ಸಿಂಪಲ್ ಸ್ಟಾರ್ ಆಗುವ ಮುನ್ನ ಯಾವ ಸ್ಟಾರ್ ಆಗಿದ್ದರು ರಕ್ಷಿತ್ ಶೆಟ್ಟಿ: ಓದಿ ನಗಬೇಡಿ

Rakshit Shetty: ರಕ್ಷಿತ್ ಶೆಟ್ಟಿಯನ್ನು ಅಭಿಮಾನಿಗಳು ಸಿಂಪಲ್ ಸ್ಟಾರ್ ಎಂದು ಕರೆಯುತ್ತಾರೆ. ಆದರೆ ರಕ್ಷಿತ್​ಗೆ ಈ ಉಪನಾಮೆ ಬರುವ ಮುಂಚೆ ಮತ್ತೊಂದು ಹೆಸರಿನಿಂದ ಅಭಿಮಾನಿಗಳು ಕರೆಯುತ್ತಿದ್ದರು. ಓದಿ ನಗಬೇಡಿ ಮತ್ತೆ..

ಸಿಂಪಲ್ ಸ್ಟಾರ್ ಆಗುವ ಮುನ್ನ ಯಾವ ಸ್ಟಾರ್ ಆಗಿದ್ದರು ರಕ್ಷಿತ್ ಶೆಟ್ಟಿ: ಓದಿ ನಗಬೇಡಿ
ರಕ್ಷಿತ್ ಶೆಟ್ಟಿ
Follow us
ಮಂಜುನಾಥ ಸಿ.
|

Updated on: Sep 06, 2023 | 9:39 PM

ಸಿನಿಮಾ ನಟರಿಗೆ ಅಭಿಮಾನಿಗಳು ಪ್ರೀತಿಯಿಂದ ಹೆಸರಿಡುವುದು ಮೊದಲಿನಿಂದಲೂ ನಡೆದು ಬಂದ ಪದ್ಧತಿ. ಸೂಪರ್ ಸ್ಟಾರ್, ಪವರ್ ಸ್ಟಾರ್, ಹ್ಯಾಟ್ರಿಕ್ ಹೀರೋ, ಆಕ್ಷನ್ ಸ್ಟಾರ್, ರಿಷಬ್ ಶೆಟ್ಟಿಗೆ ಡಿವೈನ್ ಸ್ಟಾರ್ ಹಾಗೆಯೇ ರಕ್ಷಿತ್ ಶೆಟ್ಟಿಗೆ (Rakshit Shetty) ಸಿಂಪಲ್ ಸ್ಟಾರ್ ಎಂದು ಅಭಿಮಾನಿಗಳು ಪ್ರೀತಿಯಿಂದ ಕರೆಯುತ್ತಾರೆ. ಅಸಲಿಗೆ ರಕ್ಷಿತ್​ಗೆ ಇವೆಲ್ಲ ಇಷ್ಟವಿಲ್ಲ, ತಮ್ಮ ಸಿನಿಮಾಗಳಲ್ಲಿ, ಹೆಸರಿನ ಮುಂದೆ ಯಾವುದೇ ಸ್ಟಾರ್ ಅನ್ನು ರಕ್ಷಿತ್ ಸೇರಿಸಿಕೊಳ್ಳುವುದಿಲ್ಲ. ಆದರೆ ಆಸಕ್ತಿಕರ ವಿಷಯ ಬೇರೆಯೇ ಇದೆ.

ರಕ್ಷಿತ್ ಶೆಟ್ಟಿ ನಟನೆಯ ‘ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ’ ಸಿನಿಮಾ ಸೂಪರ್ ಹಿಟ್ ಆದ ಬಳಿಕ ರಕ್ಷಿತ್ ಶೆಟ್ಟಿಗೆ ‘ಸಿಂಪಲ್ ಸ್ಟಾರ್’ ಎಂಬ ಉಪನಾಮೆಯನ್ನು ಅಭಿಮಾನಿಗಳು ಕೊಟ್ಟರು. ಆದರೆ ಅದಕ್ಕೂ ಮುನ್ನ ರಕ್ಷಿತ್ ಶೆಟ್ಟಿಗೆ ಒಂದು ಸ್ಟಾರ್​ಗಿರಿ ಇತ್ತು. ಆದರೆ ರಕ್ಷಿತ್​ಗೆ ಆ ಉಪನಾಮೆ ತುಸುವೂ ಇಷ್ಟವಿರಲಿಲ್ಲ.

