ಈಗ ಎಲ್ಲ ಕಡೆಯೂ ‘ಕೆಜಿಎಫ್: ಚಾಪ್ಟರ್ 2’ (KGF Chapter 2) ಸಿನಿಮಾದ ಸುದ್ದಿಯೇ ಕೇಳಿಬರುತ್ತಿದೆ. ಎಲ್ಲ ಸಿನಿಪ್ರಿಯರ ವಲಯದಲ್ಲೂ ಈ ಚಿತ್ರದ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಕನ್ನಡ ಚಿತ್ರವೊಂದು ಹೀಗೆ ರಾಷ್ಟ್ರಮಟ್ಟದಲ್ಲಿ ಗೆದ್ದು ಬೀಗಿರುವುದಕ್ಕೆ ಪರಭಾಷೆ ಸಿನಿಮಂದಿ ಬೆರಗಾಗಿದ್ದಾರೆ. ಮೊದಲ ದಿನವೇ ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಬರೋಬ್ಬರಿ 134.5 ಕೋಟಿ ರೂಪಾಯಿ ಗಳಿಸಿರುವುದು ಈ ಚಿತ್ರದ ಹೆಚ್ಚುಗಾರಿಕೆ. ನಟ ಯಶ್ (Yash) ಅವರಿಗೆ ‘ಕೆಜಿಎಫ್ 2’ ಸಿನಿಮಾದಿಂದ ಬೃಹತ್ ಗೆಲುವು ಸಿಕ್ಕಿದೆ. ಈ ಯಶಸ್ಸಿನ ಬಗ್ಗೆ ಭಾರತೀಯ ಚಿತ್ರರಂಗದ ಅನೇಕರು ಮಾತನಾಡುತ್ತಿದ್ದಾರೆ. ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ತಂಡ ಮಾಡಿರುವ ಸಾಧನೆಯನ್ನು ಹಲವು ಸೆಲೆಬ್ರಿಟಿಗಳು ಕೊಂಡಾಡುತ್ತಿದ್ದಾರೆ. ಈಗ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Varma) ಕೂಡ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಬಾಲಿವುಡ್ ಎದುರು ಕನ್ನಡ ಚಿತ್ರರಂಗ ಹೇಗೆ ಬೆಳೆದು ನಿಂತಿದೆ ಎಂಬುದನ್ನು ಅವರು ತಮ್ಮದೇ ಶೈಲಿಯಲ್ಲಿ ವಿವರಿಸಿದ್ದಾರೆ.
‘ಕೆಜಿಎಫ್’ ಸಿನಿಮಾದಲ್ಲಿ ರಾಕಿ ಮುಂಬೈಗೆ ಹೋಗಿ ತನ್ನ ಪ್ರಾಬಲ್ಯ ಮೆರೆಯುತ್ತಾನೆ. ರಿಯಲ್ ಲೈಫ್ನಲ್ಲಿಯೂ ಹಾಗೆಯೇ ಆಗಿದೆ ಎಂಬುದು ರಾಮ್ ಗೋಪಾಲ್ ವರ್ಮಾ ಅವರ ಅಭಿಪ್ರಾಯ. ‘ವಿಲನ್ಗಳಿಗೆ ಗುಂಡಿಕ್ಕಲು ರಾಕಿ ಭಾಯ್ ಹೇಗೆ ಮುಂಬೈಗೆ ಬರುತ್ತಾನೋ ಅದೇ ರೀತಿಯಲ್ಲಿ ಬಾಲಿವುಡ್ ಸ್ಟಾರ್ ನಟರ ಓಪನಿಂಗ್ ಕಲೆಕ್ಷನ್ಗೆ ಯಶ್ ಗುಂಡಿಕ್ಕುತ್ತಿದ್ದಾರೆ. ಈ ಚಿತ್ರದ ಟೋಟಲ್ ಗಳಿಕೆಯು ಬಾಲಿವುಡ್ ಮೇಲೆ ಕನ್ನಡ ಚಿತ್ರರಂಗ ಎಸೆಯುವ ಅಣುಬಾಂಬ್ ಆಗಿರಲಿದೆ’ ಎಂದು ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ.
‘ಪ್ರಶಾಂತ್ ನೀಲ್ ನಿರ್ದೇಶನ ಮಾಡಿರುವ ‘ಕೆಜಿಎಫ್ 2’ ಒಂದು ಗ್ಯಾಂಗ್ಸ್ಟರ್ ಸಿನಿಮಾ ಮಾತ್ರವಲ್ಲ, ಬಾಲಿವುಡ್ ಚಿತ್ರರಂಗದವರಿಗೆ ಇದು ಒಂದು ಹಾರರ್ ಸಿನಿಮಾ. ಈ ಚಿತ್ರದ ಗೆಲುವು ಬಾಲಿವುಡ್ನವರಿಗೆ ಹಲವು ವರ್ಷಗಳ ಕಾಲ ದುಸ್ವಪ್ನವಾಗಿ ಕಾಡಲಿದೆ’ ಎಂದು ರಾಮ್ ಗೋಪಾಲ್ ವರ್ಮಾ ಪೋಸ್ಟ್ ಮಾಡಿದ್ದಾರೆ. ‘ಹಿಂದಿ ಚಿತ್ರರಂಗದ ವಿಚಾರ ಬಿಟ್ಟುಬಿಡಿ. ತಮಿಳು ಮತ್ತು ತೆಲುಗು ಚಿತ್ರರಂಗದವರು ಕೂಡ ಕೆಜಿಎಫ್ ಸಿನಿಮಾ ಬರುವವರೆಗೆ ಕನ್ನಡ ಫಿಲ್ಮ್ ಇಂಡಸ್ಟ್ರಿಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ’ ಎಂದು ಆರ್ಜಿವಿ ಹೇಳಿದ್ದಾರೆ.
