಚಾರ್ಲಿ’ ಸಿನಿಮಾದ ನಟನೆಗೆ ಪ್ರಶಸ್ತಿ ಪಡೆದು ಮಾತನಾಡಿದ ರಕ್ಷಿತ್ ಶೆಟ್ಟಿ, ”777 ಚಾರ್ಲಿ’ ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯಗಳ ಚಿತ್ರೀಕರಣದ ಸಮಯದಲ್ಲಿ ನಿರ್ದೇಶಕ ಕಿರಣ್ ರಾಜ್ ಬಂದು, ‘777 ಚಾರ್ಲಿ 2′ ಸಿನಿಮಾಕ್ಕೆ ನನಗೆ ಒಳ್ಳೆ ಐಡಿಯಾ ಬಂದಿದೆ ಮಾಡೋಣ’ ಎಂದರು. ನಾನು ಕೈ ಮುಗಿದು ದಯವಿಟ್ಟು ಬೇಡಪ್ಪ, ಚಾರ್ಲಿ ಒಬ್ಬಳನ್ನೇ ಇಟ್ಟುಕೊಂಡು ಸಿನಿಮಾ ಮಾಡು ಆದರೆ ನಾನು ಮಾತ್ರ ನಟಿಸಲ್ಲ ಅಂದುಬಿಟ್ಟೆ” ಎಂದು ನೆನಪು ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಜೊತೆ ಸಂಪರ್ಕದಲ್ಲಿದ್ದೇನೆ, ಆಕೆ ಬಗ್ಗೆ ಹೆಮ್ಮೆ ಇದೆ: ರಕ್ಷಿತ್ ಶೆಟ್ಟಿ
”ನಾಯಿ ಚಾರ್ಲಿ ಜೊತೆ ನಟಿಸುವುದು ಬಹಳ ಕಷ್ಟವಾದ ಕೆಲಸ. ಪ್ರತಿ ಸೀನ್ಗೂ 30-40 ಟೇಕ್ಗಳನ್ನು ಕೊಡಬೇಕಿತ್ತು. ಅಲ್ಲದೆ ನಾನು ಪ್ರತಿ ಟೇಕ್ನಲ್ಲಿಯೂ ನನ್ನ ಬೆಸ್ಟ್ ಫರ್ಪಾಮೆನ್ಸ್ ಅನ್ನೇ ನೀಡಬೇಕಿತ್ತು, ಏಕೆಂದರೆ ಚಾರ್ಲಿ ಯಾವ ಟೇಕ್ನಲ್ಲಿ ಸರಿಯಾಗಿ ನಟಿಸುತ್ತಿದ್ದಳು ಗೊತ್ತಾಗುತ್ತಿರಲಿಲ್ಲ. ಸುಮಾರು 150 ದಿನಗಳ ಕಾಲ ಚಿತ್ರೀಕರಣ ಮಾಡಿದೆವು. ನನಗೆ ಬಹಳ ಕಷ್ಟ ಎನಿಸಿತ್ತು. ಹಾಗಾಗಿ ಮತ್ತೊಮ್ಮೆ ಆ ಸಾಹಸ ಮಾಡುವುದು ಬೇಡ ಎಂದು ನಿರ್ಧಾರ ಮಾಡಿದೆ” ಎಂದು ನಗುತ್ತಲೇ ಹೇಳಿದರು ರಕ್ಷಿತ್ ಶೆಟ್ಟಿ.
”ಸಿನಿಮಾದ ಚಿತ್ರೀಕರಣ ಸಮಯದಲ್ಲಿ ಬಹಳ ಕಷ್ಟಪಟ್ಟೆವು, ಆದರೆ ಆ ಸಿನಿಮಾಕ್ಕೆ ಸಿಕ್ಕ ಪ್ರತಿಕ್ರಿಯೆ, ಸಿಗುತ್ತಿರುವ ಪ್ರಶಸ್ತಿಗಳು ನಮ್ಮ ಶ್ರಮವನ್ನೆಲ್ಲ ಮರೆಸಿವೆ. ನನ್ನ ಪಾಲಿಗೆ, ನಮ್ಮ ಪರಂವಃ ಸ್ಟುಡಿಯೋ ಪಾಲಿಗೆ ‘777 ಚಾರ್ಲಿ’ ಬಹಳ ಪ್ರಮುಖವಾದ ಸಿನಿಮಾ. ನಮ್ಮ ಸ್ಟುಡಿಯೋದ ಮೊದಲ ಪ್ಯಾನ್ ಇಂಡಿಯಾ ಹಾಗೂ ಅದ್ಧೂರಿ ಯಶಸ್ಸು ಗಳಿಸಿದ ಸಿನಿಮಾ. ‘777 ಚಾರ್ಲಿ’ ನನ್ನ ಪಾಲಿಗೆ ಯಾವಾಗಲೂ ವಿಶೇಷವಾದ ಸಿನಿಮಾ ಆಗಿರುತ್ತದೆ” ಎಂದಿದ್ದಾರೆ ರಕ್ಷಿತ್ ಶೆಟ್ಟಿ.
ಇದನ್ನೂ ಓದಿ:ಯಶ್ ಬಗ್ಗೆ ರಕ್ಷಿತ್ ಶೆಟ್ಟಿಗೆ ಯಾವ ರೀತಿಯ ಅಭಿಪ್ರಾಯ ಇದೆ? ‘SSE’ ಸ್ಟಾರ್ ವಿವರಿಸಿದ್ದು ಹೀಗೆ
ರಕ್ಷಿತ್ ಶೆಟ್ಟಿ ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿ ಹಿಟ್ ಎನಿಸಿಕೊಂಡಿದೆ. ಸಿನಿಮಾದ ಎರಡನೇ ಭಾಗ ಶೀಘ್ರದಲ್ಲಿಯೇ ಬಿಡುಗಡೆ ಆಗಲಿದೆ. ಇದರ ನಡುವೆ ‘ರಿಚರ್ಡ್ ಆಂಟೊನಿ’ ಸಿನಿಮಾ ನಿರ್ದೇಶಿಸಲು ರಕ್ಷಿತ್ ಶೆಟ್ಟಿ ತಯಾರಾಗುತ್ತಿದ್ದಾರೆ. ಈ ಸಿನಿಮಾವನ್ನು ರಕ್ಷಿತ್ ಅವರೇ ನಿರ್ದೇಶಿಸುತ್ತಿದ್ದು, ಹೊಂಬಾಳೆ ಫಿಲಮ್ಸ್ ಬಂಡವಾಳ ಹೂಡುತ್ತಿದೆ. ಅದರ ಬಳಿಕ ‘ಪುಣ್ಯಕೋಟಿ’ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಇನ್ನು ಮುಂದೆ ಬೇರೆಯವರ ಸಿನಿಮಾದಲ್ಲಿ ಕಡಿಮೆ ನಟಿಸಿ, ನನ್ನ ಕತೆಗಳನ್ನು ಸಿನಿಮಾ ಮಾಡುವ ಬಗ್ಗೆ ಗಮನ ಹರಿಸಲಿದ್ದೇನೆ ಎಂದು ಈ ಹಿಂದೆ ರಕ್ಷಿತ್ ಹೇಳಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