‘ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ’ ಸಿನಿಮಾಕ್ಕೂ ಮುನ್ನ ‘ತುಘ್​ಲಕ್’ ಹೆಸರಿನ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ನಾಯಕರಾಗಿ ನಟಿಸಿದ್ದರು. ಆ ಸಿನಿಮಾವನ್ನು ಉಡುಪಿ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಚಿತ್ರೀಕರಿಸಲಾಗಿತ್ತು. ಆಗ ರಕ್ಷಿತ್​ ಊರಿನವರು, ಅವರ ಹಿತೈಷಿಗಳು, ಗೆಳೆಯರೆಲ್ಲ ಸೇರಿ, ನಮ್ಮ ಹುಡುಗ ಸಿನಿಮಾ ನಾಯಕ ಆಗಿದ್ದಾನೆ ಎಂದು ಕೆಲವು ಪೋಸ್ಟರ್​ಗಳನ್ನೆಲ್ಲ ಹಾಕಿದ್ದರಂತೆ. ಆ ಪೋಸ್ಟರ್​ಗಳಲ್ಲಿ ‘ಟ್ವಿಂಕಲ್ ಸ್ಟಾರ್’ ರಕ್ಷಿತ್ ಶೆಟ್ಟಿ ಎಂದು ಬರೆದಿದ್ದರಂತೆ.

ಇದನ್ನೂ ಓದಿ:ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ನನ್ನ ಸ್ನೇಹಿತರಲ್ಲ: ಹಿಂಗ್ಯಾಕಂದ್ರು ರಾಜ್ ಬಿ ಶೆಟ್ಟಿ?

ಟ್ವಿಂಕಲ್ ಸ್ಟಾರ್ ಎಂಬುದು ರಕ್ಷಿತ್ ಶೆಟ್ಟಿಗೆ ತುಸುವೂ ಇಷ್ಟವಿರಲಿಲ್ಲ. ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ ಹಿಟ್ ಆಗಿ ಸಿಂಪಲ್ ಸ್ಟಾರ್ ಎಂದು ಕರೆಯಲಾರಂಭಿಸಿದ ಬಳಿಕ, ಪುಣ್ಯಕ್ಕೆ ‘ಟ್ವಿಂಕಲ್ ಸ್ಟಾರ್’ ಎಂಬುದು ಹೋಯ್ತಲ್ಲ ಎನಿಸಿತ್ತಂತೆ. ಸಿನಿಮಾದಲ್ಲಿ ನನ್ನ ಎಂಟ್ರಿಗೆ ‘ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್’ ಹಾಡು ಹಾಕಿದ್ದರೆ ಹೇಗಿರುತ್ತಿತ್ತು ಊಹಿಸಿ’ ಎಂದು ಅನುಶ್ರೀ ಜೊತೆಗಿನ ಸಂದರ್ಶನದಲ್ಲಿ ನೆನಪು ಮಾಡಿಕೊಂಡು ನಕ್ಕಿದ್ದಾರೆ ರಕ್ಷಿತ್ ಶೆಟ್ಟಿ.

ರಕ್ಷಿತ್ ಶೆಟ್ಟಿ ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಕಳೆದವಾರವಷ್ಟೆ ಬಿಡುಗಡೆ ಆಗಿದ್ದು ವಿಮರ್ಶಕರಿಂದ, ಪ್ರೇಕ್ಷಕರಿಂದ ಬಹುವಾಗಿ ಮೆಚ್ಚುಗೆ ಗಳಿಸಿದೆ. ಸಿನಿಮಾವನ್ನು ಹೇಮಂತ್ ರಾವ್ ನಿರ್ದೇಶನ ಮಾಡಿದ್ದು, ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾಕ್ಕೆ ಸಂಗೀತವನ್ನು ಚರಣ್ ರಾಜ್ ನೀಡಿದ್ದು, ಸಂಗೀತದ ಬಗ್ಗೆ ಬಹಳ ಪ್ರಶಂಸೆ ವ್ಯಕ್ತವಾಗಿದೆ. ಪ್ರಸ್ತುತ ಸಿನಿಮಾದ ಮೊದಲ ಭಾಗವಷ್ಟೆ ಬಿಡುಗಡೆ ಆಗಿದ್ದು, ಎರಡನೇ ಭಾಗ ಅಕ್ಟೋಬರ್ ತಿಂಗಳಲ್ಲಿ ತೆರೆಗೆ ಬರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