ತೆಲುಗಿಗೆ ‘ಸಪ್ತ ಸಾಗರದಾಚೆ ಎಲ್ಲೋ’: ಬಿಡುಗಡೆ ಯಾವಾಗ? ತೆಲುಗಿನಲ್ಲಿ ಹೆಸರೇನು?

|

Updated on: Sep 15, 2023 | 5:31 PM

Rakshit Shetty: ರಕ್ಷಿತ್ ಶೆಟ್ಟಿ-ರುಕ್ಮಿಣಿ ವಸಂತ್ ನಟನೆಯ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಸೆಪ್ಟೆಂಬರ್ 1ರಂದು ಬಿಡುಗಡೆ ಆಗಿ ಹಿಟ್ ಎನಿಸಿಕೊಂಡಿದೆ. ಇದೀಗ ಈ ಸಿನಿಮಾ ತೆಲುಗಿಗೆ ಕಾಲಿಟ್ಟಿದೆ. ತೆಲುಗಿನಲ್ಲಿ ಸಿನಿಮಾದ ಹೆಸರೇನು?

ತೆಲುಗಿಗೆ ಸಪ್ತ ಸಾಗರದಾಚೆ ಎಲ್ಲೋ: ಬಿಡುಗಡೆ ಯಾವಾಗ? ತೆಲುಗಿನಲ್ಲಿ ಹೆಸರೇನು?
ಸಪ್ತ ಸಾಗರದಾಚೆ ಎಲ್ಲೋ
Follow us on

ರಕ್ಷಿತ್ ಶೆಟ್ಟಿ (Rakshit Shetty), ರುಕ್ಮಿಣಿ ವಸಂತ್ (Rukmini Vasanth) ನಟಿಸಿರುವ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಸೆಪ್ಟೆಂಬರ್ 1 ರಂದು ರಾಜ್ಯದಾದ್ಯಂತ ಬಿಡುಗಡೆ ಆಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಸಿನಿಮಾ ನೋಡಿದ ಹಲವರು ನವಿರು ಪ್ರೇಮಕತೆಗೆ ಮನಸೋತಿದ್ದಾರೆ. ಸಿನಿಮಾದ ಹಾಡುಗಳು, ರಕ್ಷಿತ್-ರುಕ್ಮಿಣಿಯ ನಟನೆಯನ್ನು ಮೆಚ್ಚಿ ಕೊಂಡಾಡಿದ್ದಾರೆ. ಬಹಳ ದಿನಗಳ ಬಳಿಕ ಒಂದೊಳ್ಳೆ ಪ್ರೇಮಕತೆ ಕನ್ನಡದಲ್ಲಿ ಬಂದಿದೆ ಎಂಬ ಮಾತುಗಳು ಪ್ರೇಕ್ಷಕರಿಂದ ಕೇಳಿ ಬರುತ್ತಿವೆ. ಕರ್ನಾಟಕದ ಹಲವು ನಗರಗಳಲ್ಲಿ ಇನ್ನೂ ಉತ್ತಮ ಪ್ರದರ್ಶನವನ್ನು ‘ಸಪ್ತ ಸಾಗರದಾಚೆ ಎಲ್ಲೋ’ ಕಾಣುತ್ತಿರುವಾಗಲೇ ಸಿನಿಮಾ ಈಗ ತೆಲುಗಿಗೆ ಹೋಗುತ್ತಿದೆ.

‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ತೆಲುಗಿಗೆ ಡಬ್ ಆಗಿದ್ದು ಸೆಪ್ಟೆಂಬರ್ 22ರಂದು ಆಂಧ್ರ ಮತ್ತು ತೆಲಂಗಾಣದ ಕೆಲವು ಚಿತ್ರಮಂದಿರಗಳಲ್ಲಿ ಬಿಡಗುಡೆ ಆಗಲಿದೆ. ತೆಲುಗು ಸಿನಿಮಾಕ್ಕೆ ‘ಸಪ್ತ ಸಾಗರಾಲು ದಾಟಿ’ ಎಂದು ಹೆಸರಿಡಲಾಗಿದೆ. ತೆಲುಗು ಸಿನಿಮಾದ ಪೋಸ್ಟರ್ ಅನ್ನು ಹಂಚಿಕೊಂಡಿರುವ ರಕ್ಷಿತ್ ಶೆಟ್ಟಿ, ”ಸಪ್ತ ಸಾಗರದಾಚೆ ಎಲ್ಲೋ’ ಪ್ರೇಮ ಕರ್ನಾಟಕದಾದ್ಯಂತ ಪ್ರತಿಧ್ವನಿಸುತ್ತಿದೆ, ನಮ್ಮ ಸಿನಿಮಾ ಈಗ ಸಂಪೂರ್ಣ ಹೊಸ ರಂಗದಲ್ಲಿ ಹೃದಯಗಳನ್ನು ಸೆಳೆಯಲು ಸಜ್ಜಾಗಿದೆ. ಸೆಪ್ಟೆಂಬರ್ 22 ರಂದು ತೆಲುಗಿನಲ್ಲಿ ‘ಸಪ್ತ ಸಾಗರಾಲು ದಾಟಿ’ ಬಿಡುಗಡೆಯಾಗುತ್ತಿದೆ ಎಂದಿದ್ದಾರೆ.

