‘ರವಿಕೆ ಪ್ರಸಂಗ’ ಚಿತ್ರದ ಹಾಡು ಕೇಳಿದ್ರಾ? ಹೆಣ್ಮಕ್ಕಳಿಗೆ ಇಷ್ಟ ಆಗಲಿದೆ ಈ ಸಿನಿಮಾ
ಕೃಷ್ಣೇಗೌಡ ಅವರು ‘ರವಿಕೆ ಪ್ರಸಂಗ’ ಸಿನಿಮಾದ ಶೀರ್ಷಿಕೆ ಗೀತೆಯನ್ನು ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಗೀತಾ ಭಾರತಿ ಭಟ್, ಸಂಪತ್ ಮೈತ್ರೇಯ ಮುಂತಾದವರು ನಟಿಸಿರುವ ಈ ಚಿತ್ರವನ್ನು ಆದಷ್ಟು ಬೇಗ ತೆರೆಗೆ ತರುವ ಗುರಿಯಿಟ್ಟುಕೊಂಡು ನಿರ್ದೇಶಕ-ನಿರ್ಮಾಪಕ ಸಂತೋಷ್ ಕೊಡೆಂಕೆರಿ ಕಾರ್ಯ ನಿರತರಾಗಿದ್ದಾರೆ.
ಹೊಸ ಬಗೆಯ ಕಥೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡಿದರೆ ಖಂಡಿತವಾಗಿಯೂ ಪ್ರೇಕ್ಷಕರ ಗಮನ ಸೆಳೆಯಬಹುದು. ಸವಕಲು ವಿಷಯಗಳನ್ನು ಬಿಟ್ಟು, ಬೇರೆ ಕಥೆ ಹೇಳಿದರೆ ಆ ಚಿತ್ರದ ಮೇಲೆ ಜನರಿಗೆ ಕುತೂಹಲ ಮೂಡುತ್ತದೆ. ಅದಕ್ಕೆ ಉತ್ತಮ ಉದಾಹರಣೆ ಎಂದರೆ ‘ರವಿಕೆ ಪ್ರಸಂಗ’ (Ravike Prasanga) ಸಿನಿಮಾ. ಈ ಚಿತ್ರದ ಕಥೆ ಡಿಫರೆಂಟ್ ಆಗಿದೆ. ಹೆಣ್ಮಕ್ಕಳ ರವಿಕೆ ಕುರಿತು ಈ ಸಿನಿಮಾ ತಯಾರಾಗಿದೆ ಎಂಬುದು ವಿಶೇಷ. ಇತ್ತೀಚೆಗೆ ಈ ಚಿತ್ರದ ಟೈಟಲ್ ಸಾಂಗ್ ಬಿಡುಗಡೆ ಮಾಡಲಾಗಿದೆ. ಈ ವೇಳೆ ಚಿತ್ರತಂಡದವರು ಅನೇಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ‘ರವಿಕೆ ಪ್ರಸಂಗ’ ಸಿನಿಮಾದಲ್ಲಿ ‘ಬ್ರಹ್ಮ ಗಂಟು’ ಸೀರಿಯಲ್ ಖ್ಯಾತಿಯ ನಟಿ ಗೀತಾ ಭಾರತಿ ಭಟ್ (Geetha Bharathi Bhat), ಪ್ರತಿಭಾವಂತ ಕಲಾವಿದ ಸಂಪತ್ ಮೈತ್ರೇಯ ಮುಂತಾದವರು ನಟಿಸಿದ್ದಾರೆ.