Like very much how Rocky Bhai comes to Mumbai to machine gun the villains, @TheNameIsYash is literally machine gunning all the Bollywood stars opening collections and it’s final collections will be a nuclear bomb thrown on Bollywood from Sandalwood
— Ram Gopal Varma (@RGVzoomin) April 15, 2022
Forget Hindi film industry, not even telugu and Tamil film industries ever took Kannada film industry seriously till KGF and now @prashanth_neel put it on the world map
— Ram Gopal Varma (@RGVzoomin) April 15, 2022
‘ಕೆಜಿಎಫ್: ಚಾಪ್ಟರ್ 2’ ಸಿನಿಮಾದ ಗೆಲುವಿನಿಂದಾಗಿ ಇಡೀ ಕನ್ನಡ ಚಿತ್ರರಂಗವೇ ಹೆಮ್ಮೆ ಪಡುವಂತೆ ಆಗಿದೆ. ಯಶ್ ಅವರ ಮಾರುಕಟ್ಟೆ ವಿಸ್ತಾರ ಆಗಿದೆ. ಈ ಚಿತ್ರದಲ್ಲಿ ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರಾಜ್, ರಾವ್ ರಮೇಶ್ ಮುಂತಾದ ಸ್ಟಾರ್ ಕಲಾವಿದರು ನಟಿಸಿದ್ದಾರೆ. ಯಶ್ಗೆ ಜೋಡಿಯಾಗಿ ಶ್ರೀನಿಧಿ ಶೆಟ್ಟಿ ಅಭಿನಯಿಸಿದ್ದಾರೆ. ಗಲ್ಲಾಪೆಟ್ಟಿಗೆಯಲ್ಲಿ ಈ ಚಿತ್ರ ಧೂಳೆಬ್ಬಿಸುತ್ತಿರುವುದರಿಂದ ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆಗೆ ಭಾರೀ ಪ್ರಮಾಣದ ಲಾಭ ಆಗುತ್ತಿದೆ. ಹಿಂದಿ ಅವತರಣಿಕೆಯಲ್ಲಿ ‘ಕೆಜಿಎಫ್ 2’ ಸಿನಿಮಾ ಅತಿ ಹೆಚ್ಚು ಕಲೆಕ್ಷನ್ ಮಾಡುತ್ತಿದೆ. ದಕ್ಷಿಣ ಭಾರತದಲ್ಲೂ ಇದರ ನಾಗಾಲೋಟ ಮುಂದುವರಿದಿದೆ.
‘ಕೆಜಿಎಫ್: ಚಾಪ್ಟರ್ 2’ ಸಿನಿಮಾದ ಎದುರು ‘ಬೀಸ್ಟ್’ ಸಿನಿಮಾ ಬಿಡುಗಡೆ ಆಗಿತ್ತು. ಆದರೆ ಆ ಚಿತ್ರಕ್ಕಿಂತಲೂ ‘ಕೆಜಿಎಫ್ 2’ ಚೆನ್ನಾಗಿದೆ ಎಂದು ಸ್ವತಃ ತಮಿಳುನಾಡಿನ ಸಿನಿಪ್ರಿಯರೇ ಹೇಳುತ್ತಿದ್ದಾರೆ. ಹಾಗಾಗಿ ಅಲ್ಲಿಯೂ ಈ ಚಿತ್ರ ಸೂಪರ್ ಹಿಟ್ ಆಗಿದೆ. ಚಿತ್ರದ ಟೋಟಲ್ ಕಲೆಕ್ಷನ್ ತಿಳಿಯಲು ಸಿನಿಪ್ರಿಯರು ಕಾದಿದ್ದಾರೆ.
ಇದನ್ನೂ ಓದಿ:
‘ಕೆಜಿಎಫ್ 2’ ಬ್ಲಾಕ್ ಬಸ್ಟರ್ ಗೆಲುವು ಕಂಡ ಬಳಿಕ ‘ಪುಷ್ಪ 2’ ಚಿತ್ರತಂಡಕ್ಕೆ ಚಿಂತೆ ಶುರು; ಏನಿದು ಟಾಕ್?
‘ಕೆಜಿಎಫ್ 2’ಗೆ ಕೆಟ್ಟ ವಿಮರ್ಶೆ ಮಾಡಿ, ಯಶ್ ಬಗ್ಗೆ ವ್ಯಂಗ್ಯದ ಮಾತಾಡಿದ ‘ದೇಶದ್ರೋಹಿ’ ನಟ: ಸಿಡಿದೆದ್ದ ಫ್ಯಾನ್ಸ್