ರಕ್ಷಿತ್ ಶೆಟ್ಟಿ ನಟನೆಯ ‘777 ಚಾರ್ಲಿ’ ಸಿನಿಮಾ ಸಹ ತೆಲುಗಿನಲ್ಲಿ ಬಿಡುಗಡೆ ಆಗಿ ಉತ್ತಮ ಪ್ರತಿಕ್ರಿಯೆ ಗಳಿಸಿಕೊಂಡಿತ್ತು. ರಕ್ಷಿತ್ ಶೆಟ್ಟಿಯ ಸಿನಿಮಾಗಳಿಗೆ ತೆಲುಗಿನಲ್ಲಿ ಉತ್ತಮ ಬೇಡಿಕೆಯೇ ಇದೆ. ಹಾಗಾಗಿ ಅಲ್ಲಿ ‘ಸಪ್ತ ಸಾಗರಾಲು ದಾಟಿ’ ಸಿನಿಮಾ ಉತ್ತಮ ಪ್ರದರ್ಶನ ಕಾಣಬಹುದೆಂಬ ನಿರೀಕ್ಷೆ ರಕ್ಷಿತ್ ಶೆಟ್ಟಿ ಹಾಗೂ ತಂಡದ್ದು. ರಕ್ಷಿತ್ ಶೆಟ್ಟಿ ಪ್ರೆಸೆಂಟ್ ಮಾಡಿರುವ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಸಹ ಇತ್ತೀಚೆಗೆ ತೆಲುಗಿನಲ್ಲಿ ಬಿಡುಗಡೆ ಆಗಿ ಗಮನ ಸೆಳೆದಿತ್ತು.

ಇದನ್ನೂ ಓದಿ:ಸಿಂಪಲ್ ಸ್ಟಾರ್ ಆಗುವ ಮುನ್ನ ಯಾವ ಸ್ಟಾರ್ ಆಗಿದ್ದರು ರಕ್ಷಿತ್ ಶೆಟ್ಟಿ: ಓದಿ ನಗಬೇಡಿ

‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಮೊದಲ ಭಾಗವಷ್ಟೆ ಇದೀಗ ಬಿಡುಗಡೆ ಆಗಿದೆ. ಈ ಸಿನಿಮಾ ಕೆಲವೇ ದಿನಗಳಲ್ಲಿ ಒಟಿಟಿಗೆ ಬರಲಿದೆ ಎಂಬ ಸುದ್ದಿಯೂ ಇದೆ. ಹೀಗಿರುವಾಗ ತೆಲುಗಿನಲ್ಲಿ ಬಿಡುಗಡೆ ಮಾಡಿರುವುದು ಲಾಭದಾಯಕ ಆಗಬಹುದೆ ಎಂಬ ಸಣ್ಣ ಗುಮಾನಿಯೂ ಇಲ್ಲದಿಲ್ಲ. ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಎರಡನೇ ಭಾಗ ಅಥವಾ ಸೈಡ್-ಬಿ ಅಕ್ಟೋಬರ್ 20ಕ್ಕೆ ತೆರೆಗೆ ಬರಲಿದೆ. ಈಗ ತೆಲುಗಿನಲ್ಲಿ ಬಿಡುಗಡೆ ಆಗಿರುವ ‘ಸಪ್ತ ಸಾಗರಾಲು ದಾಟಿ’ ಸಿನಿಮಾ ಹಿಟ್ ಆದರೆ ಎರಡನೇ ಭಾಗವೂ ಬಿಡುಗಡೆ ಆಗಲಿದೆ.

‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾವನ್ನು ಹೇಮಂತ್ ರಾವ್ ನಿರ್ದೇಶನ ಮಾಡಿದ್ದು, ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿದ್ದಾರೆ. ಸಿನಿಮಾದಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ. ಎರಡನೇ ಭಾಗದಲ್ಲಿ ಚೈತ್ರಾ ಆಚಾರ್ ನಾಯಕಿಯಾಗಿರಲಿದ್ದಾರೆ. ಸಿನಿಮಾಕ್ಕೆ ಚರಣ್ ರಾಜ್ ಸಂಗೀತ ನೀಡಿದ್ದು ಹಾಡುಗಳು ಹಿಟ್ ಆಗಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