ಮಹಿಳೆಯರ ಬಗ್ಗೆ ಈಗಾಗಲೇ ಅನೇಕ ಹಾಡುಗಳನ್ನು ಬರೆಯಲಾಗಿದೆ. ಆದರೆ ರವಿಕೆಯ ಕುರಿತು ಹಾಡು ಬಂದಿದ್ದು ವಿರಳ. ‘ರವಿಕೆ ಪ್ರಸಂಗ’ ಸಿನಿಮಾದ ಈ ಹೊಸ ಹಾಡು ಸಂಪೂರ್ಣವಾಗಿ ರವಿಕೆಯ ಕುರಿತಾಗಿ ಇದೆ. ಈ ಗೀತೆಗೆ ಕಿರಣ್ ಕಾವೇರಪ್ಪ ಸಾಹಿತ್ಯ ಬರೆದಿದ್ದಾರೆ. ‘ರವಿ ರವಿ ರವಿಕೆ ಪ್ರಸಂಗ..’ ಎಂದು ಶುರುವಾಗುವ ಈ ಶೀರ್ಷಿಕೆ ಗೀತೆಯು ಜಂಕಾರ್ ಮ್ಯೂಸಿಕ್ ಮೂಲಕ ರಿಲೀಸ್ ಆಗಿದೆ. ವಿನಯ್ ಶರ್ಮ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಚೈತ್ರಾ ಮತ್ತು ಚೇತನ್ ನಾಯಕ್ ಅವರು ಈ ಹಾಡಿಗೆ ಧ್ವನಿ ನೀಡಿದ್ದಾರೆ. ರಾಕೇಶ್ ಮಯ್ಯ, ಪದ್ಮಜಾ ರಾವ್, ಸುಮನ್ ರಂಗನಾಥ್, ರಘು ಪಾಂಡೇಶ್ವರ್, ಪ್ರವೀಣ್ ಅಥರ್ವ, ಕೃಷ್ಣಮೂರ್ತಿ ಕವತ್ತಾರ್, ಮೀನಾ ಸೇರಿದಂತೆ ಹಲವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
‘ರವಿಕೆ ಪ್ರಸಂಗ’ ಸಿನಿಮಾದ ಶೀರ್ಷಿಕೆ ಗೀತೆ:
ಕೃಷ್ಣೇಗೌಡ ಅವರು ‘ರವಿಕೆ ಪ್ರಸಂಗ’ ಸಿನಿಮಾದ ಶೀರ್ಷಿಕೆ ಗೀತೆಯನ್ನು ಬಿಡುಗಡೆ ಮಾಡಿದ್ದಾರೆ. ಬಳಿಕ ಅವರು ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ‘ದೃಷ್ಟಿ ಮೀಡಿಯಾ ಆ್ಯಂಡ್ ಪ್ರೊಡಕ್ಷನ್’ ಬ್ಯಾನರ್ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. ಈ ಸಿನಿಮಾ ಟೈಟಲ್ ಸಾಂಗ್ ಬಿಡುಗಡೆ ಮಾಡುವ ಮೂಲಕ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸುವ ಕೆಲಸ ಆಗಿದೆ. ಆದಷ್ಟು ಬೇಗ ‘ರವಿಕೆ ಪ್ರಸಂಗ’ ಚಿತ್ರವನ್ನು ತೆರೆಗೆ ತರುವ ಗುರಿಯಿಟ್ಟುಕೊಂಡು ನಿರ್ದೇಶಕ-ನಿರ್ಮಾಪಕ ಸಂತೋಷ್ ಕೊಡೆಂಕೆರಿ ಕಾರ್ಯ ನಿರತರಾಗಿದ್ದಾರೆ. ನಿರ್ಮಾಣದಲ್ಲಿ ಶಾಂತನು ಮಹರ್ಷಿ, ಗಿರೀಶ್ ಗೌಡ, ನಿರಂಜನ್ ಗೌಡ, ಶಿವರುದ್ರಯ್ಯ ಅವರು ಸಾಥ್ ನೀಡಿದ್ದಾರೆ. ಮುರಳಿಧರ್ ಎನ್. ಅವರ ಛಾಯಾಗ್ರಹಣ, ರಘು ಶಿವರಾಮ್ ಅವರ ಸಂಕಲನ ಈ ಸಿನಿಮಾಗಿದೆ.
ಇದನ್ನೂ ಓದಿ: Tatsama Tadbhava Review: ಕೊಲೆ ಕೌತುಕದ ಕಥೆಯೊಂದಿಗೆ ನೋಡುಗರ ತಲೆಗೆ ಹುಳ ಬಿಡುವ ‘ತತ್ಸಮ ತದ್ಭವ’
ಪಾವನ ಸಂತೋಷ್ ಅವರು ಈ ಸಿನಿಮಾಗೆ ಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ‘ಮಹಿಳೆಯರಿಗೆ ಸೀರೆಗಿಂತಲೂ ರವಿಕೆ ಮೇಲೆ ಹೆಚ್ಚು ಪ್ರೀತಿ ಇರುತ್ತದೆ. ಆ ರವಿಕೆ ಬಗ್ಗೆ ನಾನು ಕಥೆ ಬರೆದಿದ್ದೇನೆ. ನನಗೆ ಸಹಕಾರ ನೀಡಿದ ಪತಿ ಸಂತೋಷ್ ಅವರಿಗೆ ಮತ್ತು ಇಡೀ ಚಿತ್ರತಂಡಕ್ಕೆ ಧನ್ಯವಾಗಳು’ ಎಂದು ಅವರು ಹೇಳಿದ್ದಾರೆ. ಹಿರಿಯ ನಟಿ ಪದ್ಮಜಾ ರಾವ್ ಮಾತನಾಡಿ, ‘ಈ ಸಿನಿಮಾ ತಂಡದಲ್ಲಿ ಕೆಲಸ ಮಾಡಿದ್ದು ನನಗೆ ಖುಷಿ ನೀಡಿದೆ. ರವಿಕೆ ಬಗ್ಗೆ ಮೂಡಿಬರುತ್ತಿರುವ ಈ ಸಿನಿಮಾ ಎಲ್ಲ ಹೆಣ್ಮಕ್ಕಳ ಮನಸ್ಸಿಗೆ ಹತ್ತಿರ ಆಗಲಿದೆ’ ಎಂದಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.